ಪ್ರಧಾನಿ ನರೇಂದ್ರ ಮೋದಿ PM Modi
ಗಾಂಧಿನಗರ: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶವು ಜಾತಿವಾದದ ವಿಷಬೀಜವನ್ನು ಹರಡುತ್ತಿದ್ದವರನ್ನು ಜನ ತಿರಸ್ಕರಿಸಿದ್ದಾರೆ ಎಂದು ತೋರಿಸಿದೆ ಎಂದು ಶನಿವಾರ (ನ.15) ಪ್ರಧಾನಿ ನರೇಂದ್ರ ಮೋದಿ(PM Modi) ಆರ್ಜೆಡಿ ಮತ್ತು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಗುಜರಾತ್‌ನ ಸೂರತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಮಹಿಳೆಯರು ಮತ್ತು ಯುವಕರು ಸೇರಿ ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಪರವಾಗಿ ತೀರ್ಪು ನೀಡಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಮೋದಿ, ವಿರೋಧ ಪಕ್ಷದ ನಾಯಕರೊಬ್ಬರು ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಹರಿದು ಹಾಕಲಾಗುವುದು ಎಂದು ಹೇಳಿದ್ದರು. ಆದರೆ ವಿಭಜಕ ರಾಜಕೀಯಕ್ಕಾಗಿ ಜನರು ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷವು ಕಳೆದ ದಶಕದಲ್ಲಿ ತನ್ನ ಚುನಾವಣಾ ಸಾಧನೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.
ಕಳೆದ ಎರಡು ವರ್ಷಗಳಿಂದ, ಜಾಮೀನಿನ ಮೇಲೆ ಹೊರಗಿರುವ ರಾಜಕಾರಣಿಗಳು ಬಿಹಾರದಲ್ಲಿ ಜಾತಿವಾದದ ಬಗ್ಗೆ ಭಾಷಣ ಮಾಡುತ್ತಿದ್ದರು. ಅಲ್ಲದೆ, ಇವರು ತಮ್ಮಲ್ಲಿರುವ ಶಕ್ತಿಯನ್ನು ಬಳಸಿಕೊಂಡು ಜಾತಿವಾದದ ವಿಷವನ್ನು ಹರಡುತ್ತಿದ್ದರು. ಇದು ಅವರಿಗೆ ಸಹಾಯ ಮಾಡುತ್ತದೆ ಎಂದು ಬಹಳ ಹಿಂದಿನಿಂದಲೂ ನಂಬಿದ್ದರು. ಅದರೆ ಬಿಹಾರದಲ್ಲಿ ನಡೆದ ಈ ಚುನಾವಣೆಯು ಜಾತಿವಾದದ ವಿಷವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ತೋರಿಸಿದೆ. ಬಿಹಾರದಲ್ಲಿ ತನ್ನ ಸೋಲಿಗೆ ವಿರೋಧ ಪಕ್ಷವು ಇವಿಎಂಗಳು, ಎಸ್‌ಐಆರ್ ಮತ್ತು ಚುನಾವಣಾ ಆಯೋಗವನ್ನು ದೂಷಿಸುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಎನ್‌ಡಿಎ ಮತ್ತು ಮಹಾಘಟಬಂಧನ್‌ನ ಮತ ಹಂಚಿಕೆಯ ನಡುವಿನ ವ್ಯತ್ಯಾಸ ಕೇವಲ ಶೇ, 10 ರಷ್ಟಿದೆ ಎಂದು ಪ್ರಧಾನಿ ತಿಳಿಸಿದರು. ಬಿಹಾರದ ಸರಾಸರಿ ಮತದಾರರು ಅಭಿವೃದ್ಧಿಗೆ ಮತ ಚಲಾಯಿಸಿದ್ದಾರೆಂದು ಇದು ತೋರಿಸುತ್ತದೆ. ಬಿಹಾರದಲ್ಲಿ ಪ್ರಗತಿಯ ಹಂಬಲವು ಸ್ಪಷ್ಟವಾಗಿದೆ ಎಂದು ಮೋದಿ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಬಿಹಾರ ಇಂದು ವಿಶ್ವಾದ್ಯಂತ ಪ್ರಸಿದ್ಧವಾಗಿದೆ. ಜಗತ್ತಿನ ಎಲ್ಲಿಗೆ ಹೋದರೂ ಬಿಹಾರದ ಪ್ರತಿಭೆಯನ್ನು ನೀವು ಕಾಣಬಹುದು. ಬಿಹಾರವು ಈಗ ಅಭಿವೃದ್ಧಿಯಲ್ಲಿ ಹೊಸ ಎತ್ತರವನ್ನು ತಲುಪುವ ಇಚ್ಛೆಯನ್ನು ತೋರಿಸುತ್ತಿದೆ. ಈ ಚುನಾವಣೆಯು ಆ ಇಚ್ಛೆಯನ್ನು ಪ್ರತಿಬಿಂಬಿಸುತ್ತದೆ. ಬಿಹಾರದ ಮಹಿಳೆಯರು ಮತ್ತು ಯುವಕರು ಮುಂದಿನ ದಶಕಗಳಲ್ಲಿ ರಾಜಕೀಯದ ಅಡಿಪಾಯವನ್ನು ಬಲಪಡಿಸುವ ಸಂಯೋಜನೆಯನ್ನು ರೂಪಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಬಿಹಾರ ತೀರ್ಪು
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ೨೪೩ ಸ್ಥಾನಗಳಲ್ಲಿ ೨೦೨ ಸ್ಥಾನಗಳನ್ನು ಪಡೆದುಕೊಂಡಿದೆ. ಭಾರತೀಯ ಜನತಾ ಪಕ್ಷವು ೮೯ ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಮಿತ್ರ ಪಕ್ಷವಾದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ೮೫ ಸ್ಥಾನಗಳನ್ನು ಗೆದ್ದಿದೆ.
ಬಿಹಾರದಲ್ಲಿ ವಿರೋಧ ಪಕ್ಷ ಮಹಾಘಟಬಂಧನ್ ಪ್ರಭಾವ ಬೀರಲು ಹೆಣಗಾಡಿದೆ. ರಾಷ್ಟ್ರೀಯ ಜನತಾ ದಳ ಕೇವಲ 25 ಸ್ಥಾನಗಳನ್ನು ಗಳಿಸಿತು. ಆದರೆ ಕಾಂಗ್ರೆಸ್ ಕೇವಲ ಆರು ಸ್ಥಾನಗಳನ್ನು ಗಳಿಸಿತು. AIMIM ಐದು ಸ್ಥಾನಗಳನ್ನು ಗಳಿಸಿದೆ,(ಏಜೆನ್ಸೀಸ್).