IND vs END: ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಲಾರ್ಡ್ಸ್‌ನಲ್ಲಿ ಇಂದು(ಜು. 19) ನಡೆದಿದ್ದು, ಆರಂಭಿಕ ಆಟಗಾರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ವ್ಯರ್ಥ ಶತಕದಾಟದ ನಡುವೆಯೂ ಟೀಂ ಇಂಡಿಯಾ 27 ರನ್ಗಳಿಂದ 2-1 ಸರಣಿ ಸೋಲು ಅನುಭವಿಸಿದೆ.
ಇಂಗ್ಲೆಂಡ್ ತಂಡ ನೀಡಿದ್ದ 388 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತದ ತಂಡದ ಪರ, ಆರಂಭಿಕ ಬ್ಯಾಟಗಾರರಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಭರ್ಜರಿಯಾಗಿಯೇ ಮುನ್ನಡೆಯನ್ನು ಸಾಧಿಸಿದರು. ರೋಹಿತ್ ಶರ್ಮಾ ಅವರ 138 ರನ್‌ಗಳು, ವಿರಾಟ್ ಕೊಹ್ಲಿ (74) ಮತ್ತು ಶುಭ್‌ಮನ್ ಗಿಲ್ (77) ಅವರ ಅರ್ಧಶತಕಗಳ ಆಟದ ನಡುವೆಯೂ ಇಂಗ್ಲೆಂಡ್ ತಂಡ 27 ರನ್ಗಳಿಂದ 2-1 ಸರಣಿಯನ್ನು ಗೆದ್ದುಕೊಂಡಿತು.
388 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ ತಂಡ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 360 ರನ್ಗಳಿಸಲಷ್ಟೇ ಸಾಧ್ಯವಾಯಿತು. ರೋಹಿತ್ 110 ಎಸೆತಗಳಲ್ಲಿ 17 ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 138 ರನ್ ಗಳಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದರು. ಕೊಹ್ಲಿ 60 ಎಸೆತಗಳಲ್ಲಿ 74 ರನ್ ಗಳಿಸಿದರು, ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಗಿಲ್ 84 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 77 ರನ್ ಗಳಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಪರ ಬೆನ್ ಡಕೆಟ್ 135 ಎಸೆತಗಳಲ್ಲಿ 141 ರನ್ ಮತ್ತು ಬೆಥೆಲ್ 93 ಎಸೆತಗಳಲ್ಲಿ 91 ರನ್‌ಗಳ ಅದ್ಭುತ ಬ್ಯಾಟಿಂಗ್ ಮೂಲಕ 30 ಓವರ್‌ಗಳಿಗೂ ಹೆಚ್ಚು ಕಾಲ ಈ ಜೋಡಿ ಭಾರತದ ಬೌಲರ್‌ಗಳನ್ನು ಚಚ್ಚಿ ಬಿಸಾಡಿತು. ಮೊದಲ ವಿಕೆಟ್ ಬೀಳುವ ಮುನ್ನ ಸ್ಕೋರ್ ಅನ್ನು 192 ಕ್ಕೆ ತಲುಪಿಸಿತು. ಬಳಿಕ ಜೋ ರೂಟ್ ಕೇವಲ 48 ಎಸೆತಗಳಲ್ಲಿ ಅಜೇಯ 74 ರನ್ ಗಳಿಸುವ ಮೂಲಕ ಪರಿಪೂರ್ಣ ಪಂದ್ಯಕ್ಕೆ ಅಂತಿಮ ಸ್ಪರ್ಷ ನೀಡಿದರು. ಮತ್ತು ಜೋಸ್ ಬಟ್ಲರ್ 13 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿ ಇಂಗ್ಲೆಂಡ್ ಅತ್ಯಧಿಕ ಮೊತ್ತ ದಾಖಲಿಸಲು ಸಹಾಯ ಮಾಡಿದರು.