- ಪಶ್ಚಿಮ ಏಷ್ಯಾದ ಯುದ್ಧದ ಪರಿಣಾಮವಾಗಿ ಆರ್ಥಿಕತೆಯನ್ನು ರಕ್ಷಿಸಲು ಚಿನ್ನ ಖರೀದಿ ಏಡ, ತೈಲ ಬಳಕೆ ಮಿತಿಯಲ್ಲಿರಲಿ ಎಂದ ಮೋದಿ
- ಚಿನ್ನದ ಆಮದಿಗೆ ವ್ಯಯವಾಗುವ ಹಣವನ್ನು ಉಳಿಸಿ ದೇಶದ ಆರ್ಥಿಕ ಬುನಾದಿ ಭದ್ರಪಡಿಸುವುದು ಮುಖ್ಯ ಉದ್ದೇಶ.
- ಪೆಟ್ರೋಲ್/ಡೀಸೆಲ್ ಉಳಿಸಲು ವರ್ಕ್ ಫ್ರಮ್ ಹೋಮ್ ಮಾಡಲು ಒತ್ತಾಯ
ಹೈದರಾಬಾದ್: ಚಿನ್ನವು ಭಾರತೀಯರಿಗೆ ಹೂಡಿಕೆಯ ಅಸ್ತ್ರ. ಹೀಗಾಗಿ ಹಣವಿದ್ದಾಗೆಲ್ಲ ಚಿನ್ನ ಖರೀದಿ ಮಾಡ್ತಾರೆ. ಸಾಲ ಬೇಕಾದಾಗ ಅದನ್ನೇ ಅಡವಿಟ್ಟು ಹಣ ಪಡೆಯುತ್ತಾರೆ. ಇಂದಿಗೂ ಮದುವೆ ಸಮಾರಂಭದಲ್ಲಿ ವಧು ಮತ್ತು ಸಂಬಂಧಿಕರ ಮೈಮೇಲೆ ಚಿನ್ನವಿರಲೇ ಬೇಕು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಯುದ್ಧದ ಭೀತಿ ಮತ್ತು ಜಾಗತಿಕ ಆರ್ಥಿಕ ಅಸ್ಥಿರತೆ ಹಿನ್ನೆಲೆ ಮುಂದಿನ ಒಂದು ವರ್ಷದವರೆಗೆ ಯಾವುದೇ ಕಾರಣಕ್ಕೂ ಚಿನ್ನವನ್ನು ಖರೀದಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಹೈದರಾಬಾದ್‌ನ ಸೆಕ್ಯೂಂದರಾಬಾದ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಭಾರತ ದೇಶದ ಹಿತದೃಷ್ಟಿಯಿಂದ ಒಂದು ವರ್ಷದ ವರೆಗೆ ಚಿನ್ನ ಖರೀದಿ ಮಾಡಲು ಹೋಗಬೇಡಿ ಎಂದು ವಿನಂತಿಸಿಕೊಂಡರು
ಪ್ರಧಾನಿ ಮೋದಿ ಹೇಳಿದ್ದೇನು?
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಹೊರ್ಮುಜ್ ಜಲಸಂಧಿ ಮೂಲಕ ನಡೆಯುತ್ತಿದ್ದ ಆಮದು ಮತ್ತು ರಫ್ತು ಕಾರ್ಯವು ನಿಂತು 75 ದಿನಗಳನ್ನು ಸಮೀಪಿಸುತ್ತ ಬಂದಿದೆ. ಸರ್ಕಾರವು ತೈಲ ಮತ್ತು ಅನಿಲವನ್ನು ಖರೀದಿಸಲು ಬಹು ಮೂಲಗಳನ್ನು ಬಳಸುತ್ತಿದೆ, ಅವುಗಳ ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ, ಇದು ಸತತ ಮೂರನೇ ತಿಂಗಳು ಭಾರತೀಯ ಸಂಸ್ಕರಣಾಗಾರಗಳಿಗೆ ಕಚ್ಚಾ ತೈಲ ಬೆಲೆಗಳನ್ನು ಹೆಚ್ಚಿಸಿದೆ. ಇಲ್ಲಿಯವರೆಗೆ, ತೈಲ ಕಂಪನಿಗಳು ಪಂಪ್ ಬೆಲೆಗಳನ್ನು ಹೆಚ್ಚಿಸಿಲ್ಲ ಆದರೆ ಮುಂದಿನ ಕೆಲವು ದಿನಗಳಲ್ಲಿ ದರ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಚಿನ್ನದ ಆಮದಿಗಾಗಿ ನಾವು ಭಾರಿ ಪ್ರಮಾಣದ ವಿದೇಶಿ ವಿನಿಮಯವನ್ನು ವ್ಯಯಿಸುತ್ತಿದ್ದೇವೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಮತ್ತು ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಲು ನಾವು ಚಿನ್ನದ ಖರೀದಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಿದೆ ಎಂದು ಹೇಳಿದರು.
ಮದುವೆಯಿದ್ದರೂ ಚಿನ್ನ ಖರೀದಿ ಮಾಡ್ಬೇಡಿ
ಭಾರತೀಯ ಮದುವೆ ಸಂಪ್ರದಾಯದಲ್ಲಿ ವಧು ಚಿನ್ನ ಧರಿಸುವುದು ಬಹುಮುಖ್ಯ. ಹೀಗಾಗಿ ಮದುವೆ ಮತ್ತು ಹಬ್ಬಗಳ ಸಮಯದಲ್ಲಿ ಚಿನ್ನ ಖರೀದಿಸುವುದು ವಾಡಿಕೆಯಾಗಿದೆ. ಹೀಗಾಗಿ ಇದನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ನಿಮ್ಮ ಮನೆಯಲ್ಲಿ ಮದುವೆ ಇರಲಿ ಅಥವಾ ಯಾವುದೇ ಶುಭ ಸಮಾರಂಭಗಳಿರಲಿ, ಒಂದು ವರ್ಷದ ಮಟ್ಟಿಗೆ ಚಿನ್ನ ಖರೀದಿಸದಿರಲು ನಿರ್ಧಿರಿಸಿ ಎಂದಿದ್ದಾರೆ, (ಏಜೆನ್ಸೀಸ್).