ಜೆಡಿಯು ನಾಯಕನ ಚಿನ್ನದ ಸರ ಕಳ್ಳತನವಾದ ಘಟನೆಯ ವೈರಲ್ ವಿಡಿಯೋ
ಮುಜಫರ್ನಗರ: ರಾಜ್ಯ ಆರೋಗ್ಯ ಸಚಿವ ನಿಶಾಂತ್ ಕುಮಾರ್ ಬಿಹಾರದ ಮುಜಫರ್ನಗರಕ್ಕೆ ಆಗಮಿಸುತ್ತಿದ್ದ ಹಿನ್ನಲೆ, ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅವರನ್ನು ಬೇಟಿಯಾಗಲು ಬಂದ ಜೆಡಿಯು ನಾಯಕ ರಾಜೇಶ್ ಮಂಡಲ್ (Rajesh Mandal) ಅವರ ಚಿನ್ನದ ಚೈನ್ ಕಳ್ಳತನವಾಗಿದೆ ಎಂದು ವರದಿಯಾಗಿದೆ.
ನಿಶಾಂತ್ ಅವರನ್ನು ಬೇಟಿಯಾಗಲು ಬಂದಿದ್ದ ರಾಜೇಶ್ ಮಂಡಲ್ ಕುತ್ತಿಗೆಯಲ್ಲಿ ಸುಮಾರು ಏಳು ಲಕ್ಷ ಮೌಲ್ಯದ ಚಿನ್ನದ ಸರವಿದ್ದು, ಜನರ ಗುಂಪಿನಲ್ಲಿದ್ದ ಖದೀಮರು ಕಳ್ಳತನ ನಡೆಸಿದ್ದಾಗಿ ತಿಳಿದು ಬಂದಿದೆ. ಕುತ್ತಿಗೆಯಲ್ಲಿದ್ದ ಬಂಗಾರದ ಸರ ಕಳ್ಳತನವಾಗಿದೆ ಎಂದು ತಿಳಿದ ಮಂಡಲ್ ಗಾಬರಿಯಿಂದ ಅತ್ತಿಂದಿತ್ತ ಓಡಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಗುಂಪಿನಲ್ಲಿ ಗೋವಿಂದ!
ಸಚಿವರಾಗಿ ಆಯ್ಕೆಯಾದ ಬಳಿಕ, ಮಾಜಿ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಇದೇ ಮೊದಲ ಬಾರಿಗೆ ಮುಜಫರ್ನಗರಕ್ಕೆ ಆಗಮಿಸುತ್ತಿದ್ದ ಹಿನ್ನಲೆ, ಪಕ್ಷದ ಕಾರ್ಯಕರ್ತರು ಹಾಗೂ ಜನ ಸಾಮಾನ್ಯರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.
ಈ ಸಮಯದಲ್ಲಿ ರಾಜೇಶ್ ಮಂಡಲ್ ನಿಶಾಂತ್ಗೆ ಹೂಗುಚ್ಛ ನೀಡಲು ಮುಂದಾದಾಗ, ಕೊರಳಲಿದ್ದ ಚಿನ್ನದ ಸರ ಕಳುವಾಗಿದೆ ಎಂದು ಹೇಳಲಾಗುತ್ತಿದೆ. ನೆರೆದಿದ್ದ ಜನರ ಸಂಖ್ಯೆ ದೊಡ್ಡ ಮಟ್ಟದಲ್ಲಿದ್ದ ಹಿನ್ನಲೆ, ಕಳ್ಳರು ಗುಂಪಿನಲ್ಲಿ ಮಾಯವಾಗಿದ್ದಾಗಿ ತಿಳಿದು ಬಂದಿದೆ.
ದೂರು ದಾಖಲು; ಮುಂದುವರಿದ ತನಿಖೆ!
ಈ ಘಟನೆ ನಂತರ ರಾಜೇಶ್ ಮಂಡಲ್, ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ. ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ತಮ್ಮ ಏಳು ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾಗಿ ದೂರನಲ್ಲಿ ದಾಖಲಿಸಿದ್ದಾರೆ. ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದು, ಸ್ಥಳದ ಸಿಸಿಟಿವಿ ಕ್ಯಾಮರಾ, ಹಾಗೂ ಅಲ್ಲಿ ಅನುಮಾನಸ್ಪದ ರೀತಿಯಲ್ಲಿ ಅಡ್ಡಾಡುತ್ತಿದ್ದವರನ್ನು ವಿಚಾರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ, (ಏಜನ್ಸೀಸ್).