ಸಂಸದರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ
ಕೋಲ್ಕತ್ತಾ: ಮಮತಾ ದೀದಿ ಒಂದು ನಾವು ಬೇಕೋ, ಇಲ್ಲ ಅಭಿಷೇಕ್ ಬೇಕೋ ಆರಿಸಿಕೊಳ್ಳಿ ಎಂಬ ಟಿಎಂಸಿ ಹಿರಿಯ ನಾಯಕ ಮತ್ತು ಸಂಸದ ಕಲ್ಯಾಣ್ ಬ್ಯಾನರ್ಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಸಂಸದ ಅಭಿಷೇಕ್ ಬ್ಯಾನರ್ಜಿ(Abhishek Banerjee), ಅವರು ನನ್ನನ್ನು ಬಾಲ್ಯದಿಂದಲೂ ನೋಡಿದ್ದಾರೆ, ಅವರ ಬಗ್ಗೆ ನಾನೇನು ಮಾತಾಡಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ(ಜೂ. 12) ತಮ್ಮ ನಿವಾಸದ ಹೊರಗೆ ಮಾತನಾಡಿರುವ ಅಭಿಷೇಕ್, ಸಹಿ ನಕಲಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ತನಿಖಾಧಿಕಾರಿಗಳು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಇನ್ನೂ ವಿಚಾರಣೆಯಲ್ಲಿರುವ ವಿಷಯದ ವಿವರಗಳನ್ನು ಬಹಿರಂಗಪಡಿಸುವುದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿವರಗಳನ್ನು ನಾನು ಬಹಿರಂಗಪಡಿಸಿಲ್ಲ. ಆದರೂ ಪ್ರಕರಣದ ತನಿಖೆಯ ಮಾಹಿತಿಯು ಸಾರ್ವಜನಿಕ ವಲಯವನ್ನು ಹೇಗೆ ತಲುಪುತ್ತಿದೆ ಎಂದು ಪ್ರಶ್ನಿಸಿದ್ದಾರೆ. ನನ್ನ ಹಾಜರಿಗೆ ಸಂಬಂಧಿಸಿದಂತೆ ಅನೇಕ ಜನರು ಸಿಐಡಿ ನೀಡುವ ಮೂಲ ಆಧಾರಿತ ಕಥೆಗಳನ್ನು ಪ್ರಕಟಿಸುತ್ತಿದ್ದಾರ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಹಿರಿಯ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿಯವರ ಇತ್ತೀಚಿನ ಹೇಳಿಕೆಗಳ ಪ್ರಶ್ನಿಸಿದಾಗ, ಕಲ್ಯಾಣ್ ಬ್ಯಾನರ್ಜಿ ನನಗಿಂತ ಹಿರಿಯರು. ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ. ಅವರು ನನ್ನನ್ನು ಬಾಲ್ಯದಿಂದಲೂ ನೋಡಿದ್ದಾರೆ. ನಾನು ಅವರ ವಿರುದ್ಧ ಏನನ್ನೂ ಮಾತನಾಡುವುದಿಲ್ಲ ಹೇಳಿದ್ದಾರೆ.
ಕೋಲ್ಕತ್ತಾ ಸಹಿ ಫೋರ್ಜರಿ ಕೇಸ್‌ನ ಜವಾಬ್ದಾರಿಯನ್ನು ಹಿರಿಯ ವಕೀಲರ ಬದಲಿಗೆ ಜೂನಿಯರ್ ವಕೀಲ ಅಯನ್ ಭಟ್ಟಾಚಾರ್ಯ ಅವರಿಗೆ ವಹಿಸಲಾಗುತ್ತಿದೆ ಎಂದು ಅಭಿಷೇಕ್ ಬ್ಯಾನರ್ಜಿಯವರ ಆಪ್ತ ವಲಯದಿಂದ ಅತ್ಯಂತ ಉದಾಸೀನವಾಗಿ ತಿಳಿಸಿದ್ದಕ್ಕೆ ಪಕ್ಷದ ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು.
ಪಕ್ಷದ ಮುಖ್ಯಸ್ಥೆ ಮತ್ತು ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಪಕ್ಷದಲ್ಲಿ ಆ ಅಹಂಕಾರಿ ಸೋದರಳಿಯನಾದರೂ ಇರಬೇಕು, ಇಲ್ಲವೇ ನಾವಾದರೂ ಇರಬೇಕು ಎರಡಲ್ಲಿ ಒಂದನ್ನು ಆರಿಸಿಕೊಳ್ಳಿ ಎಂದಿದ್ದರು (ಏಜೆನ್ಸೀಸ್).