ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
ಲಖನೌ: ರಾಮ ಮಂದಿರದಲ್ಲಿ ನಡೆದಿರುವ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಟೀಕೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್(CM Yogi Adityanath), ಅಂದು ರಾಮಭಕ್ತರ ಮೇಲೆ ಗುಂಡು ಹಾರಿಸಿದರು, ಆದರೆ ಇಂದು ನಂಬಿಕೆಯ ಬಗ್ಗೆ ಮಾತನಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬುಧವಾರ(ಜು. 15) ಪಂಚಾಯತ್ ಆಜ್ ತಕ್‌ನಲ್ಲಿ ಮಾತನಾಡಿರುವ ಅವರು, 1990ರಲ್ಲಿ ಅಯೋಧ್ಯಾ ಚಳವಳಿಯ ಸಂದರ್ಭದಲ್ಲಿ ಪೊಲೀಸರು ಕರಸೇವಕರ ಮೇಲೆ ಗುಂಡು ಹಾರಿಸಿದ ಸಂದರ್ಭವನ್ನು ಉಲ್ಲೇಖಿಸಿ, ಅವರದ್ದು ಬೂಟಾಟಿಕೆ ಎಂದು ಸಮಾಜವಾದಿ ಪಕ್ಷ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.
1990ರ ಅಕ್ಟೋಬರ್ 30ರಂದು ಮತ್ತು ಮತ್ತೆ ನವೆಂಬರ್ 2ರಂದು ಸಾವಿರಾರು ಹಿಂದೂ ಕರಸೇವಕರು ವಿವಾದಿತ ಬಾಬರಿ ಮಸೀದಿಯ ಕಡೆಗೆ ಮೆರವಣಿಗೆ ನಡೆಸಿದ ಬಳಿಕ, ಅಂದಿನ ಯುಪಿ ಸಿಎಂ ಮತ್ತು ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಕರಸೇವಕರ ವಿರುದ್ಧ ಕ್ರಮಕ್ಕೆ ಆದೇಶ ನೀಡಿದ್ದರು. ಅಧಿಕೃತ ದಾಖಲೆಗಳ ಪ್ರಕಾರ, ಅಂದು ನಡೆದ ಗುಂಡಿನ ದಾಳಿ ಮತ್ತು ನಂತರದ ಘರ್ಷಣೆಯಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ರಾಮ ಮಂದಿರದಲ್ಲಿ ನಡೆದ ಕಾಣಿಕೆಗಳ ದುರುಪಯೋಗವು ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಒಪ್ಪಿಕೊಂಡ ಅವರು, ಸರ್ಕಾರವು ತ್ವರಿತವಾಗಿ ಕ್ರಮ ಕೈಗೊಂಡಿದೆ. ದೇವಾಲಯ ಟ್ರಸ್ಟ್ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಸರ್ಕಾರವು ಅದರ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಆದರೆ ಆರೋಪಗಳು ಹೊರಬಂದ ಬಳಿಕ ನ್ಯಾಯಯುತ ತನಿಖೆಯನ್ನು ಸರ್ಕಾರ ಖಚಿತಪಡಿಸಿದೆ ಎಂದು ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು. ಆರು ಆರೋಪಿಗಳನ್ನು ಬಂಧಿಸಲಾಯಿತು. ಮತ್ತು ಅವರಿಗೆ ಸಹಾಯ ಮಾಡಿದ ಇತರರನ್ನು ಸಹ ವಶಕ್ಕೆ ಪಡೆಯಲಾಗಿದೆ. ನೈತಿಕ ಆಧಾರದ ಮೇಲೆ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಮುಂದುವರೆದು ವಿಪಕ್ಷಗಳ ವಿರುದ್ಧ ಗುಡುಗಿದ ಅವರು, ದೇವಾಲಯದ ಕಾಣಿಕೆಗಳ ಕಳ್ಳತನವನ್ನು ಇಂದು ಕೇಂದ್ರ ವಿಷಯವನ್ನಾಗಿ ಮಾಡುತ್ತಿದ್ದಾರೆ, ಆದರೆ ಅವರು ಅಧಿಕಾರದಲ್ಲಿದ್ದಾಗ ನಡೆದ ಹಗರಣಗಳು ಮತ್ತು ದುಷ್ಕೃತ್ಯಗಳ ಬಗ್ಗೆ ಮಾತನಾಡುವುದಿಲ್ಲ ಕಿಡಿಕಾರಿದ್ದಾರೆ.
ಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸಲು ಮತ್ತು ಧಾರ್ಮಿಕ ಸ್ಥಳಗಳ ಸುತ್ತ ವಿವಾದಗಳನ್ನು ಸೃಷ್ಟಿಸಲು ವಿರೋಧ ಪಕ್ಷದ ನಾಯಕರು ಪ್ರಯತ್ನಿಸುತ್ತಿದ್ದಾರೆ. ಅಯೋಧ್ಯೆಯ ಹನುಮಾನ್ ಗರ್ಹಿ ದೇವಾಲಯದ ಮೆಟ್ಟಿಲುಗಳ ಮೇಲೆ ನಮಾಜ್ ಮಾಡಲು ಅವಕಾಶ ನೀಡುವ ಮೂಲಕ ಎಸ್ಪಿ ಮತ್ತು ಕಾಂಗ್ರೆಸ್ ಹಿಂದೂ ನಂಬಿಕೆಯನ್ನು ಅಗೌರವಿಸಿದೆ ಎಂದು ಆರೋಪಿಸಿದ್ದಾರೆ (ಏಜೆನ್ಸೀಸ್).