ರಾಹುಲ್ ಗಾಂಧಿ 
ದೇಶ

ಅವರಿಗೆ ವಿದ್ಯಾರ್ಥಿಗಳು ಬೇಕಿಲ್ಲ, ಅಂಧಭಕ್ತರು ಬೇಕು: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ | Rahul Gandhi

ಬೋಫಾಲ್: ಕೇಂದ್ರ ಸರ್ಕಾರದ ವ್ಯವಸ್ಥೆ ಪ್ರಶ್ನಿಸುವ ವಿದ್ಯಾರ್ಥಿಗಳನ್ನು ಕಂಡು ಭಯ ಪಡುತ್ತಿದೆ ಎಂದಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಅವರಿಗೆ ಅಂತಹ ವಿದ್ಯಾರ್ಥಿಗಳು ಬೇಕಿಲ್ಲ, ಅಂಧಭಕ್ತರು ಬೇಕು ಎಂದು ಕಿಡಿಕಾರಿದ್ದಾರೆ.
ಮಧ್ಯಪ್ರದೇಶದ ಇಂದೋರ್​ನಲ್ಲಿ ಇಂದು(ಸೆ. 19) ನಡೆದ ಛತ್ರೋನ್ ಕಿ ಗೂಂಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಕಂಡು ಭಯಪಡುತ್ತದೆ. ಯಾಕೆ? ಯಾಕೆಂದರೆ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುತ್ತಾರೆ. ಅಮಿತ್ ಶಾ ಅವರ ಮಗ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾದದ್ದು ಹೇಗೆ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸುತ್ತಾನೆ. 
ಕೇವಲ ಇಬ್ಬರು ವ್ಯಕ್ತಿಗಳು ಭಾರತದ ಸಂಪೂರ್ಣ ವಾಣಿಜ್ಯ ವಲಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದು ಹೇಗೆ?, ನ್ಯಾಯಾಂಗ ಮತ್ತು ಇತರ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡಲು ಯಾಕೆ ವಿಫಲವಾಗಿವೆ. ಚುನಾವಣಾ ಆಯೋಗವು ತನ್ನ ಕರ್ತವ್ಯಗಳನ್ನು ಯಾಕೆ ನಿರ್ವಹಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಾರೆ. ಅದಕ್ಕಾಗಿ ಈ ವ್ಯವಸ್ಥೆಗೆ ದ್ಯಾರ್ಥಿಗಳು ಬೇಕಾಗಿಲ್ಲ, ಅದಕ್ಕೆ ಅಂಧಭಕ್ತರು ಬೇಕಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಧಭಕ್ತ ಅಂದ್ರೆ ವಿದ್ಯಾರ್ಥಿಗೆ ತದ್ವಿರುದ್ಧವಾದವನು. ವಿದ್ಯಾರ್ಥಿಯು ಪ್ರಶ್ನೆಗಳನ್ನು ಕೇಳುತ್ತಾನೆ ಮತ್ತು ಕುತೂಹಲವನ್ನು ಹೊಂದಿರುತ್ತಾನೆ. ಆದರೆ ಅಂಧಭಕ್ತನು ತನ್ನದೇ ಆದ ಭ್ರಮೆಯ ಜಗತ್ತಿನಲ್ಲಿ ಬದುಕುತ್ತಾನೆ. ವಿದ್ಯಾರ್ಥಿಯು ನಿರ್ಭೀತನಾಗಿರುತ್ತಾನೆ, ಆದರೆ ಅಂಧಭಕ್ತನು ಹೇಡಿಯಾಗಿರುತ್ತಾನೆ ಎಂದು ಹೇಳಿದ್ದಾರೆ.


ಅಂಧಭಕ್ತರು ಅಭಿವೃದ್ಧಿ ಬೇಕಿಲ್ಲ ಎನ್ನುತ್ತಾರೆ. ಮೋದಿಜಿ ವಿಷ್ಣುವಿನ ಅವತಾರ ಎಂದು ನಂಬುತ್ತಾರೆ. ಆದರೆ ಅವರು ನಮ್ಮ ಶಾಲೆ ಮತ್ತು ಕಾಲೇಜುಗಳ ಸ್ಥಿತಿ ಯಾಕೆ ಹೀಗಾಗಿದೆ? ನಮ್ಮ ಮೂಲಸೌಕರ್ಯ ಯಾಕೆ ಕುಸಿದಿದೆ? ಪರೀಕ್ಷಾ ಪ್ರಶ್ನೆಪತ್ರಿಕೆಗಳು ಯಾಕೆ ಸೋರಿಕೆಯಾಗುತ್ತಿವೆ? ಇಂತಹ ಪ್ರಶ್ನೆಗಳನ್ನು ಎಂದಿಗೂ ಕೇಳುವುದಿಲ್ಲ. ವಿದ್ಯಾರ್ಥಿಯೇ ಇಂತಹ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಾನೆ ಎಂದು ಪ್ರತಿಪಾದಿಸಿದ್ದಾರೆ.

ಇದೇ ವೇಳೆ ವೇದಿಕೆಯಲ್ಲಿ ರಾಹುಲ್ ಗಾಂಧಿ ಮುಂದೆ ಅನೇಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು. ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ, ಖಾಲಿ ಸರ್ಕಾರಿ ಹುದ್ದೆಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪ್ರಶ್ನಿಸಿದ್ರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತಿರುವ ಬಗ್ಗೆ ರಾಹುಲ್ ಗಾಂಧಿಯವರ ಗಮನಕ್ಕೆ ತಂದರು. ಮತ್ತು ರಾಹುಲ್ ಗಾಂಧಿ, ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲು ಮತ್ತು ತಮ್ಮ ಹಕ್ಕುಗಳಿಗಾಗಿ ಮಾತನಾಡಲು ಎಂದಿಗೂ ಹಿಂಜರಿಯಬೇಡಿ ಎಂದು ಸಲಹೆ ನೀಡಿದರು (ಏಜೆನ್ಸೀಸ್).