ಚಿಕಿತ್ಸೆಗೂ ಹಣವಿಲ್ಲದೇ ಪರದಾಡುತ್ತಿದ್ದವಳು ದಿಢೀರ್ ಲಕ್ಷುರಿ ಲೈಫ್: ಶಿಕ್ಷಕಿಯ ಬೆನ್ನುಬಿದ್ದ ಪೊಲೀಸರಿಗೆ ಕಾದಿತ್ತು ಶಾಕ್! Teacher
- ವಿಶೇಷ ಚೇತನ ಮಕ್ಕಳಿಗೆ ಪಾಠ ಹೇಳಿಕೊಡಬೇಕಿದ್ದ ಶಿಕ್ಷಕಿಯರೇ ಹೈಟೆಕ್ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿ ಬಂಧನ
- ಅಪಘಾತದ ಚಿಕಿತ್ಸೆಗೆ ಹಣ ಸಂಗ್ರಹಿಸಿದ್ದ ಶಿಕ್ಷಕಿ ದಿಢೀರನೆ ಐಷಾರಾಮಿ ಕಾರು ಖರೀದಿಸಿದ್ದರಿಂದ ಬಯಲಾಯ್ತು ಅಸಲಿ ಬಣ್ಣ
- ಆನ್‌ಲೈನ್‌ನಲ್ಲಿ ಹಣ ಪಡೆದು ಜಿಪಿಎಸ್ ಲೋಕೇಶನ್ ಮೂಲಕ ಮಾದಕ ವಸ್ತು ಪೂರೈಸುತ್ತಿದ್ದ ಖದೀಮರು
- 'ಆಪರೇಷನ್ ತೂಫಾನ್' ಕಾರ್ಯಾಚರಣೆಯಲ್ಲಿ ಕೋಳಿಕ್ಕೋಡ್ ಪೊಲೀಸರಿಗೆ ಸಿಕ್ಕಿಬಿದ್ದ ಆಟಿಸಂ ಶಾಲೆಯ ಶಿಕ್ಷಕಿಯರು
ತಿರುವನಂತಪುರಂ: ಮಕ್ಕಳಿಗೆ ದಾರಿದೀಪವಾಗಬೇಕಿದ್ದ ಶಿಕ್ಷಕಿಯರೇ ( Teacher ) ಮಾದಕ ವಸ್ತು ಜಾಲದ ಪ್ರಮುಖ ಕೊಂಡಿಗಳಾಗಿ ಬದಲಾಗಿರುವ ಆಘಾತಕಾರಿ ಘಟನೆ ಕೇರಳದ ಕೋಳಿಕ್ಕೋಡ್‌ನಲ್ಲಿ ಬೆಳಕಿಗೆ ಬಂದಿದೆ. ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡುವ ಉದಾತ್ತ ವೃತ್ತಿಯಲ್ಲಿದ್ದುಕೊಂಡೇ ಎಂಡಿಎಂಎ (MDMA) ಡ್ರಗ್ಸ್ ದಂಧೆ ನಡೆಸುತ್ತಿದ್ದ ಇಬ್ಬರು ಯುವತಿಯರ ಕರಾಳ ಮುಖ ನೋಡಿ ಹೆತ್ತವರು ಹಾಗೂ ಸಾರ್ವಜನಿಕರು ತಲ್ಲಣಗೊಂಡಿದ್ದಾರೆ.
ಕೇರಳದ ಪೆರಂಬ್ರ ಬಿಆರ್‌ಸಿ ವ್ಯಾಪ್ತಿಯ ಚೆರುವೆಲ್ಲೂರ್ ಸರ್ಕಾರಿ ಎಲ್‍ಪಿ ಶಾಲೆಗೆ ಸಂಯೋಜಿತವಾಗಿರುವ ಆಟಿಸಂ ಶಾಲೆಯಲ್ಲಿ ಕಾವ್ಯಾ ಎಂಬಾಕೆ 2016 ರಿಂದ ಸ್ಪೆಷಲ್ ಎಜುಕೇಟರ್ ಆಗಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಳು. ಎಂಎ ಸೈಕಾಲಜಿ ಪದವೀಧರೆಯಾಗಿದ್ದ ಈಕೆ ವಾರಕ್ಕೆ ಮೂರು ದಿನ ಮಾತ್ರ ಶಾಲೆಗೆ ಆಗಮಿಸುತ್ತಿದ್ದಳು. ಕಳೆದ ವರ್ಷ ಕಾರು ಅಪಘಾತಕ್ಕೊಳಗಾಗಿದ್ದ ಈಕೆಯ ಚಿಕಿತ್ಸೆಗಾಗಿ ಶಾಲೆಯ ಶಿಕ್ಷಕರು ಹಾಗೂ ಎಸ್‌ಎಸ್‌ಕೆ ಸಿಬ್ಬಂದಿ ವರ್ಗದವರು ಹಣ ಸಂಗ್ರಹಿಸಿ ಆರ್ಥಿಕ ನೆರವು ನೀಡಿದ್ದರು.
ಆದರೆ, ಚಿಕಿತ್ಸೆಗೆ ಕಷ್ಟಪಡುತ್ತಿದ್ದ ಈಕೆ ಇತ್ತೀಚೆಗೆ ದಿಢೀರನೆ ಅತ್ಯಂತ ದುಬಾರಿ ಐಷಾರಾಮಿ ಕಾರನ್ನು ಖರೀದಿಸಿದ್ದಳು. ವಿದೇಶದಲ್ಲಿರುವ ತನ್ನ ಸಹೋದರನ ವಾಹನ ಇದು ಎಂದು ಕಾವ್ಯಾ ನಂಬಿಸಲು ಯತ್ನಿಸಿದ್ದರೂ ಆಕೆಯ ಈ ದಿಢೀರ್ ಶ್ರೀಮಂತಿಕೆ ಶಾಲೆಯ ಶಿಕ್ಷಕರಲ್ಲಿ ಹಾಗೂ ಸ್ಥಳೀಯರಲ್ಲಿ ತೀವ್ರ ಅನುಮಾನ ಹುಟ್ಟುಹಾಕಿತ್ತು. ಕೊನೆಗೆ ಪೊಲೀಸರ 'ಆಪರೇಷನ್ ತೂಫಾನ್' ಕಾರ್ಯಾಚರಣೆಯಲ್ಲಿ ಈಕೆಯ ಅಸಲಿ ಬಣ್ಣ ಬಯಲಾಗಿದೆ.
ಪೊಲೀಸ್ ತನಿಖೆಯ ವೇಳೆ ಈ ಜಾಲವು ಮಾದಕ ವಸ್ತು ಪೂರೈಕೆಗೆ ಅತ್ಯಂತ ಯೋಜಿತ ಹಾಗೂ ಹೈಟೆಕ್ ಮಾರ್ಗವನ್ನು ಬಳಸುತ್ತಿದ್ದುದು ಪತ್ತೆಯಾಗಿದೆ. ಗ್ರಾಹಕರು ನಿಗದಿತ ಖಾತೆಗೆ 2 ಸಾವಿರ ರೂಪಾಯಿ ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ ತಕ್ಷಣ ಡ್ರಗ್ಸ್ ಅಡಗಿಸಿಟ್ಟಿರುವ ನಿರ್ದಿಷ್ಟ ಸ್ಥಳದ ಜಿಪಿಎಸ್ ಲೋಕೇಶನ್ ಅನ್ನು ಅವರ ಮೊಬೈಲ್‌ಗೆ ಕಳುಹಿಸಲಾಗುತ್ತಿತ್ತು. ತದನಂತರ ಗ್ಯಾಂಗ್‌ನ ಇನ್ನೊಬ್ಬ ಸದಸ್ಯ ಆ ಸ್ಥಳಕ್ಕೆ ತಲುಪಿ ಮಾದಕ ವಸ್ತುವನ್ನು ತಲುಪಿಸುತ್ತಿದ್ದ.
ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸಲು ಈ ಜಾಲವು ಹಣದ ವಹಿವಾಟಿಗೆ ತಂತ್ರ ರೂಪಿಸಿತ್ತು. ಡ್ರಗ್ಸ್ ಖರೀದಿದಾರರು ಮೊದಲು ಕಾವ್ಯಾಳ ಆಪ್ತ ಗೆಳತಿ ಕೀರ್ತನಾ ಖಾತೆಗೆ ಹಣ ಕಳುಹಿಸುತ್ತಿದ್ದರು. ಈ ಖಾತೆಯಲ್ಲಿ ದೊಡ್ಡ ಮೊತ್ತದ ಹಣ ಸಂಗ್ರಹವಾಗುತ್ತಿದ್ದಂತೆ ಅದನ್ನು ಕಾವ್ಯಾಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿತ್ತು. ಕೀರ್ತನಾ ನೇರವಾಗಿ ಡ್ರಗ್ಸ್ ಬಳಕೆದಾರರ ಸಂಪರ್ಕದಲ್ಲಿ ಇಲ್ಲದಿದ್ದರೂ ದೊಡ್ಡ ಮಟ್ಟದ ಡ್ರಗ್ಸ್ ಡೀಲರ್‌ಗಳ ಜೊತೆ ನಿಕಟ ಸಂಪರ್ಕ ಹೊಂದಿರುವುದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ.
ವಡಕರ ಮೂಲದ ಯುವಕನೊಬ್ಬ ಎಂಡಿಎಂಎ ಸಮೇತ ಸಿಕ್ಕಿಬಿದ್ದ ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಕೀರ್ತನಾಳ ಬ್ಯಾಂಕ್ ಖಾತೆಯ ಸುಳಿವು ಸಿಕ್ಕಿತ್ತು. ಈ ಆಧಾರದ ಮೇಲೆ ಜುಲೈ 11 ರಂದು ಕೀರ್ತನಾ (28) ಜಿಲೆಯನ್ನು ಬಂಧಿಸಿದ ಪೊಲೀಸರು ಬಳಿಕ ಆಕೆಯ ನೀಡಿದ ಮಾಹಿತಿಯಂತೆ ಕಾವ್ಯಾ (29) ಎಂಬಾಕೆಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಕೃತ್ಯ ಎಸಗಿದ ಶಿಕ್ಷಕಿಯರ ವಿರುದ್ಧ ಶಿಕ್ಷಣ ಇಲಾಖೆ ತಕ್ಷಣವೇ ಕಠಿಣ ಕ್ರಮ ಕೈಗೊಂಡಿದೆ.
ಮಾದಕ ವಸ್ತು ಮಾರಾಟ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಕೀರ್ತನಾಳನ್ನು ಈಗಾಗಲೇ ಸೇವೆಯಿಂದ ವಜಾಗೊಳಿಸಲಾಗಿದ್ದು ಕಾವ್ಯಾಳನ್ನು ಸಹ ಇಲಾಖೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಲಾಗಿದೆ. ಬಂಧಿತ ಆರೋಪಿಗಳಿಗೆ ಎಂಡಿಎಂಎ ಪೂರೈಸುತ್ತಿದ್ದ ಮುಖ್ಯ ಜಾಲ ಯಾವುದು ಮತ್ತು ಯಾರಿಂದೆಲ್ಲಾ ಹಣ ಹರಿದುಬರುತ್ತಿತ್ತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ, (ಏಜೆನ್ಸೀಸ್).