ಜೆನ್-ಜೀ ಗಳು ನಮ್ಮದೇ ದೇಶದ ಮಕ್ಕಳು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
- ಜೆನ್-ಜೀ (Gen-Z) ಯುವಕರು ರಾಷ್ಟ್ರ ವಿರೋಧಿಗಳಲ್ಲ
- ನಮ್ಮದೇ ದೇಶದ ಮಕ್ಕಳು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
- ಜಂತರ್ ಮಂತರ್ ಹೋರಾಟಕ್ಕೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ
ಮುಂಬೈ: ಇಂದಿನ ಯುವ ಪೀಳಿಗೆ ಅಥವಾ ಜೆನ್-ಜೀ (Gen Z) ಯಾವುದೇ ವಿಷಯಕ್ಕಾಗಿ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರೆ, ಅವರನ್ನು ತಕ್ಷಣವೇ 'ರಾಷ್ಟ್ರವಿರೋಧಿಗಳು' ಎಂದು ಕರೆಯಲು ಸಾಧ್ಯವಿಲ್ಲ. ಅವರು ನಮ್ಮದೇ ದೇಶದ ಮಕ್ಕಳು, ನಮ್ಮ ಮುಂದಿನ ಪೀಳಿಗೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat on GenZ) ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಯುವಕರ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, ಯುವಕರ ಧ್ವನಿಯನ್ನು ಹತ್ತಿಕ್ಕುವ ಬದಲು ಅವರ ಕಳವಳಗಳಿಗೆ ಸ್ಪಂದಿಸುವುದು ಪ್ರಜಾಪ್ರಭುತ್ವದ ಲಕ್ಷಣ ಎಂದಿದ್ದಾರೆ.
ಪೇಪರ್ ಸೋರಿಕೆ ಪ್ರಕರಣ ಹಾಗೂ ಇತರೆ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ನಡೆಸಿದ್ದರು. ಈ ಪ್ರತಿಭಟನೆಗಳ ಬೆನ್ನಲ್ಲೇ ಮೋಹನ್ ಭಾಗವತ್ ಅವರ ಈ ಹೇಳಿಕೆ ಸಾಕಷ್ಟು ರಾಜಕೀಯ ಮಹತ್ವ ಪಡೆದುಕೊಂಡಿದೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ ಎಂದಿರುವ ಅವರು, ಆದರೆ ಅದನ್ನು ನಡೆಸಲು ಸಂವಿಧಾನಬದ್ಧವಾದ ಹಾಗೂ ಸರಿಯಾದ ಮಾರ್ಗಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿನ ಪೀಳಿಗೆಗಿಂತ ಇಂದಿನ ಜೆನ್-ಜೀ ಮತ್ತು ಜೆನ್ ಆಲ್ಫಾ ಹೆಚ್ಚು ಪ್ರಾಮಾಣಿಕರಾಗಿದ್ದಾರೆ ಎಂದು ಭಾಗವತ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದೇಶಭಕ್ತಿ ಹಾಗೂ ಸೇವಾ ಮನೋಭಾವದ ವಿಚಾರ ಬಂದಾಗ ಇವರು ಅತ್ಯಂತ ಜವಾಬ್ದಾರಿಯುತವಾಗಿ ಸ್ಪಂದಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ನೀವು ನನ್ನನ್ನು ನಂಬಿ ಎಂದು ಕೇಳಿದರೆ ನಾನು ನಂಬುವುದಿಲ್ಲ, ಬದಲಿಗೆ ನಾನು ಜೆನ್-ಜೀ ಪೀಳಿಗೆಯನ್ನು ನಂಬುತ್ತೇನೆ ಎಂದು ಯುವಕರ ಮೇಲಿನ ತಮ್ಮ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಮುಂಬರುವ ದಿನಗಳಲ್ಲಿ, ಅಂದರೆ 2029ರ ಸಾರ್ವತ್ರಿಕ ಚುನಾವಣೆ ವೇಳೆಗೆ ದೇಶದ ಯುವ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇಂತಹ ಸಮಯದಲ್ಲಿ ಯುವ ಸಮೂಹದ ಆಕ್ರೋಶವನ್ನು ಕೇವಲ ರಾಜಕೀಯ ದೃಷ್ಟಿಕೋನದಿಂದ ನೋಡದೆ, ಅವರ ಭಾವನೆಗಳಿಗೆ ಬೆಲೆ ನೀಡಬೇಕಿದೆ ಎಂದು ಭಾಗವತ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ಹಾಗೂ ಬಲಪ್ರಯೋಗದ ಬಗ್ಗೆ ಪ್ರತಿಕ್ರಿಯಿಸಿದ ಭಾಗವತ್, ಆ ಬಗ್ಗೆ ತಮಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ. ಎಲ್ಲಿ ತಪ್ಪಾಯಿತು ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕವಷ್ಟೇ ಆ ಬಗ್ಗೆ ಮಾತನಾಡಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ, ಯುವಕರ ಧ್ವನಿಯನ್ನು ಅಡಗಿಸುವ ಬದಲು ಅವರೊಂದಿಗೆ ಮುಕ್ತ ಸಂವಾದ ನಡೆಸುವುದು ಉತ್ತಮ ಎನ್ನುವುದು ಭಾಗವತ್ ಅವರ ಅಭಿಪ್ರಾಯವಾಗಿದೆ, (ಏಜನ್ಸೀಸ್).