ಆದಿತ್ಯ ಠಾಕ್ರೆ 
ದೇಶ

ನಾಚಿಕೆಯಿಲ್ಲದೇ ತಮ್ಮ ನಿಷ್ಠೆ, ಗೌರವ ಮಾರಾಟ ಮಾಡ್ತಿದ್ದಾರೆ: ಶಿವಸೇನೆ ಬಂಡಾಯ ಸಂಸದರ ವಿರುದ್ಧ ಆದಿತ್ಯ ಠಾಕ್ರೆ ವಾಗ್ದಾಳಿ | Aaditya Thackeray

ಮುಂಬೈ: ಮಹಾರಾಷ್ಟ್ರದಲ್ಲಿ ಆಪರೇಷನ್ ಟೈಗರ್​ಗೆ ಠಾಕ್ರೆ ಬಣದ ಆರು ಸಂಸದರು ಬಲಿಯಾಗಿರುವ ನಡುವೆಯೇ ಸೋಮವಾರ(ಜೂ. 22) ಪಕ್ಷದ ಬಂಡಾಯ ಸಂಸದರ ವಿರುದ್ಧ ಆದಿತ್ಯ ಠಾಕ್ರೆ(Aaditya Thackeray) ತೀವ್ರ ವಾಗ್ದಾಳಿ ನಡೆಸಿದ್ದು, ರಾಜಕೀಯ ಲಾಭಕ್ಕಾಗಿ ತಮ್ಮ ಸ್ಥಾನ, ನಿಷ್ಠೆ ಹಾಗೂ ಖ್ಯಾತಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಪಕ್ಷ ಬದಲಾಯಿಸಿದ ಸಂಸದರು ಮಹಾ ವಿಕಾಸ್ ಅಘಾಡಿ (MVA) ಮತ್ತು ಇಂಡಿಯಾ ಬ್ಲಾಕ್ ವೇದಿಕೆಯಲ್ಲಿ ತಮ್ಮನ್ನು ಆಯ್ಕೆ ಮಾಡಿದ ಮತದಾರರ ಆದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷಾಂತರ ಮಾಡಿದ ದುರಾಶೆಯ ಸಂಸದರೇ, ನೀವು ಈ ಕೆಳಗಿನ ವಿಷಯಗಳನ್ನು ಮೊದಲಿಗಿಂತಲೂ ಹೆಚ್ಚು ಬಲವಾಗಿ ಸಾಬೀತುಪಡಿಸುತ್ತಿದ್ದೀರಿ. ನಿಮ್ಮ ನಿಷ್ಠೆ, ಗೌರವವನ್ನು ಅತ್ಯಂತ ನಿರ್ಲಜ್ಜವಾಗಿ ಮಾರಾಟಕ್ಕಿಟ್ಟಿದ್ದೀರಿ. ಸರ್ಕಾರವು ಪಕ್ಷಪಾತಿಯಾಗಿದೆ. ಸಾರ್ವಜನಿಕರ ಹಣವನ್ನು ರಾಜಕೀಯವಾಗಿ ನಿಧಿಗಳಂತೆ ಬಳಸಿಕೊಳ್ಳುತ್ತಿದೆ ಎಂದಿದ್ದಾರೆ.
ಈಗ ಪಕ್ಷ ಬದಲಾಯಿಸುತ್ತಿರುವವರೆಲ್ಲರೂ ಎನ್‌ಡಿಎ ವಿರುದ್ಧವಾಗಿ, ಎಂವಿಎ ಮತ್ತು ಇಂಡಿಯಾ ಮೈತ್ರಿಕೂಟದಡಿ ಗೆಲುವು ಸಾಧಿಸಿದ್ದಾರೆ. ಇವರೆಲ್ಲರಿಗೂ ಚುನಾವಣೆಯಲ್ಲಿ ಶಿವಸೇನೆ(ಯುಬಿಟಿ), ಕಾಂಗ್ರೆಸ್, ಎನ್​ಸಿಪಿ(ಎಸ್​ಪಿ) ಪಕ್ಷಗಳ ನಾಯಕರು ಪ್ರಚಾರ ಮಾಡಿದ್ದರು. ಈಗ ಸೈದ್ಧಾಂತಿಕ ವಾದಗಳ ಮೂಲಕ ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮತದಾರರು ಎನ್‌ಡಿಎ ಅಭ್ಯರ್ಥಿಗಳ ವಿರುದ್ಧ ಮತ್ತು ನಿಮ್ಮ ಕ್ಷೇತ್ರಗಳಲ್ಲಿ ಇಂಡಿಯಾ ಕೂಟ ಮತ್ತು ಅದು ಪ್ರತಿನಿಧಿಸುವ ಎಲ್ಲದಕ್ಕೂ ಮತ ಹಾಕಿದ್ದಾರೆ. ನಿಮ್ಮ ದುರಾಸೆಯೇ ನಿಮ್ಮನ್ನು ರಾತ್ರೋರಾತ್ರಿ ನಾಚಿಕೆಯಿಲ್ಲದೆ ಇದನ್ನೆಲ್ಲಾ ಕೈಬಿಡುವಂತೆ ಮಾಡಿತು ಎಂಬುದನ್ನು ಒಪ್ಪಿಕೊಳ್ಳಿ ಎಂದು ಕಿಡಿಕಾರಿದ್ದಾರೆ.
ಇನ್ನೂ ಪಕ್ಷಾಂತರ ಮಾಡಲಿರುವ ಶಿವಸೇನೆ(ಯುಬಿಟಿ)ಯ ಒಂಬತ್ತು ಲೋಕಸಭಾ ಸದಸ್ಯರಲ್ಲಿ ಆರು ಮಂದಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲಿದ್ದಾರೆ. ಇಂದು ದೆಹಲಿಯಲ್ಲಿ ಮತ್ತೊಮ್ಮೆ ಆರು ಸಂಸದರು ಸಭೆ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ (ಏಜೆನ್ಸೀಸ್).