ನವದೆಹಲಿ: ರಷ್ಯಾ, ಅಮೆರಿಕ ಮತ್ತು ಚೀನಾ ನಾಯಕರ ನಡುವಿನ ಹೈ ಪ್ರೊಫೈಲ್ ಸಭೆಯ ಫೋಟೋ ರಾಜಿಯಾದ ಪ್ರಧಾನಿಯಿಂದ ಎಂದಿಗೂ ಈ ಮೇಜಿನ ಬಳಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಭಾರತಕ್ಕೆ ಅಪಖ್ಯಾತಿ ತರಲು ಮತ್ತು ಪ್ರಧಾನಿ ದೂಷಿಸಲು ಹಣ ಪಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
ತಮ್ಮ ಎಕ್ಸ್ ಖಾತೆಯಲ್ಲಿ ಇಂದು(ನ. 20) ಬೆಳಗ್ಗೆ ಟ್ರಂಪ್, ಕ್ಸಿ ಹಾಗೂ ಪುಟಿನ್ ಅವರ ಅಪರೂಪದ ತ್ರಿಪಕ್ಷೀಯ ಮಾತುಕತೆಯ ಚಿತ್ರವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಸಭೆಯಲ್ಲಿ ಇಲ್ಲದಿರುವುದಕ್ಕೆ, ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ಭಾರತದ ಪ್ರಧಾನಿ ಈ ಮೇಜಿನ ಬಳಿ ಕುಳಿತುಕೊಳ್ಳುತ್ತಿದ್ದರು. ರಾಜಿ ಮಾಡಿಕೊಂಡ ಪ್ರಧಾನಿ ಎಂದಿಗೂ ಈ ಮೇಜಿನ ಬಳಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಪೋಸ್ಟ್ ಹಾಕಿದ್ದಾರೆ.
ಈ ಪೋಸ್ಟ್ಗೆ ಕಿಡಿಕಾರಿರುವ ಬಿಜೆಪಿ ವಕ್ತಾರ ಆರ್.ಪಿ. ಸಿಂಗ್, ಭಾರತವನ್ನು ಅಪಕೀರ್ತಿಗೊಳಿಸಲು ರಾಹುಲ್ ಗಾಂಧಿಯವರಿಗೆ ಹಣ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮತ್ತು ಭಾರತದ ಬಗ್ಗೆ ನಕಾರಾತ್ಮಕ ನಿರೂಪಣೆಯನ್ನು ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಾಸ್ತವವೇನೆಂದರೆ, ಇಂದಿನ ಜಾಗತಿಕ ವ್ಯವಸ್ಥೆಯಲ್ಲಿ ಭಾರತವು ತುಂಬಾ ಎತ್ತರಕ್ಕೆ ಬೆಳೆದಿದೆ. ಪ್ರಧಾನಿ ಮೋದಿ ಅವರನ್ನು ಜಾಗತಿಕ ನಾಯಕರೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯಾಗಿ ನೋಡಲಾಗುತ್ತದೆ ಎಂದಿದ್ದಾರೆ.
ಅದೇ ರೀತಿ ಬಿಜೆಪಿ ವಕ್ತಾರ ತುಹಿನ್ ಸಿನ್ಹಾ ಸಹ, ಹಿಂದಿನ ಕಾಂಗ್ರೆಸ್ ಸರ್ಕಾರಗಳು ಭಾರತದ ಹಿತಾಸಕ್ತಿಗಳ ವಿಷಯದಲ್ಲಿ ರಾಜಿ ಮಾಡಿಕೊಂಡಿದೆ ಎಂದು ಎಂದು ವಾಗ್ದಾಳಿ ನಡೆಸಿದ್ದಾರೆ.
ಶಿಮ್ಲಾ ಒಪ್ಪಂದದ ವೇಳೆ ಇಂದಿರಾ ಗಾಂಧಿ ರಾಜಿ ಮಾಡಿಕೊಂಡರು. ಅವರು ಪಾಕಿಸ್ತಾನಿ ಸೈನಿಕರನ್ನು ಬಿಡುಗಡೆ ಮಾಡಿದರು, ಆದರೆ ನಂತರ ಪಾಕಿಸ್ತಾನವು ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡತೊಡಗಿತು. ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ನಡೆದ 'ಶರ್ಮ್-ಎಲ್-ಶೇಖ್' ಹೇಳಿಕೆಯನ್ನು ಉಲ್ಲೇಖಿಸಿದ ಸಿನ್ಹಾ, ಕಾಂಗ್ರೆಸ್ ಪಕ್ಷಕ್ಕೆ ಇಂತಹ ರಾಜಿ ಮಾಡಿಕೊಳ್ಳುವ ಇತಿಹಾಸವೇ ಇದೆ ಎಂದು ಟೀಕಿಸಿದ್ದಾರೆ (ಏಜೆನ್ಸೀಸ್).