ಉದಯನಿಧಿ ಸ್ಟಾಲಿನ್​ 
ದೇಶ

ಅವರಿಗೆ ಕೃತಜ್ಞತೆ ಇಲ್ಲ, ಮತ್ತೆಂದೂ ನಂಬಬಾರದು; ವಿಜಯ್​ಗೆ ಬೆಂಬಲ ನೀಡಿದ್ದಕ್ಕೆ ಕಾಂಗ್ರೆಸ್ ವಿರುದ್ಧ ಉದಯನಿಧಿ ಸ್ಟಾಲಿನ್ ವಾಗ್ದಾಳಿ | Udayanidhi Stalin

ಚೆನ್ನೈ: ತಮಿಳುನಾಡು ಚುನಾವಣೆ ಫಲಿತಾಂಶದ ಬಳಿಕ ಡಿಎಂಕೆ ಕೂಟ ಬಿಟ್ಟು ಸಿಎಂ ಸಿ.ಜೋಸೆಫ್ ವಿಜಯ್ ನೇತೃತ್ವದ ಟಿವಿಕೆಗೆ ಸರ್ಕಾರ ರಚಿಸಲು ಬೆಂಬಲ ನೀಡಿದ್ದಕ್ಕೆ, ಅವರಿಗೆ ಕೃತಜ್ಞತೆ ಇಲ್ಲ, ಮತ್ತೆಂದೂ ಅವರನ್ನು ನಂಬಬಾರದು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಡಿಎಂಕೆ ನಾಯಕ ಮತ್ತು ಮಾಜಿ ಡಿಸಿಎಂ ಉದಯನಿಧಿ ಸ್ಟಾಲಿನ್(Udayanidhi Stalin) ವಾಗ್ದಾಳಿ ನಡೆಸಿದ್ದಾರೆ.
ಚೆನ್ನೈ ಪಕ್ಷದ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ನಡೆದ ಡಿಎಂಕೆ ಯುವ ಘಟಕದ ಸಭೆಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಐದು ಶಾಸಕರನ್ನು ಗೆಲ್ಲಿಸಲು ಡಿಎಂಕೆ ಕಾರ್ಯಕರ್ತರೇ ಕಾರಣ. ಮತ್ತು ಸಿಎಂ ಎಂ.ಕೆ. ಸ್ಟಾಲಿನ್ ಅವರನ್ನು ಜನ ಮತ್ತೆ ಸಿಎಂ ಮಾಡಲು ಬಯಸಿದ್ದರಿಂದ ಅವರ ನಾಯಕತ್ವದಲ್ಲಿ ಐದು ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಇಂದು ಕೆಲವು ಸ್ಥಾನಗಳಿಗಾಗಿ ಅವರು ನಮಗೆ ತಿಳಿಸದೆ ಓಡಿಹೋದರು. ಮೂಲಭೂತ ಕೃತಜ್ಞತೆ ಮತ್ತು ಸಭ್ಯತೆಯ ಕೊರತೆಯಿರುವ ಕಾಂಗ್ರೆಸ್ ಅನ್ನು ನಾವು ಎಂದಿಗೂ ನಂಬಬಾರದು. ನಾವು ಅವರನ್ನು ನಮ್ಮ ಹತ್ತಿರಕ್ಕೆ ಬಿಡಬಾರದು. ತಮಿಳುನಾಡಿನ ಜನರು ಶೀಘ್ರದಲ್ಲೇ ಅವರಿಗೆ ಪರಿಪೂರ್ಣ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಭಾರತದಾದ್ಯಂತ ಬಿಜೆಪಿಯ ಬೆಳವಣಿಗೆಗೆ ಕಾಂಗ್ರೆಸ್ ಕಾರಣ ಎಂದು ಅವರು ದೂಷಿಸಿದ ಅವರು, ಭಾರತದಾದ್ಯಂತ ಬಿಜೆಪಿಯ ಗೆಲುವಿಗೆ ಮೋದಿ ಮತ್ತು ಅಮಿತ್ ಶಾ ಕಾರಣರು ಎಂದು ನಾನು ಭಾವಿಸಿದ್ದೆ. ಆದರೆ ಭಾರತದಲ್ಲಿ ಬಿಜೆಪಿಯ ಬೆಳವಣಿಗೆಗೆ ಕಾಂಗ್ರೆಸ್ ಕಾರಣ ಎಂಬುದು ಈಗ ಸ್ಪಷ್ಟವಾಗಿದೆ. ನಮ್ಮ ನಾಯಕ ಎಂ.ಕೆ. ಸ್ಟಾಲಿನ್ ಕಳೆದ ಸಂಸತ್ತು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಯುವಜನರಿಗೆ, ವಿಶೇಷವಾಗಿ ಜನರಲ್ ಝಡ್ ಮತದಾರರಿಗೆ ರಾಜಕೀಯ ಶಿಕ್ಷಣ ನೀಡಬೇಕು. ಮತ್ತು ಕುಟುಂಬಗಳು ಮತ್ತು ಮೊದಲ ಬಾರಿಗೆ ಮತದಾರರಲ್ಲಿ ರಾಜಕೀಯ ಜಾಗೃತಿ ಮೂಡಿಸಬೇಕು ಎಂದು ಡಿಎಂಕೆ ಯುವ ಘಟಕದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ (ಏಜೆನ್ಸೀಸ್).