ಪ್ರಧಾನಿ ನರೇಂದ್ರ ಮೋದಿ 
ದೇಶ

ಆತ್ಮನಿರ್ಭರ ಭಾರತವನ್ನು ಅಪಹಾಸ್ಯ ಮಾಡ್ತಿದ್ದಾರೆ: ನಿರಾಶಾವಾದಿಗಳೆಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಧಾನಿ ಮೋದಿ ಕಿಡಿ | PM Modi

ಅಹ್ಮದಾಬಾದ್: ದೇಶದಲ್ಲಿ ಇಂದು ಕೆಲವು ನಿರಾಶಾವಾದಿಗಳು ಆತ್ಮನಿರ್ಭರ ಭಾರತವನ್ನು ಅಣಕಿಸುತ್ತಿದ್ದಾರೆ, ಆದರೆ ಅವರ ಅಧಿಕಾರಾವಧಿಯಲ್ಲಿ ಭಾರತವನ್ನು ನಿರಂತರವಾಗಿ ವಿದೇಶಗಳ ಮೇಲೆ ಅವಲಂಬಿತವಾಗಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ(ಜೂ. 05) ಗುಜರಾತ್‌ನ ಸೂರತ್‌ನಲ್ಲಿ ಸುಮಾರು 18,800 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾವಲಂಬನೆಯತ್ತ ಭಾರತದ ಪ್ರಯಾಣವನ್ನು ಎತ್ತಿ ತೋರಿಸಿದರು. ಇಂದು ದೇಶದಲ್ಲಿ ಕೆಲವು ನಿರಾಶಾವಾದಿಗಳು 'ಆತ್ಮನಿರ್ಭರ ಭಾರತ' ಅಭಿಯಾನವನ್ನು ನಿರಂತರವಾಗಿ ಅಪಹಾಸ್ಯ ಮಾಡುತ್ತಿದ್ದಾರೆ. ಅವರು ದೇಶದ ಈ ಸಂಕಲ್ಪವನ್ನು ನಿರಂತರವಾಗಿ ಕಡಿಮೆ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಭಾರತವನ್ನು ಯಾವಾಗಲೂ ಇತರ ರಾಷ್ಟ್ರಗಳ ಮೇಲೆ ಅವಲಂಬಿತವಾಗುವಂತೆ ಮಾಡಿದ ಅವರು, ಇತರರ ಮೇಲೆ ಅವಲಂಬಿತವಾಗಿರುವ ದೇಶವು ನಿಜವಾಗಿಯೂ ಅಭಿವೃದ್ಧಿಯ ಎತ್ತರವನ್ನು ಎಂದಿಗೂ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅವರು ಮರೆತುಬಿಡುತ್ತಾರೆ ಎಂದು ಹೇಳಿದ್ದಾರೆ.
ಇನ್ನೂ ರಾಜಕೀಯ ಲಾಭಕ್ಕಾಗಿ ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಲಾಗ್ತಿದೆ ಎಂದು ಕಿಡಿಕಾರಿದ ಅವರು, ಕಳೆದ 12 ವರ್ಷಗಳಿಂದ ಕಾಂಗ್ರೆಸ್ ಪಕ್ಷವೂ ಅವ್ಯವಸ್ಥೆ ಮತ್ತು ಅನಿಶ್ಚಿತತೆಯನ್ನು ಹರಡುವ ಮೂಲಕ ಅವಕಾಶಗಳನ್ನು ಹುಡುಕುತ್ತಿದೆ. ಆದರೆ ದೇಶದ ಜನರು ಅದಕ್ಕೆ ಪದೇ-ಪದೇ ಸೂಕ್ತ ಉತ್ತರವನ್ನು ನೀಡಿದ್ದಾರೆ. ಗುಜರಾತ್ ಜನರು ಕಾಂಗ್ರೆಸ್ ಅನ್ನು ಅಂಚಿನಲ್ಲಿ ತಳ್ಳಿದ್ದಾರೆ. ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ಜನ ಬೇಸತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಹಿಮಾಚಲ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆದವು. ಅಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಪಕ್ಷವು ಹೀನಾಯ ಸೋಲನ್ನು ಅನುಭವಿಸಿತು. ಅಲ್ಲಿನ ಜನ ಕಾಂಗ್ರೆಸ್‌ನ ದುರಾಡಳಿತವನ್ನು ತಿರಸ್ಕರಿಸಿದ್ದಾರೆ. ಇದಕ್ಕೂ ಮೊದಲು, ಹರಿಯಾಣದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).