Suvendu Adhikari | ಸುವೇಂದು ಅಧಿಕಾರಿ 
ದೇಶ

ಸುವೇಂದು ಅಧಿಕಾರಿಗೆ ಮುತ್ತಿಗೆ ಹಾಕಿದ ಟಿಎಂಸಿ ಕಾರ್ಯಕರ್ತರು; ಅವರೆಲ್ಲರೂ ಬಾಂಗ್ಲಾದೇಶಿ ಮುಸ್ಲಿಮರು ಎಂದ ಬಿಜೆಪಿ ನಾಯಕ! | Suvendu Adhikari

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನವು ಏಳು ಜಿಲ್ಲೆಗಳ 142 ಕ್ಷೇತ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆಯು ಸುಸೂತ್ರವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಶಸ್ತ್ರ ಪಡೆಗಳು ಮತ್ತು ರಾಜ್ಯ ಪೊಲೀಸರನ್ನು ವ್ಯಾಪಕವಾಗಿ ನಿಯೋಜಿಸಲಾಗಿದೆ. ಈ ನಡುವೆ ಕೋಲ್ಕತ್ತಾದ ಮತಗಟ್ಟೆಯೊಂದರಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಭೇಟಿ ನೀಡಿದಾಗ ತೀವ್ರ ಉದ್ವಿಗ್ನತೆ ಆರಂಭವಾಯಿತು.
ವಿರೋಧ ಪಕ್ಷದ ನಾಯಕ ಹಾಗೂ ಭವಾನಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಮತದಾನದ ವ್ಯವಸ್ಥೆಗಳನ್ನು ಪರಿಶೀಲಿಸಲು ಮತಗಟ್ಟೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಜಮಾಯಿಸಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲಿಗರ ಗುಂಪು ಸುವೇಂದು ಅಧಿಕಾರಿಯನ್ನು ಸುತ್ತುವರೆದು ಜೈ ಬೆಂಗಾಲ್ ಘೋಷಣೆಗಳನ್ನು ಕೂಗಲಾರಂಭಿಸಿತು. ಇದರಿಂದಾಗಿ ಮತದಾನ ಕೇಂದ್ರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು ಎಂದು ವರದಿಯಾಗಿದೆ.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಕೂಡಲೇ ಮಧ್ಯಪ್ರವೇಶಿಸಿದರು. ಉದ್ರಿಕ್ತ ಗುಂಪನ್ನು ಚದುರಿಸಲು ಮತ್ತು ಪ್ರದೇಶವನ್ನು ಸುಪರ್ದಿಗೆ ಪಡೆಯಲು ಭದ್ರತಾ ಪಡೆಗಳು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಭದ್ರತಾ ಪಡೆಗಳ ಸಕಾಲಿಕ ಕ್ರಮದಿಂದಾಗಿ ಪರಿಸ್ಥಿತಿ ಹತೋಟಿಗೆ ಬಂದಿತು.

ಅವರೆಲ್ಲರೂ ಬಾಂಗ್ಲಾದೇಶಿ ಮುಸ್ಲಿಮರು : ಸುವೇಂದು ಅಧಿಕಾರಿ ಕಿಡಿ

ಈ ಘಟನೆಯ ನಂತರ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸುವೇಂದು ಅಧಿಕಾರಿ, ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನನ್ನು ಸುತ್ತುವರೆದವರೆಲ್ಲರೂ ಬಾಂಗ್ಲಾದೇಶಿ ಮುಸ್ಲಿಮರು. ಮಮತಾ ಬ್ಯಾನರ್ಜಿ ಸೋಲು ಖಚಿತವಾಗಿದ್ದು, ಅವರು ಭಯಭೀತರಾಗಿದ್ದಾರೆ. ಶೀಘ್ರದಲ್ಲೇ ಅವರನ್ನು ರಾಜಕೀಯವಾಗಿ ನಿರ್ನಾಮ ಮಾಡಲಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು. ಪ್ರಸ್ತುತ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಪಕಾಲದ ಉದ್ವಿಗ್ನತೆಯ ಬಳಿಕ, ಯಾವುದೇ ಅಡಚಣೆಯಿಲ್ಲದೆ ಮತದಾನ ಪ್ರಕ್ರಿಯೆಯು ಪುನರಾರಂಭಗೊಂಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ(ಏಜೆನ್ಸೀಸ್​​).