ನಟ ದಿಲೀಪ್, ಮಂಜು ವಾರಿಯರ್
- 8 ವರ್ಷಗಳ ಹಿಂದೆ ಖ್ಯಾತ ನಟಿಯ ಕಿಡ್ನಾಪ್, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ
- ನಟ ದಿಲೀಪ್ ಅವರನ್ನು ಕೇಸ್ನಿಂದ ಖುಲಾಸೆಗೊಳಿಸಿದ ಕೋರ್ಟ್
- ನನ್ನ ವಿರುದ್ಧ ಪಿತೂರಿ ಮಾಡಿ, ಕರಿಯರ್ ಹಾಳು ಮಾಡಿದರು ಎಂದ ದಿಲೀಪ್
ಕೊಚ್ಚಿ: ಸುಮಾರು 8 ವರ್ಷಗಳ ಹಿಂದೆ ಖ್ಯಾತ ನಟಿಯನ್ನು ಕಿಡ್ನಾಪ್ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಕಡೆಗೂ ಅಂತಿಮ ಘಟ್ಟಕ್ಕೆ ಬಂದಿದೆ. ಈ ಪ್ರಕರಣದಲ್ಲಿ ನಟ ದಿಲೀಪ್ ಹೆಸರು ಕೂಡ ಕೇಳಿಬಂದಿತ್ತು. ಹೀಗಾಗಿ ಅವರನ್ನು ತಪ್ಪಿತಸ್ಥರೆಂದು ಕೋರ್ಟ್ ತೀರ್ಪು ನೀಡುತ್ತದೆಯೇ ಎಂದು ಅನೇಕರು ಕಾಯುತ್ತಿದ್ದರು. ಆದರೆ, ಈ ಪ್ರಕರಣದಿಂದ ದಿಲೀಪ್ ಅವರನ್ನು ಕೋರ್ಟ್ ಖುಲಾಸೆಗೊಳಿಸಿರುವುದು ಸದ್ಯ ಭಾರೀ ಅಚ್ಚರಿಗೆ ಕಾರಣವಾಗಿದೆ.
ಅತ್ತ ದಿಲೀಪ್ಗೆ ಬಿಗ್ ರಿಲೀಫ್ ನೀಡಿರುವ ಕೋರ್ಟ್, ಪಲ್ಸರ್ ಸುನಿ ಸೇರಿ ಆರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಅತ್ಯಾಚಾರ ಸೇರಿದಂತೆ ಅವರ ವಿರುದ್ಧದ ಎಲ್ಲ ಆರೋಪಗಳನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ. ಆದ್ದರಿಂದ, ಅವರಿಗೆ ಗರಿಷ್ಠ ಶಿಕ್ಷೆಯಾಗುವ ಸಾಧ್ಯತೆಯಿದೆ. ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ ವರ್ಗೀಸ್ ಅವರು ಇದೇ ಡಿ.12ರ ಶುಕ್ರವಾರ ತೀರ್ಪು ಪ್ರಕಟಿಸಲಿದ್ದಾರೆ.
ಇನ್ನು ಪ್ರಕರಣದ ತೀರ್ಪಿನ ಬಳಿಕ ಮಾತನಾಡಿದ ದಿಲೀಪ್, "ನನ್ನನ್ನು ತಪ್ಪಿತಸ್ಥನೆಂದು ತೋರಿಸಲು ಮಾಡಿದ ಪಿತೂರಿ ಇದು. ಇದೆಲ್ಲ ಶುರುವಾಗಿದ್ದೇ ಅಂದು ಮಂಜು ವಾರಿಯರ್ 'ಅಮ್ಮ' ಸಭೆಯಲ್ಲಿ ಆಡಿದ ಮಾತುಗಳಿಂದ. ನನ್ನ ಕರಿಯರ್ ಹಾಳು ಮಾಡಲು ಇಷ್ಟೆಲ್ಲ ಮಾಡಿದ್ದಾರೆ. 'ಈ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ ಅಡಗಿದೆ. ಇದನ್ನು ತನಿಖೆಯ ಮುಖಾಂತರ ಬಯಲಿಗೆಳೆಯಬೇಕು' ಎಂದು ಮಂಜು ಹೇಳಿದಾಗ ನನ್ನ ವಿರುದ್ಧ ಅಸಲಿ ಪಿತೂರಿ ಪ್ರಾರಂಭವಾಯಿತು. ಆಗಿನ ಉನ್ನತ ಪೊಲೀಸ್ ಅಧಿಕಾರಿ ಮತ್ತು ಕ್ರಿಮಿನಲ್ ಪೊಲೀಸರು ಜಂಟಿಯಾಗಿ ಕ್ರಮ ಕೈಗೊಂಡರು" ಎಂದರು.
"ಇದಕ್ಕಾಗಿ, ಪೊಲೀಸರು ಪ್ರಮುಖ ಆರೋಪಿ ಮತ್ತು ಸಹ-ಆರೋಪಿಗಳೊಂದಿಗೆ ಶಾಮೀಲಾದರು. ಖಾಕಿ ಪಡೆ ಕೆಲವು ಮಾಧ್ಯಮಗಳೊಂದಿಗೆ ಕೈಜೋಡಿಸಿ, ನನ್ನ ವಿರುದ್ಧ ಸುಳ್ಳು ಕಥೆಯನ್ನು ಸೃಷ್ಟಿಸಿದರು. ಆ ಕಥೆಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಬ್ಬಿಸಿದರು. ಈ ಕೇಸ್ನಲ್ಲಿ ನಿಜವಾದ ಪಿತೂರಿ ನನ್ನನ್ನು ಸುಳ್ಳು ಎಂದು ಹೇಳಲು ಮಾಡಿದ ಪ್ರಯತ್ನವಾಗಿದೆ. ಇದು ನನ್ನ ಕರಿಯರ್ ಮತ್ತು ಸಮಾಜದಲ್ಲಿ ಜೀವನವನ್ನು ಛಿದ್ರ ಮಾಡಿದೆ. ನನ್ನ ಕುಟುಂಬ, ಸ್ನೇಹಿತರು ಮತ್ತು ನನಗಾಗಿ ಪ್ರಾರ್ಥಿಸಿದವರಿಗೆ ಈ ಸಮಯದಲ್ಲಿ ನಾನು ಧನ್ಯವಾದ ಹೇಳುವೆ" ಎಂದು ದಿಲೀಪ್ ಹೇಳಿದ್ದಾರೆ.
ಏನಿದು ಪ್ರಕರಣ?
ಅಂದಹಾಗೆ, ಈ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಫೆಬ್ರವರಿ 17, 2017 ರಂದು ನಡೆಯಿತು. ಸಂತ್ರಸ್ತ ನಟಿ ತ್ರಿಶೂರ್ನಿಂದ ಎರ್ನಾಕುಲಂಗೆ ಸಿನಿಮಾ ಚಿತ್ರೀಕರಣಕ್ಕಾಗಿ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ನಟಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿ, ಆಕ್ಷೇಪಾರ್ಹ ವಿಡಿಯೋವನ್ನು ಆರೋಪಗಳು ಚಿತ್ರೀಕರಿಸಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಯಿತು,(ಏಜೆನ್ಸೀಸ್).