ಮಿತಿಮೀರಿದ ಜೆನ್​ಝಿ ಕ್ರೌರ್ಯ 
ದೇಶ

ಜೆನ್​ಝಿಯಲ್ಲಿ ಇದೆಂಥಾ ಕ್ರೌರ್ಯ?

ನವದೆಹಲಿ: ಜೆನ್ ಜಿ ಪೀಳಿಗೆಯಲ್ಲಿ ತಾಳ್ಮೆ ತುಂಬ ಕಡಿಮೆ ಮತ್ತು ಆಕ್ರಮಣಶೀಲತೆ ಹೆಚ್ಚು ಎಂದು ಮನೋವೈಜ್ಞಾನಿಕರು ಎಚ್ಚರಿಸುತ್ತಲೇ ಬಂದಿದ್ದಾರೆ. ಸಣ್ಣ ಸೋಲು ಅಥವಾ ಅವಮಾನ ಕೂಡ ಇವರನ್ನು ಕದಲಿಸಿಬಿಡುತ್ತದೆ. ‘ಚೆನ್ನಾಗಿ ಓದಿ, ನೀಟ್ ಪಾಸ್ ಮಾಡು’ ಎಂದು ಬುದ್ಧಿಮಾತು ಹೇಳಿದ್ದಕ್ಕೆ ಲಖನೌದಲ್ಲಿ 21 ವರ್ಷದ ಯುವಕ ತಂದೆಯನ್ನೇ ನಿರ್ದಯವಾಗಿ ಹತ್ಯೆ ಮಾಡಿದ್ದಲ್ಲದೆ, ಶವವನ್ನೂ ತುಂಡರಿಸಿ ಪೈಶಾಚಿಕತೆ ಮೆರೆದ ಘಟನೆ ತಲ್ಲಣ ಮೂಡಿಸಿದೆ. ಮಾತ್ರವಲ್ಲ, ಸ್ವಯಂ ಹಾನಿ ಮಾಡಿಕೊಳ್ಳುವಲ್ಲೂ ಈ ತರುಣರು ಮುಂದಿದ್ದಾರೆ.
ಆತ್ಮಹತ್ಯೆಗೆ ಶರಣಾಗುವುದು ಅಥವಾ ಆತ್ಮಹತ್ಯೆಗೆ ಯತ್ನಿಸುವಂಥ ಘಟನೆಗಳು ಕೂಡ ಹೆಚ್ಚುತ್ತಿವೆ. ಬದುಕಿನಲ್ಲಿ ಎಲ್ಲವೂ ಸುಲಭವಾಗಿ ಸಿಗಬೇಕು, ಯಶಸ್ಸು ಎಂಬುದು ರಾತ್ರೋರಾತ್ರಿ ದೊರೆತು ಪ್ರಖ್ಯಾತರಾಗಬೇಕು ಎಂಬ ಹುಚ್ಚು ಕಲ್ಪನೆಗಳು ಯುವಕರ ಬದುಕಿನ ದಿಕ್ಕನ್ನೇ ಬದಲಿಸುತ್ತಿವೆ. ಈ ಮನೋ ಪಲ್ಲಟದ ವಿವಿಧ ಆಯಾಮದ ವಿಶ್ಲೇಷಣೆ ಇಲ್ಲಿದೆ.
ಎಲ್ಲವೂ ತಾವು ಅಂದುಕೊಂಡಂತೆ ನಡೆಯಬೇಕು. ಹಾಗಾಗದಿದ್ದರೆ, ವಾಸ್ತವವನ್ನು ಒಪ್ಪಿಕೊಳ್ಳದೆ ಅತಿರೇಕದ ವರ್ತನೆಗೆ ಇಳಿಯುವುದು ವೈಯಕ್ತಿಕ ಸ್ವಾಸ್ಥ್ಯಕ್ಕೂ, ಸಾಮಾಜಿಕ ಸ್ವಾಸ್ಥ್ಯಕ್ಕೂ ಮಾರಕ. ಹಾಗಾಗಿ, ಹದಿಹರೆಯ ವಯಸ್ಸಿನ ಮತ್ತು ಈಗಷ್ಟೇ ಯೌವನಕ್ಕೆ ಕಾಲಿಟ್ಟ ಮಕ್ಕಳನ್ನು ಬೆಳೆಸುವುದು ಹೇಗೆ, ಸರಿ-ತಪ್ಪುಗಳ ಅರಿವು ಮೂಡಿಸುವುದು ಹೇಗೆ ಎಂಬ ಚಿಂತೆ ಪಾಲಕರಿಗೆ ಕಾಡುತ್ತಿದೆ. ಸಣ್ಣ ನೋವು, ಸಣ್ಣ ಸೋಲು ಕೂಡ ಯುವ ಮನಸ್ಸುಗಳಿಗೆ ಪಥ್ಯವಾಗುತ್ತಿಲ್ಲ. ಕೈತುಂಬ ದುಡ್ಡು, ಐಷಾರಾಮಿ ಬದುಕು, ಸುಲಭದಲ್ಲಿ ಯಶಸ್ಸು, ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ಜನ ಫಾಲೋವರ್ಸ್ ಹೊಂದುವ ಪ್ರತಿಷ್ಠೆ ಮತ್ತು ಯಾರೂ ಏನೂ ಕೇಳದಂಥ, ಪ್ರಶ್ನಿಸದಂಥ ಸ್ವೇಚ್ಛಾಚಾರದ ಜೀವನವನ್ನು ನಡೆಸಬೇಕು ಎಂಬ ಹಠವೇ ಯುವ ಮನಸ್ಸುಗಳ ಬದುಕಿನ ದಿಕ್ಕನ್ನು ತಪ್ಪಿಸುತ್ತಿದೆ.
ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಸಾಮಾಜಿಕ ದೃಷ್ಟಿಕೋನದಲ್ಲಿ ಅಳೆಯದೆ, ತಮ್ಮದೇ ಯೋಚನೆಯಿಂದ ನಿರ್ಧರಿಸುತ್ತಾರೆ. ಸ್ನೇಹಿತರ ಬದುಕಿನ ಜತೆ ತುಲನೆ, ಸಿರಿವಂತರಂತೆಯೇ ಜೀವನಶೈಲಿ ರೂಪಿಸಿಕೊಳ್ಳಬೇಕು ಎಂಬ ಹಠ ಯುವಕರ ನೆಮ್ಮದಿಯನ್ನು ಮಾತ್ರ ಕಸಿಯುತ್ತಿಲ್ಲ, ಮನೆಯ ನೆಮ್ಮದಿಯನ್ನೂ ಹಾಳುಗೆಡವುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಇತರರ ಐಷಾರಾಮಿ ಜೀವನ ನೋಡಿ ತಾವೂ ಹಾಗೆಯೇ ಇರಬೇಕೆಂದು ಬಯಸುತ್ತಾರೆ. ಮನೆಯಲ್ಲಿ ಪಾಲಕರು ಶಿಸ್ತು ಅಥವಾ ಓದಿನ ಬಗ್ಗೆ ಹೇಳಿದಾಗ, ಅದನ್ನು ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿ ಎಂದು ಭಾವಿಸುತ್ತಾರೆ.

ಲಖನೌದ ಘಟನೆಯು ನಿಜಕ್ಕೂ ಆಘಾತಕಾರಿ ಮತ್ತು ಸಮಾಜದ ನೈತಿಕ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ.

ಕೇವಲ ಓದಿನ ಒತ್ತಡ ಅಥವಾ ಸಣ್ಣ ಅಸಮಾಧಾನಕ್ಕೆ ಹೆತ್ತವರನ್ನೇ ಕೊಲ್ಲುವ ಮಟ್ಟಕ್ಕೆ ಯುವಜನತೆ ಹೋಗುತ್ತಿರುವುದು ಆಧುನಿಕ ಕಾಲದ ದುರಂತ. ಪೆಥಾಲಜಿ ಲ್ಯಾಬ್ ಮಾಲೀಕ 49 ವರ್ಷ ವಯಸ್ಸಿನ ಮಾನವೇಂದ್ರ ಸಿಂಗ್​ರನ್ನು ಅವರ ಪುತ್ರ 21 ವರ್ಷದ ಅಕ್ಷತ್ ಸಿಂಗ್ ಕೊಲೆ ಮಾಡಿ, ಶವವನ್ನು ತುಂಡು ಮಾಡಿ, ನೀಲಿ ಡ್ರಮ್ಲ್ಲಿ ಇರಿಸಿದ್ದ. ಘಟನೆಯ ಬಗ್ಗೆ ಒಂದಿಷ್ಟು ಪಶ್ಚಾತಾಪ ಭಾವ ಇಲ್ಲದ ಆತ ಮನೆಯಲ್ಲಿ ತಂದೆ ಶವ ಇರಿಸಿಕೊಂಡೇ ಚಿಕನ್ ತಿಂದಿದ್ದಾನೆ. ಮಾನವೇಂದ್ರ ಸಿಂಗ್ ಅಕ್ಕಪಕ್ಕದವರ ಜತೆಗೂ ಸ್ನೇಹ, ವಿಶ್ವಾಸದಿಂದ ಇದ್ದು, ಉತ್ತಮ ರೀತಿಯಲ್ಲಿ ಬದುಕು ಸಾಗಿಸುತ್ತಿದ್ದರು. ತಾಯಿ ಇಲ್ಲದ್ದರಿಂದ ಮಗ ಹಾಗೂ ಮಗಳನ್ನು ಬೆಳೆಸುವ ಸಂಪೂರ್ಣ ಹೊಣೆಗಾರಿಕೆ ಹೊತ್ತಿದ್ದರು.

ಯಾರಂತೆಯೋ ಬದುಕಲು ಹೊರಟು!

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜೆನ್ ಜಿ (ಸರಿಸುಮಾರು 1997ರಿಂದ 2012ರ ನಡುವೆ ಜನಿಸಿದವರು) ಪೀಳಿಗೆಯ ಯುವಕರು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಮಾಜದಲ್ಲಿ ಆತಂಕ ಮೂಡಿಸಿದೆ. ಸಾಮಾಜಿಕ ಜಾಲತಾಣಗಳ ಪ್ರಭಾವ: ಇನ್​ಸ್ಟಾಗ್ರಾಮ್ ಫೇಸ್​ಬುಕ್​ನಂತಹ ವೇದಿಕೆಗಳಲ್ಲಿ ‘ಗ್ಯಾಂಗ್​ಸ್ಟರ್’ ಸಂಸ್ಕೃತಿ, ಐಷಾರಾಮಿ ಜೀವನ ಮತ್ತು ಆಯುಧಗಳನ್ನು ಪ್ರದರ್ಶಿಸುವ ರೀಲ್ಸ್, ವಿಡಿಯೋಗಳನ್ನು ನೋಡಿ ಯುವಕರು ಪ್ರಭಾವಿತರಾಗುತ್ತಿದ್ದಾರೆ. ಕ್ರೌರ್ಯ ತುಂಬಿದ ವೆಬ್ ಸಿರೀಸ್, ಸಿನಿಮಾಗಳ ವೀಕ್ಷಣೆ, ಅವುಗಳ ಪಾತ್ರದಲ್ಲಿ ತಮ್ಮನ್ನು ಕಲ್ಪಿಸಿಕೊಳ್ಳುವುದು, ಅಂಥ ಸಂದರ್ಭ ಬಂದರೆ ಆಕ್ರಮಕವಾಗಿ ವರ್ತಿಸಲು ಮಾನಸಿಕ ಸಿದ್ಧತೆ ನಡೆಸುವುದು ಸೇರಿದಂತೆ ವಿವಿಧ ಬಗೆಯಲ್ಲಿ ಹಿಂಸೆಯ ವೀಕ್ಷಣೆ, ಮೆಚ್ಚುಗೆ ಹಾಗೂ ಅನುಕರಣೆ ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿವೆ.

ಹಿಂಸಾತ್ಮಕ ವಿಡಿಯೋ ಗೇಮ್ಳು ಮತ್ತು ಕ್ರೖೆಮ್ ವೆಬ್ ಸೀರೀಸ್​ಗಳನ್ನು ನಿರಂತರವಾಗಿ ನೋಡುವುದರಿಂದ, ನಿಜ ಜೀವನದ ಹಿಂಸೆಯ ಬಗ್ಗೆ ಇರುವ ಮಾನವೀಯ ಸಂವೇದನೆ ಕಡಿಮೆಯಾಗುತ್ತಿದೆ. ಅವರಿಗೆ ಕೊಲೆ ಅಥವಾ ಹಲ್ಲೆ ಎಂಬುದು ಕೇವಲ ಒಂದು ಆಟದ ಅಥವಾ ಸಿನಿಮಾದ ದೃಶ್ಯದಂತೆ ಕಾಣತೊಡಗಿದೆ. ತ್ವರಿತ ಹಣದ ಹಪಾಹಪಿ: ಕಷ್ಟಪಟ್ಟು ದುಡಿಯುವುದಕ್ಕಿಂತ ಸುಲಭವಾಗಿ ಮತ್ತು ವೇಗವಾಗಿ ಹಣ ಗಳಿಸುವ ಉದ್ದೇಶದಿಂದ ಸೈಬರ್ ಅಪರಾಧ ಅಥವಾ ಸಣ್ಣಪುಟ್ಟ ದರೋಡೆಗಳತ್ತ ಯುವಕರು ಆಕರ್ಷಿತರಾಗುತ್ತಿದ್ದಾರೆ. ದುಡಿಮೆಯೇ ಇಲ್ಲದೆ ಐಷಾರಾಮಿ ಬದುಕು ಸಾಗಿಸಲು ಸೈಬರ್ ಅಪರಾಧ ಸೇರಿ ಇತರ ಕೃತ್ಯಗಳಲ್ಲಿ ಶಾಮೀಲಾಗುತ್ತಿದ್ದಾರೆ.

ಮಾದಕ ವ್ಯಸನ: ಡ್ರಗ್ಸ್ ಮತ್ತು ಮದ್ಯಪಾನದ ವ್ಯಸನಕ್ಕೆ ಒಳಗಾದ ಯುವಕರು, ತಮ್ಮ ಅಮಲನ್ನು ಪೂರೈಸಿಕೊಳ್ಳಲು ಹಣಕ್ಕಾಗಿ ಹಿಂಸಾತ್ಮಕ ಕೃತ್ಯಗಳಿಗೆ ಕೈಹಾಕುತ್ತಿದ್ದಾರೆ.

ಮಾನಸಿಕ ಒತ್ತಡ ಮತ್ತು ಒಂಟಿತನ: ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರುದ್ಯೋಗ, ವೈಫಲ್ಯ ಅಥವಾ ಕುಟುಂಬದ ಬೆಂಬಲದ ಕೊರತೆಯಿಂದ ಉಂಟಾಗುವ ಹತಾಶೆ ಕ್ರೋಧವಾಗಿ ಬದಲಾಗುತ್ತಿದೆ.

ಗೇಮಿಂಗ್ ಅಡಿಕ್ಷನ್: ಹಿಂಸಾತ್ಮಕ ಆನ್​ಲೈನ್ ಗೇಮ್ಳು ಯುವಕರ ಮನಸ್ಥಿತಿಯನ್ನು ಆಕ್ರಮಣಕಾರಿಯಾಗಿ ಮಾಡುತ್ತಿವೆ ಎಂದು ಮನೋವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಯುವಕರು ತೊಡಗಿರುವ ಅಪರಾಧಗಳ ಸ್ವರೂಪ

  • ಸೈಬರ್ ಅಪರಾಧಗಳು ಫಿಶಿಂಗ್, ಆನ್​ಲೈನ್ ವಂಚನೆ, ಹ್ಯಾಕಿಂಗ್, ಸಾಮಾಜಿಕ ಮಾಧ್ಯಮ ಮೂಲಕ ಬ್ಲಾ್ಯಕ್​ವೆುೕಲ್ ಮಾಡುವುದು.
  • ಮಾದಕ ದ್ರವ್ಯ ಮಾರಾಟ ಡ್ರಗ್ ಪೆಡ್ಲಿಂಗ್ ಅಥವಾ ಮಾದಕ ವಸ್ತುಗಳ ಸಾಗಾಣಿಕೆಯಲ್ಲಿ ಏಜೆಂಟ್​ಗಳಾಗಿ ಕೆಲಸ ಮಾಡುವುದು.
  • ರಸ್ತೆ ಹಿಂಸಾಚಾರ ಅತೀ ವೇಗದ ಚಾಲನೆ, ವೀಲಿಂಗ್ ಮತ್ತು ರಸ್ತೆಯಲ್ಲಿ ಸಣ್ಣ ಕಾರಣಕ್ಕೆ ಜಗಳವಾಡಿ ಹಲ್ಲೆ ಮಾಡುವುದು.
  • ಲೈಂಗಿಕ ಅಪರಾಧಗಳು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡು ವಂಚಿಸುವುದು ಅಥವಾ ಡಿಜಿಟಲ್ ಕಿರುಕುಳ.
  • ಸಣ್ಣಪುಟ್ಟ ದರೋಡೆ ಸ್ಮಾರ್ಟ್​ಫೋನ್ ಎಗರಿಸುವುದು, ಸರಗಳ್ಳತನ ಮತ್ತು ಸುಲಿಗೆಗಳು.

ಕರಾಳ ಭವಿಷ್ಯ

1. ಯುವಕರು ಅಪರಾಧಗಳಲ್ಲಿ ಭಾಗಿಯಾಗುವುದರಿಂದ ಕೇವಲ ಅವರ ಜೀವನವಲ್ಲದೆ, ಇಡೀ ದೇಶದ ಮೇಲೆ ಪರಿಣಾಮ ಬೀರುತ್ತದೆ. ಪೊಲೀಸ್ ಠಾಣೆಯಲ್ಲಿ ಒಮ್ಮೆ ಕ್ರಿಮಿನಲ್ ರೆಕಾರ್ಡ್ ದಾಖಲಾದರೆ ಶಿಕ್ಷಣ, ಉದ್ಯೋಗ ಮತ್ತು ವಿದೇಶಿ ಪ್ರಯಾಣದ ಅವಕಾಶಗಳು ಶಾಶ್ವತವಾಗಿ ಮುಚ್ಚಿಹೋಗುತ್ತವೆ. ವೈಯಕ್ತಿಕ ಭವಿಷ್ಯದ ನಾಶವಾಗುತ್ತದೆ.

2. ಯುವಕರು ಜೈಲು ಪಾಲಾದಾಗ ಅಥವಾ ಅಪರಾಧಗಳಲ್ಲಿ ಸಿಲುಕಿದಾಗ ಅವರ ಪಾಲಕರು ಸಾಮಾಜಿಕ ಅವಮಾನ ಮತ್ತು ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ. ಇಡೀ ಕುಟುಂಬದ ಮೇಲೆ ಇದರ ಪರಿಣಾಮವಾಗುತ್ತದೆ.

3. ದೇಶದ ಶಕ್ತಿಯಾಗಬೇಕಿದ್ದ ಯುವಶಕ್ತಿ ಜೈಲು ಸೇರುವುದು ಅಥವಾ ಅಪರಾಧ ಲೋಕದಲ್ಲಿ ಕಳೆದುಹೋಗುವುದು ದೇಶದ ಅಭಿವೃದ್ಧಿಗೆ ದೊಡ್ಡ ಹೊಡೆತ. ದೇಶದ ಮಾನವ ಸಂಪನ್ಮೂಲಕ್ಕೆ ನಷ್ಟ.

4. ಯುವಕರು ಹಿಂಸಾತ್ಮಕ ಹಾದಿ ಹಿಡಿದಾಗ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತದೆ ಮತ್ತು ಕಾನೂನು ಸುವ್ಯವಸ್ಥೆಗೆ ಸವಾಲಾಗುತ್ತದೆ. ಸಮಾಜದಲ್ಲಿ ಅಸುರಕ್ಷತೆಯ ಭಾವ ಹೆಚ್ಚುತ್ತದೆ.

ಬೆಚ್ಚಿಬೀಳಿಸುವ ಸಂಗತಿಗಳು

ಭಾರತದಲ್ಲಿ ಯುವಜನತೆ ಮತ್ತು ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮತ್ತು ಇತ್ತೀಚಿನ ವಿವಿಧ ವರದಿಗಳ ಅಂಕಿಅಂಶಗಳು ಆತಂಕಕಾರಿ ವಿಷಯಗಳನ್ನು ಹೊರಹಾಕಿವೆ. 2024 ಮತ್ತು 2025ರ ಸಾಲಿನ ವರದಿಗಳ ಆಧಾರದ ಮೇಲೆ ಪ್ರಮುಖ ಮಾಹಿತಿಗಳು ಇಲ್ಲಿವೆ.

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವವರಲ್ಲಿ ಬಹುಪಾಲು ಜನರು 18ರಿಂದ 30 ವರ್ಷದೊಳಗಿನವರು. ದೇಶದಲ್ಲಿ ದಾಖಲಾಗುವ ಒಟ್ಟು ಐಪಿಸಿ ಪ್ರಕರಣಗಳಲ್ಲಿ ಬಂಧಿತರಾದವರ ಪೈಕಿ ಸುಮಾರು 40%ಕ್ಕೂ ಹೆಚ್ಚು ಮಂದಿ 18-30 ವರ್ಷದೊಳಗಿನ ಯುವಕರು. 2024-25ರ ಅಂಕಿಅಂಶಗಳ ಪ್ರಕಾರ, ವರ್ಷಕ್ಕೆ ಸರಾಸರಿ 30 ಸಾವಿರದಿಂದ 35 ಸಾವಿರ ಪ್ರಕರಣಗಳಲ್ಲಿ ಬಾಲಾಪರಾಧಿಗಳು (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಭಾಗಿಯಾಗುತ್ತಿದ್ದಾರೆ. ಇವರಲ್ಲಿ 16ರಿಂದ 18 ವರ್ಷದೊಳಗಿನವರ ಸಂಖ್ಯೆ ಸುಮಾರು 75%.

ಮಾದಕ ದ್ರವ್ಯ ಮತ್ತು ಹಿಂಸಾಚಾರ

ಮಾದಕ ದ್ರವ್ಯಗಳ ಸೇವನೆ ಮತ್ತು ಮಾರಾಟದ ಅಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಕರ್ನಾಟಕ, ಪಂಜಾಬ್ ಮತ್ತು ಕೇರಳ ರಾಜ್ಯಗಳಲ್ಲಿ ಯುವಕರ ಪ್ರಮಾಣ ಹೆಚ್ಚಿದೆ. 2025ರಲ್ಲಿ ತ್ರಿಪುರಾದಂತಹ ರಾಜ್ಯಗಳಲ್ಲಿ ಮಾದಕ ದ್ರವ್ಯ ಪ್ರಕರಣಗಳ ಪತ್ತೆ ಹಚ್ಚುವಿಕೆ 11% ಹೆಚ್ಚಾಗಿದೆ.

  • ಅಪರಾಧ ಪ್ರಕರಣಗಳಲ್ಲೂ ಯುವಕರ ಸಂಖ್ಯೆಯೇ ಹೆಚ್ಚು
  • ಆಕ್ರಮಣಕಾರಿ ಸ್ವಭಾವ
  • ಯುವಕರಲ್ಲಿ ಕ್ರೌರ್ಯ ಮತ್ತು ಅಸಹನೆ ವೇಗವಾಗಿ ಹೆಚ್ಚುತ್ತಿದೆ.

ತಕ್ಷಣದ ತೃಪ್ತಿಯ ಹಪಾಹಪಿ: ಇಂದಿನ ಡಿಜಿಟಲ್ ಜಗತ್ತಿನಲ್ಲಿ ಎಲ್ಲವೂ ಒಂದು ಕ್ಲಿಕ್​ನಲ್ಲಿ ಸಿಗುತ್ತಿದೆ. ಇದರಿಂದಾಗಿ ಯಾವುದಕ್ಕಾದರೂ ಕಾಯುವ ಅಥವಾ ಸಹಿಸಿಕೊಳ್ಳುವ ಗುಣ ಯುವಕರಲ್ಲಿ ಮಾಯವಾಗುತ್ತಿದೆ. ಏನಾದರೂ ಅಂದುಕೊಂಡಂತೆ ನಡೆಯದಿದ್ದಾಗ ತೀವ್ರ ಕ್ರೋಧ ಉಂಟಾಗುತ್ತಿದೆ.

ಸಂವೇದನೆಯ ಕೊರತೆ: ಸೋಲು, ಟೀಕೆ ಅಥವಾ ಒತ್ತಡವನ್ನು ಹೇಗೆ ನಿರ್ವಹಿಸಬೇಕು ಎಂಬುದು ಇಂದಿನ ಯುವಕರಿಗೆ ತಿಳಿಯುತ್ತಿಲ್ಲ. ಸಣ್ಣ ಅಸಮಾಧಾನವೂ ಅವರಲ್ಲಿ ಸರ್ವನಾಶದ ಭಾವನೆಯನ್ನು ಹುಟ್ಟುಹಾಕುತ್ತಿದೆ. ಹಾಗಾಗಿ, ಪಠ್ಯ ಶಿಕ್ಷಣದ ಜತೆಗೆ ಭಾವನಾತ್ಮಕ ಬುದ್ಧಿವಂತಿಕೆಯನ್ನೂ ಬೆಳೆಸಬೇಕು ಎನ್ನುತ್ತಾರೆ ಮನೋವೈಜ್ಞಾನಿಕರು.

ಪರಿಹಾರವೂ ಇದೆ

ಡಿಜಿಟಲ್ ಡಿಟಾಕ್ಸ್: ಯುವಕರು ಹಿಂಸಾತ್ಮಕ ಕಂಟೆಂಟ್​ನಿಂದ ದೂರವಿರುವುದು ಮತ್ತು ಸ್ಮಾರ್ಟ್ ಫೋನ್ ಬಳಕೆಯನ್ನು ಮಿತಗೊಳಿಸುವುದು ಅಗತ್ಯ.

ಪಾಲಕರೊಂದಿಗೆ ಸಂವಹನ: ಪಾಲಕರು ಮಕ್ಕಳ ಮೇಲೆ ಕೇವಲ ‘ಗುರಿ’ಗಳನ್ನು ಹೇರದೆ, ಅವರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಸ್ನೇಹಿತರಾಗಬೇಕು.

ಮಾನಸಿಕ ಆರೋಗ್ಯಕ್ಕೆ ಆದ್ಯತೆ: ಶಾಲೆ ಮತ್ತು ಕಾಲೇಜುಗಳಲ್ಲಿ ಕಡ್ಡಾಯವಾಗಿ ಕೌನ್ಸೆಲಿಂಗ್ ಸೌಲಭ್ಯವಿರಬೇಕು. ಸಿಟ್ಟು ನಿರ್ವಹಣೆ ಬಗ್ಗೆ ತರಬೇತಿ ನೀಡಬೇಕು