ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನಾಟೆ ಮತ್ತು ಸಂಸದ ಶಶಿ ತರೂರ್
ನವದೆಹಲಿ: ಹಿರಿಯ ಪತ್ರಕರ್ತ ರಾಮನಾಥ್ ಗೋಯೆಂಕಾ ಅವರ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿ ಭಾಷಣವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಹೊಗಳಿದ್ದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್(Congress) ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನಾಟೆ, ಭಾಷಣದಲ್ಲಿ ಹೊಗಳುವಂತದ್ದೇನೂ ಇಲ್ಲ, ಅದೊಂದು ಕ್ಷುಲ್ಲಕ ಭಾಷಣ ಎಂದು ತಿರುಗೇಟು ನೀಡಿದ್ದಾರೆ.
ನವದೆಹಲಿಯಲ್ಲಿ ಸಂಸದ ಶಶಿ ತರೂರ್ ಎಕ್ಸ್ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನಿ ಮೋದಿ ಅವರ ಭಾಷಣದಲ್ಲಿ ಪ್ರಶಂಸನೀಯವಾದದ್ದೇನೂ ನನಗೆ ಕಂಡುಬಂದಿಲ್ಲ. ಪ್ರಧಾನಿಯವರು ಬಹಳಷ್ಟು ವಿಷಯಗಳಿಗೆ ಉತ್ತರಿಸಬೇಕು ಎಂದು ನಾನು ಭಾವಿಸುತ್ತೇನೆ. ಅವರು ಒಂದು ಪತ್ರಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನ್ಯಾಯಯುತ ಪತ್ರಿಕೋದ್ಯಮದ ಬಗ್ಗೆ ಅವರ ಸಮಸ್ಯೆ ಏನೆಂದು ನಮಗೆ ಹೇಳಬೇಕು. ಸತ್ಯವನ್ನು ತೋರಿಸುವ ಮತ್ತು ಮಾತನಾಡುವವರ ಬಗ್ಗೆ ಅವರೇಕೆ ಸಂತೋಷವಾಗಿಲ್ಲ ಎಂದು ನಮಗೆ ಹೇಳಬೇಕಿತ್ತು.
ಅವರ ಭಾಷಣದಲ್ಲಿ ಪ್ರಶಂಸಿಸಲು ನನಗೆ ಯಾವುದೇ ಕಾರಣ ಕಾಣಲಿಲ್ಲ. ಆದರೆ ಶಶಿ ತರೂರ್ ಅದನ್ನು ಹೊಗಳಲು ಹೇಗೆ ಕಂಡುಕೊಂಡರೋ ನನಗೆ ತಿಳಿದಿಲ್ಲ, ಅದೊಂದು ಕ್ಷುಲ್ಲಕ ಭಾಷಣ ಎಂದು ನನಗೆ ಅನ್ನಿಸಿತು. ಅವರು ಅಲ್ಲಿಯೂ ಕಾಂಗ್ರೆಸ್ ಅನ್ನು ಟೀಕಿಸಿದರು. ಪ್ರಧಾನಿ ಹಗಲಿರುಳು ಕಾಂಗ್ರೆಸ್ ಬಗ್ಗೆ ಯೋಚಿಸುತ್ತಾರೆ. ಇದು ಅದ್ಭುತವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದೇನು?
ಸೋಮವಾರ ರಾತ್ರಿ ಇಂಡಿಯಾ ಎಕ್ಸ್ಪ್ರೆಸ್ ಪತ್ರಿಕೆಯ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿಯವರ ರಾಮನಾಥ್ ಗೋಯೆಂಕಾ ಉಪನ್ಯಾಸದಲ್ಲಿ ಭಾಗವಹಿಸಿದ್ದೆ. ನಾನು ತೀವ್ರ ಶೀತ ಮತ್ತು ಕೆಮ್ಮಿನೊಂದಿಗೆ ಹೋರಾಡುತ್ತಿದ್ದರೂ ಪ್ರೇಕ್ಷಕರಲ್ಲಿದ್ದಕ್ಕೆ ಸಂತೋಷವಾಗಿತ್ತು. ಅಲ್ಲದೆ, ಭಾರತವು ಈಗ ಜಗತ್ತಿಗೆ ಉದಯೋನ್ಮುಖ ಮಾದರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ದೇಶದ ಆರ್ಥಿಕ ಸ್ಥಿತಿಗತಿ ಮೇಲೆ ಮೋದಿ ಮಾಡಿದ ಭಾಷಣ ಗಮನ ಸೆಳೆಯಿತು ಎಂದು ಪ್ರಧಾನಿಯನ್ನು ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿಯವರ ಭಾಷಣದ ಪ್ರಮುಖ ಭಾಗವು ಮೆಕಾಲೆಯ 200 ವರ್ಷಗಳ ಗುಲಾಮ ಮನಸ್ಥಿತಿಯ ಪರಂಪರೆಯನ್ನು ಉರುಳಿಸಲು ಮೀಸಲಾಗಿತ್ತು. ಅಲ್ಲದೆ, ಮುಂದಿನ ದಿನಗಳಲ್ಲಿ ಭಾರತದ ಪರಂಪರೆ, ಭಾಷೆಗಳು ಮತ್ತು ಜ್ಞಾನ ವ್ಯವಸ್ಥೆಗಳಲ್ಲಿ ಹೆಮ್ಮೆಯನ್ನು ಪುನಃಸ್ಥಾಪಿಸಲು 10 ವರ್ಷಗಳ ರಾಷ್ಟ್ರೀಯ ಧ್ಯೇಯಕ್ಕೆ ಪ್ರಧಾನಿ ಮನವಿ ಮಾಡಿದರು ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ (ಏಜೆನ್ಸೀಸ್).