ಪ್ರಧಾನಿ ನರೇಂದ್ರ ಮೋದಿ  
ದೇಶ

ಪೇಪರ್ ಲೀಕ್ ಗ್ಯಾಂಗ್​ಗಳನ್ನು ಸುಮ್ಮನೆ ಬಿಡೋ ಮಾತೇ ಇಲ್ಲ! 4ನೇ ಬಾರಿಯ ವಿಡಿಯೋ ಸಂದೇಶದಲ್ಲಿ ಮೋದಿ ಎಚ್ಚರಿಕೆ

ನವದೆಹಲಿ: ದೇಶಾದ್ಯಂತ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಐತಿಹಾಸಿಕ ಹೆಜ್ಜೆಯಿಟ್ಟಿದೆ. ಇಂದು ರಾಜ್ಯಸಭೆಯಲ್ಲಿ ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ಮಸೂದೆ ಅಂಗೀಕಾರ ಆಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕನೇ ಬಾರಿಗೆ ವಿಡಿಯೋ ಮೂಲಕ ದೇಶದ ಜನತೆಗೆ ಮತ್ತೊಂದು ಸಂದೇಶ ನೀಡಿದ್ದಾರೆ.

ಪ್ರಧಾನಿ ಮೋದಿ ಅಭಯ

ಈ ಮಹತ್ವದ ಬೆಳವಣಿಗೆಯ ಕುರಿತು ಮಾತನಾಡಿದ ಪ್ರಧಾನಿ, "ದೇಶದ ಮಕ್ಕಳ ಭವಿಷ್ಯದ ಜೊತೆ ಆಟವಾಡುವ ಪೇಪರ್ ಮಾಫಿಯಾ ಮತ್ತು ಗ್ಯಾಂಗ್‌ಗಳನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಕಳೆದ ಹಲವು ದಶಕಗಳಿಂದ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಪೇಪರ್ ಲೀಕ್ ಸಮಸ್ಯೆ ಯುವಕರ ಭವಿಷ್ಯವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಇದಕ್ಕಾಗಿ ಕಠಿಣ ಕಾನೂನಿನ ಅಗತ್ಯವಿತ್ತು. ನಾವು ನೀಡಿದ್ದ ಭರವಸೆಯಂತೆ ಸಂಸತ್ತಿನ ಉಭಯ ಸದನಗಳಲ್ಲಿ ಸುದೀರ್ಘ ಚರ್ಚೆಗಳು ನಡೆದಿದ್ದು, ಮಸೂದೆಗೆ ಅನುಮೋದನೆ ಸಿಕ್ಕಿದೆ" ಎಂದರು.
"ಪೇಪರ್ ಸೋರಿಕೆಗೆ ಕಾರಣವಾಗುವ ಗ್ಯಾಂಗ್, ದೇಶದ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಆಡುವ ಯಾವುದೇ ಮಾಫಿಯಾವನ್ನು ಬಿಡುವ ಪ್ರಶ್ನೆಯೇ ಇಲ್ಲ. ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಮೈಲಿಗಲ್ಲು. ವಿಕಸಿತ ಭಾರತದ ಕನಸನ್ನು ನನಸಾಗಿಸಲು ನಾವೆಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯೋಣ" ಎಂದು ಯುವಜನತೆಗೆ ಕರೆ ನೀಡಿದ್ದಾರೆ,(ಏಜೆನ್ಸೀಸ್).