ಮೀನಾಕ್ಷಿ ನಟರಾಜನ್ 
ದೇಶ

ಯಾವುದೇ ಹಿನ್ನಡೆ ಇಲ್ಲ: ದೇಶದ ಜನಕ್ಕೆ ಎಲ್ಲಾ ಗೊತ್ತಾಗಿದೆ: ಸುಪ್ರೀಂ ಆದೇಶದ ಬಗ್ಗೆ ಕಮೆಂಟ್ ಮಾಡಲ್ಲ: ಮೀನಾಕ್ಷಿ ನಟರಾಜನ್ | Meenakshi Natarajan

ನವದೆಹಲಿ: ಚುನಾವಣಾಧಿಕಾರಿ ತಮ್ಮ ನಾಮಪತ್ರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದ ಬಗ್ಗೆ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್(Meenakshi Natarajan) ಪ್ರತಿಕ್ರಿಯಿಸಿದ್ದು, ನನಗೆ ಯಾವುದೇ ಹಿನ್ನಡೆ ಆಗಿಲ್ಲ. ಏನು ನಡೆಯುತ್ತಿದೆ ಎಂದು ಇಡೀ ದೇಶಕ್ಕೆ ಗೊತ್ತಾಗಿದೆ. ಸುಪ್ರೀಂ ಆದೇಶದ ಬಗ್ಗೆ ಕಮೆಂಟ್ ಮಾಡಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಯಾವುದೇ ನಿರಾಶೆ ಅಥವಾ ಆಘಾತವಿಲ್ಲ. ಪ್ರಜಾಪ್ರಭುತ್ವಕ್ಕೆ ಏನಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ಸಂವಿಧಾನದ ಘನತೆಯನ್ನು ಗಮನದಲ್ಲಿಟ್ಟುಕೊಂಡು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ, ಆದರೆ ಚುನಾವಣಾ ಆಯೋಗವು ರಾಜಿ ಮಾಡಿಕೊಂಡಿದೆ ಎಂದು ನಮಗೆಲ್ಲರಿಗೂ ತಿಳಿದಿದೆ ಎಂದು ಕಿಡಿಕಾರಿದ್ದಾರೆ.
ಮುಂದಿನ ನಡೆಯ ನನ್ನ ಪಕ್ಷವೇ ನಿರ್ಧರಿಸುತ್ತದೆ. ನಾನು ಅಭ್ಯರ್ಥಿಯಾಗಿದ್ದೆ, ನಮ್ಮ ನಾಯಕರು ಏನು ನಿರ್ಧರಿಸುತ್ತಾರೋ ಅದನ್ನು ಅನುಸರಿಸುತ್ತೇವೆ. ನಾವು ಹೋರಾಡಲು ಸಿದ್ಧರಿದ್ದೇವೆ. ಸೀಟ್ ಚೋರಿ ಬಹಳ ಸ್ಪಷ್ಟವಾಗಿದೆ. ಕಾರ್ಪೊರೇಟ್ ಜಗತ್ತಿನ ವ್ಯಕ್ತಿಗೆ ಒಂದು ಕಾನೂನು ಮತ್ತು ಸಾಂವಿಧಾನಿಕ ತತ್ವಗಳಿಗಾಗಿ ಹೋರಾಡುವವರಿಗೆ ಇನ್ನೊಂದು ಕಾನೂನು ಇದೆ ಎಂದು ನಮಗೆಲ್ಲರಿಗೂ ತಿಳಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುಪ್ರೀಂಕೋರ್ಟ್​ ಹೇಳಿದ್ದೇನು?

ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಕಾಂಗ್ರೆಸ್​ನ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮೀನಾಕ್ಷಿ ನಟರಾಜನ್ ಅವರಿಗೆ, ಪ್ರಕರಣವೊಂದರ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಚುನಾವಣಾಧಿಕಾರಿ ನಾಮಪತ್ರವನ್ನು ತಿರಸ್ಕರಿಸಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದರು.
ಇಂದು ಮೀನಾಕ್ಷಿ ನಟರಾಜನ್ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್ ಚಂದೂರ್ಕರ್ ಅವರ ದ್ವಿಸದಸ್ಯ ಪೀಠವು, ಚುನಾವಣಾ ಅಧಿಕಾರಿಯಿಂದ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡರೆ, ಚುನಾವಣಾ ಆಯೋಗವನ್ನು ಸಂಪರ್ಕಿಸುವುದು ಸೂಕ್ತ ಪರಿಹಾರ. ತೀರ್ಪು ಎಷ್ಟೇ ತಪ್ಪಾಗಿದ್ದರೂ, ಒಮ್ಮೆ ನಾಮಪತ್ರ ತಿರಸ್ಕೃತವಾದರೆ, ಪರಿಹಾರವು ಸಾಮಾನ್ಯವಾಗಿ ಬೇರೆಡೆ ಇರುತ್ತದೆ. ನಾವು ಇಂತಹ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ಹೇಳಿದೆ.

ನಾಮಪತ್ರ ತಿರಸ್ಕೃತವಾಗಿದ್ದೇಕೆ?

ರಾಜ್ಯಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮೀನಾಕ್ಷಿ ನಟರಾಜನ್ ಅವರು, ದಾಖಲೆಗಳ ಪರಿಶೀಲನೆಯಲ್ಲಿ ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿದ ನಮೂನೆ 26 ರಲ್ಲಿ ಅಪೂರ್ಣ ಅಫಿಡವಿಟ್ ಸಲ್ಲಿಸಿದ್ದಾರೆ ಮತ್ತು ನ್ಯಾಯಾಲಯದ ದೂರಿನ ವಿವರಗಳನ್ನು ಬಿಟ್ಟುಬಿಟ್ಟಿದ್ದಾರೆ ಎಂದು ಚುನಾವಣಾಧಿಕಾರಿ ಅರವಿಂದ್ ಶರ್ಮಾ ನಾಮಪತ್ರ ತಿರಸ್ಕರಿಸಿದ್ದರು (ಏಜೆನ್ಸೀಸ್).