ಪವನ್ ಕಲ್ಯಾಣ್  
ದೇಶ

ರಾಜಕಾರಣಿಗಳು ಸಿನಿಮಾದಲ್ಲಿ ನಟಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ; ಪವನ್ ಕಲ್ಯಾಣ್​ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ | Andhra High Court

ಅಮರಾವತಿ: ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಕೆ.ಪವನ್ ಕಲ್ಯಾಣ್​ ವಿರುದ್ಧ ನಟನಗೆ ನಿರ್ಬಂಧ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಆಂಧ್ರ ಪ್ರದೇಶ ಹೈಕೋರ್ಟ್(Andhra High Court), ರಾಜಕೀಯ ನಾಯಕರು ಚಲನಚಿತ್ರಗಳಲ್ಲಿ ನಟಿಸುವುದಕ್ಕೆ ಯಾವುದೇ ಕಾನೂನು ನಿರ್ಬಂಧವಿಲ್ಲ ಎಂದು ಆದೇಶ ನೀಡಿದೆ.
'ಹರಿ ಹರ ವೀರ ಮಲ್ಲು' ಚಿತ್ರಕ್ಕೆ ಸಂಬಂಧಿಸಿದಂತೆ ಪವನ್ ಕಲ್ಯಾಣ್ ತಮ್ಮ ಅಧಿಕೃತ ಸ್ಥಾನಮಾನ ಮತ್ತು ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಮಾಜಿ ಐಎಎಸ್ ಅಧಿಕಾರಿ ವಿಜಯ್ ಕುಮಾರ್ ಅವರು ಆಂಧ್ರ ಪ್ರದೇಶ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.
ಪವನ್ ಕಲ್ಯಾಣ್ ಚಲನಚಿತ್ರಗಳಲ್ಲಿ ನಟನೆ, ನಿರ್ಮಾಣ, ಪ್ರಚಾರ ಹಾಗೂ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅವರನ್ನು ನಿರ್ಬಂಧಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಕಳೆದ ವರ್ಷ ಸೆ. 24ರಂದು ಎರಡು ಕಡೆಯ ವಾದ ಆಲಿಸಿದ್ದ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದರು.
ಇಂದು ಅಂತಿಮ ಆದೇಶವನ್ನು ನೀಡುತ್ತಾ ಹೈಕೋರ್ಟ್, ಚುನಾಯಿತ ಪ್ರತಿನಿಧಿಗಳು ಚಲನಚಿತ್ರ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಲು ಕಾನೂನಿನಡಿಯಲ್ಲಿ ಯಾವುದೇ ನಿಷೇಧವಿಲ್ಲ ಎಂಬ ಎಜೆ ದಮ್ಮಲಪತಿ ಶ್ರೀನಿವಾಸ್ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಇವಾನ ಸಾಂಬಶಿವ ಪ್ರತಾಪ್ ಅವರ ವಾದವನ್ನು ಪುರಸ್ಕರಿಸಿ, ಮಾಜಿ ಐಎಎಸ್ ಅಧಿಕಾರಿ ವಿಜಯ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ (ಏಜೆನ್ಸೀಸ್).