Parliament Session | ಸಂಸತ್ ವಿಶೇಷ ಅಧಿವೇಶನದ ಚರ್ಚೆಗಳಿಗೆ ಸಚಿವ ಕಿರಣ್ ರಿಜಿಜು ಬ್ರೇಕ್
ಸಂಸತ್ ಅಧಿವೇಶನದ (Parliament Session) ದಿನಾಂಕಗಳನ್ನು ವಿಸ್ತರಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದಾರೆ. ಮುಕ್ತಾಯಗೊಳ್ಳುತ್ತಿರುವ ಮುಂಗಾರು ಅಧಿವೇಶನದ ಬಳಿಕ ಆಗಸ್ಟ್ 16 ರಿಂದ 18 ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಮಸೂದೆ (Delimitation Bill) ಹಾಗೂ ಮಹಿಳಾ ಮೀಸಲಾತಿ ಮಸೂದೆ ಕುರಿತು ಚರ್ಚಿಸಲು ಕೇಂದ್ರ ಸರ್ಕಾರವು ವಿಶೇಷ ಅಧಿವೇಶನವನ್ನು ಕರೆಯುವ ಸಾಧ್ಯತೆಗಳಿವೆ ಎಂಬ ವರದಿಗಳ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ.
ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು ಭದ್ರಪಡಿಸಿಕೊಳ್ಳಲು ಕೇಂದ್ರವು ಯತ್ನಿಸುತ್ತಿದ್ದು, ಅಗತ್ಯ ಸಂಖ್ಯೆಗಳು ಲಭ್ಯವಾದ ಬಳಿಕವೇ ವಿಶೇಷ ಅಧಿವೇಶನವನ್ನು ಕರೆಯುವ ಸಾಧ್ಯತೆಯಿದೆ ಎಂದು ಆರಂಭದಲ್ಲಿ ವರದಿಯಾಗಿತ್ತು.
ಸಂಸತ್ ಅಧಿವೇಶನದ ದಿನಾಂಕಗಳನ್ನು ವಿಸ್ತರಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದು, ಮಹಿಳಾ ಮೀಸಲಾತಿ ಮತ್ತು ಪುನರ್ವಿಂಗಡಣೆ ಮಸೂದೆ ಕುರಿತು ಆಗಸ್ಟ್ 16 ರಿಂದ 18 ರವರೆಗೆ ಯಾವುದೇ ವಿಶೇಷ ಅಧಿವೇಶನ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ಜುಲೈ 20 ರಿಂದ ಆಗಸ್ಟ್ 13 ರವರೆಗೆ ನಡೆಯುವ ಮುಂಗಾರು ಅಧಿವೇಶನದಲ್ಲಿ ಕಲಾಪದ ಸಂದರ್ಭದಲ್ಲಿ ಸರ್ಕಾರದ ಮುಖ್ಯಸ್ಥರ ಉಪಸ್ಥಿತಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಬೇಡಿಕೆಗಳಿಂದಾಗಿ ಸತತ ಮುಂದೂಡಿಕೆಗಳು ಮತ್ತು ಘರ್ಷಣೆಗಳು ನಡೆದ ಹಿನ್ನೆಲೆಯಲ್ಲಿ ಕೇಂದ್ರದಿಂದ ಈ ಸ್ಪಷ್ಟನೆ ಬಂದಿದೆ.
ಸಂಸತ್ತಿನಲ್ಲಿ ಮುಂದುವರಿದಿರುವ ಬಿಕ್ಕಟ್ಟಿನ ನಡುವೆ, ಸಂಸತ್ ಭವನದ ಸಂಕೀರ್ಣದಲ್ಲಿ ಉನ್ನತ ಮಟ್ಟದ ಸಮಾಲೋಚನೆ ನಡೆಯಿತು. ಕೇಂದ್ರ ಸಚಿವ ಕಿರಣ್ ರಿಜಿಜು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕೊಠಡಿಯಲ್ಲಿ, ಹಿರಿಯ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಸಭೆ ನಡೆಸಿದರು. 50 ನಿಮಿಷಗಳ ಸಭೆಯಲ್ಲಿ, ಪುನರ್ವಿಂಗಡಣೆ ಮಸೂದೆ ಮತ್ತು ಸಂಬಂಧಿತ ಶಾಸಕಾಂಗ ಚೌಕಟ್ಟುಗಳ ಕುರಿತು ಪ್ರಮುಖ ವಿರೋಧ ಪಕ್ಷದ ನಿಲುವನ್ನು ಅರ್ಥಮಾಡಿಕೊಳ್ಳಲು ರಿಜಿಜು ಪ್ರಯತ್ನಿಸಿದರು.
ಸುಪ್ರೀಂ ಕೋರ್ಟ್ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಒಪ್ಪಿಗೆ
ರಾಜ್ಯಸಭೆಯು ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ, 2026 ಅನ್ನು ಅಂಗೀಕರಿಸಿದ್ದು, ಈಗಾಗಲೇ ಲೋಕಸಭೆಯಲ್ಲಿ ಮಸೂದೆಗೆ ಅನುಮೋದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳ ಒಪ್ಪಿಗೆಯೊಂದಿಗೆ ಈ ಶಾಸನಕ್ಕೆ ಅಂತಿಮ ಮುದ್ರೆ ಬಿದ್ದಿದೆ. ಈ ಹೊಸ ಮಸೂದೆಯು ಭಾರತದ ಮುಖ್ಯಮೂರ್ತಿಗಳು ಸೇರಿದಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮಂಜೂರಾದ ಬಲವನ್ನು 34 ರಿಂದ 38 ಕ್ಕೆ ಹೆಚ್ಚಿಸುತ್ತದೆ. ಈ ಮಸೂದೆಯನ್ನು ಮೇಲ್ಮನೆಯಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಅವರು ಮಂಡಿಸಿದರು.
ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಬಿಜು ಜನತಾದಳ ಸಂಸದ ಸಸ್ಮಿತ್ ಪಾತ್ರ ಅವರು ನ್ಯಾಯಾಂಗದ ಬಲವನ್ನು ವಿಸ್ತರಿಸುವುದರ ಜೊತೆಗೆ ಅಪೆಕ್ಸ್ ಕೋರ್ಟ್‌ನ ಮೂಲಸೌಕರ್ಯಗಳನ್ನು ಬಲಪಡಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು. ಸಚಿವರು ಭಾರತದ ಮುಖ್ಯಮೂರ್ತಿಗಳು, ನ್ಯಾಯಪೀಠ ಮತ್ತು ಸಂಬಂಧಿತ ಸಮಿತಿಯೊಂದಿಗೆ ಚರ್ಚಿಸಿ ದೇಶದ ಸಂಪೂರ್ಣ ನ್ಯಾಯಾಂಗ ವ್ಯವಸ್ಥೆಯ ಮೂಲಸೌಕರ್ಯ ಅಭಿವೃದ್ಧಿಯನ್ನು ಸುಧಾರಿಸಲು ಪ್ರಯತ್ನಿಸುತ್ತಾರೆ ಎಂದು ಆಶಿಸುವುದಾಗಿ ತಿಳಿಸಿದರು(ಏಜೆನ್ಸೀಸ್).