ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್
ನವದೆಹಲಿ: ಗೋವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡುವ ಅಥವಾ ದೇಶಾದ್ಯಂತ ಗೋಹತ್ಯೆ ನಿಷೇಧ ಹೇರುವ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್(Arjun Ram Meghwal) ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೇಘವಾಲ್, ಗೋವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ಮತ್ತು ಗೋಹತ್ಯೆ ನಿಷೇಧವನ್ನು ಕೋರಿ ಸಂಸತ್ ಸದಸ್ಯರು ಸೇರಿದಂತೆ ಸಾರ್ವಜನಿಕರು ನಿಯಮಿತವಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ವಿವಿಧ ಸಂಸ್ಥೆಗಳು ಈ ವಿಷಯಗಳ ಬಗ್ಗೆ ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ.
ಆದಾಗ್ಯೂ, ಸದ್ಯಕ್ಕೆ ಅಂತಹ ಯಾವುದೇ ವಿಷಯ ಸಂಪುಟದ ಪರಿಶೀಲನೆಯಲ್ಲಿಲ್ಲ. ಒಂದು ವೇಳೆ ಪ್ರಸ್ತಾವನೆಯು ಸರ್ಕಾರ ಅಥವಾ ಸಂಪುಟದ ಹಸ್ತಕ್ಷೇಪದ ಅಗತ್ಯವಿರುವ ಹಂತವನ್ನು ತಲುಪಿದರೆ, ನಾವು ನಿಮಗೆ ತಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಬೇಡಿಕೆಗಳು ಮುಂದುವರೆದಿವೆ ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ವಿಭಿನ್ನ ರಾಜ್ಯಗಳು ತಮ್ಮದೇ ಆದ ಸಂದರ್ಭಗಳು ಮತ್ತು ಅರ್ಹತೆಗಳ ಆಧಾರದ ಮೇಲೆ ಅಂತಹ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂದಿದ್ದಾರೆ.
ದೇಶದಲ್ಲಿ ಗೋಹತ್ಯೆ ನಿಷೇಧಿಸಬೇಕೆಂದು ಹಿಂದೂ ಸಂಘಟನೆಗಳ ಗುಂಪುಗಳು ಒತ್ತಾಯಿಸುತ್ತಿದ್ದರೆ, ಮತ್ತೊಂದೆಡೆ ಹಲವಾರು ಮುಸ್ಲಿಂ ಸಂಘಟನೆಗಳು, ಧರ್ಮಗುರುಗಳು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ. ಜಮಿಯತ್ ಉಲಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ.
ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕೂಡ ಈ ಪ್ರಸ್ತಾಪವನ್ನು ಬೆಂಬಲಿಸಿದ್ದು, ಇಸ್ಲಾಂ ಯಾವುದೇ ನಿರ್ದಿಷ್ಟ ಪ್ರಾಣಿಯನ್ನು ಬಲಿ ನೀಡುವುದನ್ನು ಕಡ್ಡಾಯಗೊಳಿಸಿಲ್ಲ. ಗೋವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡುವುದರಿಂದ ಗೋಹತ್ಯೆಗೆ ಸಂಬಂಧಿಸಿದ ವಿವಾದಗಳು ಬಗೆಹರಿಯುತ್ತವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).