ಇಫ್ತಾರ್ ಕೂಟದಲ್ಲಿ ದಳಪತಿ ವಿಜಯ್
ಚೆನ್ನೈ: ಮುಂದಿನ ತಿಂಗಳು ನಡೆಯಲಿರುವ ತಮಿಳುನಾಡು ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯ ವದಂತಿಯನ್ನು ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ ಮತ್ತು ನಟ ದಳಪತಿ ವಿಜಯ್(Thalapathy Vijay) ತಳ್ಳಿ ಹಾಕಿದ್ದಾರೆ.
ಟಿವಿಕೆ ಪಕ್ಷದ ವತಿಯಿಂದ ಬುಧವಾರ(ಮಾ. 18) ಸಂಜೆ 6 ರಿಂದ 9ರವರೆಗೆ ಮಹಾಬಲಿಪುರಂನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಟಿವಿಕೆ ಎನ್ ಡಿಎ ಮೈತ್ರಿಕೂಟಕ್ಕೆ ಸೇರಲು ಮಾತುಕತೆ ನಡೆಸುತ್ತಿದೆ ಎಂಬ ವರದಿಗಳನ್ನು ನಿರಾಕರಿಸಿದರು.
ಜಾತ್ಯತೀತ ನೀತಿಯಲ್ಲಿ ಯಾವುದೇ ರಾಜಿ ಇಲ್ಲ. ಟಿವಿಕೆ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲಿದೆ ಅನ್ನೋದು ಸುಳ್ಳು ಸುದ್ದಿ. ತಮಿಳುನಾಡಿನಲ್ಲಿ ಮುಂದಿನ ಸರ್ಕಾರವನ್ನು ಟಿವಿಕೆ ರಚಿಸಲಿದೆ. ಎಲ್ಲರು ಆತ್ಮವಿಶ್ವಾಸದಿಂದಿರಿ, ಒಳ್ಳೆಯದು ಸಂಭವಿಸುತ್ತದೆ, ಗೆಲುವು ಖಚಿತ ಎಂದಿದ್ದಾರೆ.
ನಾನು ರಾಜಕೀಯಕ್ಕೆ ಬಂದಾಗಿನಿಂದ ಅನೇಕ ವದಂತಿಗಳನ್ನು ಹರಡಲಾಗುತ್ತಿದೆ. ಜನ ಆ ತಂಡ, ಈ ತಂಡ ಎಂದು ಹೇಳ್ತಿದ್ದಾರೆ. ಆದರೆ ನಾವು ನಮ್ಮದೇ ಒಂದು ತಂಡ ಎಂದು ಹೇಳಿದ ಬಳಿಕ ಅಪಪ್ರಚಾರ ಮಾಡಲು ಶುರು ಮಾಡಿದ್ದಾರೆ. ಆದರೆ ಏನೂ ಮಾಡಲಾಗಲಲ್ಲ. ಈಗ ವಿಜಯ್ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂದು ಸುಳ್ಳು ಪ್ರಚಾರ ಆರಂಭಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಜಾತ್ಯತೀತತೆಯ ನೀತಿಯ ಬಗ್ಗೆ, ಸಾಮಾಜಿಕ ನ್ಯಾಯದ ನಿಲುವಿನ ಬಗ್ಗೆ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಮ್ಮ ನಾಯಕತ್ವದ ಅಡಿಯಲ್ಲಿ ಆಡಳಿತದ ವಿಷಯದಲ್ಲಿ ನಾವು ದೃಢವಾಗಿದ್ದೇವೆ. ರಾಜಕೀಯದಲ್ಲಿ ಯಾರಿಗೂ ಅಥವಾ ಯಾವುದಕ್ಕೂ ನಾವು ರಾಜಿ ಮಾಡಿಕೊಳ್ಳುವುದಿಲ್ಲ, ಅಂತಹ ಯಾವುದೇ ಚರ್ಚೆ ಇಲ್ಲ. ಆದ್ದರಿಂದ, ಯಾವುದೇ ಅಪಪ್ರಚಾರ ಹರಡಿದರೂ ಅದನ್ನು ನಂಬಬೇಡಿ. ಆತ್ಮವಿಶ್ವಾಸದಿಂದಿರಿ ಎಂದು ಹೇಳಿದ್ದಾರೆ (ಏಜೆನ್ಸೀಸ್).