28 ವೈದ್ಯರು, 3 ಐಎಎಸ್... ಭಾರಿ ವಿರೋಧಕ್ಕೆ ಸಿಲುಕಿರುವ ಜ್ಞಾನೇಶ್ ಕುಮಾರ್ ಕುಟುಂಬದಲ್ಲಿ ದೊಡ್ಡ ಹುದ್ದೆಗಳದ್ದೇ ದರ್ಬಾರ್​! Gyanesh Kumar Family   Gyanesh Kumar Family
ದೇಶ

28 ವೈದ್ಯರು, ಮೂವರು IAS... ಭಾರಿ ವಿರೋಧಕ್ಕೆ ಸಿಲುಕಿರುವ ಜ್ಞಾನೇಶ್ ಕುಮಾರ್ ಕುಟುಂಬದಲ್ಲಿ ದೊಡ್ಡ ಹುದ್ದೆಗಳದ್ದೇ ದರ್ಬಾರ್​! Gyanesh Kumar

ಇವರ ಕುಟುಂಬದಿಂದ ಸುಮಾರು 28 ವೈದ್ಯರು, ಮೂವರು ಐಎಎಸ್, ಒಬ್ಬ ಐಪಿಎಸ್ ಮತ್ತು ಒಬ್ಬ ಐಆರ್‌ಎಸ್ ಅಧಿಕಾರಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುಟುಂಬದ ಹಿನ್ನೆಲೆಯನ್ನು ನೋಡಿದರೆ ಯಾರಿಗಾದರೂ ಒಂದು ನಿಮಿಷ ಆಶ್ಚರ್ಯ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ.

Gyanesh Kumar Family: ಪ್ರಸ್ತುತ, ದೇಶವ್ಯಾಪಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ಸುತ್ತ ಭಾರಿ ವಿವಾದ ಭುಗಿಲೆದ್ದಿದ್ದು, ಕಾಂಗ್ರೆಸ್, ಸಿಜೆಪಿ ಸೇರಿದಂತೆ ಇಡೀ ಇಂಡಿಯಾ ಒಕ್ಕೂಟವೇ ಅವರ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಈ ವಿಚಾರಗಳು ಜೋರಾಗಿ ಸದ್ದು ಮಾಡುತ್ತಿರುವ ನಡುವೆಯೇ ಜ್ಞಾನೇಶ್ ಅವರ ಕುಟುಂಬದ ಬಗ್ಗೆ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ.

ಜ್ಞಾನೇಶ್ ಕುಮಾರ್​ ಅವರ ಕುಟುಂಬಸ್ಥರು ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಉನ್ನತ ಶಿಕ್ಷಣ ಪಡೆದವರಾಗಿದ್ದಾರೆ. 1988ರ ಬ್ಯಾಚ್‌ನ ಕೇರಳ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಮತ್ತು ಐಐಟಿ ಕಾನ್ಪುರದ ವಿದ್ಯಾರ್ಥಿ ಜ್ಞಾನೇಶ್ ಕುಮಾರ್ ಅವರು ದೇಶದ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇವರ ಕುಟುಂಬದಿಂದ ಸುಮಾರು 28 ವೈದ್ಯರು, ಮೂವರು ಐಎಎಸ್, ಒಬ್ಬ ಐಪಿಎಸ್ ಮತ್ತು ಒಬ್ಬ ಐಆರ್‌ಎಸ್ ಅಧಿಕಾರಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುಟುಂಬದ ಹಿನ್ನೆಲೆಯನ್ನು ನೋಡಿದರೆ ಯಾರಿಗಾದರೂ ಒಂದು ನಿಮಿಷ ಆಶ್ಚರ್ಯ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ.

28 ಮಂದಿ ವೈದ್ಯ ವೃತ್ತಿ

ಜ್ಞಾನೇಶ್ ಕುಮಾರ್ ಅವರ ತಂದೆ, ದಿವಂಗತ ಡಾ. ಸುಬೋಧ್ ಕುಮಾರ್ ಗುಪ್ತಾ, ಉತ್ತರ ಪ್ರದೇಶ ಆರೋಗ್ಯ ಇಲಾಖೆಯಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿ (CMO) ಮತ್ತು ಮುಖ್ಯ ವೈದ್ಯಕೀಯ ಅಧೀಕ್ಷಕರಾಗಿ ನಿವೃತ್ತರಾಗಿದ್ದಾರೆ. ಅವರ ತಾಯಿ ಸತ್ಯವತಿ ಗುಪ್ತಾ, ಯೋಗ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಜ್ಞಾನೇಶ್ ಅವರ ಸಹೋದರ ಮನೀಶ್ ಕುಮಾರ್ ಐಆರ್​ಎಸ್ ಅಧಿಕಾರಿ. ಅವರ ಸಹೋದರಿ ರೋಲಿ ಇಂದೋರ್‌ನಲ್ಲಿ ಶಾಲೆಯನ್ನು ನಡೆಸುತ್ತಿದ್ದರೆ, ಅವರ ಪತಿ ಉಪೇಂದ್ರ ಜೈನ್ ಮಧ್ಯಪ್ರದೇಶ ಕೇಡರ್‌ನ ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರಲ್ಲದೆ, ಕುಟುಂಬದಲ್ಲಿ ಚಿಕ್ಕಪ್ಪ, ಸಂಬಂಧಿಕರು ಸೇರಿದಂತೆ ಒಟ್ಟು 28 ಮಂದಿ ವೈದ್ಯ ವೃತ್ತಿಯಲ್ಲಿ ಮುಂದುವರಿದು ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ.

ಜ್ಞಾನೇಶ್ ಕುಮಾರ್ ಅವರ ಹಿರಿಯ ಪುತ್ರಿ ಮೇಧಾ ರುಮಾಪ್ ಮತ್ತು ಅಳಿಯ ಮನೀಶ್ ಬನ್ಸಾಲ್ ಇಬ್ಬರೂ ನಾಗರಿಕ ಸೇವಾ ಅಧಿಕಾರಿಗಳು. ದೆಹಲಿ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಗೌರವಗಳನ್ನು ಪೂರ್ಣಗೊಳಿಸಿದ ಮೇಧಾ ರುಮಾಪ್ ಅವರು, ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 10ನೇ ಶ್ರೇಯಾಂಕ ಗಳಿಸಿ 2014ರ ಬ್ಯಾಚ್ ಉತ್ತರ ಪ್ರದೇಶ ಕೇಡರ್ ಐಎಎಸ್​ ಅಧಿಕಾರಿಯಾಗಿ ಆಯ್ಕೆಯಾದರು. ಆಡಳಿತಾತ್ಮಕ ಜವಾಬ್ದಾರಿಗಳ ಜತೆಗೆ, ಅವರು ಉತ್ತಮ ಶೂಟಿಂಗ್ ಚಾಂಪಿಯನ್ ಕೂಡ ಹೌದು.

ರಾಜ್ಯ ಮಟ್ಟದಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿರುವ ಅವರು ಪ್ರಸ್ತುತ ನೋಯ್ಡಾ ಜಿಲ್ಲಾಧಿಕಾರಿಯಾಗಿ (ಡಿಎಂ) ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತಿ, ಜ್ಞಾನೇಶ್ ಕುಮಾರ್ ಅವರ ಹಿರಿಯ ಅಳಿಯ ಮನೀಶ್ ಬನ್ಸಾಲ್ ಕೂಡ 2014ರ ಬ್ಯಾಚ್ ಐಎಎಸ್ ಅಧಿಕಾರಿ. ದೆಹಲಿಯ ಐಐಟಿಯಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಮುಗಿಸಿ ಯುಪಿಎಸ್ಸಿಯಲ್ಲಿ 53ನೇ ಶ್ರೇಯಾಂಕ ಗಳಿಸಿದ್ದಾರೆ. ಮೇಧಾ ರುಮಾಪ್ ಮತ್ತು ಮನೀಶ್ ಬನ್ಸಾಲ್ LBSNAAನಲ್ಲಿ ತಮ್ಮ ತರಬೇತಿಯ ಸಮಯದಲ್ಲಿ ಭೇಟಿಯಾದರು ಮತ್ತು ವಿವಾಹವಾದರು. ಪ್ರಸ್ತುತ ಆಗ್ರಾ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜ್ಞಾನೇಶ್ ಕುಮಾರ್ ಅವರ ಕಿರಿಯ ಮಗಳು ಅಭಿಶ್ರೀ ಕೂಡ ಹಿರಿಯ ಮಗಳಂತೆ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, 2017ರ ಬ್ಯಾಚ್‌ನ IRS ಅಧಿಕಾರಿಯಾಗಿ ಆಯ್ಕೆಯಾದರು. ಪ್ರಸ್ತುತ ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತಿ, ಜ್ಞಾನೇಶ್ ಕುಮಾರ್ ಅವರ ಕಿರಿಯ ಅಳಿಯ ಅಕ್ಷಯ್ ಲಾಬ್ರು, ಜಮ್ಮು ಮತ್ತು ಕಾಶ್ಮೀರದವರು. 2016ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಎಎಸ್ ಅಧಿಕಾರಿ ಅಕ್ಷಯ್ ಅವರು ಅಭಿಶ್ರೀ ಅವರಂತೆ 2017ರ ಬ್ಯಾಚ್‌ನ ನಾಗರಿಕ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಮ್ ಡೆಪ್ಯುಟಿ ಕಮಿಷನರ್ ಆಗಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಒಂದೇ ಕುಟುಂಬದ ಅನೇಕರು ದೇಶದ ಅತ್ಯುನ್ನತ ಸೇವೆಗಳಾದ ಸಿವಿಲ್ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಮಿಂಚುತ್ತಿರುವುದು ನಿಜಕ್ಕೂ ಗಮನಾರ್ಹವೇ,(ಏಜೆನ್ಸೀಸ್).