ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ಮತ್ತು ಇರಾನ್ ಜೊತೆಗಿನ ಶಾಂತಿ ಒಪ್ಪಂದದ(US-Iran deal) ಕುರಿತು ಇಂದು ವಿಶ್ವಕ್ಕೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭಾನುವಾರ(ಮೇ 24) ಹೇಳಿದ್ದಾರೆ.
ಅಧಿಕಾರ ವಹಿಸಿಕೊಂಡ ಬಳಿಕ ಭಾರತಕ್ಕೆ ಮೊದಲ ಭೇಟಿ ನೀಡಿರುವ ರುಬಿಯೊ ದೆಹಲಿಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಮುಂದಿನ ಕೆಲವು ಗಂಟೆಗಳಲ್ಲಿ ಜಗತ್ತಿಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಈ ಒಪ್ಪಂದವು ಹಾರ್ಮುಜ್ ಜಲಸಂಧಿಯ ಬಗೆಗಿನ ಕಳವಳಗಳನ್ನು ಬಗೆಹರಿಸುತ್ತದೆ. ಅಧ್ಯಕ್ಷರು ಈ ಬಗ್ಗೆ ಮಾತನಾಡಿದ್ದಾರೆ. ಇನ್ನು ಮುಂದೆ ಇರಾನಿನ ಪರಮಾಣು ಶಸ್ತ್ರಾಸ್ತ್ರದ ಬಗ್ಗೆ ಭಯಪಡಬೇಕಾಗಿಲ್ಲ ಅಥವಾ ಚಿಂತಿಸಬೇಕಾಗಿಲ್ಲ ಎಂದು ಇದೇ ವೇಳೆ ಹೇಳಿದ್ದಾರೆ.
ಸ್ವಲ್ಪ ಪ್ರಗತಿ ಸಾಧಿಸಲಾಗಿದೆ. ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದರೂ ಸಹ, ಕೆಲವು ಕೆಲಸಗಳು ನಡೆಯುತ್ತಿವೆ. ಅಧ್ಯಕ್ಷರು ಹೇಳಿದಂತೆ, ಈ ಸಮಸ್ಯೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಪರಿಹರಿಸಬೇಕಾಗಿದೆ. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಓಪನ್
ಇನ್ನೂ ಈ ಕುರಿತು ತಮ್ಮ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ನೊಂದಿಗೆ ಶಾಂತಿ ಒಪ್ಪಂದದಲ್ಲಿ ಹಾರ್ಮುಜ್ ಜಲಸಂಧಿಯನ್ನು ತೆರೆಯುವುದನ್ನು ಒಳಗೊಂಡಿದೆ. ಪ್ರಸ್ತಾಪದ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮತ್ತು ಇತರ ವಿವಿಧ ದೇಶಗಳ ನಡುವೆ ಅಂತಿಮಗೊಳಿಸುವಿಕೆಗೆ ಒಳಪಟ್ಟು ಒಪ್ಪಂದದ ಮಾತುಕತೆ ನಡೆಸಲಾಗಿದೆ ಎಂದಿದ್ದಾರೆ (ಏಜೆನ್ಸೀಸ್).