ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸೀಶೆಲ್ಸ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆಫ್ರಿಕಾದ ಈ ಪುಟ್ಟ ರಾಷ್ಟ್ರಕ್ಕೆ ಭೇಟಿ ನೀಡಿದ ಭಾರತದ ಎರಡನೇ ಪ್ರಧಾನಿ ಮೋದಿಯವರಾಗಿದ್ದಾರೆ. ಇದಕ್ಕೂ ಮುನ್ನ ಮಾಜಿ ಪ್ರಧಾನಿ ಇಂದಿರಾ ಗಾಂಧಿ 1976 ಮತ್ತು 1981ರಲ್ಲಿ ಸೀಶೆಲ್ಸ್ಗೆ ಭೇಟಿ ನೀಡಿದ್ದರು. ಮೋದಿಯವರ ಈ ಪ್ರವಾಸವು ಉಭಯ ದೇಶಗಳ ಐತಿಹಾಸಿಕ, ಸಾಂಸ್ಕೃತಿಕ ಮತ್ತು ವ್ಯೂಹಾತ್ಮಕ ಸಂಬಂಧಗಳಿಗೆ ಹೊಸ ಬಲವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ, ಸೀಶೆಲ್ಸ್ ದ್ವೀಪದ ವೈಶಿಷ್ಟ್ಯಗಳೇನು? ಉಭಯ ರಾಷ್ಟ್ರಗಳ ಬಾಂಧವ್ಯದ ಹಾದಿ ಸಾಗಿಬಂದಿರುವುದು ಹೇಗೆ? ಈ ಕುರಿತಾದ ವಿವರ ಇಲ್ಲಿದೆ.
ಆಫ್ರಿಕಾ ಖಂಡದ ಅತ್ಯಂತ ಸಣ್ಣ ದೇಶ
ಜನಸಂಖ್ಯೆ ಮತ್ತು ವಿಸ್ತೀರ್ಣ ಎರಡರ ದೃಷ್ಟಿಯಿಂದಲೂ ಸೀಶೆಲ್ಸ್ ಆಫ್ರಿಕಾ ಖಂಡದ ಅತ್ಯಂತ ಚಿಕ್ಕ ಸಾರ್ವಭೌಮ ದೇಶವಾಗಿದೆ.
ಹಿಂದೂ ಮಹಾಸಾಗರದಲ್ಲಿರುವ ಸಣ್ಣ ದ್ವೀಪ ಸೀಶೆಲ್ಸ್ ರಾಷ್ಟ್ರದೊಂದಿಗೆ ಭಾರತದ ಸಂಬಂಧವು ಕೇವಲ ವ್ಯೂಹಾತ್ಮಕವಾಗಿರದೆ, 256 ವರ್ಷಗಳಷ್ಟು ಹಳೆಯದಾಗಿದೆ. 1770ರಲ್ಲಿ ಇಲ್ಲಿ ಮೊದಲ ಶಾಶ್ವತ ವಸಾಹತು ಸ್ಥಾಪನೆಯಾದಾಗ, ಅಲ್ಲಿಗೆ ತಲುಪಿದ 27 ಜನರಲ್ಲಿ 5 ಮಂದಿ ಭಾರತೀಯರಾಗಿದ್ದರು. ಪ್ರಸಕ್ತ, ಸೀಶೆಲ್ಸ್ನ 1.30 ಲಕ್ಷ ಜನಸಂಖ್ಯೆಯಲ್ಲಿ ಪ್ರತಿ ಎಂಟನೇ ಪ್ರಜೆಯೂ ಭಾರತೀಯ ಮೂಲದವರಾಗಿದ್ದಾರೆ. ಹಿಂದೂ ಮಹಾಸಾಗರದಲ್ಲಿ ಪ್ರಮುಖ ಜಾಗತಿಕ ವ್ಯಾಪಾರ ನೌಕಾ ಮಾರ್ಗಗಳು ಹಾದುಹೋಗುವ ಆಯಕಟ್ಟಿನ ಜಾಗದಲ್ಲಿ ಸೀಶೆಲ್ಸ್ ನೆಲೆಸಿದೆ. ಈ ಕಾರಣದಿಂದಾಗಿ ಭಾರತ, ಅಮೆರಿಕ, ಫ್ರಾನ್ಸ್ ಮತ್ತು ಚೀನಾ ಸೇರಿದಂತೆ ವಿಶ್ವದ ಪ್ರಮುಖ ದೇಶಗಳಿಗೆ ಇದು ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ದೇಶವಾಗಿದೆ.
ವಿಶೇಷಗಳು: ವಿಶಿಷ್ಟ ಪ್ರಾಕೃತಿಕ ಸೌಂದರ್ಯ ಮತ್ತು ಭೌಗೋಳಿಕ ಪ್ರಾಮುಖ್ಯತೆಯಿಂದ ಗಮನ ಸೆಳೆಯುವ ದೇಶ ಸೀಶೆಲ್ಸ್. ಹಿಂದೂ ಮಹಾಸಾಗರದಲ್ಲಿ ನೆಲೆಸಿರುವ ಈ ಪುಟ್ಟದ್ವೀಪ ಕುರಿತಾದ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
115 ದ್ವೀಪಗಳ ಸಮ್ಮಿಲನ: ಸೀಶೆಲ್ಸ್ ಒಟ್ಟು 115 ಸಣ್ಣ ಮತ್ತು ದೊಡ್ಡ ದ್ವೀಪಗಳನ್ನು ಒಳಗೊಂಡಿದೆ. ಆಶ್ಚರ್ಯಕರ ಸಂಗತಿಯೆಂದರೆ, ಇವುಗಳಲ್ಲಿ 33 ದ್ವೀಪಗಳಲ್ಲಿ ಮಾತ್ರ ಜನರು ವಾಸಿಸುತ್ತಿದ್ದಾರೆ.
ಸುಂದರವಾದ ಕಡಲತೀರಗಳು: ಇಲ್ಲಿನ ಆನ್ಸ್ ಸೋರ್ಸ್ ಡಿ ಅರ್ಜೆಂಟ್ ಬೀಚ್ ವಿಶ್ವದ ಸುಂದರವಾದ ಕಡಲತೀರಗಳಲ್ಲಿ ಒಂದಾಗಿದೆ. ಗುಲಾಬಿ ಬಣ್ಣದ ಗ್ರಾನೈಟ್ ಬಂಡೆಗಳು ಮತ್ತು ತಿಳಿನೀಲಿ ಬಣ್ಣದ ಸಮುದ್ರವು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಕಿರಿದಾದ ರಾಜಧಾನಿ: ಸೀಶೆಲ್ಸ್ನ ರಾಜಧಾನಿಯಾದ ವಿಕ್ಟೋರಿಯಾ ವಿಶ್ವದ ಅತ್ಯಂತ ಚಿಕ್ಕ ರಾಜಧಾನಿಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಈ ನಗರದ ಒಟ್ಟು ಜನಸಂಖ್ಯೆ ಕೇವಲ 40-45 ಸಾವಿರದ ಆಸುಪಾಸಿನಲ್ಲಿದೆ. ವಿಕ್ಟೋರಿಯಾದಲ್ಲಿ ಈ ಹಿಂದೆ ಕೇವಲ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಇತ್ತು! ಪ್ರಸ್ತುತ ದಿನಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಇನ್ನೂ ಕೆಲವು ಸಿಗ್ನಲ್ಗಳನ್ನು ಅಳವಡಿಸಲಾಗಿದ್ದರೂ, ಈ ಹಳೆಯ ರೋಚಕ ಸಂಗತಿ ಇಂದಿಗೂ ಈ ನಗರದ ವಿಶಿಷ್ಟ ಗುರುತಾಗಿ ಉಳಿದಿದೆ.
ಈ ದೇಶಕ್ಕೆ ಸ್ವಂತ ಸೈನ್ಯವಿಲ್ಲ!: ಸೀಶೆಲ್ಸ್ ದೇಶಕ್ಕೆ ಯಾವುದೇ ಕಾಯಂ ಆದ ಸೇನಾಪಡೆ ಇಲ್ಲ. ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ಇಲ್ಲಿನ ಕೋಸ್ಟ್ ಗಾರ್ಡ್ ಮತ್ತು ಪೊಲೀಸ್ ಪಡೆಗಳು ನಿರ್ವಹಿಸುತ್ತವೆ.
ಪ್ರವಾಸೋದ್ಯಮ: ಈ ದೇಶದ ಆರ್ಥಿಕತೆಯು ಸಂಪೂರ್ಣವಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ಪ್ರತಿವರ್ಷ ಇಲ್ಲಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ, ಈ ದೇಶದ ಒಟ್ಟು ಜನಸಂಖ್ಯೆಗಿಂತಲೂ ಹಲವು ಪಟ್ಟು ಹೆಚ್ಚಾಗಿರುತ್ತದೆ. ಇಲ್ಲಿನ ಸಮುದ್ರದ ನೀರು ವಿಶ್ವದಲ್ಲೆ ಸ್ವಚ್ಛ ಹಾಗೂ ಪಾರದರ್ಶಕ ಎಂದು ಪರಿಗಣಿಸಲಾಗಿದೆ. ನೀರಿನ ಒಳಗೆ 30ರಿಂದ 40 ಮೀ. ಆಳದವರೆಗಿನ ದೃಶ್ಯಗಳು ಸಹ ಸ್ಪಷ್ಟವಾಗಿ ಗೋಚರಿಸುತ್ತವೆ.
ಪ್ರಮುಖಾಂಶ
ಸೀಶೆಲ್ಸ್ನ ಕರಾವಳಿ ಭದ್ರತೆಗಾಗಿ ಭಾರತವು ಎರಡನೇ ಡೋರ್ನಿಯರ್ ಕಡಲ ಕಾವಲು ವಿಮಾನವನ್ನು ಉಡುಗೊರೆಯಾಗಿ ನೀಡಿದೆ.
ಭಾರತದ ನೆರವಿನಿಂದ ನಿರ್ಮಿಸಲಾದ ಕರಾವಳಿ ಕಾವಲು ರೇಡಾರ್ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಇದು ಹಿಂದೂ ಮಹಾಸಾಗರದಲ್ಲಿ ಸಂಚರಿಸುವ ಹಡಗುಗಳ ಮೇಲ್ವಿಚಾರಣೆಗೆ ದೊಡ್ಡ ಶಕ್ತಿಯಾಗಲಿದೆ.
ದೈತ್ಯ ಆಮೆಗಳ ತವರು
ಇಲ್ಲಿನ ಅಲ್ಡಾಬ್ರಾ ಅಟಾಲ್ ದ್ವೀಪದಲ್ಲಿ ಜಗತ್ತಿನಲ್ಲೆ ಅತಿ ದೊಡ್ಡದಾದ ದೈತ್ಯ ಆಮೆಗಳು ಕಂಡುಬರುತ್ತವೆ. ಈ ಪ್ರದೇಶದಲ್ಲಿ ಇವುಗಳ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕವಾಗಿದೆ ಎಂದು ಅಂದಾಜಿಸಲಾಗಿದೆ.
ಭಾರತೀಯರ ಹೆಜ್ಜೆಗುರುತು
ಪೋರ್ಚುಗೀಸ್ ನಾವಿಕ ವಾಸ್ಕೋ ಡಿ ಗಾಮಾ 1502ರಲ್ಲಿ ಮೊದಲ ಬಾರಿಗೆ ಸೀಶೆಲ್ಸ್ ದ್ವೀಪವನ್ನು ಪತ್ತೆಹಚ್ಚಿದ್ದರೂ, ಹಲವು ಶತಮಾನಗಳವರೆಗೆ ಅಲ್ಲಿ ಯಾವುದೇ ಕಾಯಂ ಜನವಸತಿ ಇರಲಿಲ್ಲ. ಆದರೆ, 1770 ರಲ್ಲಿ ಫ್ರಾನ್ಸ್ ಮೊದಲ ಬಾರಿಗೆ ಇಲ್ಲಿ ವಸಾಹತು ಸ್ಥಾಪಿಸಿದಾಗ, ಆ ಗುಂಪಿನಲ್ಲಿದ್ದ 15 ಫ್ರೆಂಚರು ಮತ್ತು 7 ಆಫ್ರಿಕನ್ರ ಜೊತೆಗೆ ಐವರು ಭಾರತೀಯರೂ ಸೇರಿದ್ದರು. ಇವರೇ ಸೀಶೆಲ್ಸ್ ಇತಿಹಾಸದ ಮೊದಲ ಅಧಿಕೃತ ನಿವಾಸಿಗಳಾಗಿದ್ದಾರೆ. ನಂತರದ ದಿನಗಳಲ್ಲಿ ಬಿಹಾರದ ಭೋಜಪುರಿ ಭಾಷಿಕರು, ತಮಿಳುನಾಡು ಮತ್ತು ಗುಜರಾತ್ನ ವರ್ತಕರು ಹಾಗೂ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ವಲಸೆ ಬಂದರು. ಪ್ರಸ್ತುತ 1.30 ಲಕ್ಷ ಜನಸಂಖ್ಯೆ ಹೊಂದಿರುವ ಸೀಶೆಲ್ಸ್ ನಲ್ಲಿ ಶೇ.8ರಷ್ಟು ಭಾರತೀಯ ಮೂಲದವರಿದ್ದಾರೆ.
ಅಲ್ಲದೆ, 2020ರಿಂದ 2025ರವರೆಗೆ ಸೀಶೆಲ್ಸ್ ಅಧ್ಯಕ್ಷರಾಗಿದ್ದ ವೇವೆಲ್ ರಾಮಕಲಾವನ್ ಅವರ ಪೂರ್ವಜರು ಬಿಹಾರದ ಗೋಪಾಲಗಂಜ್ ಜಿಲ್ಲೆಯ ಪರಸೌನಿ ಗ್ರಾಮದವರಾಗಿದ್ದಾರೆ. 138 ವರ್ಷಗಳ ಹಿಂದೆ ಇವರ ಮುತ್ತಜ್ಜ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲು ಮಾರಿಷಸ್ಗೆ ತೆರಳಿ, ನಂತರ ಅವರ ಕುಟುಂಬ ಸೀಶೆಲ್ಸ್ನಲ್ಲಿ ನೆಲೆಸಿತ್ತು. ರಾಮಕಲಾವನ್ 2018ರಲ್ಲಿ ಭಾರತಕ್ಕೆ ಬಂದಿದ್ದಾಗ ತಮ್ಮ ಪೂರ್ವಜರ ಗ್ರಾಮಕ್ಕೂ ಭೇಟಿ ನೀಡಿದ್ದರು.
ರಾಜತಾಂತ್ರಿಕ ಬಾಂಧವ್ಯಕ್ಕೆ 50ರ ಸಂಭ್ರಮ
ಈ ವರ್ಷ ಭಾರತ ಮತ್ತು ಸೀಶೆಲ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 50 ವರ್ಷಗಳು ಪೂರೈಸುತ್ತಿವೆ. ಸೀಶೆಲ್ಸ್ ಭಾರತದ ಪ್ರಮುಖ ಕರಾವಳಿ ನೆರೆಯ ರಾಷ್ಟ್ರವಾಗಿದ್ದು, ಭಾರತದ 'ಮಹಾಸಾಗರ' ದೂರದೃಷ್ಟಿಯ ಪ್ರಮುಖ ಪಾಲುದಾರವಾಗಿದೆ. 2026ರ ಫೆಬ್ರವರಿಯಲ್ಲಿ ಸೀಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಭಾರತಕ್ಕೆ ಭೇಟಿ ನೀಡಿದ ಬೆನ್ನಲ್ಲೆ ಈ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆಗಳು ನಡೆದಿವೆ.
ಸಮುದ್ರ ಆರ್ಥಿಕ ವಲಯ: ಸೀಶೆಲ್ಸ್ನ ಒಟ್ಟು ಭೂ ವಿಸ್ತೀರ್ಣ ಕೇವಲ 459 ಚದರ ಕಿಲೋಮೀಟರ್ ಆಗಿದೆ. ಆದರೆ ಇದರ ಸಮುದ್ರ ಆರ್ಥಿಕ ವಲಯ (Exclusive Economic Zone) 13.7 ಲಕ್ಷ ಚದರ ಕಿಲೋಮೀಟರ್ಗಳಷ್ಟು ವಿಶಾಲವಾಗಿ ಹರಡಿಕೊಂಡಿದೆ.
ಸಾಗರ ಜೀವಿಗಳ ಸ್ವರ್ಗ: ಇಲ್ಲಿನ ಸಮುದ್ರ ಗರ್ಭದಲ್ಲಿ 900ಕ್ಕೂ ಹೆಚ್ಚು ಜಾತಿಯ ಮೀನುಗಳು, ನೂರಾರು ಬಗೆಯ ಅಪೂರ್ವ ಹವಳದ ಬಂಡೆಗಳು ಮತ್ತು ವಿಶಿಷ್ಟ ಸಾಗರ ಜೀವಿಗಳು ವಾಸಿಸುತ್ತವೆ. ಇದೇ ಕಾರಣಕ್ಕಾಗಿ ಸೀಶೆಲ್ಸ್ ಅನ್ನು ಸ್ಕೂಬಾ ಡೈವಿಂಗ್ ಮಾಡಲು ವಿಶ್ವದ ಅತ್ಯುತ್ತಮ ತಾಣಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಲಾಗುತ್ತದೆ.