economy collapsed 
ದೇಶ

ಯುದ್ಧ ಮುಗಿಯಿತು ಆರ್ಥಿಕತೆ ಕುಸಿಯಿತು!

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ 2026ರ ಮೊದಲಾರ್ಧದಲ್ಲಿ ಬರೀ ಕಳವಳ, ಆತಂಕ, ಬೆಲೆಯೇರಿಕೆಯನ್ನೇ ಸೃಷ್ಟಿಸಿತು. ಈ ಯುದ್ಧದ ಅಡ್ಡ ಪರಿಣಾಮಗಳನ್ನು ಇನ್ನು ಹಲವು ತಿಂಗಳು ಅನುಭವಿಸಲೇ ಬೇಕಾಗುತ್ತದೆ. ಕೊನೆಗೂ ಅಮೆರಿಕ-ಇರಾನ್ ನಡುವೆ ಗುರುವಾರ ಶಾಂತಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಬಿದ್ದಿದೆ. ಆದರೆ, ಈ 110 ದಿನಗಳಲ್ಲಿ ಆದ ಜೀವಹಾನಿ ಹಾಗೂ ಆರ್ಥಿಕ ಹಾನಿ ವಿಪರೀತ. ಆದ್ದರಿಂದ, ಈ ಬೆಳವಣಿಗೆ ಜಾಗತಿಕ ಸಮುದಾಯಕ್ಕೆ ಎಚ್ಚರಿಕೆಯ ಸ್ಪಷ್ಟ ಸಂದೇಶವೂ ಹೌದು. ಯಾವುದೇ ವಿವಾದಗಳು ಅಥವಾ ಭಿನ್ನಾಭಿಪ್ರಾಯಗಳಿರಲಿ ಪರಸ್ಪರ ರಾಜತಾಂತ್ರಿಕ ಮಾತುಕತೆಯ ಮೂಲಕ ಪರಿಹಾರದ ದಾರಿ ಕಂಡುಕೊಳ್ಳಬೇಕೆ ಹೊರತು ಯುದ್ಧದಿಂದ ಪರಿಹಾರ ಅಸಾಧ್ಯ. ಯುದ್ಧ ಸೃಷ್ಟಿಸುವುದು ಜೀವಹಾನಿ, ಆರ್ಥಿಕ ಹಾನಿ, ದ್ವೇಷ ಮತ್ತು ಉದ್ವೇಗವನ್ನು ಮಾತ್ರ. ನಾಲ್ಕು ವರ್ಷಗಳಿಂದ ಯುದ್ಧದಲ್ಲಿ ತೊಡಗಿರುವ ರಷ್ಯಾ ಮತ್ತು ಯೂಕ್ರೇನ್ ಕೂಡ ಈ ಸತ್ಯವನ್ನು ಮನಗಾಣಬೇಕಿದೆ. ಮಾತುಕತೆಯ ಮೂಲಕ ಶಾಂತಿಯ ದಾರಿಗೆ ಮರಳಬೇಕಿದೆ.
ಇನ್​ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಆಂಡ್ ಪೀಸ್ ವರದಿಯ ಪ್ರಕಾರ, ಅಮೆರಿಕ-ಇರಾನ್ ನಡುವಿನ ಯುದ್ಧದಿಂದ ಜಾಗತಿಕ ಜಿಡಿಪಿಗೆ 1.3 ಟ್ರಿಲಿಯನ್ ಡಾಲರ್, ಅಂದರೆ ಸುಮಾರು 122 ಲಕ್ಷ ಕೋಟಿ ರೂಪಾಯಿಗಳ ಭಾರಿ ನಷ್ಟ ಉಂಟಾಗುವ ಸಾಧ್ಯತೆಯಿದೆ. ಇದು ಜಾಗತಿಕ ಜಿಡಿಪಿಯ ಶೇಕಡ 0.6ರಷ್ಟಾಗಲಿದೆ. ಮೇಲ್ನೋಟಕ್ಕೆ ಈ ನಷ್ಟವು ಅಷ್ಟೊಂದು ದೊಡ್ಡದಾಗಿ ಕಾಣಿಸದೇ ಇರಬಹುದು. ಏಕೆಂದರೆ, 2020ರ ಕರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಜಾಗತಿಕ ಜಿಡಿಪಿಯು ಶೇ.3.1ರಷ್ಟು ಕುಸಿತ ಕಂಡಿತ್ತು. ಆದರೆ, ಕರೊನಾದ ಪರಿಣಾಮವು ಇಡೀ ಜಗತ್ತಿನ ಮೇಲಾಗಿತ್ತು. ಯುದ್ಧದ ಅತಿ ದೊಡ್ಡ ಹೊಡೆತವು, ಈಗಾಗಲೇ ಕಡಿಮೆ ಆದಾಯ ಹೊಂದಿರುವ ದೇಶಗಳು ಹಾಗೂ ಇಂತಹ ಆರ್ಥಿಕ ಆಘಾತಗಳನ್ನು ತಡೆದುಕೊಳ್ಳುವ ಶಕ್ತಿ ಇಲ್ಲದ ಜನಸಾಮಾನ್ಯರ ಮೇಲೆ ಬೀಳಲಿದೆ. ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ-ಆಪರೇಷನ್ ಆಂಡ್ ಡೆವಲಪ್​ವೆುಂಟ್ ನೀಡಿರುವ ಮಾಹಿತಿ ಪ್ರಕಾರ, 2025ರಲ್ಲಿ ಶೇ.3.4 ರಷ್ಟಿದ್ದ ಜಾಗತಿಕ ಆರ್ಥಿಕ ಬೆಳವಣಿಗೆಯ ದರವು, 2026ರಲ್ಲಿ ಶೇ.2.8ಕ್ಕೆ ಕುಸಿಯಲಿದೆ. ಅಮೆರಿಕವೊಂದೇ ಈ ಯುದ್ಧಕ್ಕಾಗಿ 10 ಲಕ್ಷ ಕೋಟಿ ರೂ.ಗಳ ಭಾರಿ ಮೊತ್ತವನ್ನು ಖರ್ಚು ಮಾಡಿದೆ.
‘ಟೈಮ್ಸ್ ಆಫ್ ಇಸ್ರೇಲ್’ ವರದಿಯ ಪ್ರಕಾರ, ಇರಾನ್ ಇಸ್ರೇಲ್ ಮೇಲೆ 650 ಕ್ಷಿಪಣಿಗಳನ್ನು ಉಡಾಯಿಸಿದೆ. ಈ ಭೀಕರ ದಾಳಿಯಿಂದಾಗಿ ಇಸ್ರೇಲ್​ನ 6,500ಕ್ಕೂ ಹೆಚ್ಚು ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ. ಇಸ್ರೇಲ್ ಮಾತ್ರವಲ್ಲದೆ, ಇರಾನ್ ಇತರ ಅರಬ್ ದೇಶಗಳ ಮೇಲೆಯೂ ಕ್ಷಿಪಣಿ ಮತ್ತು ಡ್ರೋನ್​ಗಳ ಮೂಲಕ 6,000ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದೆ. ಈ ಪೈಕಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅತ್ಯಧಿಕ ದಾಳಿಗಳಿಗೆ ತುತ್ತಾಗಿದೆ. ಬ್ರಿಟಿಷ್ ಥಿಂಕ್​ಟ್ಯಾಂಕ್ ಇಂಟರ್ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಸ್ಟ್ರಾಟೆಜಿಕ್ ಸ್ಟಡೀಸ್ (ಐಐಎಸ್​ಎಸ್) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಯುದ್ಧದ ಆರಂಭಿಕ ಕೇವಲ ಎರಡು ವಾರಗಳಲ್ಲೇ ಇರಾನ್ ಭೀಕರ ವಿನಾಶವನ್ನು ಸೃಷ್ಟಿಸಿತ್ತು. ಒಟ್ಟಾರೆಯಾಗಿ ಅವಲೋಕಿಸಿದರೆ, ಯುಎಇಯ 12 ತೈಲ ಮತ್ತು ಅನಿಲ ಮೂಲಸೌಕರ್ಯಗಳು, 6 ವಸತಿ ಕಟ್ಟಡಗಳು ಹಾಗೂ 8 ಮಿಲಿಟರಿ ನೆಲೆಗಳು ದಾಳಿಯಿಂದ ನಾಶವಾಗಿವೆ. ಸೌದಿ ಅರೇಬಿಯಾ ಮತ್ತು ಬಹ್ರೇನ್​ನ ತಲಾ 3 ತೈಲ ಮತ್ತು ಅನಿಲ ಕೇಂದ್ರಗಳು ಧ್ವಂಸಗೊಂಡಿವೆ. ಕತಾರ್​ನ 4 ಪ್ರಮುಖ ತೈಲ ಮತ್ತು ಅನಿಲ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಗಿದೆ.

ದುರಸ್ತಿಗೆ ತಗಲಲಿದೆ ₹5.4 ಲಕ್ಷ ಕೋಟಿ

ವರದಿಗಳ ಪ್ರಕಾರ, ಇರಾನ್ ಸೇರಿದಂತೆ ಎಲ್ಲ ಗಲ್ಪ್ ದೇಶಗಳ 80ಕ್ಕೂ ಹೆಚ್ಚು ಇಂಧನ ಮತ್ತು ಇಂಧನ ಉತ್ಪಾದನಾ ಕೇಂದ್ರಗಳ ಮೇಲೆ ದಾಳಿ ನಡೆದಿದೆ. ಈ ಧ್ವಂಸಗೊಂಡಿರುವ ಮೂಲಸೌಕರ್ಯಗಳ ಪುನರ್ನಿರ್ವಣ ಮತ್ತು ದುರಸ್ತಿ ಕಾರ್ಯಕ್ಕಾಗಿ ಅಂದಾಜು 34ರಿಂದ 58 ಬಿಲಿಯನ್ ಡಾಲರ್ (3.2ರಿಂದ 5.4 ಲಕ್ಷ ಕೋಟಿ ರೂಪಾಯಿ) ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆಯೂ ಭಾರಿ ಪರಿಣಾಮ ಬೀರುವ ಆತಂಕ ಎದುರಾಗಿದೆ.

122 ಲಕ್ಷ ಕೋಟಿ ರೂಪಾಯಿ ನಷ್ಟ

ಇರಾನ್ ಅಸ್ತವ್ಯಸ್ತ
ಇರಾನ್ 270 ಬಿಲಿಯನ್ ಡಾಲರ್, ಅಂದರೆ ಅಂದಾಜು 25 ಲಕ್ಷ ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟ ಅನುಭವಿಸಿದೆ. ಇರಾನ್​ನ ಹೌಸಿಂಗ್ ಫೌಂಡೇಶನ್ ವರದಿಯ ಪ್ರಕಾರ, ಈ ಯುದ್ಧದ ಅವಧಿಯಲ್ಲಿ ದೇಶದಾದ್ಯಂತ 1.22 ಲಕ್ಷ ಕಟ್ಟಡಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ. ‘ಸೆಂಟರ್ ಫಾರ್ ಅಮೆರಿಕನ್ ಪೋ›ಗ್ರೆಸ್’ ವರದಿಯ ಪ್ರಕಾರ, ಯುದ್ಧದ ಸಮಯದಲ್ಲಿ ಸರಾಸರಿ ಪ್ರತಿ 6 ಗಂಟೆಗೊಮ್ಮೆ ಇರಾನ್, ಇಸ್ರೇಲ್ ಅಥವಾ ಲೆಬನಾನ್​ನ ಆಸ್ಪತ್ರೆಗಳ ಮೇಲೆ ದಾಳಿಗಳು ನಡೆದಿವೆ. ಇರಾನ್​ನ 307 ಆಸ್ಪತ್ರೆಗಳು ನಾಶವಾಗಿವೆ. ಇದರ ಬೆನ್ನಲ್ಲೇ ಅಗತ್ಯ ಔಷಧಗಳ ಬೆಲೆ ಶೇ.50ರಷ್ಟು ಹೆಚ್ಚಿದ್ದು, 60 ಲಕ್ಷಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಮತ್ತು ಔಷಧಗಳಿಲ್ಲದೆ ಪರದಾಡಿದ್ದಾರೆ.

ಏಳು ಸಾವಿರ ಜನರ ಸಾವು

ಲಭ್ಯ ಅಂಕಿಅಂಶಗಳ ಪ್ರಕಾರ, ಇಡೀ ಸಂಘರ್ಷದಲ್ಲಿ 7000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 40 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಲೆಬನಾನ್​ನಲ್ಲಿ ಹೆಚ್ಚು ಜನ (3593) ಪ್ರಾಣ ಕಳೆದುಕೊಂಡಿದ್ದಾರೆ. ಇರಾನ್​ನಲ್ಲಿ 3468 ಜನ ಸಾವಿಗೀಡಾಗಿದ್ದ್ದು, 26500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇರಾನ್ ನಡೆಸಿದ ದಾಳಿಗಳಲ್ಲಿ ಇಸ್ರೇಲ್​ನ 26 ನಾಗರಿಕರು, ಅಮೆರಿಕದ ಮಿಲಿಟರಿಯ 13 ಸೈನಿಕರು, ಯುಎಇಯ 12, ಕುವೈತ್​ನ 7, ಸೌದಿ ಅರೇಬಿಯಾದ 3, ಬಹ್ರೇನ್​ನ 3 ಮತ್ತು ಒಮನ್​ನ 3 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಜತೆಗೆ, ಜೋರ್ಡಾನ್, ಇರಾಕ್, ಸಿರಿಯಾಗಳಲ್ಲೂ ಸಾವುನೋವು ಸಂಭವಿಸಿವೆ.

ಅಮೆರಿಕಕ್ಕೆ ಭಾರಿ ಹೊಡೆತ

ಇರಾನ್ ಜತೆಗಿನ ಯುದ್ಧದಲ್ಲಿ ಅಮೆರಿಕ ಪ್ರತಿ ಸೆಕೆಂಡಿಗೆ 10 ಲಕ್ಷ ರೂಪಾಯಿ, ಅಂದರೆ ದಿನಕ್ಕೆ 9,400 ಕೋಟಿ ರೂಪಾಯಿ ಖರ್ಚು ಮಾಡಿದೆ. ಯುದ್ಧಕ್ಕಾಗಿ ಅದು ಒಟ್ಟು ವೆಚ್ಚ ಮಾಡಿರುವುದು 10 ಲಕ್ಷ ಕೋಟಿ ರೂ. ಇದಲ್ಲದೆ, ಇರಾನ್​ಗೆ ಪರಿಹಾರದ ರೂಪದಲ್ಲಿ ಅಮೆರಿಕ 28 ಲಕ್ಷ ಕೋಟಿ ರೂಪಾಯಿ ನೀಡಬೇಕಾಗಿದೆ.

ಭಾರತಕ್ಕೆ ಆದ ಹಾನಿ

ಇಂಧನ ದರ ಹೆಚ್ಚಳ: ಯುದ್ಧ ಆರಂಭಕ್ಕೂ ಮುನ್ನ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್​ಗೆ 72 ಡಾಲರ್ ಇತ್ತು. ಆದರೆ, ಪ್ರಮುಖ ಸಮುದ್ರ ಮಾರ್ಗವಾದ ಹೊಮುಜ್ ಜಲಸಂಧಿ ಮುಚ್ಚಲ್ಪಟ್ಟಿದ್ದರಿಂದ ಕಚ್ಚಾ ತೈಲದ ಬೆಲೆ ಬರೊಬ್ಬರಿ 120 ಡಾಲರ್​ಗೆ ಜಿಗಿದಿತ್ತು. ಇದರಿಂದಾಗಿ ಮಾರ್ಚ್ ತಿಂಗಳಿನಲ್ಲಿ ಭಾರತದ ಆಮದು ವೆಚ್ಚ ಶೇ.15.22 ರಷ್ಟು ಹೆಚ್ಚಾಯಿತು. ಇದರ ನೇರ ಹೊರೆ ದೇಶದ ಗ್ರಾಹಕರ ಮೇಲೆ ಬಿದ್ದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರ -ಠಿ;7.5, ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ -ಠಿ;89 ಹಾಗೂ ಕಮರ್ಷಿಯಲ್ ಸಿಲಿಂಡರ್ ಬೆಲೆ -ಠಿ;1,350ರಷ್ಟು ದುಬಾರಿಯಾಗಿದೆ.
ಕರಗಿದ ವಿದೇಶಿ ವಿನಿಮಯ: ಯುದ್ಧಕ್ಕೂ ಮುನ್ನ ಭಾರತದ ವಿದೇಶಿ ವಿನಿಮಯ ನಿಧಿ 7.28 ಲಕ್ಷ ಕೋಟಿ ಡಾಲರ್ ಇತ್ತು. ಆದರೆ ಜೂನ್ ಆರಂಭದ ವೇಳೆಗೆ ಇದು 6.82 ಲಕ್ಷ ಕೋಟಿ ಡಾಲರ್​ಗೆ ಕುಸಿದಿದೆ. ಫೆಬ್ರವರಿಯಲ್ಲಿ 1 ಡಾಲರ್ ಎದುರು ರೂಪಾಯಿ ಮೌಲ್ಯ ₹90 ರಷ್ಟಿತ್ತು. ಆದರೆ ಮೇ ತಿಂಗಳಿನಲ್ಲಿ ಇದು ₹96.8ರ ಸಾರ್ವಕಾಲಿಕ ಕುಸಿತದ ಮಟ್ಟಕ್ಕೆ ತಲುಪಿತ್ತು. ಪ್ರಸ್ತುತ ರೂಪಾಯಿ ಮೌಲ್ಯ -ಠಿ;94.5ರಷ್ಟಿದೆ.
ಮಂದಗತಿಯಲ್ಲಿ ಸಾಗಿದ ಆರ್ಥಿಕತೆ: 2025ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ದರ ಶೇ.7ರಷ್ಟಿತ್ತು. ಆದರೆ ಪ್ರಸ್ತುತ 2026ರಲ್ಲಿ ಇದು ಶೇ.6.6ಕ್ಕೆ ಇಳಿಕೆಯಾಗುವ ಮುನ್ಸೂಚನೆ ಇದೆ. ದೇಶದಲ್ಲಿ ಹಣದುಬ್ಬರ ದರ ತೀವ್ರವಾಗಿ ಏರಿಕೆಯಾಗಿದೆ. ಫೆಬ್ರವರಿಯಲ್ಲಿ ಶೇ.3.21ರಷ್ಟಿದ್ದ ಚಿಲ್ಲರೆ ಹಣದುಬ್ಬರ ದರ ಮೇ ತಿಂಗಳಲ್ಲಿ ಶೇ.3.93ಕ್ಕೆ ಏರಿದೆ. ಇನ್ನು ಸಗಟು ಹಣದುಬ್ಬರ ದರವು ಫೆಬ್ರವರಿಯಲ್ಲಿದ್ದ ಶೇ.2.28ರಿಂದ ಮೇ ವೇಳೆಗೆ ಶೇ.9.68ಕ್ಕೆ ತಲುಪಿದೆ. ಇದು ಕಳೆದ ಮೂರೂವರೆ ವರ್ಷಗಳಲ್ಲೇ ಅತ್ಯಂತ ಗರಿಷ್ಠ ಮಟ್ಟವಾಗಿದೆ.
ರಸಗೊಬ್ಬರ ಉತ್ಪಾದನೆಯಲ್ಲಿ ಕುಸಿತ: ಭಾರತವು ತನಗೆ ಬೇಕಾದ ಶೇ.40ರಷ್ಟು ಯೂರಿಯಾ ಮತ್ತು ಶೇ.60ರಷ್ಟು ಎಲ್​ಎನ್​ಜಿ ಅನ್ನು ಗಲ್ಪ್ ದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ರಸಗೊಬ್ಬರ ತಯಾರಿಕೆಗೆ ಇವೆರಡೂ ಅತ್ಯಗತ್ಯ. ಯುದ್ಧದ ಹಿನ್ನೆಲೆಯಲ್ಲಿ ಇವುಗಳ ಪೂರೈಕೆಗೆ ಧಕ್ಕೆಯುಂಟಾಗಿದ್ದು, 2025ರ ಮಾರ್ಚ್​ಗೆ ಹೋಲಿಸಿದರೆ, 2026ರ ಮಾರ್ಚ್​ನಲ್ಲಿ ರಸಗೊಬ್ಬರ ಉತ್ಪಾದನೆ ಶೇ.24.6ರಷ್ಟು ಕುಸಿದಿದೆ. ಪ್ರತಿ ತಿಂಗಳು 2.5 ಮಿಲಿಯನ್ ಟನ್ ಆಗುತ್ತಿದ್ದ ದೇಶೀಯ ಯೂರಿಯಾ ಉತ್ಪಾದನೆ, 2026ರ ಮಾರ್ಚ್​ನಲ್ಲಿ ಕೇವಲ 1.5 ಮಿಲಿಯನ್ ಟನ್​ಗೆ ತಲುಪಿದೆ. ಅಂದರೆ ಉತ್ಪಾದನೆಯಲ್ಲಿ ಶೇ.40ರಷ್ಟು ಭಾರಿ ಇಳಿಕೆಯಾಗಿದೆ.
ಭಾರತೀಯ ನಾವಿಕರ ಸಾವು: ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ಏರ್ಪಡಿಸುವಲ್ಲಿ ಪಾಕಿಸ್ತಾನ, ಕತಾರ್ ಮತ್ತು ಒಮನ್ನಂತಹ ದೇಶಗಳು ಮಧ್ಯಸ್ಥಿಕೆ ವಹಿಸಿದ್ದವು. ಇರಾನ್ ಸಹ ರಷ್ಯಾ ಮತ್ತು ಚೀನಾ ದೇಶಗಳೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಇದೇ ವೇಳೆ ಅಮೆರಿಕವು ಭಾರತದ ಹಿತ್ತಲಿನಲ್ಲಿಯೇ ಇರಾನ್ನ ‘ಐಆರ್ಐಎಸ್ ದೇನಾ’ ಹಡಗನ್ನು ಮುಳುಗಿಸಿತು. ಅಲ್ಲದೆ, ಜೂನ್ 8ರಿಂದ 11ರ ನಡುವೆ ಒಮನ್ ಗಲ್ಪ್ನಲ್ಲಿ ಭಾರತೀಯ ಸಿಬ್ಬಂದಿ ಇದ್ದ 3 ಹಡಗುಗಳ ಮೇಲೆ ಅಮೆರಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ದುರ್ಮರಣ ಹೊಂದಿದರು.