ಇಬ್ಬರ ಬೆರಳಚ್ಚು, ಐರಿಸ್​ ಒಂದೇ! ಆಧಾರ್​ ಬಯೋಮೆಟ್ರಿಕ್​ ವ್ಯವಸ್ಥೆಯೇ ಸರಿಯಿಲ್ಲ ಎನ್ನುವಂತೆ ಮಾಡಿಟ್ಟ ಅವಳಿ ಸಹೋದರಿಯರು​ | Twin Sisters Aadhaar Twin Sisters Aadhaar
ದೇಶ

ಇಬ್ಬರ ಬೆರಳಚ್ಚು, ಐರಿಸ್​ ಒಂದೇ! ಆಧಾರ್​ ಬಯೋಮೆಟ್ರಿಕ್​ ವ್ಯವಸ್ಥೆಯೇ ಸರಿಯಿಲ್ಲ ಎನ್ನುವಂತೆ ಮಾಡಿಟ್ಟ ಅವಳಿ ಸಹೋದರಿಯರು​ | Twin Sisters Aadhaar

ಇದು ಕೆಲ ನಿಮಿಷ ಸೇವಾ ಕೇಂದ್ರ ನಡೆಸುವ ಮಂದಿಗೆ ಕಂಪ್ಲೀಟ್​ ಅಚ್ಚರಿ ಮೂಡಿಸಿದೆ. ಆಧಾರ್ ತಂತ್ರಜ್ಞಾನ ವ್ಯವಸ್ಥೆಗೇ ಸವಾಲಾಗಿ ಪರಿಣಮಿಸಿರುವ ಈ ಅಪರೂಪದ ಘಟನೆಗೆ ನೆಟ್ಟಿಗರು ಹುಬ್ಬೇರಿಸಿದ್ದಾರೆ.

Twin Sisters Aadhaar: ಇಬ್ಬರೂ ಅವಳಿ ಅಕ್ಕ-ತಂಗಿಯರು ನೋಡಲು ಮಾತ್ರವಲ್ಲ, ಬೆರಳಚ್ಚು ಮತ್ತು ಕಣ್ಣುಗಳಲ್ಲಿ ಕಿಂಚಿತ್ತು ವ್ಯತ್ಯಾಸವೇ ಸಿಗದಂತೆ ಬದುಕುತ್ತಿರುವುದು ಇದೀಗ ಆಧಾರ್​ ಬಯೋಮೆಟ್ರಿಕ್​ ಟೆಕ್ನಾಲಜಿಯ ಮೇಲೆಯೇ ಒಂದು ನಿಮಿಷ ಅನುಮಾನ ಮೂಡುವಂತೆ ಮಾಡಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

10ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಅವಳಿ ಸಹೋದರಿಯರು, ಆಧಾರ್​ ಬಯೋಮೆಟ್ರಿಕ್​ ಅಪ್ಡೇಟ್​ ಮಾಡಿಸಲು ಬಂದಾಗ, ಒಬ್ಬರ ಬೆರಳಚ್ಚು ಮತ್ತು ಐರಿಸ್​ ಅನ್ನು ಯಶಸ್ವಿಯಾಗಿ ಸ್ಕ್ಯಾನ್​ ಮಾಡಿಕೊಳ್ಳಲಾಯಿತು. ಆದರೆ, ಅದೇ ಇನ್ನೊಬ್ಬ ಸಹೋದರಿ ಮುಂದಾದಾಗ ಅವರದ್ದು ನಕಲಿ ಎಂದು ಸಿಸ್ಟಮ್​ ತಿರಸ್ಕರಿಸಿದೆ. ಇದು ಕೆಲ ನಿಮಿಷ ಸೇವಾ ಕೇಂದ್ರ ನಡೆಸುವ ಮಂದಿಗೆ ಕಂಪ್ಲೀಟ್​ ಅಚ್ಚರಿ ಮೂಡಿಸಿದೆ. ಆಧಾರ್ ತಂತ್ರಜ್ಞಾನ ವ್ಯವಸ್ಥೆಗೇ ಸವಾಲಾಗಿ ಪರಿಣಮಿಸಿರುವ ಈ ಅಪರೂಪದ ಘಟನೆಗೆ ನೆಟ್ಟಿಗರು ಹುಬ್ಬೇರಿಸಿದ್ದಾರೆ.

4 ತಿಂಗಳೇ ಬೇಕಾಯ್ತು

ಬೋರ್ಡ್ ಪರೀಕ್ಷೆಗಳ ರಿಜಿಸ್ಟರ್​​ ವೇಳೆ ಬೆಳಕಿಗೆ ಬಂದ ಈ ಸಮಸ್ಯೆಯಿಂದ ವಿದ್ಯಾರ್ಥಿಯ ಕುಟುಂಬ ತೀವ್ರ ಆತಂಕಕ್ಕೆ ಒಳಗಾಗಿತ್ತು. ಅಧಿಕಾರಿಗಳ ಮಧ್ಯಸ್ಥಿಕೆ ಮತ್ತು ನಾಲ್ಕು ತಿಂಗಳ ವಿಶೇಷ ವೀಕ್ಷಣೆಯ ನಂತರ ಈ ಸಮಸ್ಯೆಯನ್ನು ಕೊನೆಗೂ ಬಗೆಹರಿಸಲಾಗಿದೆ. ಅಷ್ಟಕ್ಕೂ, ಇದನ್ನು ಹೇಗೆ ಸರಿ ಪಡಿಸಲಾಯಿತು? ಎಂದು ತಿಳಿದರೆ ಖಂಡಿತ ನೀವೂ ಆಶ್ಚರ್ಯ ಪಡುತ್ತೀರಿ. ಘಟನೆಯ ಸಂಪೂರ್ಣ ವಿವರ ಇಲ್ಲಿದೆ ಗಮನಿಸಿ.

ಒಂದೇ ರೀತಿಯ ಅವಳಿ ಸಹೋದರಿಯರು ಎಲ್ಲರಂತೆ ವಿಭಿನ್ನ ಬೆರಳಚ್ಚುಗಳು ಮತ್ತು ಐರಿಸ್ ಮಾದರಿಗಳನ್ನೇ ಹೊಂದಿರುತ್ತಾರೆ. ಆದರೆ, ಉತ್ತರ ಪ್ರದೇಶದ ರಾಂಪುರದ 10ನೇ ತರಗತಿ ವಿದ್ಯಾರ್ಥಿಗಳಾದ ಖಿಜ್ರಾ ಜುಬೇರ್ ಮತ್ತು ತುಬಾ ಜುಬೇರ್ ಪ್ರಕರಣದಲ್ಲಿ ಇದು ಕಂಪ್ಲೀಟ್​ ಉಲ್ಟಾ ಹೊಡೆದಿತ್ತು. ಅವರ ಬಯೋಮೆಟ್ರಿಕ್ ವಿವರಗಳು ಬಹುತೇಕ ಒಂದೇ ರೀತಿಯಿದ್ದ ಕಾರಣ, ಆಧಾರ್ ತಂತ್ರಜ್ಞಾನಕ್ಕೆ ಇದರಲ್ಲಿ ಅಸಲಿ ಮತ್ತು ನಕಲಿ ಯಾವುದು ಎಂಬ ಸಮಸ್ಯೆಯನ್ನು ಆಳವಾಗಿ ಪರಿಶೀಲಿಸುವಂತೆ ಮಾಡಿಟ್ಟಿತು. ಕಾರಣ, ಒಬ್ಬರದ್ದು ಓಕೆ ಆದರೆ, ಇನ್ನೊಬ್ಬರದ್ದು ತಿರಸ್ಕೃತವಾಗುತ್ತಿತ್ತು. ಇದೇ ಎಲ್ಲರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿತು.

ನೋಂದಣಿ ಪ್ರಕ್ರಿಯೆಗೆ ಅಡ್ಡಿ

ತಮ್ಮ ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಲು ಅರ್ಜಿ ಸಲ್ಲಿಸಿದ್ದ ಅವಳಿ ಸಹೋದರಿಯರು, ಸಿಸ್ಟಂನಲ್ಲಿ ಒಬ್ಬರ ವಿವರ ನೋಂದಣಿಯಾದ ತಕ್ಷಣ, ಎರಡನೇ ವಿದ್ಯಾರ್ಥಿಯ ವಿವರಗಳನ್ನು ನಕಲಿ ಎಂದು ಗುರುತಿಸಿ ತಿರಸ್ಕರಿಸಲಾಯಿತು. ಅವರ ಬೆರಳಚ್ಚು ಮತ್ತು ಐರಿಸ್ ಮಾದರಿಗಳು ಬಹುತೇಕ ಒಂದೇ ಆಗಿರುವುದರಿಂದ ಅಧಿಕಾರಿಗಳು ಇದಕ್ಕೆ ಕಾರಣವನ್ನು ಗುರುತಿಸಿದ್ದಾರೆ. ಇದರಿಂದ ಬೋರ್ಡ್ ಪರೀಕ್ಷೆಗೆ ಇಬ್ಬರು ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆಗೆ ಅಡ್ಡಿಯೂ ಆಯಿತು ಎನ್ನಲಾಗಿದೆ. ಸಮಸ್ಯೆ ಬಗೆಹರಿಯದಿದ್ದರೆ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಕುಟುಂಬಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ರಾಂಪುರ ಜಿಲ್ಲಾಧಿಕಾರಿ ಸಹಾಯಕ್ಕೆ ಮುಂದಾದರು.

ಸಮಸ್ಯೆಯ ಗಂಭೀರತೆಯನ್ನು ಅರಿತ ಜಿಲ್ಲಾಡಳಿತ ತಕ್ಷಣವೇ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಕೇಂದ್ರ ಕಚೇರಿಯನ್ನು ಸಂಪರ್ಕಿಸಿ, ಪರಿಸ್ಥಿತಿಯ ಬಗ್ಗೆ ವಿವರವಾದ ಮಾಹಿತಿಯನ್ನು ಹಂಚಿಕೊಂಡಿತು. ಬಳಿಕ ತಾಂತ್ರಿಕ ತಜ್ಞರ ತಂಡ ಕ್ಷೇತ್ರಕ್ಕೆ ಪ್ರವೇಶಿಸಿ, ಸುಮಾರು ನಾಲ್ಕು ತಿಂಗಳ ಕಾಲ ಕೈಪಿಡಿ ಪರಿಶೀಲನೆ ಹಾಗೂ ವಿಶೇಷ ತಪಾಸಣೆ ನಡೆಸಿ, ಕೊನೆಗೂ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಯಶಸ್ಸು ಸಾಧಿಸಿದೆ. ವಿಶೇಷ ಕಾರ್ಯವಿಧಾನದ ನಂತರ, ಇಬ್ಬರು ಸಹೋದರಿಯರಿಗೆ ಪ್ರತ್ಯೇಕ ಆಧಾರ್ ಗುರುತನ್ನು ನೀಡಲಾಯಿತು. ಇದರೊಂದಿಗೆ ಬೋರ್ಡ್ ಪರೀಕ್ಷೆಗಳ ನೋಂದಣಿಗೆ ಎದುರಾಗಿದ್ದ ಸಮಸ್ಯೆ ಕಡೆಗೂ ಬಗೆಹರಿದು, ಮಕ್ಕಳ ಹೆತ್ತವರು ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ,(ಏಜೆನ್ಸೀಸ್).