ತಮಿಳುನಾಡಿನ ಶಾಂತನ್ಕುಲಂನಲ್ಲಿ ತಂದೆ-ಮಗನ ಲಾಕಪ್ಡೆತ್ ಪ್ರಕರಣದಲ್ಲಿ ಆರು ವರ್ಷಗಳ ನಂತರ ಮಧುರೈ ಹೈಕೋರ್ಟ್ ಏಪ್ರಿಲ್ 6ರಂದು ಮಹತ್ವದ ತೀರ್ಪು ನೀಡಿ ಒಂಬತ್ತು ಪೊಲೀಸರಿಗೆ ಮರಣದಂಡನೆ ಶಿಕ್ಷೆ ಘೋಷಿಸಿದೆ. ಈ ಪ್ರಕರಣ ರಾಷ್ಟ್ರಾದ್ಯಂತ ಸಂಚಲನ ಮೂಡಿಸಿದ್ದು, ಹಲವು ದಿಟ್ಟ ಸಂದೇಶಗಳನ್ನು ರವಾನಿಸಿದೆ. ಪ್ರಬಲ ಸಾಕ್ಷ್ಯಾಧಾರಗಳೊಂದಿಗೆ ಹೆಡ್ ಕಾನ್ಸ್ಟೆಬಲ್ ರೇವತಿ (42) ನ್ಯಾಯಾಲಯಕ್ಕೆ ಸತ್ಯ ವಿವರಿಸಿದ್ದೇ, ಪ್ರಕರಣಕ್ಕೆ ಪ್ರಮುಖ ತಿರುವು ನೀಡಿತು. ಪೊಲೀಸರೇ ಹೇಗೆ ದೌರ್ಜನ್ಯ ಎಸಗಿ ಇಬ್ಬರ ಸಾವಿಗೆ ಕಾರಣವಾದರು ಎಂಬ ಸತ್ಯವನ್ನು ಎಳೆಎಳೆಯಾಗಿ ತೆರೆದಿಟ್ಟರು. ಅಷ್ಟಕ್ಕೂ, ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದ ಅಪ್ಪ-ಮಗ ಅಪರಾಧಿಕ ಹಿನ್ನೆಲೆಯವರೇನಲ್ಲ. ಮೊಬೈಲ್ ಫೋನ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಸಣ್ಣ ವ್ಯಾಪಾರಿಗಳು. ಕೋವಿಡ್ ಸಮಯದಲ್ಲಿ ನಿಗದಿತ ಸಮಯಕ್ಕಿಂತ ಸ್ವಲ್ಪ ಹೆಚ್ಚು ಅವಧಿಗೆ ಅಂಗಡಿ ತೆರೆದಿದ್ದರು ಎಂಬ ಕ್ಷುಲ್ಲಕ ಕಾರಣಕ್ಕೆ ಇವರಿಗೆ ಇನ್ನಿಲ್ಲದ ಕಿರುಕುಳ ನೀಡಲಾಯಿತು. ಮಾತ್ರವಲ್ಲ, ಪ್ರಕರಣವನ್ನು ಮುಚ್ಚಿ ಹಾಕಲು ಎಲ್ಲ ಬಗೆಯ ಪ್ರಯತ್ನ ಮಾಡಲಾಯಿತು. ಆದರೆ, ಇಬ್ಬರು ಹೆಣ್ಣುಮಕ್ಕಳ ತಾಯಿ ರೇವತಿ ಎಂಬ ದಿಟ್ಟೆ ಸತ್ಯದ ಪರವಾಗಿ ಅಚಲವಾಗಿ ನಿಂತಿದ್ದರಿಂದ ನ್ಯಾಯಪ್ರಾಪ್ತಿಯಾಗಿದ್ದು, ಈ ಪ್ರಕರಣದ ವಿವರ ಇಲ್ಲಿದೆ.
ಸತ್ಯದ ಪರವಾಗಿ ದೃಢವಾಗಿ ನಿಂತರೆ ಮತ್ತು ಅನ್ಯಾಯದ ವಿರುದ್ಧ ನಿರ್ಭಿತಿಯಿಂದ ದನಿ ಎತ್ತಿದರೆ ನ್ಯಾಯಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ. ಆದರೆ, ಎಷ್ಟೋ ಬಾರಿ ಪುಂಡರಿಂದ ಬರುವ ಬೆದರಿಕೆಗಳು, ರಾಜಕೀಯ ಒತ್ತಡ ಸೇರಿದಂತೆ ಹಲವು ಕಾರಣಗಳಿಂದ ಸತ್ಯದ ದನಿಯನ್ನು ಅಡಗಿಸಲಾಗುತ್ತದೆ. ಪ್ರಭಾವಿಗಳನ್ನು ರಕ್ಷಿಸುವ ಪ್ರಯತ್ನವೂ ನಡೆಯುತ್ತದೆ. ಇಲ್ಲಿ ಪೊಲೀಸ್ ಮುಖ್ಯ ಪೇದೆಯೊಬ್ಬರು ತಮ್ಮದೇ ಇಲಾಖೆಯ ಹಿರಿಯ ಸಹೊದ್ಯೋಗಿಗಳ ಪೈಶಾಚಿಕ ಮುಖವನ್ನು ತೆರೆದಿಟ್ಟಿದ್ದು, ಸಿನಿಮಾಗಳಲ್ಲಿ ಮಾತ್ರ ತೋರಿಸುತ್ತಿದ್ದ ಲಾಕಪ್ಡೆತ್ಗಳು ಇಂದಿಗೂ ನಡೆಯುತ್ತಿವೆ ಎಂಬುದು ಕಳವಳಕಾರಿ. ಸಮಾಜವನ್ನು ರಕ್ಷಿಸಬೇಕಾದ ಪೊಲೀಸ್ ಇಲಾಖೆಯಲ್ಲಿ ಇನ್ನಷ್ಟು ಸುಧಾರಣೆ ಮತ್ತು ಬದಲಾವಣೆಗಳ ಅಗತ್ಯವನ್ನು ಇದು ಪ್ರತಿಪಾದಿಸುತ್ತದೆ.
ತಮಿಳುನಾಡಿನ ಶಾಂತನ್ಕುಲಂನಲ್ಲಿ ನಡೆದ ತಂದೆ-ಮಗನ ಕಸ್ಟೋಡಿಯಲ್ ಸಾವು ಪ್ರಕರಣದಲ್ಲಿ, 6 ವರ್ಷಗಳ ನಂತರ 2026ರ ಏಪ್ರಿಲ್ 6ರಂದು ಮಧುರೈ ನ್ಯಾಯಾಲಯವು 9 ಪೊಲೀಸ್ ಸಿಬ್ಬಂದಿಯನ್ನು ದೋಷಿಗಳೆಂದು ಘೊಷಿಸಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ಇಡೀ ಪ್ರಕರಣದಲ್ಲಿ ಸಾಕ್ಷ್ಯಗಳ ಸಮೇತ ನ್ಯಾಯಕ್ಕಾಗಿ ಹೋರಾಡಿದ ಹೆಡ್ ಕಾನ್ಸೆ ್ಟಬಲ್ ರೇವತಿ ಅವರ ಸಾಹಸ ನಿಜಕ್ಕೂ ಪ್ರೇರಣಾದಾಯಿ. ರೇವತಿ ಇಬ್ಬರು ಹೆಣ್ಣುಮಕ್ಕಳ ತಾಯಿ. ತಾವು ಸಂಪೂರ್ಣ ಸತ್ಯವನ್ನು ಹೇಳುವುದಾಗಿ ಅವರು ಮ್ಯಾಜಿಸ್ಟ್ರೇಟ್ಗೆ ತಿಳಿಸಿದ್ದರು, ಆದರೆ ಅದಕ್ಕೆ ಪ್ರತಿಯಾಗಿ ತಮ್ಮ ಮಕ್ಕಳಿಗೆ ರಕ್ಷಣೆ ಮತ್ತು ಉದ್ಯೋಗದ ಸುರಕ್ಷತೆಯ ಭರವಸೆಯನ್ನು ಕೇಳಿದ್ದರು. ರೇವತಿ ಅವರ ಧೈರ್ಯ ಮತ್ತು ಸತ್ಯದ ಬಗೆಗಿನ ಅವರ ಬದ್ಧತೆಯು ಈ ಪ್ರಕರಣವನ್ನು ರ್ತಾಕ ಅಂತ್ಯಕ್ಕೆ ತಲುಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಅಂದು ಪೊಲೀಸ್ ಠಾಣೆಯಲ್ಲಿ ಏನಾಯಿತು ಮತ್ತು ಅದಕ್ಕೆ ಯಾರು ಜವಾಬ್ದಾರರು ಎಂಬುದನ್ನು ಸಾಬೀತುಪಡಿಸಲು ಅವರು ಘಟನೆಯ ಪ್ರತಿ ನಿಮಿಷದ ವಿವರಗಳನ್ನು ನ್ಯಾಯಾಲಯದಲ್ಲಿ ವಿವರಿಸಿದ್ದರು.
ಬೆಚ್ಚಿಬೀಳಿಸಿದ ಪ್ರಕರಣ
ಈ ಘಟನೆ ನಡೆದದ್ದು 2020ರ ಜೂನ್ 19ರಂದು. ಇಡೀ ಜಗತ್ತು ಕೋವಿಡ್ ನಿರ್ಬಂಧಗಳ ವಿರುದ್ಧ ಹೋರಾಡುತ್ತಿದ್ದ ಸಮಯವದು. ತೂತುಕುಡಿ ಜಿಲ್ಲೆಯ ಶಾಂತನ್ಕುಲಂ ಪೊಲೀಸ್ ಠಾಣೆಯಲ್ಲಿ ನಡೆದ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ನಿಗದಿತ ಸಮಯಕ್ಕಿಂತ ಸ್ವಲ್ಪ ಹೆಚ್ಚು ಹೊತ್ತು ಮೊಬೈಲ್ ಫೋನ್ ಅಂಗಡಿ ತೆರೆದಿದ್ದಕ್ಕಾಗಿ ವ್ಯಾಪಾರಿಗಳಾದ ಪಿ.ಜಯರಾಜ್ ಮತ್ತು ಅವರ ಮಗ ಜೆ. ಬೆನಿಕ್ಸ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕಾನ್ಸ್ಟೇಬಲ್ ರೇವತಿ ನ್ಯಾಯಾಲಯಕ್ಕೆ ತಿಳಿಸಿದಂತೆ, ‘ಅಂದು 2020ರ ಜೂನ್ 19. ನಾನು ರಾತ್ರಿ 8.50ಕ್ಕೆ ಪೊಲೀಸ್ ಠಾಣೆಗೆ ತಲುಪಿದೆ. ಅದೇ ಸಮಯದಲ್ಲಿ ಒಳಗಿನಿಂದ ಜೋರಾದ ಚೀರಾಟ ಮತ್ತು ಅಳುವಿನ ಶಬ್ದ ಕೇಳಿಸಿತು. ಯಾರೋ ಒಬ್ಬರು, ‘ಅಮ್ಮಾ, ನೋವಾಗುತ್ತಿದೆ! ಬಿಟ್ಟುಬಿಡಿ! ದಯವಿಟ್ಟು ನನ್ನನ್ನು ಹೋಗಲು ಬಿಡಿ! ನಾನೇನು ತಪ್ಪು ಮಾಡಿಲ್ಲ!’ ಎಂದು ಕಿರುಚುತ್ತಿದ್ದರು. ಮಧ್ಯೆ ಮಧ್ಯೆ ಸಬ್ ಇನ್ಸ್ಪೆಕ್ಟರ್ ಬಾಲಕೃಷ್ಣನ್ ಅವರ ಧ್ವನಿ ಕೇಳಿಸುತ್ತಿತ್ತು. ಅವರು, ಠಾಣೆಯ ಒಳಗಡೆ ಗದ್ದಲ ಮಾಡಲು ನಿನಗೆಷ್ಟು ಧೈರ್ಯ? ನೀನೇನು ದೊಡ್ಡ ಮನುಷ್ಯನೇ? ಎಂದು ಗದರಿಸುತ್ತಿದ್ದರು. ಪೊಲೀಸರು ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ರಕ್ತಸಿಕ್ತವಾಗುವವರೆಗೆ ಥಳಿಸಿದರು. ಅಷ್ಟೇ ಅಲ್ಲ, ಅವರು ತಂದೆ-ಮಗ ಇಬ್ಬರ ಗುಪ್ತಾಂಗಗಳ ಮೇಲೆ ಬೂಟುಗಳಿಂದ ತುಳಿದು ಹಲ್ಲೆ ಮಾಡಿದರು. ಈ ನಡುವೆ ಪೊಲೀಸರು ಆಗಾಗ ಮದ್ಯಪಾನ ಮಾಡಲು ನಿಲ್ಲುತ್ತಿದ್ದರು ಮತ್ತು ನಂತರ ಮತ್ತೆ ಹೊಡೆಯಲು ಆರಂಭಿಸುತ್ತಿದ್ದರು. ಇಬ್ಬರೂ ಅರೆಪ್ರಜ್ಞಾವಸ್ಥೆಗೆ ತಲುಪಿದಾಗ, ನಾನು ಅನುಕಂಪದಿಂದ ಜಯರಾಜ್ (ತಂದೆ) ಅವರಿಗೆ ಕಾಫಿ ನೀಡಲು ಪ್ರಯತ್ನಿಸಿದೆ, ಆದರೆ ಇತರ ಪೊಲೀಸರು ಅದನ್ನು ಕಸಿದುಕೊಂಡು ಎಸೆದರು. ಪೊಲೀಸರು ತಂದೆ-ಮಗನನ್ನು ಬೆತ್ತಲೆಗೊಳಿಸಿ ಕೈಗಳನ್ನು ಕಟ್ಟಿದ್ದರು. ಈ ಕ್ರೌರ್ಯವನ್ನು ನೋಡಲಾಗದೆ ಹೊರಗೆ ಹೋದೆ. ಪೊಲೀಸ್ ವಶಕ್ಕೆ ಪಡೆದ ಕೇವಲ ಎರಡು ದಿನಗಳ ನಂತರ, ಮೊದಲು ಮಗ ಬೆನಿಕ್ಸ್ ಮತ್ತು ಮರುದಿನ ತಂದೆ ಜಯರಾಜ್ ಮೃತಪಟ್ಟರು. ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಯಿತು. ಆದರೆ ಪೊಲೀಸ್ ಇಲಾಖೆಯಲ್ಲಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿತ್ತು. 10 ಮಂದಿ ಪ್ರಭಾವಿ ಪೊಲೀಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರು’.
ಸತ್ಯದ ಅನಾವರಣ
ಮ್ಯಾಜಿಸ್ಟ್ರೇಟ್ ಎಂ.ಎಸ್. ಭಾರತಿದಾಸನ್ ತನಿಖೆಗೆ ಬಂದಾಗ, ರೇವತಿ ಅವರು, ‘ನಿಮಗೆ ಎಲ್ಲವನ್ನೂ ಹೇಳುತ್ತೇನೆ, ಪ್ರತಿಯೊಂದು ವಿಷಯವನ್ನೂ ವಿವರಿಸುತ್ತೇನೆ, ಮರೆಮಾಚುತ್ತಿರುವ ಸತ್ಯವನ್ನು ಹೊರಹಾಕುತ್ತೇನೆ. ನಾನು ಇಬ್ಬರು ಹೆಣ್ಣುಮಕ್ಕಳ ತಾಯಿ. ನನ್ನ ಮಕ್ಕಳಿಗೆ ಮತ್ತು ನನ್ನ ಉದ್ಯೋಗಕ್ಕೆ ನೀವು ಭದ್ರತೆಯ ಭರವಸೆ ನೀಡಬಲ್ಲಿರಾ?’ ಎಂದು ಕೇಳಿದರು. ಸಹೋದ್ಯೋಗಿ ಅಧಿಕಾರಿಗಳ ಎಚ್ಚರಿಕೆಯ ಹೊರತಾಗಿಯೂ ರೇವತಿ ಮಾತನಾಡಲು ನಿರ್ಧರಿಸಿದರು. ಇಲಾಖೆಯ ಒಳಗಿದ್ದುಕೊಂಡು ಸಹೋದ್ಯೋಗಿಗಳ ವಿರುದ್ಧವೇ ಸಾಕ್ಷ್ಯ ನುಡಿಯುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಅವರು ಆ ಒತ್ತಡ ಮತ್ತು ಭಯದ ನಡುವೆಯೂ ತಮ್ಮದೇ ಸಹೋದ್ಯೋಗಿಗಳ ವಿರುದ್ಧ ಸಾಕ್ಷಿ ಹೇಳಿದರು. ಹೇಳಿಕೆ ದಾಖಲಿಸುವ ಸಮಯದಲ್ಲಿ, ಹೊರಗಿದ್ದ ಪೊಲೀಸರು ನ್ಯಾಯಾಲಯದ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದರು ಮತ್ತು ರೇವತಿಯವರನ್ನು ಅಪಹಾಸ್ಯ ಮಾಡುತ್ತಿದ್ದರು. ಪರಿಸ್ಥಿತಿ ಎಷ್ಟು ಉದ್ವಿಗ್ನವಾಗಿತ್ತೆಂದರೆ, ಮ್ಯಾಜಿಸ್ಟ್ರೇಟ್ ಅವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕಾಯಿತು. ಸುರಕ್ಷತೆಯ ಭರವಸೆ ಸಿಕ್ಕ ನಂತರವೇ ರೇವತಿ ಸಹಿ ಹಾಕಲು ಒಪ್ಪಿದರು. ಸಿಸಿಟಿವಿಯ ದೃಶ್ಯಾವಳಿಗಳಲ್ಲಿ ರೇವತಿ ಪ್ರತಿಯೊಬ್ಬ ಆರೋಪಿಯನ್ನೂ ಗುರುತಿಸಿದರು. ಅವರ ನಿಖರವಾದ ಸಾಕ್ಷ್ಯವು, ಅಂದು ರಾತ್ರಿ ಠಾಣೆಯಲ್ಲಿ ಯಾರಿದ್ದರು ಮತ್ತು ಈ ಸಾವುಗಳಿಗೆ ಯಾರು ಜವಾಬ್ದಾರರು ಎಂಬುದನ್ನು ಖಚಿತಪಡಿಸಿತು. ಈ ಪ್ರಕರಣವು ಭಾರತೀಯ ಪೊಲೀಸ್ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು, ರೇವತಿ ಅವರು ಪ್ರಾಮಾಣಿಕತೆಗೆ ಮಾದರಿಯಾಗಿ ನಿಂತಿದ್ದಾರೆ.
ಶಿಕ್ಷೆಗೊಳಗಾದ ಪೊಲೀಸ್ ಅಧಿಕಾರಿಗಳು
1.ಎಸ್.ಶ್ರೀಧರ್ (ಇನ್ಸ್ಪೆಕ್ಟರ್)- ಘಟನೆಯ ಮುಖ್ಯ ಸಂಚುಗಾರ. ಹಲ್ಲೆ ನಡೆಸಲು ಪ್ರಚೋದನೆ ಮತ್ತು ಉನ್ನತ ಅಧಿಕಾರಿಯಾಗಿ ಕೃತ್ಯವನ್ನು ಮುಚ್ಚಿಹಾಕಲು ಯತ್ನ.
2.ಬಾಲಕೃಷ್ಣನ್ (ಸಬ್ ಇನ್ಸ್ಪೆಕ್ಟರ್)- ತಂದೆ-ಮಗನ ಮೇಲೆ ನೇರವಾಗಿ ಮತ್ತು ಭೀಕರವಾಗಿ ದೈಹಿಕ ಹಲ್ಲೆ ನಡೆಸಿದ್ದ.
3.ಪಿ. ರಘು ಗಣೇಶ್ (ಸಬ್ ಇನ್ಸ್ಪೆಕ್ಟರ್)-ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದವರಲ್ಲಿ ಒಬ್ಬ. ಸಂತ್ರಸ್ತರನ್ನು ಹಿಂಸಿಸುವಲ್ಲಿ ಪ್ರಮುಖ ಪಾತ್ರ.
4.ಮುರುಗನ್ (ಹೆಡ್ ಕಾನ್ಸ್ಟೆಬಲ್)-ಲಾಕಪ್ನಲ್ಲಿ ಸಂತ್ರಸ್ತರನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಹಲ್ಲೆಯಲ್ಲಿ ಭಾಗವಹಿಸಿದ್ದ.
5.ಸಾಮಿದುರೈ (ಹೆಡ್ ಕಾನ್ಸ್ಟೆಬಲ್)-ದೈಹಿಕ ದೌರ್ಜನ್ಯ ಮತ್ತು ಪೊಲೀಸರ ಅಮಾನವೀಯ ಕೃತ್ಯಕ್ಕೆ ಸಹಕರಿಸಿದ್ದ.
6.ಮುತ್ತುರಾಜ್ (ಕಾನ್ಸ್ಟೆಬಲ್)-ಹಲ್ಲೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಮತ್ತು ಸಾಕ್ಷ ್ಯ ನಾಶಪಡಿಸಲು ಯತ್ನಿಸಿದ್ದ.
7.ಚೆಲ್ಲದುರೈ (ಕಾನ್ಸ್ಟೆಬಲ್)-ಹಲ್ಲೆಯಲ್ಲಿ ಭಾಗವಹಿಸಿದ್ದ ಮತ್ತು ಮೇಲಧಿಕಾರಿಗಳ ಅಕ್ರಮ ಆದೇಶ ಪಾಲಿಸಿದ್ದ.
8.ಥಾಮಸ್ ಫ್ರಾನ್ಸಿಸ್ (ಕಾನ್ಸ್ಟೆಬಲ್)- ಸಂತ್ರಸ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದ.
9.ವೈಯಾದುರೈ (ಕಾನ್ಸ್ಟೆಬಲ್) ದೌರ್ಜನ್ಯದ ಸಮಯದಲ್ಲಿ ಹಾಜರಿದ್ದು, ಹಲ್ಲೆಗೆ ಸಾಥ್ ನೀಡಿದ್ದ.
ಈ ಪ್ರಕರಣದಲ್ಲಿ ಒಟ್ಟು 10 ಪೊಲೀಸರು ಆರೋಪಿಗಳಾಗಿದ್ದರು. ಆದರೆ, ಸಬ್ ಇನ್ಸ್ಪೆಕ್ಟರ್ ಆಗಿದ್ದ ಪಾಲುದುರೈ ತನಿಖೆಯ ಹಂತದಲ್ಲಿಯೇ ಅನಾರೋಗ್ಯದಿಂದ ಮೃತಪಟ್ಟಿದ್ದರಿಂದ, ಉಳಿದ 9 ಪೊಲೀಸರಿಗೆ ಶಿಕ್ಷೆ ಪ್ರಕಟವಾಗಿದೆ.
ಪ್ರಕರಣದ ಘಟನಾವಳಿಗಳು
2020ರ ಜೂನ್ 19: ಮೊಬೈಲ್ ಫೋನ್ ಅಂಗಡಿಯಿಂದ ಜಯರಾಜ್ ಮತ್ತು ಮಗ ಬೆನಿಕ್ಸ್ ಅವರನ್ನು ವಶಕ್ಕೆ ಪಡೆಯಲಾಯಿತು.
9-20 ಜೂನ್: ಠಾಣೆಯಲ್ಲಿ ಇಬ್ಬರ ಮೇಲೆ ತೀವ್ರ ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗಳಾದವು.
22 ಜೂನ್: ಮಗ ಬೆನಿಕ್ಸ್ ಆಸ್ಪತ್ರೆಯಲ್ಲಿ ಸಾವು.
23 ಜೂನ್: ತಂದೆ ಜಯರಾಜ್ ಕೂಡ ಸಾವು.
28 ಜೂನ್: ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗೆ (ಸಿಬಿಐ) ಹಸ್ತಾಂತರಿಸಲಾಯಿತು.
29 ಜೂನ್: ಮದ್ರಾಸ್ ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತು.
ಸೆಪ್ಟೆಂಬರ್: 10 ಪೊಲೀಸ್ ಸಿಬ್ಬಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ.
2021 ಫೆ. 18: ವಿಚಾರಣೆ ಪ್ರಾರಂಭ.
2021-2025: ವಿಚಾರಣೆಯು ಪದೇಪದೆ ಮುಂದೂಡಲ್ಪಟ್ಟಿತು.
2025ರ ಜುಲೈ: ಸರ್ಕಾರಿ ಸಾಕ್ಷಿಯಾಗಲು ಶ್ರೀಧರ್ ಸಲ್ಲಿಸಿದ್ದ ಅರ್ಜಿಯ ವಜಾ.
2025ರ ನವೆಂಬರ್ : 3 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ನ್ಯಾಯಾಲಯದ ಆದೇಶ.
2026ರ ಮಾ. 23: 9 ಪೊಲೀಸ್ ಸಿಬ್ಬಂದಿ ದೋಷಿಗಳೆಂದು ಸೆಷನ್ಸ್ ನ್ಯಾಯಾಲಯದಿಂದ ಘೊಷಣೆ.
ಏಪ್ರಿಲ್ 6: ಸೆಷನ್ಸ್ ನ್ಯಾಯಾಲಯದಿಂದ 9 ಮಂದಿ ದೋಷಿಗಳಿಗೆ ಮರಣದಂಡನೆ ಶಿಕ್ಷೆ.