ಪರಾಕ್ರಮದ ಪಥಸಂಚಲನ 
ದೇಶ

ಪರಾಕ್ರಮದ ಪಥಸಂಚಲನ

ಬ್ರಹ್ಮೋಸ್ ಸೂಪರ್​ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಉಡಾವಣೆ ಮಾಡುತ್ತಿರುವ ಸುಖೋಯ್-30 ಎಂಕೆಐ ಯುದ್ಧ ವಿಮಾನ, ಶತ್ರುಗಳ ದುರುದ್ದೇಶವನ್ನು ಮಟ್ಟ ಹಾಕಲು ನಿಖರ ದಾಳಿ ನಡೆಸುತ್ತಿರುವ ಭೂಸೇನೆಯ ಎಂ-777 ಅಲ್ಟ್ರಾ-ಲೈಟ್ (ಅತಿ ಹಗುರ) ಫಿರಂಗಿಗಳು ಮತ್ತು ಶತ್ರುಗಳಿಗೆ ಯಾವುದೇ ಕಾರ್ಯಾಚರಣೆಯ ಸ್ವಾತಂತ್ರ್ಯ ನೀಡದಂತೆ ಸಮುದ್ರದಲ್ಲಿ ಪ್ರಾಬಲ್ಯ ಸಾಧಿಸಿರುವ ನೌಕಾಪಡೆ... ಇವು ಈ ಬಾರಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾಣಿಸಲಿರುವ ವಿಶೇಷಗಳು. ಪಥಸಂಚಲನಕ್ಕಾಗಿ ಭಾರತೀಯ ಸಶಸ್ತ್ರ ಪಡೆಗಳು ಸಿದ್ಧಪಡಿಸಿರುವ ‘ಆಪರೇಷನ್ ಸಿಂಧೂರ’ ಥೀಮ್ ಆಧಾರಿತ ಸ್ತಬ್ಧಚಿತ್ರ ದಲ್ಲಿ ಇವೆಲ್ಲವೂ ಇರಲಿವೆ.
ಮಿಲಿಟರಿ ವಲಯದಲ್ಲಿ ಭಾರತ ತಂದಿರುವ ಬದಲಾವಣೆ, ಸ್ವದೇಶಿ ಪ್ರಾಬಲ್ಯವನ್ನು ಕಲಾವಿದರ ಆಕರ್ಷಕ ಚಿತ್ರಣ ಅನಾವರಣಗೊಳಿಸಲಿದೆ. ರಫೇಲ್ ಯುದ್ಧ ವಿಮಾನಗಳು, ಆಕಾಶ್ ವಾಯು ರಕ್ಷಣಾ ವ್ಯವಸ್ಥೆ, ಹ್ಯಾರೋಪ್ ಲಾಯ್ಟರಿಂಗ್ ಮ್ಯೂನಿಷನ್ ಮತ್ತು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಸ್-400 ಕ್ಷಿಪಣಿ ವ್ಯವಸ್ಥೆಯಂತಹ ಮುಂಚೂಣಿಯ ರಕ್ಷಣಾ ಪರಿಕರಗಳು ಇದರಲ್ಲಿ ಪ್ರದರ್ಶನಗೊಳ್ಳಲಿವೆ.

ಇದೇ ಥೀಮ್ ಯಾಕೆ?

ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತಿಯಾಗಿ ಭಾರತ ಕಳೆದ ವರ್ಷ ಮೇ 7ರಂದು ‘ಆಪರೇಷನ್ ಸಿಂಧೂರ’ ಎಂಬ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಪಾಕಿಸ್ತಾನದ ನಿಯಂತ್ರಣದಲ್ಲಿರುವ ಪ್ರದೇಶ ಗಳಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸಿತ್ತು. ನಾಲ್ಕು ದಿನಗಳ ಕಾಲ ಸತತವಾಗಿ ಶತ್ರುನೆಲೆಗಳನ್ನು ಧ್ವಂಸ ಮಾಡಿದ ನಂತರ ಮೇ 10ರಂದು ಮಿಲಿಟರಿ ಕ್ರಮಗಳನ್ನು ನಿಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಪ್ರದರ್ಶಿಸಿದ ಅದ್ಭುತ ಸಮನ್ವಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಕ್ಷಿಪ್ರ, ನಿಯಂತ್ರಿತ, ನಿಖರ ದಾಳಿಗಳೇ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದ್ದವು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳಲೇಬೇಕೆಂಬ ಸಾಮಾನ್ಯ ಭಾರತೀಯರ ಮನದಾಸೆಯನ್ನು ಈಡೇರಿಸಿದ ಸಾರ್ಥಕ ಕ್ಷಣ ಇದಾಗಿತ್ತು. ‘ನಮ್ಮ ತಂಟೆಗೆ ಬಂದರೆ ನಿಮ್ಮ ಮನೆಗೆ ನುಗ್ಗಿ ಹೊಡೆಯುತ್ತೇವೆ’ ಎಂದು ಶತ್ರುರಾಷ್ಟ್ರಕ್ಕೆ ಮನದಟ್ಟು ಮಾಡಿಕೊಟ್ಟ ದಾಳಿ ಇದು. ಈ ಹಿನ್ನೆಲೆಯಲ್ಲಿ ಇದನ್ನು ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಥೀಮ್ ಆಗಿ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
ಥೀಮ್​ನಲ್ಲಿ ಏನೇನಿದೆ?
ಸಮುದ್ರದ ಮೇಲೆ ಭಾರತೀಯ ನೌಕಾಪಡೆ ಹೊಂದಿರುವ ಪ್ರಾಬಲ್ಯವನ್ನು ಮೊದಲ ಹಂತದಲ್ಲಿ ತೋರಿಸಲಾಗಿದೆ. ಶತ್ರುಗಳಿಗೆ ಯಾವುದೇ ರೀತಿಯ ಕಾರ್ಯಾಚರಣೆಗೂ ಅವಕಾಶ ನೀಡದಂತೆ ಸಮುದ್ರದ ಮೇಲೆ ನಿಯಂತ್ರಣ ಸಾಧಿಸಿರುವುದನ್ನು ಇದು ಬಿಂಬಿಸುತ್ತದೆ. ನಂತರ ಭಾರತೀಯ ಭೂಸೇನೆಯ ಉಕ್ಕಿನಸಂಕಲ್ಪ ತೆರೆದುಕೊಳ್ಳುತ್ತದೆ. ಎಂ-777 ಅಲ್ಟ್ರಾ ಲೈಟ್ ಫಿರಂಗಿಗಳು ಶತ್ರುಗಳ ಸಂಚನ್ನು ಹತ್ತಿಕ್ಕಲು ನಿಖರವಾದ ದಾಳಿ ನಡೆಸುವುದನ್ನು ತೋರಿಸಲಾಗಿದೆ. ಇವುಗಳ ಹಿಂದೆ ಕಾವಲುಗಾರನಂತೆ ನಿಂತಿರುವ ಆಕಾಶ್ ವಾಯು ರಕ್ಷಣಾ ವ್ಯವಸ್ಥೆ ಭಾರತದ ಸುಭದ್ರ ವಾಯುರಕ್ಷಣಾ ಕವಚಕ್ಕೆ ನಿದರ್ಶನ.

ಆತ್ಮಹತ್ಯಾ ಡ್ರೋನ್​ಗಳು

ಸ್ತಬ್ಧಚಿತ್ರದ ಕೇಂದ್ರಭಾಗದಲ್ಲಿ ಆಪರೇಷನ್ ಸಿಂಧೂರ ದಾಳಿಯ ಕಥಾನಕ ಅನಾವರಣಗೊಳ್ಳುತ್ತದೆ. ಶತ್ರುಪಡೆಯ ವಾಯು ರಕ್ಷಣಾ ರಾಡಾರನ್ನು ಹ್ಯಾರೋಪ್ ಲಾಯ್ಟರಿಂಗ್ ಮ್ಯೂನಿಷನ್ (ಆತ್ಮಹತ್ಯಾ ಡ್ರೋನ್) ನಾಶಪಡಿಸುತ್ತದೆ. ಇದು ಮಾನವರಹಿತ ನಿಖರ ಯುದ್ಧತಂತ್ರದಲ್ಲಿ ಭಾರತ ಹೇಗೆ ನೈಪುಣ್ಯ ಸಾಧಿಸಿದೆ ಎಂಬುದಕ್ಕೆ ಸಾಕ್ಷಿ. ಇದರ ಬೆನ್ನಲ್ಲೇ, ‘ಸ್ಕಾಲ್ಪ್’ ಕ್ಷಿಪಣಿಗಳನ್ನು ಹೊಂದಿರುವ ಸುಸಜ್ಜಿತ ರಾಫೇಲ್ ಯುದ್ಧವಿಮಾನ ಭಯೋತ್ಪಾದಕರ ನೆಲೆಗಳ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ನಡೆಸುತ್ತದೆ. ನಂತರ, ಸುಖೋಯ್ (ಎಸ್​ಯುು-30 ಎಂಕೆಒನ್) ವಿಮಾನಗಳು ಬ್ರಹ್ಮೋಸ್ ಸೂಪರ್​ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿ, ಶತ್ರುಗಳ ಬಲಿಷ್ಠ ವಿಮಾನ ತಾಣಗಳನ್ನು (ಹಾರ್ಡನ್ಡ್ ಏರ್​ಕ್ರಾಫ್ಟ್ ಶೆಲ್ಟರ್ಸ್) ಧ್ವಂಸಗೊಳಿಸುವುದರೊಂದಿಗೆ ‘ಆಪರೇಷನ್ ಸಿಂಧೂರ’ದ ವೇಗ ತೀವ್ರಗೊಳ್ಳುತ್ತದೆ. ಇದು ಭಾರತವು ಎಷ್ಟೇ ಆಳದಲ್ಲಿರುವ ಶತ್ರುಗಳನ್ನು ಕ್ಷಿಪ್ರವಾಗಿ ಮತ್ತು ನಿರ್ದಿಷ್ಟವಾಗಿ ಧ್ವಂಸಗೊಳಿಸಬಲ್ಲದು ಎಂಬುದಕ್ಕೆ ಸಾಕ್ಷಿ.

ಸಂಯೋಜಿತ ಕಮಾಂಡ್ ಸೆಂಟರ್

ಆಧುನಿಕ ಯುದ್ಧತಂತ್ರದಲ್ಲಿ ವಿಜಯದ ಗುಟ್ಟು ಕೇವಲ ಶಸ್ತ್ರಾಸ್ತ್ರಗಳಲ್ಲಿ ಇಲ್ಲ, ಬದಲಾಗಿ ಸೇನಾಪಡೆಗಳ ನಡುವಿನ ಸಮನ್ವಯದಲ್ಲಿದೆ. ‘ಆಪರೇಷನ್ ಸಿಂಧೂರ’ ಸ್ತಬ್ಧಚಿತ್ರದ ಪ್ರಮುಖ ಆಕರ್ಷಣೆಯೆಂದರೆ ‘ಜಾಯಿಂಟ್ ಆಪರೇಷನ್ ಸೆಂಟರ್’ (ಜೆಒಸಿ). ಇದು ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳು ಒಂದೇ ಸೂರಿನಡಿ ಹೇಗೆ ಕಾರ್ಯಾಚರಣೆ ನಡೆಸುತ್ತವೆ ಎಂಬುದನ್ನು ತೋರಿಸುತ್ತದೆ. ಹಿಂದೆ ಪ್ರತಿ ಪಡೆಯೂ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೆ, ಈಗ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಮೂಲಕ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಹಂಚಿಕೊಳ್ಳುತ್ತವೆ. ಉದಾಹರಣೆಗೆ, ನೌಕಾಪಡೆಯ ಸ್ಯಾಟಲೈಟ್ ಪತ್ತೆ ಹಚ್ಚಿದ ಶತ್ರು ನೆಲೆಯ ಮಾಹಿತಿಯನ್ನು ತಕ್ಷಣವೇ ವಾಯುಪಡೆಯ ಯುದ್ಧ ವಿಮಾನಗಳಿಗೆ ರವಾನಿಸಿ ದಾಳಿ ಮಾಡುವುದು ಈ ಕೇಂದ್ರದ ಕೆಲಸ. ಸ್ತಬ್ಧಚಿತ್ರದಲ್ಲಿರುವ ಈ ಮಾದರಿ ಸ್ಯಾಟಲೈಟ್ ಲಿಂಕ್​ಗಳು, ಡಿಜಿಟಲ್ ಪರದೆಗಳು ಮತ್ತು ಸುಧಾರಿತ ಸಂವಹನ ಸಾಧನಗಳ ಮೂಲಕ ಯುದ್ಧರಂಗದ ‘ಲೈವ್’ ಚಿತ್ರಣವನ್ನು ಬಿಂಬಿಸುತ್ತದೆ. ಇದು ಭಾರತದ ರಕ್ಷಣಾ ನೀತಿಯಲ್ಲಿನ ಕ್ರಾಂತಿಕಾರಿ ಬದಲಾವಣೆಯಾದ ‘ಜಾಯಿಂಟ್​ನೆಸ್’ (ಜಂಟಿ ಶಕ್ತಿ) ಅನ್ನು ವಿಶ್ವಕ್ಕೆ ಸಾರಲಿದೆ.

ಹಿನ್ನೆಲೆ ಸಂಗೀತದ ರೋಮಾಂಚನ

ಗಣರಾಜ್ಯೋತ್ಸವದ ಪಥಸಂಚಲನ ಕೇವಲ ಕಣ್ಣಿಗೆ ಹಬ್ಬವಲ್ಲ, ಅದು ಕಿವಿಯ ಮೂಲಕವೂ ರೋಮಾಂಚನ ಮೂಡಿಸುತ್ತದೆ. ಕರ್ತವ್ಯಪಥದಲ್ಲಿ ಈ ಸ್ತಬ್ಧಚಿತ್ರ ಸಾಗುವಾಗ ವಿಶೇಷವಾಗಿ ವಿನ್ಯಾಸಗೊಳಿಸಿದ ‘ಆಡಿಯೋ ವಿಷುವಲ್’ ಅನುಭವ ಸಿಗಲಿದೆ. ಸುಖೋಯ್ ಯುದ್ಧ ವಿಮಾನಗಳು ಗಾಳಿಯನ್ನು ಸೀಳಿ ಹಾರುವ ಸದ್ದು, ಕ್ಷಿಪಣಿಗಳು ಉಡಾವಣೆ ಆಗುವಾಗಿನ ಗರ್ಜನೆ, ಸೇನಾ ಕಮಾಂಡರ್​ಗಳ ಗಂಭೀರ ಆದೇಶಗಳ ಧ್ವನಿ ಹಿನ್ನೆಲೆಯಲ್ಲಿ ಕೇಳಿಬರಲಿದೆ. ಇದು ನೋಡುಗರಿಗೆ ತಾವು ಯುದ್ಧಭೂಮಿಯಲ್ಲೇ ಇದ್ದೇವೆ ಎಂಬ ಅನುಭವವನ್ನು ನೀಡುತ್ತದೆ. ಇದಲ್ಲದೆ, ದೇಶಭಕ್ತಿಯನ್ನು ಬಡಿದೆಬ್ಬಿಸುವ ಶೌರ್ಯಗೀತೆಗಳು, ಕಾರ್ಯಾಚರಣೆಯ ಯಶಸ್ಸನ್ನು ಸಾರುವ ಧ್ವನಿಮುದ್ರಿಕೆಗಳು ನೋಡುಗರನ್ನು ರೋಮಾಂಚನಗೊಳಿಸಲಿವೆ. ಶತ್ರುಗಳ ಅಟ್ಟಹಾಸವನ್ನು ಅಡಗಿಸುವ ಕ್ಷಿಪಣಿಗಳ ಆರ್ಭಟದ ಸದ್ದು ಭಾರತದ ರಕ್ಷಣಾ ಸಾಮರ್ಥ್ಯದ ಗತ್ತನ್ನು ಜಗತ್ತಿಗೆ ತಿಳಿಸಿಕೊಡಲಿದೆ.

ಜಗತ್ತಿಗೆ ಸ್ಪಷ್ಟ ಸಂದೇಶ

ಅತಿ ದೀರ್ಘ ವ್ಯಾಪ್ತಿಯ ಅಂದರೆ 350 ಕಿಲೋಮೀಟರ್ ದೂರದ ಗುರಿಯನ್ನು ಬೆನ್ನಟ್ಟುವ ಎಸ್-400 ವ್ಯವಸ್ಥೆ ಈ ಕಾರ್ಯಾಚರಣೆಯ ಹೈಲೈಟ್. ಶತ್ರುಪಡೆಯ ವೈಮಾನಿಕ ಮುನ್ನೆಚ್ಚರಿಕೆ ವೇದಿಕೆಯನ್ನು (ಏರ್​ಬೋರ್ನ್ ಅರ್ಲಿ ವಾರ್ನಿಂಗ್ ಪ್ಲಾಟ್​ಫಾಮ್ರ್) ಹೊಡೆದುರುಳಿಸಿ ನಿಷ್ಕ್ರಿಯಗೊಳಿಸುತ್ತದೆ. ಇದು ಜಗತ್ತಿಗೆ ನೀಡುವ ಸಂದೇಶ ಸ್ಪಷ್ಟ- ಶತ್ರುವನ್ನು ಮೊದಲು ಪತ್ತೆಹಚ್ಚುವವರೂ ನಾವೇ, ಮೊದಲು ನಿರ್ಧರಿಸುವವರೂ ನಾವೇ, ಮೊದಲು ನಾಶಪಡಿಸುವವರೂ ನಾವೇ! ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರು ಅಥವಾ ಆಶ್ರಯ ನೀಡುವವರು ತಕ್ಷಣದ ಮತ್ತು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ರಾಷ್ಟ್ರೀಯ ಸಂಕಲ್ಪವನ್ನು ಈ ಸ್ತಬ್ಧಚಿತ್ರ ಬಿಂಬಿಸುತ್ತದೆ.

ಸ್ವದೇಶಿ ತಂತ್ರಜ್ಞಾನದ ಪ್ರದರ್ಶನ

‘ಆತ್ಮನಿರ್ಭರ ಭಾರತ’ ಯೋಜನೆಯಡಿ ಭಾರತ ಇಂದು ರಕ್ಷಣಾ ವಲಯದಲ್ಲಿ ಪರಾವಲಂಬನೆಯನ್ನು ತ್ಯಜಿಸಿ ಸ್ವಾವಲಂಬಿಯಾಗುತ್ತಿದೆ. ಈ ಸ್ತಬ್ಧಚಿತ್ರ ಭಾರತೀಯ ವಿಜ್ಞಾನಿಗಳ ಮತ್ತು ಇಂಜಿನಿಯರ್​ಗಳ ಪರಿಶ್ರಮದ ಫಲವಾದ ಸ್ವದೇಶಿ ತಂತ್ರಜ್ಞಾನವನ್ನು ಎತ್ತಿ ತೋರಿಸುತ್ತದೆ. ಪ್ರದರ್ಶನದಲ್ಲಿರುವ ಕ್ವಾಡ್​ಕಾಪ್ಟರ್​ಗಳು ಮತ್ತು ಹಗುರ ಡ್ರೋನ್​ಗಳು ಶತ್ರುಗಳ ಕಣ್ಣಿಗೆ ಬೀಳದೆ ಗುಪ್ತಚರ ಮಾಹಿತಿ ಸಂಗ್ರಹಿಸುವಲ್ಲಿ ಪರಿಣಿತಿ ಪಡೆದಿವೆ. ಇವುಗಳ ಜತೆಗೆ, ಶತ್ರುಗಳ ಜಾಮರ್​ಗಳು ಅಥವಾ ತಾಂತ್ರಿಕ ಅಡೆತಡೆಗಳನ್ನು ಮೆಟ್ಟಿ ನಿಲ್ಲಬಲ್ಲ ‘ಸುರಕ್ಷಿತ ಸಂಪರ್ಕ ವ್ಯವಸ್ಥೆ’ ಪ್ರದರ್ಶಿತವಾಗಲಿದೆ. ಇದು ಭಾರತೀಯ ಉಪಗ್ರಹ ಲಿಂಕ್​ಗಳ ಮೂಲಕ ಕಾರ್ಯನಿರ್ವಹಿಸುವ ರೇಡಿಯೋ ವ್ಯವಸ್ಥೆ. ಯುದ್ಧದ ಗದ್ದಲದಲ್ಲೂ ಸೇನಾಪಡೆಗಳ ನಡುವೆ ನಿಖರ ಸಂದೇಶ ರವಾನೆ ಸಾಧ್ಯವಾಗುತ್ತದೆ. ಆಮದು ಮಾಡಿಕೊಂಡ ಶಸ್ತ್ರಾಸ್ತ್ರ ಗಳಿಗಿಂತ ಸ್ವದೇಶಿ ತಂತ್ರಜ್ಞಾನ ಹೆಚ್ಚು ಸುರಕ್ಷಿತ ಮತ್ತು ನಂಬಿಕಸ್ಥ ಎಂಬುದು ಇದರ ಉದ್ದೇಶ.

ಯೋಧರ ಸಾಹಸಗಾಥೆ

ಯಾವುದೇ ಅತ್ಯಾಧುನಿಕ ಕ್ಷಿಪಣಿ ಅಥವಾ ಯುದ್ಧ ವಿಮಾನವಿರಲಿ, ಅದರ ಹಿಂದಿರುವ ಯೋಧರ ಧೈರ್ಯ-ಶೌರ್ಯವೇ ಅಂತಿಮ ವಿಜಯವನ್ನು ನಿರ್ಧರಿಸುತ್ತದೆ. ‘ಆಪರೇಷನ್ ಸಿಂಧೂರ’ದ ಸ್ತಬ್ಧಚಿತ್ರ ಕೇವಲ ಯಾಂತ್ರಿಕ ಶಕ್ತಿಯನ್ನಷ್ಟೇ ಅಲ್ಲ, ಅಪ್ರತಿಮ ‘ಮನುಷ್ಯ ಶಕ್ತಿ’ಯನ್ನು ತೋರಿಸುತ್ತದೆ. ಸೇನಾ ಸಮವಸ್ತ್ರ ಧರಿಸಿದ ವಿಶೇಷ ಪಡೆಗಳ ಸೈನಿಕರ ಆಕರ್ಷಕ ಪ್ರತಿಕೃತಿಗಳು ಇದರಲ್ಲಿವೆ. ಇವರು ಶತ್ರು ರಾಷ್ಟ್ರದ ಗಡಿ ದಾಟಿ ನಡೆಸಿದ ಸಾಹಸಮಯ ಕಾರ್ಯಾಚರಣೆಯ ಜೀವಂತ ಉದಾಹರಣೆಗಳು. ಅವರ ಕೈಯಲ್ಲಿರುವ ಸುಧಾರಿತ ರೈಫಲ್​ಗಳು, ನೈಟ್ ವಿಷನ್ ಗ್ಲಾಸ್​ಗಳು ಮತ್ತು ಮುಖದ ಮೇಲಿನ ದೃಢ ಸಂಕಲ್ಪ ದೇಶದ ರಕ್ಷಣೆಗೆ ಸದಾ ಸಿದ್ಧವಿರುವ ಭಾರತೀಯ ಯೋಧರ ಪ್ರತಿಬಿಂಬ. ಯಂತ್ರಗಳಿಗಿಂತ ಹೆಚ್ಚಾಗಿ ಅವುಗಳನ್ನು ಪ್ರಯೋಗಿಸುವ ದೇಶಪ್ರೇಮಿ ಯೋಧರೇ ದೇಶ ದೊಡ್ಡ ಆಸ್ತಿ ಎಂಬ ಸಂದೇಶ ಇದರಲ್ಲಿದೆ.

ಕಾರ್ಯಕ್ರಮಗಳ ಪಕ್ಷಿನೋಟ

ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾರತದ ಅಭಿವೃದ್ಧಿ ಪಯಣ, ಸಾಂಸ್ಕೃತಿಕ ವೈವಿಧ್ಯತೆಯನ್ನೂ ಪ್ರದರ್ಶಿಸಲಾಗುತ್ತದೆ. ರಾಷ್ಟ್ರಪತಿ ದ್ರೌಪದಿ ಮುಮು ನೇತೃತ್ವದಲ್ಲಿ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 9.30ಕ್ಕೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವುದರೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಐರೋಪ್ಯ ಮಂಡಳಿ ಅಧ್ಯಕ್ಷ ಅಂಟೋನಿಯೋ ಕೋಸ್ಟಾ ಮತ್ತು ಐರೋಪ್ಯ ಆಯೋಗದ ಅಧ್ಯಕ್ಷ ಉರ್ಸಲಾ ವಾನ್ ಡೆರ್ ಲೇಯನ್ ಈ ಬಾರಿಯ ಗಣರಾಜ್ಯ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದಾರೆ. ‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆ ಪರೇಡ್​ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುತ್ತದೆ. ಭಾರತೀಯ ವಾಯುಪಡೆಯ ನಾಲ್ಕು ಎಂಐ-17 ಹೆಲಿಕಾಪ್ಟರ್​ಗಳು ಧ್ವಜದ ಆಕಾರದಲ್ಲಿ ಹಾರಾಡಿ ಪುಷ್ಟವೃಷ್ಟಿ ಮಾಡಲಿವೆ.