ಸಾಂದರ್ಭಿಕ ಚಿತ್ರ  
ದೇಶ

ರಾಜಕೀಯ ಚಳವಳಿಗಳ ಕಾಲ!

ನಮ್ಮ ದೇಶದಲ್ಲಿ ರಾಜಕೀಯ ವ್ಯವಸ್ಥೆ ಸಾಗುತ್ತಿರುವ ದಾರಿ ಮತ್ತು ಅದು ಹಲವಾರು ದೋಷಗಳನ್ನು ಹೊಂದಿರುವ ಬಗ್ಗೆ ತುಂಬ ಜನರಲ್ಲಿ ಅಸಮಾಧಾನ, ಆಕ್ರೋಶವಿದೆ. ಮತ ಹಾಕುವವರೆಗೆ ಮಾತ್ರ ಮತದಾರನಿಗೆ ಬೆಲೆ ಎಂಬಂಥ ಸ್ಥಿತಿ ಇದೆ. ಅಲ್ಲದೆ, ಸಾಮಾನ್ಯ ಜನರು ಚುನಾವಣೆಗೆ ಸ್ಪರ್ಧಿಸುವುದಿರಲಿ, ಆ ಬಗ್ಗೆ ಯೋಚಿಸುವುದೂ ಅಸಾಧ್ಯ ಎಂಬಷ್ಟರ ಮಟ್ಟಿಗೆ ಹಣಬಲ ರಾಜಕೀಯದಲ್ಲಿ ಸೇರಿಕೊಂಡಿದೆ. ವಿಧಾನಸಭೆ ಅಥವಾ ಲೋಕಸಭೆ ಪ್ರವೇಶಿಸಲು ಅಭ್ಯರ್ಥಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ನಿದರ್ಶನಗಳನ್ನು ನೋಡಿದ್ದೇವೆ. ಹೀಗಾಗಿಯೇ, ತಾಜಾ ಚಿಂತನೆ, ಹೊಸ ಬಗೆಯ ಅಲೋಚನೆಗಳನ್ನು ಹೊಂದಿದ ಒಂದಿಷ್ಟು ಜನರು ರಾಜಕೀಯ ಚಳವಳಿಗಳನ್ನು ಅಥವಾ ಜನಾಂದೋಲನಗಳನ್ನು ಆರಂಭಿಸುತ್ತಿದ್ದಾರೆ. ಕರ್ನಾಟಕ ಕೇಡರ್​ನ ಯುವ ಐಪಿಎಸ್ ಅಧಿಕಾರಿಯಾಗಿದ್ದ ಕೆ.ಅಣ್ಣಾಮಲೈ, ಇಂಥ ರಾಜಕೀಯ ಜನಾಂದೋಲನಕ್ಕೆ ಚಾಲನೆ ನೀಡಿದ್ದಾರೆ. ಅವರ ಈ ಹೊಸ ಆಂದೋಲನಕ್ಕೆ 24 ಗಂಟೆಗಳಲ್ಲೇ 14.5 ಲಕ್ಷಕ್ಕೂ ಅಧಿಕ ಜನರು ಬೆಂಬಲ ನೀಡಿರುವುದು ಸಂಚಲನ ಮೂಡಿಸಿದೆ. ಈ ಹಿಂದೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೂಡ ವ್ಯವಸ್ಥೆಯ ಶುದ್ಧೀಕರಣಕ್ಕಾಗಿ ಆಂದೋಲನ ನಡೆಸಿದ್ದರು. ಈ ರಾಜಕೀಯ ಚಳವಳಿಗಳು ಯಶಸ್ವಿಯಾಗಬಲ್ಲವೆ, ಆದರೆ ಯಾವೆಲ್ಲ ಪರಿವರ್ತನೆ ನಿರೀಕ್ಷಿಸಬಹುದು? ಈ ಕುರಿತಾದ ವಿಶ್ಲೇಷಣೆ ಇಲ್ಲಿದೆ.

‘ನಾವೆಲ್ಲ ನಾಯಕರು!’- ಈ ಘೋಷವಾಕ್ಯವೇ ಯುವ ಮನಸ್ಸುಗಳಿಗೆ ಚೇತೋಹಾರಿ ಎನಿಸಿದೆ. ಬಹುತೇಕ ರಾಜಕೀಯ ಪಕ್ಷಗಳಲ್ಲಿ ‘ನಾನೇ ನಾಯಕ’, ‘ನಾನು ಮಾತ್ರ ನಾಯಕ’ ಎಂಬಂಥ ಪರಿಸ್ಥಿತಿ ಜಿಗುಪ್ಸೆ ಮೂಡಿಸಿರುವಾಗ, ‘ನಾವೆಲ್ಲ ನಾಯಕರು’ ಅಂದರೆ ಸಾಮಾನ್ಯ ಜನರೆಲ್ಲ ನಾಯಕರು ಎಂಬ ಚಿಂತನೆ ರಾಜಕೀಯದಲ್ಲಿ ಹೊಸ ಗಾಳಿ ಬೀಸುತ್ತಿರುವುದರ ಸಂಕೇತ. ಕೆ.ಅಣ್ಣಾಮಲೈ ನೂತನವಾಗಿ ಘೋಷಿಸಿರುವ ರಾಜಕೀಯ ಜನಾಂದೋಲನದ ಘೋಷವಾಕ್ಯ ಮತ್ತು ಅವರ ಚಿಂತನೆಗಳು ಯುವಕರಿಗೆ ಎಷ್ಟು ಗಾಢವಾಗಿ ಪ್ರಭಾವಿಸಿವೆ ಎಂದರೆ 24 ಗಂಟೆಯೊಳಗೆ ಬೆಂಬಲಿಗರ ಸಂಖ್ಯೆ 14.5 ಲಕ್ಷ ದಾಟಿದೆ ಮತ್ತು ರಾಜಕೀಯದಲ್ಲಿ ಮಹತ್ತರ ಬದಲಾವಣೆಗೆ ಯುವಕರು ಸೇರಿದಂತೆ ಜನಸಾಮಾನ್ಯರ ತುಡಿತ ಎಷ್ಟು ತೀವ್ರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಖಡಕ್ ಐಪಿಎಸ್ ಅಧಿಕಾರಿಯಾಗಿಯೇ ಅಣ್ಣಾಮಲೈ ಕರ್ನಾಟಕದ ಜನರಿಗೆ ಚಿರಪರಿಚಿತರು. 2011ರಿಂದ 2019ರವರೆಗೆ ಅವರು ಕಾರ್ಕಳ, ಉಡುಪಿ, ಚಿಕ್ಕಮಗಳೂರು ಹಾಗೂ ಬೆಂಗಳೂರು ನಗರಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಮಾಜವಿರೋಧಿ ಶಕ್ತಿಗಳ ನಿದ್ದೆಗೆಡಿಸಿದ್ದರು. ಮಾತ್ರವಲ್ಲ, ಜನ ಸಮೂಹದಲ್ಲಿ ‘ಸಿಂಗಂ’ ಎಂದೇ ಖ್ಯಾತಿ ಪಡೆದಿದ್ದರು. ಪೊಲೀಸ್ ಹುದ್ದೆ ತೊರೆದು 2020ರಲ್ಲಿ ಸಕ್ರಿಯ ರಾಜಕಾರಣ ಪ್ರವೇಶಿಸಿದ ಅಣ್ಣಾಮಲೈ ಬಿಜೆಪಿ ಪಾಳಯ ಸೇರಿದರು. ಆದರೆ, ಅವರ ಚಿಂತನೆಗಳಿಗೆ ಮನ್ನಣೆ ಸಿಗದ ಪರಿಣಾಮ, ಜೂನ್ 5ರಂದು ರಾಜೀನಾಮೆ ನೀಡಿ, ಹೊಸ ರಾಜಕೀಯ ಚಳವಳಿಯನ್ನು ಘೋಷಿಸಿದ್ದಾರೆ ಮತ್ತು 2031ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸ್ಪಷ್ಟ ಪಡಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯ ಮುನ್ನ ಅಣ್ಣಾಮಲೈ 200 ದಿನಗಳ ಕಾಲ ತಮಿಳುನಾಡಿನಾದ್ಯಂತ ಮಿಂಚಿನ ಪಾದಯಾತ್ರೆ ನಡೆಸಿದರು. 

ಜನರ ಆಶೋತ್ತರಗಳನ್ನು ಅರ್ಥಮಾಡಿಕೊಂಡರು. ಉನ್ನತ ವ್ಯಾಸಂಗ, ಪ್ರತಿಭೆ, ಅನುಭವ, ದಕ್ಷತೆ, ಬದ್ಧತೆ, ಪ್ರಾಮಾಣಿಕತೆ, ಸ್ಪಷ್ಟತೆ, ವಯಸ್ಸು ಎಲ್ಲವನ್ನೂ ಹೊಂದಿರುವ ಅಣ್ಣಾಮಲೈ ತಾವಂದುಕೊಂಡಂತೆ, ಜನಸಾಮಾನ್ಯರನ್ನು ರಾಜಕೀಯದ ಮುಖ್ಯಪ್ರವಾಹದಲ್ಲಿ ಮತ್ತು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರೆ, ನಿಜಕ್ಕೂ ಭಾರತೀಯ ರಾಜಕೀಯದಲ್ಲಿ ಹೊಸದೊಂದು ಕ್ರಾಂತಿಯೇ ಸಂಭವಿಸುತ್ತದೆ. ‘ಸ್ವಯಂಸೇವಕರೇ ನಮ್ಮ ಚಳವಳಿಯ ಜೀವಾಳ. ಸಮುದಾಯ ಗಳಿಗೆ ಶಕ್ತಿ ತುಂಬುತ್ತ, ನಾಯಕತ್ವದ ಗುಣಗಳನ್ನು ಬೆಳೆಸುತ್ತ್ತ ತಳಮಟ್ಟದಲ್ಲಿ ನಿಜವಾದ ಬದಲಾವಣೆಯನ್ನು ತರುತ್ತಿದ್ದೇವೆ. ಶಿಕ್ಷಣ, ಆರೋಗ್ಯ, ಪರಿಸರ, ಯುವ ನಾಯಕತ್ವ ಅಥವಾ ನಿಮ್ಮ ಮನಸ್ಸಿಗೆ ಹತ್ತಿರವಾದ ಕ್ಷೇತ್ರದಲ್ಲಿ ಒಂದು ಸಣ್ಣ ಹೆಜ್ಜೆಯೊಂದಿಗೆ ಕೆಲಸ ಆರಂಭಿಸಿ, ನಾಳಿನ ದಿನವನ್ನು ಉತ್ತಮವಾಗಿಸಲು ನಮ್ಮೊಂದಿಗೆ ಕೈಜೋಡಿಸಿ’ ಎಂದು ಅಣ್ಣಾಮಲೈ ಅವರ ರಾಜಕೀಯ ಆಂದೋಲನ ವೆಬ್​ಸೈಟ್​ನಲ್ಲಿ (htpps://Wetheleader.org/)ಕರೆ ನೀಡಲಾಗಿದ್ದು, ಅಪೂರ್ವ ಸ್ಪಂದನೆ ಸಿಗುತ್ತಿದೆ.

ದ್ರಾವಿಡ ನೆಲದಲ್ಲಿ ಬದಲಾವಣೆಯ ಗಾಳಿ

ತಮಿಳುನಾಡಿನ ರಾಜ ಕೀಯ ಸಮೀಕರಣವೇ ವಿಭಿನ್ನ ಮತ್ತು ಅಷ್ಟೇ ಸಂಕೀರ್ಣ. ದ್ರಾವಿಡ ಸಿದ್ಧಾಂತದ ಪಕ್ಷಗಳು ಮಾತ್ರ ಇಲ್ಲಿ ಅಧಿಕಾರಕ್ಕೆ ಬರುತ್ತಿದ್ದವು. ಕಳೆದ ಕೆಲವು ದಶಕಗಳಿಂದಂತೂ ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷಗಳೇ ಅಧಿಕಾರ ಅನುಭವಿಸಿವೆ. ರಾಷ್ಟ್ರೀಯ ಪಕ್ಷಗಳ ಸ್ಥಾನ ಇಲ್ಲಿ ನಾಮ್ ಕೇ ವಾಸ್ತೆ. ಆದರೆ, ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಅದೇ ದ್ರಾವಿಡ ಸಿದ್ಧಾಂತಕ್ಕೆ ಜೋತುಬಿದ್ದು, ತಮಿಳಿಗರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳುವ ಯತ್ನ ಮಾಡಿದವು. ಈ ಬಾರಿ ಬದಲಾವಣೆಗೆ ಸಜ್ಜಾಗಿದ್ದ ಮತದಾರರು ರಾಜಕೀಯ ಸಮೀಕರಣಗಳನ್ನೆಲ್ಲ ತಿರುವುಮುರುವುಗೊಳಿಸಿದರು. ಚುನಾವಣೋತ್ತರ ಸಮೀಕ್ಷೆಗಳು ಕೂಡ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದೇ ಹೇಳಿದ್ದವು. ಆದರೆ, ಮೇ 4ರಂದು ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. ಖ್ಯಾತ ನಟ ವಿಜಯ್ ಜೋಸೆಫ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದು, ಸ್ಪಷ್ಟ ಬಹುಮತ ಪಡೆದುಕೊಂಡಿತು. ಟಿವಿಕೆಯನ್ನು ಸ್ಥಾಪಿಸಿದ ಎರಡೇ ವರ್ಷದಲ್ಲಿ ವಿಜಯ್ ಜೋಸೆಫ್ ಮುಖ್ಯಮಂತ್ರಿಯಾದರು. ಅಂದಹಾಗೆ, ಚುನಾವಣೆ ಪ್ರಚಾರದ ವೇಳೆ ವಿಜಯ್ ಯಾವುದೇ ಸಿದ್ಧಾಂತದ ಬಗ್ಗೆ ಮಾತನಾಡಲಿಲ್ಲ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮತ್ತು ಅವರ ಬದುಕನ್ನು ಬದಲಾಯಿಸುವ ಬಗ್ಗೆ ಖಚಿತ ದನಿಯಲ್ಲಿ ಮಾತನಾಡಿದರು. ರಾಜಕೀಯದಲ್ಲಿ ಹೊಸ ಅಲೆಗಾಗಿ ಕಾಯುತ್ತಿದ್ದ ಮತದಾರರು ವಿಜಯ್ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿದ್ದಾರೆ. ಅಣ್ಣಾಮಲೈ ಮತ್ತು ವಿಜಯ್ ಜನಪ್ರಿಯತೆಯಲ್ಲಿ ಭಿನ್ನತೆ ಇದೆಯಾದರೂ, ಅಣ್ಣಾಮಲೈ ಹೊಂದಿರುವ ಸ್ಪಷ್ಟತೆ ಮತ್ತು ಬದ್ಧತೆ ಅಸಾಧಾರಣ. ಹೀಗಾಗಿ ತಮಿಳುನಾಡಿನ ರಾಜಕಾರಣ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಕುತೂಹಲ ಮೂಡಿಸಿದೆ.

ಮಾರುವೇಷದಲ್ಲೂ ಇದ್ದಾರೆ!

ರಾಜಕೀಯ ಚಳವಳಿ ಮತ್ತು ಆಂದೋಲ ನದ ವಿಚಾರದಲ್ಲಿ ಎಚ್ಚರಿಕೆಯೂ ಅಗತ್ಯ. ದೇಶದ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆ ಸಂದರ್ಭದಲ್ಲಿ ಹೇಳಿದ ಒಂದು ಮಾತನ್ನೇ ವ್ಯಂಗ್ಯವಾಗಿ ಬಳಸಿಕೊಂಡು ಅಸ್ತಿತ್ವಕ್ಕೆ ಬಂದಿರುವ ‘ಕಾಕ್ರೋಚ್ ಜನತಾ ಪಾರ್ಟಿ’ ಶನಿವಾರ ರಾಜಧಾನಿ ದೆಹಲಿಯ ಜಂತರ್-ಮಂತರ್​ನಲ್ಲಿ ಪ್ರತಿಭಟನೆ ನಡೆಸಿದೆ. ಆದರೆ, ರಹಸ್ಯ ಕಾರ್ಯಸೂಚಿ ಇರಿಸಿಕೊಂಡು, ಮಾರುವೇಷದಲ್ಲಿ ಬರುವ ಇಂಥ ವೇದಿಕೆಗಳು ಸಮಾಜದಲ್ಲಿ ಅರಾಜಕತೆ ಮೂಡಿಸದಂತೆ ಜಾಗ್ರತೆ ವಹಿಸಬೇಕಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ವ್ಯವಸ್ಥೆ ಶುದ್ಧೀಕರಣದ ಆಂದೋಲನ

ಯುಪಿಎ ಆಡಳಿತಾವಧಿಯಲ್ಲಿ ದೇಶದಲ್ಲಿ ಒಂದರ ಬೆನ್ನಿಗೆ ಮತ್ತೊಂದು ಎಂಬಂತೆ ಸರಣಿ ಹಗರಣಗಳು ಬೆಳಕಿಗೆ ಬರುತ್ತಿದ್ದಾಗ ಭ್ರಷ್ಟಾಚಾರದ ವಿರುದ್ಧ ರಣಕಹಳೆಯನ್ನು ಮೊಳಗಿಸಿ, ಲೋಕಪಾಲ ವ್ಯವಸ್ಥೆಗೆ ಆಗ್ರಹಿಸಿ ಜನಾಂದೋಲನ ನಡೆಸಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಯುವಶಕ್ತಿ ದೊಡ್ಡಮಟ್ಟದಲ್ಲಿ ಬೆಂಬಲ ನೀಡಿತ್ತು. ಆದರೆ, ಈ ಆಂದೋಲನದಲ್ಲಿ ಅಣ್ಣಾ ಜತೆಗಿದ್ದವರೇ ಕೆಲವೇ ಸಮಯದಲ್ಲಿ ಪ್ರತ್ಯೇಕ ರಾಜಕೀಯ ಪಕ್ಷ (ಆಮ್ ಆದ್ಮಿ ಪಕ್ಷ) ಸ್ಥಾಪಿಸಿದ್ದಲ್ಲದೆ, ಎಡಬಿಡಂಗಿ ನೀತಿಗಳ ಪರಿಣಾಮ ಅಷ್ಟೇ ಬೇಗ ಜನರ ವಿಶ್ವಾಸವನ್ನು ಕಳೆದುಕೊಂಡರು.

ಬೇಕೇ ಬೇಕು ಬದಲಾವಣೆ ಬೇಕು!

  • ಪರ್ಯಾಯ ಆಯ್ಕೆಯ ತುಡಿತ ಒಂದೇರಡು ರಾಜ್ಯಗಳಿಗೆ ಸೀಮಿತವಾಗಿಲ್ಲ. ರಾಷ್ಟ್ರ ಮಟ್ಟದಲ್ಲೂ ಜನರು ಪ್ರಬಲ ರಾಷ್ಟ್ರವಾದ ಮತ್ತು ಇಚ್ಛಾಶಕ್ತಿ ಹೊಂದಿರುವ ಪಕ್ಷ ಉದಯವಾಗಬೇಕು ಎಂದು ನಿರೀಕ್ಷಿಸುತ್ತಿದ್ದಾರೆ. ನಾಯಕತ್ವ ಸಾಮರ್ಥ್ಯ ಹೊಂದಿರುವ, ಜನಸಾಮಾನ್ಯರ ಬಗ್ಗೆ ನೈಜ ಕಾಳಜಿ ಹೊಂದಿರುವ ನಿಷ್ಕಳಂಕ ವ್ಯಕ್ತಿಗಳು ಆಯಕಟ್ಟಿನ ಸ್ಥಾನದಲ್ಲಿ ಇರಬೇಕು ಎಂದು ಬಯಸುತ್ತಿದ್ದಾರೆ. 
  •  ರಾಜಕೀಯದ ಮುಖ್ಯವಾಹಿನಿಯಲ್ಲಿ ಇಂದಿಗೂ ಯುವಕರಿಗೆ ಸೂಕ್ತ ಮನ್ನಣೆ ಸಿಕ್ಕಿಲ್ಲ ಎಂಬುದು ವಾಸ್ತವ. ಕೆಲವರಿಗೆ ಸಿಕ್ಕರೂ, ಅದು ಕುಟುಂಬ ರಾಜಕಾರಣದ ಪ್ರಭಾವದಿಂದ ದೊರೆತಿರುವಂಥದ್ದು. ಸಮಾಜಕ್ಕಾಗಿ ಉತ್ತಮ ಕೊಡಗೆ ಕೊಡಲು ಬಯಸುವ, ಬದಲಾವಣೆ ತರಲು ಹಾತೊರೆಯುತ್ತಿರುವ, ಪ್ರತಿಭೆ ಮತ್ತು ಸಾಮರ್ಥ್ಯ ಹೊಂದಿರುವ ಯುವ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ. ಅಧಿಕಾರವಿಲ್ಲದೆ ಇವರ ಚಿಂತನೆಗಳು ಅನುಷ್ಠಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
  • ಯಾವುದೇ ರಾಜಕೀಯ ಪಕ್ಷ ಮತ್ತು ಅಲ್ಲಿಂದ ಗೆದ್ದು ಬಂದಿರುವ ಜನಪ್ರತಿನಿಧಿಗಳ ಹಿನ್ನೆಲೆಯನ್ನು ನೋಡಿದರೆ ಬಹುತೇಕರು ಕೋಟ್ಯಧೀಶರೇ. ಅಂದರೆ, ಕೋಟಿ ಕೋಟಿ ಹಣ ಇದ್ದವರು ಮಾತ್ರ ಚುನಾವಣೆಗೆ ಸ್ಪರ್ಧಿಸಬಹುದು ಎಂಬಂಥ ಸ್ಥಿತಿ ಸೃಷ್ಟಿಯಾಗಿದೆ.
  • ಎಲ್ಲ ರಾಜಕೀಯ ಪಕ್ಷಗಳೂ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತವೆ. ಆದರೆ, ಎಲ್ಲ ಪಕ್ಷಗಳೂ ಕುಟುಂಬ ರಾಜಕಾರಣವನ್ನು ಪೋಷಿಸಿ, ಬೆಳೆಸುತ್ತಿವೆ. ಹೀಗಿರುವಾಗ, ಹೊಸಬರಿಗೆ ಅವಕಾಶ ಸಿಗಲು ಹೇಗೆ ಸಾಧ್ಯ?
  • ಪಕ್ಷಗಳ ಹೆಸರು, ಚಿಹ್ನೆ ಬೇರೆ-ಬೇರೆಯಾದರೂ ಮಾದರಿ ಒಂದೇ. ಉಚಿತ ಗ್ಯಾರಂಟಿ ಯೋಜನೆ ಗಳನ್ನು ವಿರೋಧಿಸಿದ್ದ ಪಕ್ಷಗಳೇ ಈಗ ಅವುಗಳನ್ನು ಜಾರಿಗೆ ತಂದಿವೆ. ಅಂದರೆ, ಸಾಮಾನ್ಯವಾಗಿ ಬಹುತೇಕ ಒಂದೇ ಕಾರ್ಯಸೂಚಿಯಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ಹೊಸ ಪ್ರಯೋಗಗಳಿಗೆ ಅವಕಾಶ ಇಲ್ಲದಂತಾಗಿದೆ.

ಜನಸಾಮಾನ್ಯರಿಗೆ ಏಕೆ ಬೇಕು ಅಧಿಕಾರ?

  • ಇದು ಪ್ರಜಾಪ್ರಭುತ್ವದ ಆಶಯವೂ ಹೌದು. ಪ್ರಜಾಪ್ರಭುತ್ವದ ಮೌಲ್ಯಗಳು ಅನುಷ್ಠಾನ ಗೊಂಡಿರುವುದು ಶ್ರೀಸಾಮಾನ್ಯನ ಬಲ ದಿಂದಲೇ ಎಂಬುದನ್ನು ಮರೆಯುವಂತಿಲ್ಲ. 
  •  ವ್ಯವಸ್ಥೆಯ ಬೇರುಗಳನ್ನು ವಿಷಯುಕ್ತ ಗೊಳಿಸಿರುವ ಭ್ರಷ್ಟಾಚಾರವನ್ನು ಮತ್ತು ಭ್ರಷ್ಟಾಚಾರ ನಿಮೂಲನೆ ಅಸಾಧ್ಯ ಎಂಬಂಥ ಹತಾಶ ಪರಿಸ್ಥಿತಿಯನ್ನು ಸೋಲಿಸಲು, ಸ್ವಚ್ಛ ಆಡಳಿತಕ್ಕೆ ಶ್ರೀಸಾಮಾನ್ಯರ ಶುದ್ಧ ಕೈಗಳು ಬೇಕು.
  • ಯುವಕರ ಕೈಗೆ ಉದ್ಯೋಗ, ರೈತರಿಗೆ ಸೂಕ್ತ ಬೆಂಬಲ ಬೆಲೆ, ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು, ಗ್ರಾಮ ಮತ್ತು ನಗರ ಗಳಲ್ಲಿ ಗುಂಡಿಗಳಿಲ್ಲದ ರಸ್ತೆ... ಇದೆಲ್ಲವೂ ಸಾಧ್ಯವಾಗಬೇಕಾದರೆ ಶ್ರೀಸಾಮಾನ್ಯರ ಪ್ರಬಲ ನಾಯಕ ಅಧಿಕಾರದಲ್ಲಿ ಇರಬೇಕು.
  • ಜನಸಾಮಾನ್ಯರೇ ನಾಯಕರಾದರೆ, ಹಲವು ಬಗೆಯ ಮಾಫಿಯಾಗಳಿಗೆ ಕಡಿವಾಣ ಬೀಳುತ್ತದೆ. ಮುಖ್ಯವಾಗಿ, ಜನರ ತೆರಿಗೆ ದುಡ್ಡು ಸದ್ಬಳಕೆಯಾಗುತ್ತದೆ.

-ರವೀಂದ್ರ ಎಸ್. ದೇಶಮುಖ್