ಸಾಂದರ್ಭಿಕ ಚಿತ್ರ  
ದೇಶ

ಹಿಮನದಿಗಳ ರೌದ್ರಾವತಾರ! ಭಾರತದ ಆರು ರಾಜ್ಯಗಳಿಗೆ ಅಪಾಯ

ಆಗಸ್ಟ್ 26ರ ಬೆಳಗ್ಗೆ 9 ಗಂಟೆ. ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ರಸುವಾ ಜಿಲ್ಲೆಯ ಭೋಟೆಕೋಶಿ ನದಿಯಲ್ಲಿ ಹಠಾತ್ ಭೀಕರ ಪ್ರವಾಹ ಉಂಟಾಯಿತು. ಕೆಲವೇ ಕ್ಷಣಗಳಲ್ಲಿ ರಸ್ತೆಗಳು, ಕಟ್ಟಡಗಳು ಮತ್ತು ಹಳ್ಳಿಗಳು ಕೊಚ್ಚಿಹೋದವು. ಭಾರತ ಮತ್ತು ಅಮೆರಿಕ ಸೇರಿದಂತೆ 26 ದೇಶಗಳ ಪ್ರಜೆಗಳನ್ನೊಳಗೊಂಡಂತೆ 1500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಆರಂಭಿಕ ಅಂದಾಜಿನ ಪ್ರಕಾರ, ಈ ವಿನಾಶಕ್ಕೆ ‘ಗ್ಲೇಸಿಯಕ್ ಲೇಕ್ ಔಟ್​ಬರ್ಸ್ಟ್ ಫ್ಲಡ್’ (ಜಿಎಲ್​ಒಎಫ್) ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2025ರ ಜುಲೈನಲ್ಲಿಯೂ ತಾಪಮಾನ ಹೆಚ್ಚಳದಿಂದಾಗಿ ಇದೇ ಪ್ರದೇಶದಲ್ಲಿ ಟಿಬೆಟ್​ನ ಹಿಮನದಿ ಸರೋವರವೊಂದು ಸ್ಪೋಟಗೊಂಡು 9 ಜನರು ಪ್ರಾಣ ಕಳೆದುಕೊಂಡಿದ್ದರು. ಇಂಥ ದುರಂತಗಳು ಹೆಚ್ಚುತ್ತಲೇ ಇದ್ದು, ಭಾರತದ ಹಲವು ಪ್ರದೇಶಗಳು ಕೂಡ ಜಿಎಲ್​ಒಎಫ್ ಅಪಾಯದ ವ್ಯಾಪ್ತಿಯಲ್ಲಿವೆ. ಈ ಕುರಿತಾದ ವಿವರ ಇಲ್ಲಿದೆ.

ಪರ್ವತಗಳ ಎತ್ತರದಲ್ಲಿರುವ ಹಿಮನದಿಗಳು (ಗ್ಲೇಸಿಯರ್) ಕರಗಿದಾಗ, ಅವುಗಳ ನೀರು ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ಅಥವಾ ಬಂಡೆಯ ಗೋಡೆಗಳ ನಡುವೆ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದು ಕ್ರಮೇಣ ಸರೋವರದ ರೂಪವನ್ನು ಪಡೆಯುತ್ತದೆ, ಇದನ್ನು ಗ್ಲೇಸಿಯಲ್ ಲೇಕ್ (ಹಿಮಪರ್ವತ ಸರೋವರ) ಎಂದು ಕರೆಯಲಾಗುತ್ತದೆ. ಈ ಸರೋವರವು ಹಿಮನದಿಯ ಮುಂಭಾಗದಲ್ಲಿ ಅಥವಾ ಅದರ ಕೆಳಭಾಗದ ಮೇಲ್ಮೈಯಲ್ಲೂ ರೂಪುಗೊಳ್ಳಬಹುದು. ಈ ಸರೋವರಗಳನ್ನು ಹಿಮ, ಪರ್ವತದ ಅವಶೇಷಗಳು ಅಥವಾ ಬಂಡೆಗಳಿಂದ ಕೂಡಿದ ನೈಸರ್ಗಿಕ ಗೋಡೆ (ಅಣೆಕಟ್ಟು) ತಡೆದು ನಿಲ್ಲಿಸಿರುತ್ತದೆ. ಯಾವುದೋ ಕಾರಣದಿಂದಾಗಿ ಈ ನೈಸರ್ಗಿಕ ಗೋಡೆ ಹಠಾತ್ತನೆ ಒಡೆದಾಗ, ಸರೋವರದಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ನೀರು ಅತ್ಯಂತ ವೇಗವಾಗಿ, ನಿಯಂತ್ರಣವಿಲ್ಲದೆ ಕೆಳಮುಖವಾಗಿ ಹರಿಯುತ್ತದೆ. ಇದನ್ನೇ ‘ಗ್ಲೇಸಿಯಲ್ ಲೇಕ್ ಔಟ್​ಬರ್ಸ್ಟ್ ಫ್ಲಡ್’ (ಜಿಎಲ್​ಒಎಫ್) ಅಥವಾ ‘ಹಿಮನದಿ ಸರೋವರ ಸ್ಪೋಟ’ ಎಂದು ಕರೆಯಲಾಗುತ್ತದೆ. ಜಿಎಲ್​ಒಎಫ್ ಸಮಯದಲ್ಲಿ ನೀರಿನ ಹರಿವಿನ ವೇಗವು ಸಾಮಾನ್ಯ ಮಳೆಯಿಂದ ಉಂಟಾಗುವ ಪ್ರವಾಹಕ್ಕಿಂತ ಹಲವು ಪಟ್ಟು ಹೆಚ್ಚಾಗಿರುತ್ತದೆ. ಇದರಿಂದಾಗಿ ಇದು ತನ್ನ ಮಾರ್ಗದಲ್ಲಿ ಬರುವ ಪ್ರತಿಯೊಂದನ್ನೂ ಅತ್ಯಂತ ವೇಗವಾಗಿ ಕೊಚ್ಚಿಕೊಂಡು ಮತ್ತು ನಾಶಪಡಿಸುತ್ತ ಸಾಗುತ್ತದೆ.

ದುರಂತ ಹೇಗೆ ತಡೆಯಬಹುದು? 

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಎಂಎ) ಪ್ರಕಾರ, ಉಪಗ್ರಹ ಚಿತ್ರಗಳು, ಸ್ಥಳ ಪರಿಶೀಲನೆ ಮತ್ತು ಹಳೆಯ ದಾಖಲೆಗಳ ಆಧಾರದ ಮೇಲೆ ಅಪಾಯಕಾರಿ ಸರೋವರಗಳನ್ನು ಗುರುತಿಸಬೇಕಾದ ಅಗತ್ಯವಿದೆ. ಇದಕ್ಕಾಗಿ ಇಸ್ರೋ ಕೂಡ ನಿಗಾವಹಿಸುತ್ತದೆ. ಅಪಾಯಕಾರಿ ಸರೋವರಗಳಲ್ಲಿ ರೇಡಾರ್, ಸೆನ್ಸಾರ್​ಗಳಂತಹ ತಂತ್ರಜ್ಞಾನಗಳ ಮೂಲಕ ನೀರಿನ ಮಟ್ಟ ಮತ್ತು ಕಟ್ಟೆಯ ಸ್ಥಿರತೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ಮುಂಚಿತವಾಗಿಯೇ ಪತ್ತೆ ಹಚ್ಚಬಹುದು.

ನಿಯಂತ್ರಿತ ವಿಧಾನದಲ್ಲಿ ಕೃತಕ ಕಾಲುವೆಗಳನ್ನು ನಿರ್ವಿುಸಿ ಅಪಾಯಕಾರಿ ಸರೋವರಗಳ ನೀರಿನ ಮಟ್ಟವನ್ನು ತಗ್ಗಿಸಬಹುದು. ಇದರಿಂದ ಸರೋವರವು ಹಠಾತ್ ಒಡೆಯುವ ಅಪಾಯ ಕಡಿಮೆಯಾಗುತ್ತದೆ. ಇದರ ಜೊತೆಗೆ ಪರ್ವತ ಪ್ರದೇಶಗಳಲ್ಲಿ ಮೂಲಸೌಕರ್ಯ ನಿರ್ಮಾಣ ಚಟುವಟಿಕೆಗಳನ್ನು ಕಡಿಮೆ ಮಾಡುವ ಅಗತ್ಯವಿದೆ. ಮುಖ್ಯ ಕಾರಣವಾದ ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಯತ್ನಗಳು ನಡೆಯುತ್ತಿದ್ದರೂ, ಅವುಗಳ ಸ್ಪಷ್ಟ ಫಲಿತಾಂಶ ಇನ್ನೂ ಕಂಡುಬರುತ್ತಿಲ್ಲ.

ಭಾರತದ ಸ್ಥಿತಿ

ಹಿಮನದಿಗಳಿಂದ ಸರೋವರಗಳು ಸೃಷ್ಟಿಯಾಗಿ, ಭಾರತದ ಆರು ರಾಜ್ಯಗಳು ಅಪಾಯ ಎದುರಿಸುತ್ತಿವೆ. ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಬಿಹಾರ. ಹಿಮಾಲಯದ ಮಡಿಲಲ್ಲಿ ಇರುವ ಹಿಮಾಚಲ ಪ್ರದೇಶದಲ್ಲಿ 1990ರಲ್ಲಿ ಕೇವಲ 107 ಹಿಮಪರ್ವತ ನದಿ/ಸರೋವರಗಳಿದ್ದವು (ಗ್ಲೇಸಿಯಲ್ ಲೇಕ್ಸ್). 2024ರ ವೇಳೆಗೆ ಈ ಸಂಖ್ಯೆ 669ಕ್ಕೆ ಏರಿದೆ, ಅಂದರೆ ಶೇಕಡ 525ರಷ್ಟು ಹೆಚ್ಚಳವಾಗಿದೆ. ಈ 669 ಸರೋವರಗಳಲ್ಲಿ 88 ಸರೋವರಗಳ ಮೇಲೆ ನೇಪಾಳದಂತಹ ಗ್ಲೇಸಿಯರ್ ಲೇಕ್ ಔಟ್​ಬರ್ಸ್ಟ್

ಫ್ಲಡ್ (ಜಿಎಲ್​ಒಎಫ್)ನ ಅಪಾಯ ಹೊಂಚುಹಾಕುತ್ತಿದೆ. ಇದರಲ್ಲಿ 9 ಸರೋವರಗಳನ್ನು ಅತ್ಯಂತ ಅಪಾಯಕಾರಿ, 18 ಸರೋವರಗಳನ್ನು ಹೆಚ್ಚು ಅಪಾಯಕಾರಿ ಮತ್ತು 26 ಸರೋವರಗಳನ್ನು ಮಧ್ಯಮ ಅಪಾಯಕಾರಿ ವಿಭಾಗದಲ್ಲಿ ಇರಿಸಲಾಗಿದೆ. ಹಿಮಾಲಯದಲ್ಲಿ ಏರಿಕೆಯಾಗುತ್ತಿರುವ ತಾಪ ಮಾನವು ಈ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಸಂಶೋಧಕರು ಹಿಮಾಚಲ ಪ್ರದೇಶದ ಎರಡು ಸರೋವರಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಬಿಯಾಸ್ ಜಲಾನಯನ ಪ್ರದೇಶದ ಹಿಮ್ಸೂ ಸರೋವರ ಮತ್ತು ಸತ್ಲೇಜ್ ಜಲಾನಯನ ಪ್ರದೇಶದ ಹೆಸರಿಲ್ಲದ ಒಂದು ಸರೋವರ. ಬಿಯಾಸ್ ಸರೋವರದ ನೈಸರ್ಗಿಕ ಕಟ್ಟೆ ಒಡೆದರೆ, ಪ್ರತಿ ಸೆಕೆಂಡಿಗೆ 14 ಲಕ್ಷ ಲೀಟರ್ ನೀರು ಹರಿಯುತ್ತದೆ. ಈ ನೀರಿನಿಂದ ಪ್ರತಿ ಸೆಕೆಂಡಿಗೆ ಒಲಿಂಪಿಕ್ ಗಾತ್ರದ 6 ಈಜುಕೊಳಗಳನ್ನು ತುಂಬಿಸಬಹುದು. ಅದೇ ರೀತಿ, ಸತ್ಲೇಜ್ ಸರೋವರದಿಂದ ಪ್ರತಿ ಸೆಕೆಂಡಿಗೆ 35 ಲಕ್ಷ ಲೀಟರ್ ನೀರು ಹರಿಯುತ್ತದೆ. ಇದರಿಂದ ಅಣೆಕಟ್ಟುಗಳು ಮತ್ತು ಜಲವಿದ್ಯುತ್ ಯೋಜನೆಗಳು ಸೇರಿದಂತೆ 588 ಕಟ್ಟಡಗಳಿಗೆ ಅಪಾಯವಿದೆ. 2026ರ ಜುಲೈನಲ್ಲಿ ಪ್ರಕಟವಾದ ಐಐಟಿ ಖರಗ್​ಪುರದ ಅಧ್ಯಯನದ ಪ್ರಕಾರ, ಎತ್ತರದ ಪ್ರದೇಶಗಳ ತಾಪಮಾನವು ಕಳೆದ 20 ವರ್ಷಗಳಲ್ಲಿ 1 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗಿದೆ. ಇದರಿಂದಾಗಿ ಹಿಮನದಿಗಳು ಕರಗುವ ಪ್ರಮಾಣ ಹೆಚ್ಚಾಗಬಹುದು ಮತ್ತು ನದಿಗಳ ನೀರಿನ ಹರಿವಿನಲ್ಲಿ ಭಾರಿ ಬದಲಾವಣೆಗಳು ಉಂಟಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಏಕೆ ಸ್ಪೋಟಗೊಳ್ಳುತ್ತವೆ?

ಜಾಗತಿಕ ತಾಪಮಾನ ಏರಿಕೆ: ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದ ಬಯಲುಸೀಮೆಗಿಂತ ಎತ್ತರದ ಪರ್ವತ ಪ್ರದೇಶಗಳಲ್ಲಿ ತಾಪಮಾನ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಇದರಿಂದಾಗಿ ಹಿಮನದಿಗಳು ವೇಗವಾಗಿ ಕರಗುತ್ತಿವೆ. ಇದು ಹೊಸ ಸರೋವರಗಳ ರಚನೆಗೆ ಕಾರಣವಾಗುತ್ತಿದೆ ಮತ್ತು ಹಳೆಯ ಸರೋವರಗಳು ಮತ್ತಷ್ಟು ದೊಡ್ಡದಾಗುತ್ತಿವೆ. ‘ನೇಚರ್’ ವಿಜ್ಞಾನ ಪತ್ರಿಕೆಯ ವರದಿಯ ಪ್ರಕಾರ, ಇದೇ ರೀತಿಯಲ್ಲಿ ತಾಪಮಾನವು ಹೆಚ್ಚಾಗುತ್ತಿದ್ದರೆ ಮುಂದಿನ 70 ವರ್ಷಗಳಲ್ಲಿ ಹಿಮಾಲಯ-ಕಾರಾಕೋರಂ ಪ್ರದೇಶದ ಶೇಕಡ 65ರಷ್ಟು ಮಂಜುಗಡ್ಡೆ ಕರಗಿ ಹೋಗಬಹುದು. ಇದರಿಂದ ಸರೋವರಗಳ ಸಂಖ್ಯೆ ಮತ್ತು ಗಾತ್ರ ಎರಡೂ ಹೆಚ್ಚಾಗಲಿವೆ.

ಹೆಚ್ಚುತ್ತಿರುವ ಭೂಕುಸಿತ: ಭೂಕುಸಿತ ಅಥವಾ ಹಿಮಕುಸಿತದಿಂದಾಗಿ ಪರ್ವತದ ಬಂಡೆ, ಮಣ್ಣಿನ ಭಾಗ ಅಥವಾ ದೊಡ್ಡ ಹಿಮದ ತುಂಡು ನೇರವಾಗಿ ಸರೋವರಕ್ಕೆ ಬಿದ್ದರೆ, ಸರೋವರದಲ್ಲಿ ಬೃಹತ್ ಅಲೆಗಳು ಏಳುತ್ತವೆ ಮತ್ತು ಸರೋವರದ ನೈಸರ್ಗಿಕ ತಡೆಗೋಡೆ ಒಡೆದುಹೋಗುತ್ತದೆ. ಹಿಮಾಲಯ-ಕಾರಾಕೋರಂ ಪ್ರದೇಶದಲ್ಲಿ ಈವರೆಗೆ ದಾಖಲಾಗಿರುವ 388ಕ್ಕೂ ಹೆಚ್ಚು ಗ್ಲೇಶಿಯಲ್ ಲೇಕ್ ಔಟ್​ಬರ್ಸ್ಟ್ 

ಫ್ಲಡ್ ಘಟನೆಗಳಿಗೆ ಹಿಮಕುಸಿತವೇ ಪ್ರಮುಖ ಕಾರಣವಾಗಿದೆ.

ಮಿತಿ ಮೀರಿದ ಮಳೆ : ಹಲವು ವೇಳೆ ಭಾರಿ ಮಳೆಯಿಂದಾಗಿ ಸರೋವರದಲ್ಲಿ ನೀರಿನ ಮಟ್ಟ ಹೆಚ್ಚಾಗಿ, ಅದರ ನೈಸರ್ಗಿಕ ತಡೆಗೋಡೆ ಒಡೆದುಹೋಗುತ್ತದೆ. 2025ರ ಜುಲೈನಲ್ಲಿ ಭೋಟೆಕೋಶಿ ನದಿಯಲ್ಲಿ ಉಂಟಾದ ಪ್ರವಾಹಕ್ಕೂ ಇದೇ ಕಾರಣವಾಗಿತ್ತು. ಮಳೆಯಿಂದಾಗಿ ಈ ಸರೋವರದಲ್ಲಿ ಅಪಾರ ನೀರು ಶೇಖರಣೆಯಾಗಿತ್ತು; ಆದರೆ 3 ತಿಂಗಳ ಹಿಂದಿನವರೆಗೂ ಅಲ್ಲಿ ಅಂತಹ ಯಾವುದೇ ಸರೋವರದ ಕುರುಹೇ ಇರಲಿಲ್ಲ. ಇವುಗಳಲ್ಲದೆ ಭೂಕಂಪಗಳು, ಪರ್ವತ ಪ್ರದೇಶಗಳಲ್ಲಿ ನಡೆಯುವ ಗಣಿಗಾರಿಕೆ, ಅರಣ್ಯನಾಶ ಮತ್ತು ಜಲವಿದ್ಯುತ್ ಯೋಜನೆಗಳಂತಹ ಮಾನವ ಚಟುವಟಿಕೆಗಳಿಂದಾಗಿ ಹಿಮನದಿ ಪ್ರದೇಶದ ನೈಸರ್ಗಿಕ ಸ್ಥಿರತೆ ಹಾಳಾಗಿ, ಸರೋವರದ ಒಡ್ಡು ಒಡೆಯುವ ಅಪಾಯವಿರುತ್ತದೆ.

ನೇಪಾಳ ಪ್ರವಾಹದಿಂದ ಭಾರತಕ್ಕೆ ತಕ್ಷಣದ ಅಪಾಯವಿದೆಯೇ?

ಭೋಟೆಕೋಶಿ ನದಿಯು ನೇಪಾಳದ ಉತ್ತರ ಭಾಗದಲ್ಲಿ ಚೀನಾ-ಟಿಬೆಟ್ ಗಡಿಯಿಂದ ಹುಟ್ಟುವ ಹಿಮಾಲಯದ ನದಿಯಾಗಿದೆ. ಇದು ಸಿಂಧುಪಾಲ್​ಚೋಕ್ ಪ್ರದೇಶದ ಮೂಲಕ ಹರಿಯುತ್ತದೆ.

ಇದು ಕೆಳಮುಖವಾಗಿ ಹರಿಯುತ್ತ ಸುನ್​ಕೋಶಿ ಮತ್ತು ಸಪ್ತಕೋಶಿ ನದಿಗಳನ್ನು ಸೇರುತ್ತದೆ. ನಂತರ ನೇಪಾಳದ ಹನುಮಾನ್ ನಗರದ ಬಳಿಯ ಭೀಮನಗರ ಬ್ಯಾರೇಜ್ ಮೂಲಕ ಬಿಹಾರವನ್ನು ಪ್ರವೇಶಿಸುತ್ತದೆ. ಇದು ಸುಪೌಲ್ ಜಿಲ್ಲೆಯ ಬೀರ್​ಪುರ ಸಮೀಪದಲ್ಲಿದೆ. ಬಿಹಾರಕ್ಕೆ ಪ್ರವೇಶಿಸಿದ ನಂತರ ಇದನ್ನು ‘ಕೋಸಿ ನದಿ’ ಎಂದು ಕರೆಯಲಾಗುತ್ತದೆ. ಇದನ್ನು ಬಿಹಾರದ ’ಕಣ್ಣೀರಿನ ನದಿ’ (ಶೋಕದ ನದಿ) ಎಂದೂ ಕರೆಯುತ್ತಾರೆ. ಇದು ಮುಂದೆ ಸಾಗಿ ಕಟಿಹಾರ್​ನ ಕುರ್ಸೆಲಾ ಬಳಿ ಗಂಗಾ ನದಿಯನ್ನು ಸೇರುತ್ತದೆ. ಕೋಸಿ ನದಿಗೆ ಕಮಲಾ ಮತ್ತು ಬಾಗ್ಮತಿ ನದಿಗಳ ನೀರೂ ಬಂದು ಸೇರುತ್ತದೆ. ಆದ್ದರಿಂದ, ಭೋಟೆಕೋಶಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ, ಆ ನೀರು ಸುನ್​ಕೋಶಿ ಮತ್ತು ನಂತರ ಕೋಸಿ ನದಿಯನ್ನು ಸೇರಬಹುದು. ಇದರಿಂದಾಗಿ ಸುಪೌಲ್, ಸಹರ್ಸಾ, ಮಧೇಪುರ ಮತ್ತು ಖಗಡಿಯಾ ಜಿಲ್ಲೆಗಳು ತೀವ್ರವಾಗಿ ಬಾಧಿತವಾಗಬಹುದು.

2008ರಲ್ಲಿ ನೇಪಾಳದ ಕುಸಹಾದಲ್ಲಿ ಕೋಸಿ ನದಿಯ ತಡೆಗೋಡೆ ಒಡೆದುಹೋಗಿತ್ತು. ಇದರ ಪರಿಣಾಮವಾಗಿ ಕೋಸಿ ನದಿಯು ತನ್ನ ನೈಸರ್ಗಿಕ ಹರಿವನ್ನು ಬಿಟ್ಟು, ನೂರಾರು ವರ್ಷಗಳ ಹಿಂದಿನ ಪೂರ್ವ ದಿಕ್ಕಿನ ಹಳೆಯ ಹಾದಿಯಲ್ಲಿ ಹರಿಯಲಾರಂಭಿಸಿತು. ನೀರು ಹಠಾತ್ತನೆ ಜನನಿಬಿಡ ಪ್ರದೇಶಗಳತ್ತ ತಿರುಗಿದ್ದರಿಂದ, ಬಿಹಾರದ 34 ಲಕ್ಷಕ್ಕೂ ಹೆಚ್ಚು ಜನರು ಯಾವುದೇ ಮುನ್ಸೂಚನೆಯಿಲ್ಲದೆ ಭೀಕರ ಪ್ರವಾಹಕ್ಕೆ ಸಿಲುಕಿದರು. ಆದರೆ, ಈ ಬಾರಿ ರಸುವಾದಲ್ಲಿ ಉಂಟಾದ ಭೂಕುಸಿತ ಅಥವಾ ಹಿಮ ಸರೋವರ ಒಡೆದ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದ್ದರೂ, ನದಿಯು ತನ್ನ ಮಾರ್ಗವನ್ನು ಬದಲಿಸಿಲ್ಲ. ಅದು ತನ್ನ ನಿಯಮಿತ ಹಾದಿಯಲ್ಲೇ ಹರಿಯುತ್ತಿದೆ. ಈ ಕಾರಣದಿಂದಾಗಿ ತಜ್ಞರು ತಡೆಗೋಡೆ ಒಡೆಯುವ ಸಾಧ್ಯತೆ ಇಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.

ನೀರಿನ ಭಾರಿ ಒತ್ತಡ ಮತ್ತು ಒಳಹರಿವಿನ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ಪಶ್ಚಿಮ ಚಂಪಾರಣ್​ನ ವಾಲ್ಮೀಕಿನಗರ ಗಂಡಕ್ ಬ್ಯಾರೇಜ್​ನ ಎಲ್ಲ 36 ಗೇಟ್​ಗಳನ್ನು ತೆರೆಯಲಾಗಿದೆ. ಬಿಹಾರದ ಪಶ್ಚಿಮ ಚಂಪಾರಣ್ (ಬಗಹಾ), ಪೂರ್ವ ಚಂಪಾರಣ್ (ಮೋತಿಹಾರಿ), ಗೋಪಾಲ್​ಗಂಜ್, ಸಾರಣ್, ಮುಜಫ್ಪರ್​ಪುರ, ವೈಶಾಲಿ, ಸೀತಾಮರ್ಹಿ ಮತ್ತು ಶಿವಹರ್ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೊಷಿಸಲಾಗಿದೆ.