ವೈರಲ್ ಆಗುತ್ತಿರುವ ಯುಪಿ ಹುಡುಗನ ಉತ್ತರ ಪತ್ರಿಕೆ
- ಪರೀಕ್ಷೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ಘಟ್ಟ
- ಉತ್ತರ ಪತ್ರಿಕೆಯಲ್ಲಿ 100 ರೂಪಾಯಿ ಇಟ್ಟು ಪಾಸ್ ಮಾಡಿ ಎಂದ ವಿದ್ಯಾರ್ಥಿ
- ಪತ್ರಿಕೆ ತುಂಬೆಲ್ಲಾ ಜೈ ಶ್ರೀ ರಾಮ್ ಘೋಷಣೆ
ಲಖನೌ: ಪರೀಕ್ಷೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ಘಟ್ಟವಾಗಿರುತ್ತದೆ. ವರ್ಷವಿಡೀ ಶಿಕ್ಷಕರು ಕಲಿಸಿದ ಪಾಠದ ಕುರಿತು ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಕಲಿಕಾ ಮಟ್ಟ ಯಾವ ಹಂತದಲ್ಲಿದೆ ಎಂದು ತಿಳಿಯಲು ಪರೀಕ್ಷೆಗಳು ಸಹಾಯಕವಾಗುತ್ತವೆ.
ಆದರೆ ಉತ್ತರ ಪ್ರದೇಶದ ವಿದ್ಯಾರ್ಥಿಯೊಬ್ಬ ಬರೆದ ಉತ್ತರಗಳನ್ನು ನೋಡಿದರೆ ನೀವು ನಗಬೇಕೋ ಅಥವಾ ಅಳಬೇಕೋ ಎಂಬ ಗೊಂದಲಕ್ಕೆ ಬೀಳುತ್ತೀರಿ. ಪರೀಕ್ಷಾ ಪತ್ರಿಕೆಯೊಳಗೆ ನೂರು ರೂಪಾಯಿ ನೋಟು ಇಟ್ಟು, ತನ್ನನ್ನು ಪಾಸ್ ಮಾಡುವಂತೆ ಈತ ಪರೀಕ್ಷಕರಿಗೆ ಲಂಚ ನೀಡಲು ಮುಂದಾದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ವೈರಲ್ (Viral Video) ಆಗುತ್ತಿದೆ.
ಪತ್ರಿಕೆ ತೆರೆದಾಗ ಶಿಕ್ಷಕನಿಗೆ ಕಾದಿತ್ತು ಶಾಕ್!
ಯುಪಿ ಬೋರ್ಡ್ ಇಂಟರ್ಮೀಡಿಯೇಟ್ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದಾಗ ಈ ಪ್ರಸಂಗ ಬೆಳಕಿಗೆ ಬಂದಿದೆ. ಶಿಕ್ಷಕರು ಒಂದು ಪತ್ರಿಕೆಯನ್ನು ತೆರೆದಾಗ ಅದರೊಳಗೆ ಹೊಚ್ಚ ಹೊಸ ನೂರು ರೂಪಾಯಿಯ ನೋಟು ಪ್ರತ್ಯಕ್ಷವಾಗಿದೆ.
ಅದರ ಜೊತೆಗೆ ವಿದ್ಯಾರ್ಥಿಯೊಂದು ಅಪ್ಪಣೆ ಕೂಡ ನೀಡಿದ್ದು, ದಯವಿಟ್ಟು ನನ್ನ ಪತ್ರಿಕೆಯನ್ನು ನಿಮ್ಮ ಮೇಲಿನ ಶಿಕ್ಷಕರಿಗೆ ತೋರಿಸಿ, ಅವರೇ ನನ್ನನ್ನು ಪಾಸ್ ಮಾಡುತ್ತಾರೆ ಎಂದು ಬರೆಯುವ ಮೂಲಕ ಮೌಲ್ಯಮಾಪಕರಿಗೇ ಚಳ್ಳೆಹಣ್ಣು ತಿನ್ನಿಸಲು ಈತ ಪ್ರಯತ್ನಿಸಿದ್ದಾನೆ.
ತನ್ನ ಮಾರ್ಕ್ಸ್ ತಾನೇ ಬರೆದುಕೊಂಡ ವಿದ್ಯಾರ್ಥಿ
ಈ ವಿದ್ಯಾರ್ಥಿಯ ಆತ್ಮವಿಶ್ವಾಸ ಎಷ್ಟಿತ್ತೆಂದರೆ, ಪೇಪರ್‌ನಲ್ಲಿ ಉತ್ತರಗಳನ್ನು ಬರೆಯುವ ಬದಲು ತಾನೇ ಅಂಕಗಳನ್ನು ಹಾಕಿಕೊಂಡಿದ್ದಾನೆ. ಪ್ರತಿಯ ಪುಟದಲ್ಲಿ 100ಕ್ಕೆ 100 ಎಂದು ಬರೆದುಕೊಂಡಿದ್ದು, ಇಡೀ ಪೇಪರ್ ಖಾಲಿಯಾಗಿದ್ದರೂ ತನಗೆ ಪೂರ್ಣ ಅಂಕ ಸಿಗಬೇಕು ಎಂದು ಈತ ಆಸೆ ಪಟ್ಟಿದ್ದು ಮಾತ್ರ ವಿಪರ್ಯಾಸ.
ಬಾಬರ್, ಶಿವಾಜಿ ಮತ್ತು ಜೈ ಶ್ರೀರಾಮ್!
ವಿಷಯಕ್ಕೆ ಸಂಬಂಧಿಸಿದ ಉತ್ತರಗಳನ್ನು ಬರೆಯುವ ಬದಲು ಆತ ಪೇಪರ್ ಪೂರ್ತಿ ಸ್ಲೋಗನ್‌ಗಳಿಂದ ತುಂಬಿಸಿದ್ದಾನೆ. ಬಾಬರ್ ಕಾ ಬಾಪ್ ಶಿವಾಜಿ ಮಹಾರಾಜ್ ಎಂದು ಬರೆಯುವ ಜೊತೆಗೆ, ಜೈ ಶ್ರೀ ರಾಮ್ ಮತ್ತು ಜೈ ಹನುಮಾನ್ ಎನ್ನುವ ಘೋಷಣೆಗಳನ್ನು ಬರೆದಿದ್ದಾನೆ. ಬಹುಶಃ ಪರೀಕ್ಷಕರು ಭಕ್ತರಾಗಿದ್ದರೆ ಇವುಗಳನ್ನು ನೋಡಿ ಪಾಸ್ ಮಾಡಬಹುದು ಎಂಬುದು ಈ ವಿದ್ಯಾರ್ಥಿಯ ಬಾಲಬುದ್ಧಿಯ ಪ್ಲಾನ್ ಆಗಿರಬಹುದು ಎನ್ನಲಾಗುತ್ತಿದೆ.
ವೈರಲ್ ಆದ ವಿಡಿಯೋ: ನೆಟ್ಟಿಗರ ಆಕ್ರೋಶ
@Nher_who ಎಂಬ ಖಾತೆಯಿಂದ ಹಂಚಿಕೊಳ್ಳಲಾದ ಈ ವೀಡಿಯೊ ಈಗಾಗಲೇ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದನ್ನು ನೋಡಿದ ನೆಟ್ಟಿಗರು ಎರಡು ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಇಂತಹ ಘಟನೆಗಳು ಯುಪಿಯಲ್ಲಿ ಮಾತ್ರ ಸಾಧ್ಯ ಎಂದು ಕಾಲೆಳೆದರೆ, ಗಂಭೀರ ಚಿಂತಕರು ಇದು ನಮ್ಮ ಶಿಕ್ಷಣ ವ್ಯವಸ್ಥೆಯ ಅಧಪತನಕ್ಕೆ ಸಾಕ್ಷಿ. ಮಕ್ಕಳು ಓದಿನ ಬದಲು ಇಂತಹ ಅಡ್ಡದಾರಿ ಹಿಡಿಯುತ್ತಿರುವುದು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ತಮಾಷೆಯಲ್ಲ
ಹಣ ಕೊಟ್ಟು ಪಾಸ್ ಆಗಲು ಪ್ರಯತ್ನಿಸುವುದು ಶಿಕ್ಷಣ ವ್ಯವಸ್ಥೆಗೆ ಮಾಡುವ ಅವಮಾನ ಮಾತ್ರವಲ್ಲ, ಇದು ಗಂಭೀರವಾದ ಶಿಸ್ತುಕ್ರಮಕ್ಕೆ ಅರ್ಹವಾದ ಅಪರಾಧವೂ ಹೌದು. ಇಂತಹ ವಿದ್ಯಾರ್ಥಿಗಳು ದೇಶದ ಭವಿಷ್ಯಕ್ಕೆ ಏನು ಕೊಡುಗೆ ನೀಡಬಲ್ಲರು ಎಂಬ ಪ್ರಶ್ನೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ,(ಏಜನ್ಸೀಸ್).