ಒಳಬಂದವರ ಕಥೆ ಮುಗೀತು! ನುಸುಳುಕೋರ ಮುಕ್ತ ಭಾರತವೇ ನಮ್ಮ ಗುರಿ! ಅಮಿತ್​ ಷಾ ಕೊಟ್ಟ ಡೆಡ್​ಲೈನ್​ಗೆ ನಡುಗಿದ ಬಾಂಗ್ಲಾ! 
ದೇಶ

ಒಳಬಂದವರ ಕಥೆ ಮುಗೀತು! ನುಸುಳುಕೋರ ಮುಕ್ತ ಭಾರತವೇ ನಮ್ಮ ಗುರಿ! ಅಮಿತ್​ ಷಾ ಕೊಟ್ಟ ಡೆಡ್​ಲೈನ್​ಗೆ ನಡುಗಿದ ಬಾಂಗ್ಲಾ! Amit Shah

ನವದೆಹಲಿ: ಭಾರತದ ಗಡಿಭಾಗಗಳಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಅಕ್ರಮ ಒಳನುಸುಳುವಿಕೆ ಹಾಗೂ ದೇಶದ ಗಡಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕೃತಕ ಜನಸಂಖ್ಯಾ ಬದಲಾವಣೆಯನ್ನು ತಡೆಯಲು ಕೇಂದ್ರ ಸರ್ಕಾರ ಭೀಕರ ಸಮರ ಸಾರಿದೆ. ನಾವು ಕೇವಲ ಒಳನುಸುಳುವಿಕೆಯನ್ನು ತಡೆಯುವುದಷ್ಟೇ ಅಲ್ಲ, ಈಗಾಗಲೇ ದೇಶದೊಳಗೆ ಅಕ್ರಮವಾಗಿ ನೆಲೆಸಿರುವ ಪ್ರತಿಯೊಬ್ಬ ನುಸುಳುಕೋರನನ್ನು ಒಂದೊಂದಾಗಿ ಪತ್ತೆಹಚ್ಚಿ ದೇಶದಿಂದ ಹೊರಹಾಕಲಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah) ಘೋಷಿಸಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ನಡೆದ ಗಡಿ ಭದ್ರತಾ ಪಡೆಯ (BSF) ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಾರ್ಷಿಕ ರುಸ್ತುಂಜಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವರು, ದೇಶದ ಜನಸಂಖ್ಯಾ ಸಮತೋಲನವನ್ನು ಕದಡುವ ಯಾವುದೇ ವ್ಯವಸ್ಥಿತ ಪಿತೂರಿಯನ್ನು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನುಸುಳುಕೋರರ ಮಟ್ಟಹಾಕಲು ಶೀಘ್ರದಲ್ಲೇ ಬರಲಿದೆ 'ವಿಶೇಷ ಮಿಷನ್'!

ನೆರೆಹೊರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಿಂದ ನಡೆಯುತ್ತಿರುವ ಅಕ್ರಮ ವಲಸೆಗೆ ಶಾಶ್ವತ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ರಾಷ್ಟ್ರ ಮಟ್ಟದ ವಿಶೇಷ ಮಿಷನ್ ಒಂದನ್ನು ಅಧಿಕೃತವಾಗಿ ಘೋಷಿಸಲಿದೆ ಎಂದು ಅಮಿತ್ ಷಾ ತಿಳಿಸಿದ್ದಾರೆ.
ಗಡಿಭಾಗಗಳಲ್ಲಿ ಅಕ್ರಮ ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ಶೂನ್ಯಕ್ಕೆ ತರುವುದು ಮತ್ತು ಈಗಾಗಲೇ ಭಾರತದ ವಿವಿಧ ಭಾಗಗಳಲ್ಲಿ ಅಡಗಿರುವ ವಿದೇಶಿ ನಾಗರಿಕರನ್ನು ಗುರುತಿಸಿ ಗಡೀಪಾರು ಮಾಡುವುದು ಈ ಮಿಷನ್‌ನ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಬಿಎಸ್ಎಫ್ ಅಧಿಕಾರಿಗಳು ಸ್ಥಳೀಯ ಜಿಲ್ಲಾಡಳಿತ, ಗ್ರಾಮದ ಪ್ರಮುಖರು ಮತ್ತು ಸ್ಥಳೀಯ ಪೊಲೀಸರೊಂದಿಗೆ ನಿರಂತರ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದು ಅಮಿತ್​ ಷಾ ಹೇಳಿದ್ದಾರೆ.
ಬಂಗಾಳ, ಅಸ್ಸಾಂ ಮತ್ತು ತ್ರಿಪುರಾ ಸಿಎಂಗಳ ಮಹತ್ವದ ಜಂಟಿ ಸಭೆ!
ಮುಂದುವರೆದು ಮಾತನಾಡಿ ಷಾ, ಮುಂಬರುವ ದಿನಗಳಲ್ಲಿ ಬಾಂಗ್ಲಾದೇಶದ ಗಡಿಯಲ್ಲಿ ಬಿಎಸ್ಎಫ್‌ನ ಪಾತ್ರ ಮತ್ತಷ್ಟು ನಿರ್ಣಾಯಕವಾಗಲಿದೆ. ಅಲ್ಲದೆ, ಗಡಿಭಾಗದ 3 ಪ್ರಮುಖ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಈಗ ಬಿಜೆಪಿ ಸರ್ಕಾರಗಳೇ ಇರುವುದರಿಂದ ನುಸುಳುವಿಕೆ ತಡೆ ನೀತಿಗೆ ಆನೆಬಲ ಬಂದಿದೆ ಎಂದರು.
ಅಸ್ಸಾಂ ಮತ್ತು ತ್ರಿಪುರಾದಲ್ಲಿ ಈಗಾಗಲೇ ಬಿಜೆಪಿ ಆಡಳಿತವಿತ್ತು, ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಐತಿಹಾಸಿಕ ಜಯ ಸಾಧಿಸಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ಮೂರೂ ರಾಜ್ಯಗಳು ಒಳನುಸುಳುವಿಕೆಯನ್ನು ಕಟುವಾಗಿ ವಿರೋಧಿಸುವ ಸಿದ್ಧಾಂತವನ್ನು ಹೊಂದಿರುವುದರಿಂದ, ಕೇಂದ್ರ ಗೃಹ ಸಚಿವಾಲಯವು ಶೀಘ್ರದಲ್ಲೇ ಈ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಉನ್ನತ ಮಟ್ಟದ ಜಂಟಿ ಸಭೆಯನ್ನು ಕರೆಯಲಿದೆ. ಈ ಸಭೆಯಲ್ಲಿ ನುಸುಳುಕೋರರನ್ನು ಗುರುತಿಸಿ ಗಡೀಪಾರು ಮಾಡಲು ಜಂಟಿ ಕಾರ್ಯಾಚರಣೆಯ ಬ್ಲೂಪ್ರಿಂಟ್ ಸಿದ್ಧಪಡಿಸಲಾಗುವುದು ಎಂದು ಅಮಿತ್ ಷಾ ಮಾಹಿತಿ ನೀಡಿದ್ದಾರೆ.

ಭೂ ಗಡಿಗೆ ತಂತ್ರಜ್ಞಾನದ ಕವಚ: ಜಾರಿಯಾಗಲಿದೆ 'ಸ್ಮಾರ್ಟ್ ಬಾರ್ಡರ್' ಯೋಜನೆ!

ಪಾಕಿಸ್ತಾನ ಮತ್ತು ಬಾಂಗ್ಲಾದೊಂದಿಗೆ ಭಾರತ ಹೊಂದಿರುವ ಸುಮಾರು 6,000 ಕಿಲೋಮೀಟರ್ ಉದ್ದದ ಗಡಿಯನ್ನು ಸಂಪೂರ್ಣವಾಗಿ ಅಭೇದ್ಯಗೊಳಿಸಲು ಮುಂದಿನ ಒಂದು ವರ್ಷದೊಳಗೆ ಕೇಂದ್ರ ಸರ್ಕಾರವು ಹೈಟೆಕ್ ಸ್ಮಾರ್ಟ್ ಬಾರ್ಡರ್ ಯೋಜನೆಯನ್ನು ಪ್ರಾರಂಭಿಸಲಿದೆ. ಮುಳ್ಳುತಂತಿ ಬೇಲಿಗಳ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನಗಳಾದ ಡ್ರೋನ್‌ಗಳು, ಹೈ-ರೆಸಲ್ಯೂಶನ್ ರೇಡಾರ್‌ಗಳು, ಸ್ಮಾರ್ಟ್ ಥರ್ಮಲ್ ಕ್ಯಾಮೆರಾಗಳು ಮತ್ತು ಸುಧಾರಿತ ತಾಂತ್ರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಗಡಿಯ ಪ್ರತಿಯೊಂದು ಇಂಚು ಜಾಗದ ಮೇಲೆಯೂ ಕಣ್ಣಿಡಲಾಗುವುದು. ಗಡಿ ಭದ್ರತೆಯಲ್ಲಿರುವ ಸಣ್ಣ ಸಣ್ಣ ಲೋಪದೋಷಗಳನ್ನು ಪ್ಲಗ್ ಮಾಡಲು ಈ ಯೋಜನೆ ನೆರವಾಗಲಿದೆ ಎಂದು ಅಮಿತ್​ ಷಾ ತಿಳಿಸಿದ್ದಾರೆ.

ನಕ್ಸಲ್ ಮುಕ್ತ ಭಾರತದಂತೆ, ಈಗ ನುಸುಳುಕೋರ ಮುಕ್ತ ಭಾರತದ ಗುರಿ!

ತಮ್ಮ ಭಾಷಣದಲ್ಲಿ ದೇಶದ ಆಂತರಿಕ ಭದ್ರತೆಯ ಯಶಸ್ಸನ್ನು ನೆನಪಿಸಿದ ಅಮಿತ್ ಷಾ, ನಾವು ನಕ್ಸಲಿಸಂ ವಿರುದ್ಧ ಹೋರಾಟ ಆರಂಭಿಸಿದಾಗ, ಹಲವು ನಿವೃತ್ತ ಪೊಲೀಸ್ ಅಧಿಕಾರಿಗಳು ನಕ್ಸಲೀಯರನ್ನು ಮಟ್ಟಹಾಕುವುದು ಅಸಾಧ್ಯ ಎಂದು ಪ್ರಧಾನಿ ಮೋದಿಯವರಿಗೂ ಮತ್ತು ನನಗೂ ಹೆದರಿಸಿದ್ದರು. ಆದರೆ ನಮ್ಮ ಸರ್ಕಾರ ಹಿಂದೆ ಸರಿಯಲಿಲ್ಲ. ಐದು ದಶಕಗಳ ಭೀಕರ ನಕ್ಸಲ್ ಸಮಸ್ಯೆಯನ್ನು ನಾವು ದೇಶದಲ್ಲಿ ಕೊನೆಗಾಣಿಸಿದ್ದೇವೆ. ಇಂದು ಭಾರತ ಸಂಪೂರ್ಣ ನಕ್ಸಲ್ ಮುಕ್ತವಾಗಿದೆ. ಅದೇ ತೀವ್ರತೆ ಮತ್ತು ಆಕ್ರಮಣಕಾರಿ ನಿಲುವನ್ನು ಈಗ ಬಿಎಸ್ಎಫ್ ಪಡೆಗಳು ಅಕ್ರಮ ಒಳನುಸುಳುವಿಕೆಯ ವಿರುದ್ಧವೂ ಪ್ರದರ್ಶಿಸಬೇಕಾದ ಸಮಯ ಬಂದಿದೆ ಎಂದು ಗೃಹ ಸಚಿವರು ಗುಡುಗಿದ್ದಾರೆ.
ಗಡಿಯ ರಸ್ತೆಗಳು ಮತ್ತು ನುಸುಳುವಿಕೆಯ ರಹಸ್ಯ ಮಾರ್ಗಗಳನ್ನು ಒಂದೊಂದಾಗಿ ಮುಚ್ಚುವ ಮೂಲಕ ದೇಶದ ಆಂತರಿಕ ಸುರಕ್ಷತೆಯನ್ನು ಕಾಪಾಡಲು ಬಿಎಸ್ಎಫ್ ಕಟಿಬದ್ಧವಾಗಿ ನಿಲ್ಲಬೇಕು ಎಂದು ಅಮಿತ್​ ಷಾ ಹೇಳಿದ್ದಾರೆ,(ಏಜೆನ್ಸೀಸ್​).