ಷೇರುಪೇಟೆ 
ದೇಶ

3 ದಿನಗಳ ಲಾಭಕ್ಕೆ ಬ್ರೇಕ್​! ಹಬ್ಬದ ದಿನವೇ ಷೇರುಪೇಟೆ ಅಲ್ಲೋಲ-ಕಲ್ಲೋಲ; ಭಾರೀ ಕುಸಿತಕ್ಕೆ ಇವೇ ನೋಡಿ ಕಾರಣಗಳು

ಪ್ರಮುಖ ಮುಖ್ಯಾಂಶಗಳು

  • ಮೂರು ದಿನಗಳ ಲಾಭಕ್ಕೆ ಬಿತ್ತು ಬ್ರೇಕ್​
  • ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ-ಕಲ್ಲೋಲ
  • 14 ಲಕ್ಷ ಕೋಟಿ ರೂ. ನಷ್ಟ, ಹೂಡಿಕೆದಾರರಿಗೆ ಕಾಡಿದ ತಲೆಬಿಸಿ
ನವದೆಹಲಿ: ಯುಗಾದಿ ಹಬ್ಬದ ದಿನವೇ ಷೇರು ಮಾರುಕಟ್ಟೆಯಲ್ಲಿ (Stock Market) ಭಾರೀ ಕುಸಿತವಾಗಿದ್ದು, ಸತತ ಮೂರು ದಿನಗಳಿಂದ ಲಾಭದಲ್ಲಿದ್ದ ಷೇರುಪೇಟೆ ಇಂದು (ಮಾ.19) ದಿಢೀರ್​ ಇಳಿಕೆ ಕಂಡಿದೆ. ಅದರಲ್ಲೂ ಹೂಡಿಕೆದಾರರಿಗೆ ಹೆಚ್ಚಿನ ನಷ್ಟವನ್ನು ಉಂಟುಮಾಡಿ, ದೊಡ್ಡ ತಲೆನೋವು ತಂದಿಟ್ಟಿದೆ. ಸೆನ್ಸೆಕ್ಸ್ 1953, ನಿಫ್ಟಿ 453 ಮತ್ತು ಸೆನ್ಸೆಕ್ಸ್ 2400 ಪಾಯಿಂಟ್ಸ್​ ಹೆಚ್ಚು ಕುಸಿದರೆ, ಎನ್​ಎಸ್​ಇ 800 ಅಂಕಗಳಷ್ಟು ಕುಸಿದಿದೆ. ಇದು ಮಧ್ಯಾಹ್ನ 3 ಗಂಟೆಯೊಳಗೆ ಎಂಬುದು ಇಲ್ಲಿ ಗಮನಿಸಿಬೇಕಾದ ವಿಷಯ.

ಮಧ್ಯಪ್ರಾಚ್ಯ ಉದ್ವಿಗ್ನ

ನಿಫ್ಟಿ, ಬ್ಯಾಂಕ್ ನಿಫ್ಟಿ ಮತ್ತು ಸೆನ್ಸೆಕ್ಸ್ ತೀವ್ರವಾಗಿ ಕುಸಿದಿವೆ. ಈ ಭಾರೀ ಕುಸಿತಕ್ಕೆ ಮಧ್ಯಪ್ರಾಚ್ಯ ಉದ್ವಿಗ್ನತೆಯೇ ಬಹುಮುಖ್ಯ ಕಾರಣ. ಅಮೆರಿಕ-ಇಸ್ರೇಲ್​ ಮತ್ತು ಇರಾನ್​ ಮಧ್ಯೆ ನಡೆಯುತ್ತಿರುವ ಭೀಕರ ಯುದ್ಧವು ಷೇರುಪೇಟೆಯನ್ನೇ ನಡುಗಿಸುತ್ತಿದೆ. ನಿರ್ಣಾಯಕ ರಾಸ್ ಲಫಾನ್ ಕೈಗಾರಿಕಾ ನಗರದ ಮೇಲೆ ಇರಾನ್ ಮತ್ತು ಕತಾರ್ ನಡೆಸಿದ ಕ್ಷಿಪಣಿ ದಾಳಿಗಳು ಜಾಗತಿಕ ಮಾರುಕಟ್ಟೆಗಳನ್ನು ಅಲುಗಾಡಿಸುತ್ತಿವೆ.

ಯುದ್ಧದ ಹೊಡೆತ

ಇದು ಭಾರತದಂತಹ ದೇಶಗಳ ಇಂಧನ ಭದ್ರತೆಯ ಮೇಲೂ ಪರಿಣಾಮ ಬೀರುತ್ತಿದೆ. ಭಾರತವು ತನ್ನ ಎಲ್‌ಎನ್‌ಜಿ ಅವಶ್ಯಕತೆಗಳಲ್ಲಿ ಶೇ.47ರಷ್ಟು ಕತಾರ್‌ನಿಂದ ಆಮದು ಮಾಡಿಕೊಳ್ಳುತ್ತದೆ. ಈ ಪೂರೈಕೆಯಲ್ಲಿ ಅಡ್ಡಿಯಾಗುವ ಭಯ ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ. ಅಷ್ಟಕ್ಕೂ, ಷೇರು ಮಾರುಕಟ್ಟೆ ದಿಢೀರ್ ಕುಸಿತಕ್ಕೆ ಏನೆಲ್ಲ ಕಾರಣಗಳು? ಎಂಬುದರ ವಿವರ ಹೀಗಿದೆ ನೋಡಿ.

ಗಗನಕ್ಕೆ ಕಚ್ಚಾ ತೈಲ ಬೆಲೆಗಳು

ತೈಲ ನಿಕ್ಷೇಪಗಳ ಮೇಲಿನ ದಾಳಿಗಳು ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.3ರಷ್ಟು ಏರಿಕೆಯಾಗಿ 111 ಡಾಲರ್​ಗೆ ತಲುಪಿದೆ. ಆಯಿಲ್​ ದರಗಳು ಏರಿದರೆ, ಆಮದನ್ನು ಅವಲಂಬಿಸಿರುವ ಭಾರತದಂತಹ ದೇಶಗಳಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ಇದು ಕಂಪನಿಗಳ ಲಾಭದ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದು ಪ್ರಮುಖ ಕಾರಣವೆಂದರೆ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 92.89ಕ್ಕೆ ಕುಸಿದಿರುವುದು. ಕರೆನ್ಸಿ ದುರ್ಬಲಗೊಳ್ಳುವುದರಿಂದ ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಭಾರತೀಯ ಮಾರುಕಟ್ಟೆಗಳಿಂದ ಹೂಡಿಕೆಗಳನ್ನು ತ್ವರಿತವಾಗಿ ಹಿಂತೆಗೆದುಕೊಳ್ಳಲು ಪ್ರಮುಖ ಕಾರಣ ಎಂಬುದು ಗಮನಾರ್ಹ.
ಯುಎಸ್ ಫೆಡ್ ಬಡ್ಡಿದರಗಳನ್ನು ಕಡಿತಗೊಳಿಸುವಲ್ಲಿ ವಿಫಲತೆ ಮತ್ತು ಯುದ್ಧದಿಂದಾಗಿ ಬೆಲೆಗಳು ಏರಿಕೆಯಾಗುತ್ತವೆ ಎಂಬ ಎಚ್ಚರಿಕೆಗಳು ಯುಎಸ್ ಮಾರುಕಟ್ಟೆಗಳಿಗೆ ಪೆಟ್ಟು ನೀಡಿವೆ. ಇದರ ಪರಿಣಾಮವಾಗಿ, ಜಪಾನೀಸ್ (ನಿಕ್ಕಿ) ಮತ್ತು ದಕ್ಷಿಣ ಕೊರಿಯಾ (ಕೋಸ್ಪಿ) ಮಾರುಕಟ್ಟೆಗಳು ಸಹ ಶೇ.2ಕ್ಕಿಂತ ಹೆಚ್ಚು ನಷ್ಟವನ್ನು ಎದುರಿಸಿವೆ. ಇದು ಭಾರತೀಯ ಮಾರುಕಟ್ಟೆಗಳ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ.
ಕಳೆದ ಮೂರು ದಿನಗಳಿಂದ ಮಾರುಕಟ್ಟೆಗಳು ಲಾಭದಲ್ಲಿತ್ತು. ಆದರೆ, ಅನಿಶ್ಚಿತತೆಯಿಂದಾಗಿ ಹೂಡಿಕೆದಾರರು ತಮ್ಮ ಲಾಭವನ್ನು ಹಿಂಪಡೆಯಲು ಮುಂದಾದರು. ಇದು ಮಾರಾಟದ ಒತ್ತಡವನ್ನು ಹೆಚ್ಚಿಸಿತು ಮತ್ತು ಸೂಚ್ಯಂಕಗಳು ಕುಸಿತಕ್ಕೆ ಕಾರಣವಾಯಿತು. ಕೇವಲ ಒಂದು ದಿನದಲ್ಲಿ, 14 ಲಕ್ಷ ಕೋಟಿ ರೂ. ಹೂಡಿಕೆದಾರರ ಸಂಪತ್ತು ಗಾಳಿಯಲ್ಲಿ ಆವಿಯಾಗಿದೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).