Cockroach  
ದೇಶ

ಎಲ್ಲೆಲ್ಲೂ ‘ಜಿರಳೆ’ಯದ್ದೇ ಸದ್ದು! Cockroach ಮೊದಲು,ಯಾವ ಪ್ರಾಣಿಗಳ ಹೆಸರಿನಲ್ಲಿ ರಾಜಕೀಯ ಪಕ್ಷಗಳನ್ನು ರಚಿಸಲಾಗಿತ್ತು?

ಬೆಂಗಳೂರು: ಭಾರತೀಯ ರಾಜಕಾರಣದಲ್ಲಿ ಚುನಾವಣೆ ಎಂದರೆ ಕೇವಲ ಭಾಷಣ, ರ‍್ಯಾಲಿಗಳಲ್ಲ, ಅಲ್ಲಿ ಬಳಸುವ ಗುರುತುಗಳೂ ಸಹ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತವೆ. ಸಾಮಾನ್ಯವಾಗಿ ಹಸ್ತ, ಕಮಲ, ಪೊರಕೆ, ಸೂರ್ಯ ಮುಂತಾದ ಚಿಹ್ನೆಗಳನ್ನು ನಾವು ದಿನಾ ನೋಡುತ್ತೇವೆ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ‘ಜಿರಳೆ ಜನತಾ ಪಾರ್ಟಿ’ (Cockroach Janta Party) ಎಂಬ ವಿಲಕ್ಷಣ ಹೆಸರಿನ ಪಕ್ಷವೊಂದು(cockroach) ಸೋಷಿಯಲ್​​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಇದರ ಬೆನ್ನಲ್ಲೇ, ಭಾರತದ ಚುನಾವಣಾ ಇತಿಹಾಸದಲ್ಲಿ ಪ್ರಾಣಿ-ಪಕ್ಷಿಗಳ ಹೆಸರಿನಲ್ಲಿ ಮತ್ತು ಅವುಗಳ ಗುರುತುಗಳನ್ನು ಇಟ್ಟುಕೊಂಡು ಯಾವೆಲ್ಲಾ ರಾಜಕೀಯ ಪಕ್ಷಗಳು ಹುಟ್ಟಿಕೊಂಡಿದ್ದವು ಎಂಬ ಕುತೂಹಲಕಾರಿ ಚರ್ಚೆ ಈಗ ಮುಂಚೂಣಿಗೆ ಬಂದಿದೆ.
ಡಿಜಿಟಲ್ ಕ್ರಿಯೇಟರ್ ಅಭಿಜೀತ್ ದಿಪ್ಕೆ ಅವರು ಹಂಚಿಕೊಂಡಿರುವ ‘ಜಿರಳೆ ಜನತಾ ಪಾರ್ಟಿ’ ಎಂಬ ಕಾಲ್ಪನಿಕ ಪೋಸ್ಟರ್ ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ. ಜನರು ಇದನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದರೂ, ಭಾರತದ ನಿಜವಾದ ರಾಜಕೀಯ ಇತಿಹಾಸವನ್ನು ಕೆದಕಿದರೆ ಪ್ರಾಣಿ ಹಾಗೂ ಪಕ್ಷಿಗಳ ಹೆಸರಿನಲ್ಲಿ ಅಧಿಕೃತ ಪಕ್ಷಗಳು ಅಸ್ತಿತ್ವದಲ್ಲಿದ್ದ ರೋಚಕ ಸಂಗತಿಗಳು ಹೊರಬರುತ್ತವೆ.

ದೇಶದ ಆನೆ, ಸಿಂಹಗಳ ಪಕ್ಷಗಳು!

ಭಾರತದ ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾದ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಾರ್ಟಿ (BSP) ‘ಆನೆ’ ಚಿಹ್ನೆಯನ್ನು ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತು.ಆದರೆ, ಈ ಹಿಂದೆ ಸಿಂಹ, ಕರಡಿ ಮತ್ತು ಕೋಳಿಗಳಂತಹ ವಿಭಿನ್ನ ಪ್ರಾಣಿ-ಪಕ್ಷಿಗಳ ಗುರುತುಗಳನ್ನು ಹೊಂದಿದ್ದ ಪಕ್ಷಗಳೂ ನಮ್ಮ ನಡುವೆ ಇದ್ದವು ಎಂಬುದು ಹಲವರಿಗೆ ತಿಳಿದಿಲ್ಲ.

ಆ ಪಕ್ಷಗಳು ಯಾವುವು ಗೊತ್ತಾ?

ಮಹಾರಾಷ್ಟ್ರದ ಇತಿಹಾಸವನ್ನು ನೋಡಿದರೆ, ಅಲ್ಲಿ ಹಿಂದೆ ‘ಪೆಸೆಂಟ್ಸ್ ಅಂಡ್ ವರ್ಕರ್ಸ್ ಪಾರ್ಟಿ ಆಫ್ ಇಂಡಿಯಾ’ ಇತ್ತು. ಇದು ತನ್ನ ಚುನಾವಣಾ ಚಿಹ್ನೆಯಾಗಿ ದೈತ್ಯ ‘ಸಿಂಹ’ವನ್ನು ಹೊಂದಿತ್ತು. ಅದೇ ರೀತಿ, ಬಿಹಾರ ಮತ್ತು ಜಾರ್ಖಂಡ್ ಭಾಗದಲ್ಲಿ ದಲಿತರು ಮತ್ತು ಶೋಷಿತರನ್ನು ಒಟ್ಟುಗೂಡಿಸಲು ಹುಟ್ಟಿಕೊಂಡಿದ್ದ ‘ಜಾರ್ಖಂಡ್ ಪಾರ್ಟಿ’ಯು ಜನಪ್ರಿಯ ‘ಕೋಳಿ’ (Rooster) ಚಿಹ್ನೆಯನ್ನು ಬಳಸಿ ಅಖಾಡಕ್ಕಿಳಿದಿತ್ತು.

ಪ್ರಾಣಿಗಳ ಚಿಹ್ನೆಗಳಿಗೆ ಬ್ರೇಕ್ ಬಿದ್ದಿದ್ದು ಏಕೆ?

ಒಂದು ಕಾಲದಲ್ಲಿ ಚುನಾವಣಾ ಆಯೋಗವು ಮುಕ್ತವಾಗಿ ಪ್ರಾಣಿಗಳ ಚಿಹ್ನೆಗಳನ್ನು ಹಂಚುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೊಸ ಪಕ್ಷಗಳಿಗೆ ಪ್ರಾಣಿಗಳ ಗುರುತನ್ನು ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದಕ್ಕೆ ಪ್ರಮುಖ ಕಾರಣ ಪ್ರಾಣಿ ದಯಾ ಸಂಘಗಳ ಆಕ್ಷೇಪ. ಚುನಾವಣೆ ಪ್ರಚಾರದ ವೇಳೆ ರಾಜಕೀಯ ಪಕ್ಷಗಳು ಆನೆ, ಕುದುರೆ, ಒಂಟೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತವೆ ಮತ್ತು ಅವುಗಳಿಗೆ ಹಿಂಸೆ ನೀಡುತ್ತವೆ ಎಂಬ ಕಾರಣಕ್ಕೆ ಆಯೋಗ ಈ ನಿಯಮ ತಂದಿದೆ.

ಮುಕ್ತ ಚಿಹ್ನೆಗಳ ಪಟ್ಟಿಯಲ್ಲಿವೆ ಹೊಸ ವಸ್ತುಗಳು

ಪ್ರಸ್ತುತ ಚುನಾವಣಾ ಆಯೋಗವು ಹೊಸ ಮತ್ತು ಸಣ್ಣ ಪಕ್ಷಗಳಿಗೆ ಪ್ರಾಣಿಗಳ ಬದಲಾಗಿ ಗೃಹೋಪಯೋಗಿ ವಸ್ತುಗಳು ಅಥವಾ ದೈನಂದಿನ ವಸ್ತುಗಳನ್ನು ಮುಕ್ತ ಚಿಹ್ನೆಗಳಾಗಿ (Free Symbols) ನೀಡುತ್ತಿದೆ. ಇದೀಗ ಕಂಪ್ಯೂಟರ್, ಸೀಲಿಂಗ್ ಫ್ಯಾನ್, ಬ್ಯಾಟ್, ಆಟೋ ರಿಕ್ಷಾ ಮುಂತಾದ ಆಧುನಿಕ ವಸ್ತುಗಳು ಬ್ಯಾಲೆಟ್ ಪೇಪರ್ ಹಾಗೂ ಇವಿಎಂ ಯಂತ್ರಗಳಲ್ಲಿ ಕಾಣಿಸಿಕೊಳ್ಳುತ್ತಿವೆ.
ಸೋಶಿಯಲ್ ಮೀಡಿಯಾದಲ್ಲಿ ಜಿರಳೆ ಪಾರ್ಟಿ ಕೇವಲ ನಗುವಿಗೆ ಸೀಮಿತವಾಗಿದ್ದರೂ, ಭಾರತದ ಪ್ರಜಾಪ್ರಭುತ್ವದಲ್ಲಿ ಪ್ರಾಣಿ-ಪಕ್ಷಿಗಳ ಚಿಹ್ನೆಗಳು ತಳಮಟ್ಟದ ಜನರನ್ನು ತಲುಪಲು ಎಷ್ಟು ನೆರವಾಗಿದ್ದವು ಎಂಬುದಕ್ಕೆ ಇತಿಹಾಸವೇ ಸಾಕ್ಷಿ,(ಏಜೆನ್ಸೀಸ್​).