ಇಷ್ಟು ದಿನ ಸರಸ್ವತಿ ವಿಗ್ರಹವೆಂದು ಭಾವಿಸಿದ್ದ ಶಿಲ್ಪದ ರಹಸ್ಯ ಬಯಲು: 3D ಮ್ಯಾಪಿಂಗ್‌ನಲ್ಲಿ ಸಿಕ್ಕಿತು ಅಚ್ಚರಿಯ ತಿರುವು! Sculpture 
ದೇಶ

ಇಷ್ಟು ದಿನ ಸರಸ್ವತಿ ವಿಗ್ರಹವೆಂದು ಭಾವಿಸಿದ್ದ ಶಿಲ್ಪದ ರಹಸ್ಯ ಬಯಲು: 3D ಮ್ಯಾಪಿಂಗ್‌ನಲ್ಲಿ ಸಿಕ್ಕಿತು ಅಚ್ಚರಿಯ ತಿರುವು! Sculpture

ಪ್ರಮುಖ ಮುಖ್ಯಾಂಶಗಳು

  • ಸರಸ್ವತಿ ವಿಗ್ರಹವೆಂದು ಭಾವಿಸಿದ್ದ ಶಿಲ್ಪದ ರಹಸ್ಯ ಬಿಚ್ಚಿಟ್ಟ ಪುರಾತತ್ವ ಇಲಾಖೆಯ 3D ಮ್ಯಾಪಿಂಗ್
  • ಮ್ಯೂಸಿಯಂನಲ್ಲಿದ್ದ ಅಪರೂಪದ ಸರಸ್ವತಿ ವಿಗ್ರಹ ವಾಸ್ತವವಾಗಿ ಗಾಯತ್ರಿ ದೇವಿ ಎಂದು ಸಾಬೀತು
  • ಆಧುನಿಕ ತಂತ್ರಜ್ಞಾನದ ತಪಾಸಣೆಯಲ್ಲಿ ಬಯಲಾಯ್ತು 12ನೇ ಶತಮಾನದ ಶಿಲ್ಪದ ನಿಜವಾದ ಇತಿಹಾಸ
  • ವೀಣೆಯಲ್ಲ ಅದು ಕಮಲದ ಹೂವು ಎಂದು ಪತ್ತೆಹಚ್ಚಿ ವಿಗ್ರಹದ ಗುರುತು ಬದಲಿಸಿದ ಸಂಶೋಧಕರು
ಭೋಪಾಲ್‌: ಮಧ್ಯಪ್ರದೇಶ ವಸ್ತುಸಂಗ್ರಹಾಲಯದಲ್ಲಿದ್ದ ದಶಕಗಳಷ್ಟು ಹಳೆಯದಾದ ಧಾರ್ಮಿಕ ನಂಬಿಕೆಯೊಂದಕ್ಕೆ ಪುರಾತತ್ವಶಾಸ್ತ್ರಜ್ಞರು ಇದೀಗ ಹೊಸತಿರುವು ನೀಡಿದ್ದಾರೆ! ಇಷ್ಟು ದಿನ ಜ್ಞಾನದೇವತೆ ಸರಸ್ವತಿಯದ್ದೆಂದು ಭಾವಿಸಲಾಗಿದ್ದ ಅಪರೂಪದ 12ನೇ ಶತಮಾನದ ಭವ್ಯ ಶಿಲ್ಪವೊಂದು ( Sculpture ), ವಾಸ್ತವವಾಗಿ ಗಾಯತ್ರಿ ದೇವಿಯ ವಿಗ್ರಹ ಎಂಬ ರೋಚಕ ಸತ್ಯ ಈಗ ಬಯಲಾಗಿದೆ. ಈ ಅದ್ಭುತ ಆವಿಷ್ಕಾರವು ಇತಿಹಾಸ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಪ್ರಸ್ತುತ ಭಾರತದಲ್ಲೇ ಲಭ್ಯವಿರುವ ಗಾಯತ್ರಿ ದೇವಿಯ ಅತ್ಯಂತ ಅಪರೂಪದ ಮತ್ತು ವಿಶಿಷ್ಟ ಶಿಲ್ಪಕಲಾಕೃತಿಗಳಲ್ಲಿ ಪ್ರಮುಖವಾದದ್ದು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಮ್ಯೂಸಿಯಂ ಅಧಿಕಾರಿಗಳು ಈ ವಿಗ್ರಹದ ನೈಜತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ನಂತರ, ಪುರಾತತ್ವ ಇಲಾಖೆಯು ಇದರ ಬಗ್ಗೆ ಸುದೀರ್ಘ ಹಾಗೂ ವಿವರವಾದ ತಪಾಸಣೆಯನ್ನು ಕೈಗೊಂಡಿತು. ಕೆಂಪು ಮರಳುಗಲ್ಲಿನಿಂದ ಕೆತ್ತಲ್ಪಟ್ಟಿರುವ ಈ ಅದ್ಭುತ ಶಿಲ್ಪವು ಆರಂಭದಲ್ಲಿ ಧಾರ್ ವಸ್ತುಸಂಗ್ರಹಾಲಯದಲ್ಲಿತ್ತು. ಆದರೆ, ನಂತರದ ದಿನಗಳಲ್ಲಿ ಇದನ್ನು ರಾಜ್ಯ ವಸ್ತುಸಂಗ್ರಹಾಲಯಕ್ಕೆ ವರ್ಗಾಯಿಸಲಾಯಿತು.
ತಪಾಸಣೆಯ ಸಮಯದಲ್ಲಿ ಸಂಶೋಧಕರ ಗಮನ ಸೆಳೆದ ಮೊದಲ ಪ್ರಮುಖ ಅಂಶವೆಂದರೆ, ಜ್ಞಾನದೇವತೆ ಸರಸ್ವತಿಯ ಮುಖ್ಯ ಗುರುತುಗಳಲ್ಲಿ ಒಂದಾದ 'ವೀಣೆ' ಈ ವಿಗ್ರಹದಲ್ಲಿ ಇಲ್ಲದಿರುವುದು. ಶತಮಾನಗಳ ಹಿಂದೆ ಈ ವಿಗ್ರಹದ ಮೇಲಿನ ಒಂದು ಹಸ್ತವು ಮುರಿದುಹೋಗಿದ್ದರಿಂದ, ಆ ಮುರಿದ ಕೈನಲ್ಲಿ ವೀಣೆಯನ್ನು ಹಿಡಿದಿರಬಹುದು ಎಂದೇ ಇಷ್ಟು ದಿನಗಳ ಕಾಲ ನಂಬಲಾಗಿತ್ತು.
ಆದರೆ, ಆಧುನಿಕ ತಂತ್ರಜ್ಞಾನಗಳಾದ ಹೈ-ರೆಸಲ್ಯೂಷನ್ ಡಿಜಿಟಲ್ ರೆಕಾರ್ಡಿಂಗ್ ಮತ್ತು 3D ಮ್ಯಾಪಿಂಗ್ ಬಳಸಿ ನಡೆಸಿದ ಆಳವಾದ ಸಂಶೋಧನೆಯು ಆ ನಂಬಿಕೆಯನ್ನು ಸುಳ್ಳಾಗಿಸಿತು. ಈ ಅತ್ಯಾಧುನಿಕ ತಪಾಸಣೆಯಲ್ಲಿ, ಮುರಿದುಹೋಗಿರುವ ಆ ಕೈನಲ್ಲಿ ಇದ್ದದ್ದು ವೀಣೆಯಲ್ಲ, ಬದಲಿಗೆ ಅದೊಂದು ಕಮಲದ ಹೂವು ಎಂಬ ರೋಚಕ ಸತ್ಯ ಬಯಲಾಯಿತು. ಈ ಮಹತ್ವದ ಆವಿಷ್ಕಾರವೇ ವಿಗ್ರಹದ ನಿಜವಾದ ಗುರುತನ್ನು ಪತ್ತೆಹಚ್ಚಲು ದಾರಿದೀಪವಾಯಿತು.
ಬಳಿಕ, ಸಂಶೋಧಕರು ಈ ನೂತನ ಆವಿಷ್ಕಾರವನ್ನು ಪುರಾಣಗಳು ಮತ್ತು ವಾಸ್ತುಶಿಲ್ಪ ಗ್ರಂಥಗಳಲ್ಲಿನ ವಿವರಣೆಗಳೊಂದಿಗೆ ಹೋಲಿಸಿ ನೋಡಿದಾಗ, ಈ ಶಿಲ್ಪವು ಸರಸ್ವತಿಯದ್ದಲ್ಲ, ಸಾಕ್ಷಾತ್ ಗಾಯತ್ರಿ ದೇವಿಯದ್ದು ಎಂಬುದು ಸಂಪೂರ್ಣವಾಗಿ ಖಚಿತಪಟ್ಟಿತು. ನಾಲ್ಕು ಹಸ್ತಗಳನ್ನು ಹೊಂದಿರುವ ಈ ದೇವಿಯು ಕಮಲದ ಪೀಠದ ಮೇಲೆ ಆಸೀನಳಾಗಿದ್ದಾಳೆ. ದೇವಿಯ ಕೆಳಗಿನ ಬಲಗೈನಲ್ಲಿ ಅಕ್ಷರಮಾಲೆ, ಮೇಲಿನ ಬಲಗೈನಲ್ಲಿ ಕಮಲದ ಹೂವು ಮತ್ತು ಕೆಳಗಿನ ಎಡಗೈನಲ್ಲಿ ವೇದಗಳನ್ನು ಪ್ರತಿನಿಧಿಸುವ ಪುಸ್ತಕವನ್ನು ಹಿಡಿದಿರುವುದನ್ನು ಸ್ಪಷ್ಟವಾಗಿ ಕಾಣಬಹುದು.
ದೇವಿಯ ಮುರಿದುಹೋಗಿರುವ ಮೇಲಿನ ಎಡಗೈನಲ್ಲಿ ಕಮಲದ ಹೂವು ಅಥವಾ ಇತರ ಯಾವುದೇ ಪವಿತ್ರವಾದ ವಸ್ತುವನ್ನು ಹಿಡಿದಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಇದರೊಂದಿಗೆ, ದೇವಿಯ ಬಲ ಪಾದದ ಬಳಿ ಕೆತ್ತಲಾಗಿರುವ ಹಂಸ ಪಕ್ಷಿಯು ಕೇವಲ ವಾಹನವಲ್ಲ, ಅದು ಜ್ಞಾನ ಮತ್ತು ವಿವೇಕದ ಸಂಕೇತವಾಗಿದೆ ಎಂಬುದನ್ನು ಸಹ ಸಂಶೋಧಕರು ಇಲ್ಲಿ ಉಲ್ಲೇಖಿಸಿದ್ದಾರೆ, (ಏಜೆನ್ಸೀಸ್​).