ಸಮಾಜವಾದಿ ಪಕ್ಷ ಎರಡು ಹೋಳಾಗುವುದು ಖಚಿತ: ಅಮಿತ್ ಷಾಗೆ ಪತ್ರ ಬರೆದ ರಾಮ್ ಗೋಪಾಲ್ ಯಾದವ್; ಸಚಿವ ರಾಜ್‌ಭರ್ ಬಿಗ್ ಬಾಂಬ್!
ಲಕ್ನೋ: ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟುಗಳು ದೇಶಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಈಗ ಉತ್ತರ ಪ್ರದೇಶದ ರಾಜಕಾರಣದಲ್ಲೂ ಭಾರಿ ಬಿರುಗಾಳಿ ಎದ್ದಿದೆ. ಮಾಜಿ ಸಿಎಂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಶೀಘ್ರದಲ್ಲೇ ಒಡೆದು ಹೋಗಲಿದೆ ಎಂದು ಯುಪಿ ಸಚಿವ ಹಾಗೂ ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್(OP Rajbhar) ಭವಿಷ್ಯ ನುಡಿದಿದ್ದಾರೆ. ಮಹಾರಾಷ್ಟ್ರ, ಬಂಗಾಳ ರಾಜಕಾರಣವನ್ನು ಸದ್ಯಕ್ಕೆ ಮರೆತುಬಿಡಿ, ಇಡೀ ಸಮಾಜವಾದಿ ಪಕ್ಷವೇ ಈಗ ಬಿಜೆಪಿ ಸೇರಲು ಸನ್ನದ್ಧವಾಗಿ ಕುಳಿತಿದೆ ಎಂದು ಹೇಳುವ ಮೂಲಕ ರಾಜ್‌ಭರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು Xನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ರಾಜ್‌ಭರ್, ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಅವರು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಗುಪ್ತ ಪತ್ರವೊಂದನ್ನು ರವಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹಗರಣಗಳ ತನಿಖೆ ತೀವ್ರ: ಎಸ್‌ಪಿಗೆ ಬಿಕ್ಕಟ್ಟಿನ ಭೀತಿ?
ಸಮಾಜವಾದಿ ಪಕ್ಷದ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳು ಕಣ್ಗಾವಲು ಬಿಗಿಗೊಳಿಸುತ್ತಿದ್ದಂತೆ ಪಕ್ಷದೊಳಗೆ ಆತಂಕ ದುಪ್ಪಟ್ಟಾಗಿದೆ ಎಂದು ರಾಜ್‌ಭರ್ ಲೇವಡಿ ಮಾಡಿದ್ದಾರೆ. ಯುಪಿಯಲ್ಲಿ ಹಿಂದೆ ನಡೆದಿದ್ದ ಗಣಿಗಾರಿಕೆ ಹಗರಣ ಮತ್ತು ಗೋಮತಿ ರಿವರ್ ಫ್ರಂಟ್ ಯೋಜನೆಯ ಹಗರಣಗಳ ಹಿಂದಿರುವ ಅಸಲಿ ಮಾಸ್ಟರ್‌ಮೈಂಡ್ ಯಾರು ಎಂಬುದು ರಾಜ್ಯದ ಪ್ರತಿಯೊಬ್ಬ ಜನರಿಗೂ ಗೊತ್ತು. ತನಿಖಾ ಸಂಸ್ಥೆಗಳ ಉರುಳು ಇವರ ಕುತ್ತಿಗೆಗೆ ಬಿಗಿಯಾಗುತ್ತಿದ್ದಂತೆ ಸಮಾಜವಾದಿ ಪಕ್ಷದಲ್ಲಿ ನಡುಕ ಶುರುವಾಗಿದೆ. ಹೀಗಾಗಿಯೇ ಇಡೀ ಪಕ್ಷವೇ ಬಿಜೆಪಿಯೊಂದಿಗೆ ವಿಲೀನಗೊಳ್ಳಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದೆ ಎಂದು ರಾಜ್‌ಭರ್ ಆರೋಪಿಸಿದ್ದಾರೆ.
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ಉಭಯ ಪಕ್ಷಗಳ ನಾಯಕರ ನಡುವಿನ ಈ ವಾಗ್ದಾಳಿ ಯುಪಿಯಲ್ಲಿ ರಾಜಕೀಯ ರಂಗನ್ನು ಹೆಚ್ಚಿಸಿದೆ.
ತಿರುಗೇಟು ನೀಡಿದ ಸಮಾಜವಾದಿ ಪಕ್ಷ: ಪ್ರಚಾರಕ್ಕಾಗಿ ರಾಜ್‌ಭರ್ ನಾಟಕ
ಸಚಿವ ರಾಜ್‌ಭರ್ ಅವರ ಈ ಹೇಳಿಕೆಗೆ ಸಮಾಜವಾದಿ ಪಕ್ಷವು ಅತ್ಯಂತ ಕಠಿಣ ಶಬ್ದಗಳಲ್ಲಿ ತಿರುಗೇಟು ನೀಡಿದೆ. ಎಸ್‌ಪಿ ವಕ್ತಾರ ಸುನಿಲ್ ಸಾಜನ್ ಮಾತನಾಡಿ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸಮಾಜವಾದಿ ಪಕ್ಷದ ಜನಪ್ರಿಯತೆಯನ್ನು ಕಂಡು ಸಂಪೂರ್ಣವಾಗಿ ಬೆಚ್ಚಿಬಿದ್ದಿವೆ. ರಾಜ್‌ಭರ್ ಅವರು ರಾಜಕೀಯವಾಗಿ ಜೀವಂತವಾಗಿರಲು ಮತ್ತು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಳೆದ 2024ರ ಲೋಕಸಭಾ ಚುನಾವಣೆಯಲ್ಲೇ ನಾವು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಬಲವನ್ನು ಅರ್ಧಕ್ಕೆ ಕುಗ್ಗಿಸಿದ್ದೇವೆ. ಮುಂಬರುವ 2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಉತ್ತರ ಪ್ರದೇಶದಿಂದ ಸಂಪೂರ್ಣವಾಗಿ ತೊಲಗಿಸಲಿದ್ದೇವೆ. ಮುಂದಿನ ಚುನಾವಣೆಯಲ್ಲಿ ರಾಜ್‌ಭರ್ ಪಕ್ಷದ ಒಂದೇ ಒಂದು ಶಾಸಕನೂ ಗೆಲ್ಲಲು ಸಾಧ್ಯವಿಲ್ಲ ಎಂದು ಸಾಜನ್ ಸವಾಲು ಹಾಕಿದ್ದಾರೆ.
ಲಂಡನ್-ಪ್ಯಾರಿಸ್ ಪ್ರವಾಸದ ಬಗ್ಗೆ ಅಖಿಲೇಶ್‌ಗೆ ವ್ಯಂಗ್ಯ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವಿದೇಶಿ ಪ್ರವಾಸಗಳ ಕುರಿತು ಇತ್ತೀಚೆಗಷ್ಟೇ ರಾಜ್‌ಭರ್ ಭಾರಿ ವ್ಯಂಗ್ಯವಾಡಿದ್ದರು. ಅಖಿಲೇಶ್ ಅವರು ಲಂಡನ್ ಮತ್ತು ಪ್ಯಾರಿಸ್ ನಗರಗಳಿಗೆ ಪ್ರವಾಸ ಹೋಗುವ ಬದಲು ನಮ್ಮದೇ ರಾಜ್ಯದ ಕಾಶಿ, ಅಯೋಧ್ಯೆ, ಮಥುರಾ, ನೈಮಿಶಾರಣ್ಯ ಅಥವಾ ವಿಂಧ್ಯವಾಸಿನಿ ದೇವಸ್ಥಾನಗಳಿಗೆ ಭೇಟಿ ನೀಡಬಹುದಿತ್ತು. ಇದರಿಂದ ಉತ್ತರ ಪ್ರದೇಶದ ಪ್ರವಾಸೋದ್ಯಮಕ್ಕೆ ಬಲ ಬರುತ್ತಿತ್ತು. ಸ್ಥಳೀಯ ವ್ಯಾಪಾರಿಗಳು, ಹೂಗಾರರು, ಸಿಹಿ ತಿಂಡಿ ಅಂಗಡಿಯವರು, ಸಣ್ಣ ಹೋಟೆಲ್ ಮಾಲೀಕರು ಮತ್ತು ಸಾರಿಗೆ ವಲಯದ ಬಡ ಜನರಿಗೆ ಆರ್ಥಿಕವಾಗಿ ಸಹಾಯವಾಗುತ್ತಿತ್ತು ಎಂದು ಸಲಹೆ ನೀಡಿದ್ದರು.
ಮುಂದುವರಿದು, ಬಹುಶಃ ಅಖಿಲೇಶ್ ಯಾದವ್ ಅವರಿಗೆ ಈಗ ನಮ್ಮ ದೇಶದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗಿಂತ ವಿದೇಶಿ ಪ್ರವಾಸಿ ತಾಣಗಳೇ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿವೆ ಎಂದು ಲೇವಡಿ ಮಾಡಿದ್ದರು. ಸದ್ಯ ಉತ್ತರ ಪ್ರದೇಶದಲ್ಲಿ ಈ ಇಬ್ಬರೂ ನಾಯಕರ ನಡುವಿನ ರಾಜಕೀಯ ಜಟಾಪಟಿ ತಾರಕಕ್ಕೇರಿದೆ,(ಏಜೆನ್ಸೀಸ್).