ಲಖನೌ: ಬಿಜೆಪಿಯ ಧರ್ಮ ಮತ್ತು ಹಣದ ರಾಜಕೀಯದ ಕೊನೆಗೊಂಡಿದ್ದು, ಅದನ್ನು ಬೆಂಬಲಿಸುವವರು ಭಗವಾನ್ ಶ್ರೀರಾಮನಿಗೆ ದ್ರೋಹ ಮಾಡ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್(Akhilesh Yadav) ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಕುಸಿದು ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಭಾರಿ ಇಳಿಕೆಯಾಗಿದೆ. ಇತರ ದೇಶಗಳಲ್ಲಿ ಜನರಿಗೆ ಅದರ ಲಾಭ ಬೆಲೆಗಳ ರೂಪದಲ್ಲಿ ಸಿಕ್ಕಿದೆ. ಆದರೆ ಭಾರತದಲ್ಲಿ ಅದಕ್ಕೆ ವಿರುದ್ಧವಾಗಿ ಬಿಜೆಪಿ ಸರ್ಕಾರವು ಬೆಲೆಗಳನ್ನು ಇಳಿಸುತ್ತಿಲ್ಲ, ಕಂಪನಿಗಳಿಗೆ ಲಾಭ ತಲುಪಿಸುವಲ್ಲಿ ನಿರತವಾಗಿದೆ. ಬಿಜೆಪಿ ಕಂಪನಿಗಳ ಪರವೇ ಹೊರತು ಜನಸಾಮಾನ್ಯರ ಪರವಲ್ಲ ಎಂದು ಕಿಡಿಕಾರಿದ್ದಾರೆ.
ದೇಶದಲ್ಲಿನ ಬೆಲೆ ಏರಿಕೆ ಅಥವಾ ಹಣದುಬ್ಬರಕ್ಕೆ ಬಿಜೆಪಿಯ ಕಮಿಷನ್ ದಂಧೆಯೇ ಕಾರಣ ಎಂದು ಆರೋಪಿಸಿರುವ ಅವರು, ಇದು ಕಂಪನಿಗಳ ಲಾಭಕ್ಕೆ ಸಂಬಂಧಿಸಿದೆ. ಕಂಪನಿಗಳ ಪ್ರಾಫಿಟ್-ಲಾಭ ಎಷ್ಟು ಹೆಚ್ಚಾಗುತ್ತದೆಯೋ, ಬಿಜೆಪಿಗೆ ಸಿಗುವ ಕಮಿಷನ್ ಕೂಡ ಅಷ್ಟೇ ಹೆಚ್ಚಾಗುತ್ತದೆ. ಸಾಮಾನ್ಯ ಜನರು ದುಬಾರಿ ತೈಲ, ಸಾರಿಗೆ, ಪ್ರಯಾಣ, ಆಹಾರ ಪದಾರ್ಥಗಳು ಮತ್ತು ಇತರ ಎಲ್ಲಾ ಸರಕುಗಳ ಮೂಲಕ ಬೆಲೆಯನ್ನು ಪಾವತಿಸುವ ಮೂಲಕ ಅದರ ಪರಿಣಾಮ ಅನುಭವಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂದುವರೆದು ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣದ ಕುರಿತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಬಿಜೆಪಿ ಇಂತಹ ನೀಚ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದ ಅದನ್ನು ಬೆಂಬಲಿಸಿದ್ದ ಮುಗ್ದ ಭಕ್ತರಿಗೆ ಈಗ ದೇವಸ್ಥಾನದ ದೇಣಿಗೆ ಕಳ್ಳತನದ ಬಳಿಕ ಬಿಜೆಪಿಯವರಿಗೆ ‘ಧನ’ವೇ ‘ಧರ್ಮ’ ಎಂಬುದು ಅರ್ಥವಾಗಿದೆ. ಬಿಜೆಪಿಯವರನ್ನು ನೋಡಿ ಜನ ಮನೆ ಬಾಗಿಲು ಹಾಕಿಕೊಳ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ಧರ್ಮದ ರಾಜಕೀಯ ಕೊನೆಯಾಗಿದೆ, ಅದಕ್ಕಾಗಿಯೇ ಅದು ಈಗ ಕೇವಲ ಹಣದ ರಾಜಕೀಯವನ್ನು ಮಾಡುತ್ತದೆ. ಇದರಿಂದ ಭ್ರಷ್ಟಾಚಾರವೂ ಮಿತಿಮೀರಿ ಹೆಚ್ಚಾಗುತ್ತದೆ. ಬೆಲೆ ಏರಿಕೆಯೂ ಹೆಚ್ಚಾಗುತ್ತದೆ.ಯಾಕೆಂದರೆ ಬಿಜೆಪಿಗೆ ಕಡಿಮೆಯಾಗಿರುವ ಕೋಟ್ಯಂತರ ಮತಗಳ ಕೊರತೆಯನ್ನು ಹಣದಿಂದ ಖರೀದಿಸಿ ಪೂರ್ಣಗೊಳಿಸಲು ಬಯಸುತ್ತದೆ.
ಆದರೆ ಧರ್ಮದ ಹೆಸರಿನಲ್ಲಿ ಮಾಡಿದ ಕಳ್ಳತನದ ಹಣವನ್ನು ಯಾರೂ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಇದೇ ಅಧರ್ಮಿ ಬಿಜೆಪಿಗೆ ಅತ್ಯಂತ ದೊಡ್ಡ ಚಿಂತೆಯಾಗಿದೆ. ಧರ್ಮಕ್ಕೆ ಹೆದರುವ ಜನ ಪಾಪದ ಹಣದ ಪಾಲುದಾರರಾಗಲ್ಲ. ಕೊನೆಯದಾಗಿ ಬಿಜೆಪಿಯ ಧರ್ಮ ಮತ್ತು ಹಣದ ರಾಜಕೀಯದ ಕೊನೆಗೊಂಡಿದ್ದು, ಅದನ್ನು ಬೆಂಬಲಿಸುವವರು ಭಗವಾನ್ ಶ್ರೀರಾಮನಿಗೆ ದ್ರೋಹ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).