ಭಾರತೀಯ ಸಂಸದೀಯ ವ್ಯವಸ್ಥೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಎಂಬುದು ಭೌಗೋಳಿಕ ಬದಲಾವಣೆ ಮಾತ್ರವಲ್ಲ. ಅದು ಪ್ರಜಾಪ್ರಭುತ್ವದ ಸಮಾನ ಪ್ರಾತಿನಿಧ್ಯದ ಅಡಿಪಾಯ. ದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 543ರಿಂದ 850ಕ್ಕೆ ಏರಿಸುವ ಉದ್ದೇಶದ ಮಸೂದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಗುರುವಾರ ಮಂಡಿಸಿದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ನಂತರದ 1952ರಿಂದ ಹಿಡಿದು ಇಂದಿನವರೆಗಿನ ಮೈಲಿಗಲ್ಲುಗಳ ವಿವರ ಇಲ್ಲಿದೆ.
ಪ್ರಜಾಪ್ರಭುತ್ವದಲ್ಲಿ ‘ಒಬ್ಬ ವ್ಯಕ್ತಿ, ಒಂದು ಮತ’ ಎಂಬುದು ಮೂಲತತ್ವ. ‘ಪ್ರತಿ ಮತಕ್ಕೂ ಸಮಾನ ಮೌಲ್ಯವಿರಬೇಕು’ ಎಂಬುದು ಕೂಡ ಅದರ ಇನ್ನೊಂದು ಆಶಯ. ಆದರೆ ವಲಸೆ ಮತ್ತಿತರ ಕಾರಣಗಳಿಂದಾಗಿ ಪ್ರತಿಯೊಂದು ಪ್ರದೇಶದ ಜನಸಂಖ್ಯೆಯೂ ಕಾಲಕಾಲಕ್ಕೆ ಬದಲಾಗುತ್ತ ಹೋಗುತ್ತದೆ. ಜನನ ದರದಲ್ಲಿನ ವ್ಯತ್ಯಾಸದಿಂದಾಗಿ ಮತದಾರರ ಸಂಖ್ಯೆಯೂ ಏರುಪೇರಾಗುತ್ತದೆ. ಇದನ್ನು ಸರಿಪಡಿಸಲು, ಅಂದರೆ ಪ್ರತಿಯೊಬ್ಬ ಜನಪ್ರತಿನಿಧಿಯು (ಸಂಸದ ಅಥವಾ ಶಾಸಕ) ಸರಿಸುಮಾರು ಸಮಾನ ಸಂಖ್ಯೆಯ ಜನರನ್ನು ಪ್ರತಿನಿಧಿಸುವಂತೆ ಕ್ಷೇತ್ರಗಳ ಗಡಿಗಳನ್ನು ಮರುಹೊಂದಿಸುವ ಪ್ರಕ್ರಿಯೆಯೇ ಕ್ಷೇತ್ರ ಪುನರ್ವಿಂಗಡಣೆ ಅಥವಾ ಡಿಲಿಮಿಟೇಶನ್.
ಭಾರತದ ಸಂವಿಧಾನದ 82ನೇ ವಿಧಿಯ ಅಡಿಯಲ್ಲಿ ಪ್ರತಿ ಸಲದ ಜನಗಣತಿಯ ನಂತರವೂ ಸಂಸತ್ತು ಕ್ಷೇತ್ರಗಳ ಪುನರ್ವಿಂಗಡಣಾ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯಬೇಕು. ಅದರ ಅನುಷ್ಠಾನಕ್ಕಾಗಿ ರಾಷ್ಟ್ರಪತಿಗಳು ಒಂದು ಸ್ವತಂತ್ರ ಆಯೋಗವನ್ನು ರಚಿಸುತ್ತಾರೆ.
ಕ್ಷೇತ್ರ ಪುನರ್ವಿಂಗಡಣೆ ಆಯೋಗ ಅತ್ಯಂತ ಶಕ್ತಿಶಾಲಿ ಸಂಸ್ಥೆಯಾಗಿದ್ದು, ಇದರ ನಿರ್ಧಾರಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಾಧೀಶರು ಇದರ ಅಧ್ಯಕ್ಷರಾಗಿರುತ್ತಾರೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಆಯಾ ರಾಜ್ಯಗಳ ಚುನಾವಣಾ ಆಯುಕ್ತರು ಪದನಿಮಿತ್ತ ಸದಸ್ಯರಾಗಿರುತ್ತಾರೆ. ಆಯೋಗವು ಜನಗಣತಿಯ ಅಂಕಿಅಂಶಗಳನ್ನು ಪರಿಶೀಲಿಸಿ, ಪ್ರತಿ ರಾಜ್ಯಕ್ಕೆ ಎಷ್ಟು ಸೀಟುಗಳು ಇರಬೇಕು ಮತ್ತು ಆ ರಾಜ್ಯದ ಒಳಗಿನ ಕ್ಷೇತ್ರಗಳ ಗಡಿಗಳು ಹೇಗಿರಬೇಕು ಎಂಬುದನ್ನು ನಿರ್ಧರಿಸುತ್ತದೆ. ಆಯೋಗದ ಶಿಫಾರಸುಗಳನ್ನು ಸಂಸತ್ತಿನ ಮುಂದಿಡಲಾಗುತ್ತದೆ. ಆದರೆ, ಸಂಸತ್ತು ಇದರಲ್ಲಿ ಯಾವುದೇ ತಿದ್ದುಪಡಿ ಮಾಡುವಂತಿಲ್ಲ. ಇದು ರಾಜಕೀಯ ಹಸ್ತಕ್ಷೇಪವನ್ನು ತಡೆಯುವ ಉದ್ದೇಶದಿಂದ ಮಾಡಿರುವ ಕಠಿಣ ನಿಯಮ.
ಭಾರತದಲ್ಲಿ ಇದುವರೆಗೆ ನಾಲ್ಕು ಬಾರಿ ಕ್ಷೇತ್ರ ಪುನರ್ವಿಂಗಡಣಾ ಆಯೋಗಗಳನ್ನು ರಚಿಸಲಾಗಿದೆ. ಆಯಾ ಕಾಲಘಟ್ಟದ ರಾಜಕೀಯ ಮತ್ತು ಜನಸಂಖ್ಯಾ ಪರಿಸ್ಥಿತಿಗೆ ಅನುಗುಣವಾಗಿ ಅವು ಕಾರ್ಯನಿರ್ವಹಿಸಿವೆ.
ನಾರಿ ಶಕ್ತಿ ವಂದನ್ ಅಧಿನಿಯಮ (ಮಹಿಳಾ ಮೀಸಲಾತಿ) ಜಾರಿಯಾಗಬೇಕೆಂದರೆ ಕ್ಷೇತ್ರ ಪುನರ್ವಿಂಗಡಣೆ ನಡೆಯುವುದು ಕಡ್ಡಾಯ. ಶೇ. 33ರಷ್ಟು ಮೀಸಲಾತಿಯನ್ನು ಯಾವ ಕ್ಷೇತ್ರಗಳಲ್ಲಿ ನೀಡಬೇಕು ಎಂಬುದನ್ನು ಈ ಆಯೋಗವೇ ನಿರ್ಧರಿಸಬೇಕಿದೆ. ಹೀಗಾಗಿ, ಗುರುವಾರ ಮಂಡನೆಯಾದ ಮಸೂದೆಯು ಮಹಿಳಾ ಸಬಲೀಕರಣದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದಾಗಿದೆ.
ಪ್ರಸ್ತುತ ಲಡಾಖ್ ಭೌಗೋಳಿಕವಾಗಿ ಅತಿದೊಡ್ಡ ಲೋಕಸಭಾ ಕ್ಷೇತ್ರವಾಗಿದ್ದರೆ, ಮತದಾರರ ಸಂಖ್ಯೆಯ ದೃಷ್ಟಿಯಿಂದ ಮಲ್ಕಾಜಗಿರಿ (ತೆಲಂಗಾಣ) ಅತಿದೊಡ್ಡ ಕ್ಷೇತ್ರವಾಗಿದೆ. ಪುನರ್ವಿಂಗಡಣೆಯ ನಂತರ ಈ ಅಸಮತೋಲನ ಕಡಿಮೆಯಾಗುವ ನಿರೀಕ್ಷೆಯಿದೆ.
ಕಳೆದ ಶತಮಾನದ ಐವತ್ತರ ದಶಕದಲ್ಲಿ ಭಾರತದಲ್ಲಿ 91 ದ್ವಿಸದಸ್ಯ ಕ್ಷೇತ್ರಗಳಿದ್ದವು. ಅಲ್ಲಿ ಒಬ್ಬೊಬ್ಬ ಮತದಾರನೂ ಇಬ್ಬಿಬ್ಬರು ಅಭ್ಯರ್ಥಿಗಳಿಗೆ ಮತ ಹಾಕಬೇಕಿತ್ತು. 1961ರಲ್ಲಿ ದ್ವಿಸದಸ್ಯ ಕ್ಷೇತ್ರಗಳ ರದ್ದತಿ ಕಾಯ್ದೆ ತಂದು ಇದನ್ನು ಕೊನೆಗೊಳಿಸಲಾಯಿತು.
ಕ್ಷೇತ್ರ ಪುನರ್ವಿಂಗಡಣೆ ಕೇವಲ ಗಣಿತದ ಲೆಕ್ಕಾಚಾರವಲ್ಲ. ಅದು ಭಾರತದ ಒಕ್ಕೂಟ ವ್ಯವಸ್ಥೆಯ ಒಗ್ಗಟ್ಟಿನ ಪರೀಕ್ಷೆ. ಒಂದು ಕಡೆ ಸಮಾನ ಪ್ರಾತಿನಿಧ್ಯದ ಅನಿವಾರ್ಯತೆ ಇದೆ, ಇನ್ನೊಂದು ಕಡೆ ಜನಸಂಖ್ಯಾ ನಿಯಂತ್ರಣ ಮಾಡಿದ ರಾಜ್ಯಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ. ಹೊಸ ಮಸೂದೆ ಕೇವಲ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹೊಂದಿಲ್ಲ, ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸುವ ಸದುದ್ದೇಶವನ್ನೂ ಹೊಂದಿದೆ. ಈ ಪ್ರಕ್ರಿಯೆ ಭಾರತದ ಪ್ರಜಾಪ್ರಭುತ್ವವನ್ನು ಮುಂದಿನ ಶತಮಾನಕ್ಕೆ ಸಜ್ಜುಗೊಳಿಸಲಿದೆ. ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ರ್ಚಚಿಸಿ, ಒಕ್ಕೂಟ ಧರ್ಮಕ್ಕೆ ಧಕ್ಕೆಯಾಗದಂತೆ ಈ ಐತಿಹಾಸಿಕ ಬದಲಾವಣೆಯನ್ನು ಸ್ವಾಗತಿಸುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ.
ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಭಾರತ ತೀವ್ರ ಜನಸಂಖ್ಯಾ ಸ್ಪೋಟವನ್ನು ಎದುರಿಸುತ್ತಿತ್ತು. ಕೇಂದ್ರ ಸರ್ಕಾರ ಕುಟುಂಬ ನಿಯಂತ್ರಣ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯಗಳಿಗೆ ಸೂಚಿಸಿತು. ಈ ವಿಷಯದಲ್ಲಿ ದಕ್ಷಿಣದ ರಾಜ್ಯಗಳ ಸಾಧನೆ ಉತ್ತಮವಾಗಿತ್ತು. ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ಜನಸಂಖ್ಯಾ ನಿಯಂತ್ರಣದಲ್ಲಿ ಕ್ಷಮತೆ ತೋರಿದವು. ಆದರೆ ಉತ್ತರದ ರಾಜ್ಯಗಳು ಇದರಲ್ಲಿ ವಿಫಲವಾದವು. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮುಂತಾದ ಕೆಲವು ರಾಜ್ಯಗಳಲ್ಲಿ ಜನಸಂಖ್ಯೆ ತೀವ್ರವಾಗಿ ಏರಿತು.
ಒಂದು ವೇಳೆ ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳನ್ನು ಹಂಚಿಕೆ ಮಾಡಿದ್ದರೆ, ಜನಸಂಖ್ಯೆ ಹೆಚ್ಚಿಸಿಕೊಂಡ ರಾಜ್ಯಗಳಿಗೆ ಹೆಚ್ಚು ಸಂಸದರು ಸಿಗುತ್ತಿದ್ದರು. ಜನಸಂಖ್ಯೆಯನ್ನು ನಿಯಂತ್ರಿಸಿದ ದಕ್ಷಿಣದ ರಾಜ್ಯಗಳಿಗೆ ‘ಶಿಕ್ಷೆಯ ರೂಪದಲ್ಲಿ’ ಸಂಸದರ ಸಂಖ್ಯೆ ಕಡಿಮೆಯಾಗುತ್ತಿತ್ತು. ಈ ಅನ್ಯಾಯವನ್ನು ತಪ್ಪಿಸಲು 1976ರಲ್ಲಿ ಇಂದಿರಾ ಗಾಂಧಿ ಸರ್ಕಾರ 42ನೇ ತಿದ್ದುಪಡಿ ತಂದು, 2001ರವರೆಗೆ ಸೀಟುಗಳ ಸಂಖ್ಯೆಯನ್ನು ಬದಲಾವಣೆ ಮಾಡದಂತೆ ಸ್ಥಗಿತಗೊಳಿಸಿತು. ನಂತರ ವಾಜಪೇಯಿ ಸರ್ಕಾರ 84ನೇ ತಿದ್ದುಪಡಿ ಮೂಲಕ ಈ ಸ್ಥಾಗಿತ್ಯದ ಅವಧಿಯನ್ನು 2026ರವರೆಗೆ ವಿಸ್ತರಿಸಿತು.
ಪ್ರಾತಿನಿಧ್ಯದ ಕೊರತೆ: 1971ರಲ್ಲಿ ಒಬ್ಬ ಸಂಸದರು ಸುಮಾರು 10 ಲಕ್ಷ ಜನರನ್ನು ಪ್ರತಿನಿಧಿಸುತ್ತಿದ್ದರು. ಇಂದು ಒಬ್ಬ ಸಂಸದರು 25ರಿಂದ 30 ಲಕ್ಷ ಜನರನ್ನು ಪ್ರತಿನಿಧಿಸುವ ಪರಿಸ್ಥಿತಿ ಇದೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧ.
ಜಾಗತಿಕ ಮಾನದಂಡ: ಅಮೆರಿಕ ಅಥವಾ ಬ್ರಿಟನ್ನಂತಹ ದೇಶಗಳಿಗೆ ಹೋಲಿಸಿದರೆ, ಭಾರತದ ಸಂಸದರು ಪ್ರತಿನಿಧಿಸುವ ಮತದಾರರ ಸಂಖ್ಯೆ ಅತಿ ಹೆಚ್ಚು.
ಹೊಸ ಸಂಸತ್ ಭವನ: ಸೆಂಟ್ರಲ್ ವಿಸ್ಟಾ ಯೋಜನೆಯಡಿ ನಿರ್ವಿುಸಲಾದ ಹೊಸ ಸಂಸತ್ ಭವನದಲ್ಲಿ ಲೋಕಸಭೆಯ 888 ಸದಸ್ಯರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಭವಿಷ್ಯದ ಪುನರ್ವಿಂಗಡಣೆಯನ್ನು ಗಮನದಲ್ಲಿಟ್ಟುಕೊಂಡೇ ಮಾಡಲಾಗಿದೆ.
ಸೀಟುಗಳ ಸಂಖ್ಯೆ 850ಕ್ಕೆ ಏರಿಕೆಯಾದಾಗ, ರಾಜ್ಯವಾರು ಹಂಚಿಕೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಇದು ದಕ್ಷಿಣ ಭಾರತದ ರಾಜ್ಯಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಂದಾಜಿನ ಪ್ರಕಾರ, ಉತ್ತರ ಪ್ರದೇಶದ ಸೀಟುಗಳ ಸಂಖ್ಯೆ 80ರಿಂದ 140 ದಾಟಬಹುದು. ಆದರೆ ಕೇರಳ ಅಥವಾ ತಮಿಳುನಾಡಿನ ಸೀಟುಗಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಮಾತ್ರ ಏರಬಹುದು. ಇದರಿಂದಾಗಿ ಮುಂಬರುವ ಚುನಾವಣೆಗಳ ಬಳಿಕ, ಕೇಂದ್ರ ಸರ್ಕಾರವನ್ನು ರಚಿಸುವಲ್ಲಿ ದಕ್ಷಿಣದ ರಾಜ್ಯಗಳ ನಿರ್ಣಾಯಕ ಪಾತ್ರ ಕುಗ್ಗಬಹುದು. ಇದಲ್ಲದೆ, ದಕ್ಷಿಣದ ರಾಜ್ಯಗಳ ವಿರೋಧದ ಹಿಂದೆ ಆರ್ಥಿಕ ನಷ್ಟದ ಆತಂಕವೂ ಇದೆ. ಹಣಕಾಸು ಆಯೋಗದ ಅನುದಾನ ಹಂಚಿಕೆಯಲ್ಲೂ ಜನಸಂಖ್ಯೆಯೇ ಮಾನದಂಡವಾದರೆ, ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಹಿನ್ನಡೆಯಾಗಲಿದೆ ಎಂಬುದು ಕೆಲವು ರಾಜ್ಯಗಳ ಅಭಿಪ್ರಾಯ.
ಕ್ಷೇತ್ರ ಪುನರ್ವಿಂಗಡಣೆಯ ಮೇಲೆ 1976 ರಿಂದಲೂ ಇದ್ದ ‘ಫ್ರೀಜ್’ ಅನ್ನು ತೆರವುಗೊಳಿಸುವ ಗುರಿಯೊಂದಿಗೆ ಗುರುವಾರ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಸೂದೆಯನ್ನು ಮಂಡಿಸಿದೆ. ಸುಪ್ರೀಂಕೋರ್ಟ್ ಹಸ್ತಕ್ಷೇಪವಿಲ್ಲ. ಡಿಲಿಮಿಟೇಶನ್ ಆಯೋಗದ ಆದೇಶಗಳು ಗೆಜೆಟ್ನಲ್ಲಿ ಪ್ರಕಟವಾದ ನಂತರ ಅವುಗಳಿಗೆ ಕಾನೂನಿನ ಬಲ ಬರುತ್ತದೆ. ಸುಪ್ರೀಂಕೋರ್ಟ್ ಒಳಗೊಂಡಂತೆ ಭಾರತದ ಯಾವುದೇ ನ್ಯಾಯಾಲ ಯವೂ ಈ ಗಡಿ ನಿರ್ಣಯದ ವಿರುದ್ಧ ಆದೇಶ ನೀಡುವಂತಿಲ್ಲ.