national politics 
ದೇಶ

ಪ್ರಾದೇಶಿಕ ಪಕ್ಷಗಳ ವಿಭಜನೆ ಹಾದಿ: ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ತಿರುವು

ಭಾರತೀಯ ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಗೆ ಪ್ರಾದೇಶಿಕ ಪಕ್ಷಗಳು ಅತ್ಯಂತ ಅಗತ್ಯ. ಆದರೆ ಆಂತರಿಕ ಪ್ರಜಾಪ್ರಭುತ್ವದ ಕೊರತೆ ಮತ್ತು ಕಲಹದಿಂದ ಇವು ಇಂದು ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿವೆ. ಪಶ್ಚಿಮ ಬಂಗಳಾದಲ್ಲಿ ತೃಣಮೂಲ ಕಾಂಗ್ರೆಸ್​ನ ವಿಭಜನೆ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಬಣದ ಶಿವಸೇನೆ ಮತ್ತೊಮ್ಮೆ ವಿಭಜನೆಯ ಹೊಸ್ತಿಲಲ್ಲಿದೆ. ಪಕ್ಷದ ಆರು ಸಂಸದರು ಮತ್ತು ಹಲವು ಶಾಸಕರು ಶಿವಸೇನೆ ತೊರೆಯಲು ನಿರ್ಧರಿಸಿದ್ದು, ಉದ್ಧವ್​ಗೆ ಮತ್ತೊಂದು ಆಘಾತವಾದಂತಾಗಿದೆ. ಈ ಹಿಂದೆ ಏಕನಾಥ್ ಶಿಂಧೆ ಶಿವಸೇನೆಯಿಂದ ಹೊರಬಂದು ಪ್ರತ್ಯೇಕ ಬಣವನ್ನು ಸ್ಥಾಪಿಸಿಕೊಂಡರು. ಪ್ರಸ್ತುತ ಎನ್​ಡಿಎ ಒಕ್ಕೂಟದ ಭಾಗವಾಗಿದೆ ಶಿಂಧೆ ಬಣ. ಮಹಾರಾಷ್ಟ್ರದ ರಾಜಕೀಯ ನಡೆಗಳು ಸಂಚಲನ ಮೂಡಿಸಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ. ಆದರೆ, ಪ್ರಾದೇಶಿಕ ಪಕ್ಷಗಳು ಏಕೆ ವೇಗವಾಗಿ ವಿಭಜನೆಗೊಳ್ಳುತ್ತಿವೆ, ಇದಕ್ಕೆ ಕಾರಣಗಳೇನು? ಪರಿಣಾಮಗಳೇನು? ಈ ಕುರಿತಾದ ವಿವರ ಇಲ್ಲಿದೆ.
ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ವಿಭಜನೆ ಮತ್ತು ಆಂತರಿಕ ಕಲಹಗಳು ಇತ್ತೀಚಿನ ದಿಗಳಲ್ಲಿ ತೀವ್ರಗೊಂಡಿವೆ. ಶಿವಸೇನೆ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ), ಎಐಎಡಿಎಂಕೆ, ಆಮ್ ಆದ್ಮಿ ಪಾರ್ಟಿ ಹಾಗೂ ತೃಣಮೂಲ ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳು ಇದಕ್ಕೆ ಸ್ಪಷ್ಟ ಉದಾಹರಣೆಗಳು. ಈ ಹಿಂದೆ ದೇಶದ ಅರ್ಧಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಅಧಿಕಾರದಲ್ಲಿದ್ದವು. ಆದರೆ ಈಗಿನ ಸ್ಥಿತಿಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟ 22 ರಾಜ್ಯಗಳಲ್ಲಿ ಮತ್ತು ಕಾಂಗ್ರೆಸ್ ನಾಲ್ಕು ಪಕ್ಷಗಳಲ್ಲಿ ಅಧಿಕಾರ ಹೊಂದುವ ಮೂಲಕ, ಪ್ರಾದೇಶಿಕ ಪಕ್ಷಗಳ ಮೇಲೆ ಹಿಡಿತ ಸಾಧಿಸಿವೆ.
ಜೂನ್ 14ರಂದು ಟಿಎಮ್ ಪಕ್ಷದ 28 ಲೋಕಸಭಾ ಸಂಸದರಲ್ಲಿ 20 ಸಂಸದರು ಅನಾಮಧೇಯವಾಗೇ ಇದ್ದ ಎನ್​ಸಿಪಿಐ ಪಕ್ಷದೊಂದಿಗೆ ವಿಲೀನಗೊಂಡರು. ಬುಧವಾರ ಶಿವಸೇನಾ (ಉದ್ಧವ್ ಬಣ) ಪಕ್ಷದ 9 ಲೋಕಸಭಾ ಸಂಸದರಲ್ಲಿ 6 ಸಂಸದರು ಕೂಡ ಬಂಡಾಯವೆದ್ದಿದ್ದಾರೆ. ಇದಕ್ಕೂ ಮುನ್ನ, ಏಪ್ರಿಲ್ 24 ರಂದು ಆಮ್ ಆದ್ಮಿ ಪಕ್ಷದ 10 ರಾಜ್ಯಸಭಾ ಸಂಸದರಲ್ಲಿ 7 ಸಂಸದರು ಸಹ ಬಂಡಾಯವೆದ್ದಿದ್ದರು. ಈ ಎಲ್ಲ ಬಂಡಾಯಗಾರರು ಬಿಜೆಪಿ ಅಥವಾ ಎನ್​ಡಿಎ ಮೈತ್ರಿಕೂಟವನ್ನು ಸೇರುತ್ತಿದ್ದಾರೆ.

ಆಡಳಿತ ಪಕ್ಷದ ರಾಜಕೀಯ ತಂತ್ರಗಳು

ಕೇಂದ್ರದಲ್ಲಿ ಬಲಿಷ್ಠವಾಗಿರುವ ಆಡಳಿತ ಪಕ್ಷವು (ಬಿಜೆಪಿ) ಪ್ರಾದೇಶಿಕ ಪಕ್ಷಗಳ ಅತೃಪ್ತ ನಾಯಕರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗುತ್ತಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬಳಸಿಕೊಂಡು ಅಥವಾ ಮೈತ್ರಿಗಳ ಮೂಲಕ ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸುವ ತಂತ್ರಗಳು ಇಲ್ಲಿ ಕೆಲಸ ಮಾಡುತ್ತಿವೆ.

ಕೇಂದ್ರೀಯ ತನಿಖಾ ಸಂಸ್ಥೆಗಳ ಭಯ

ಪ್ರಾದೇಶಿಕ ಪಕ್ಷಗಳ ಪ್ರಮುಖ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪಗಳು ಮತ್ತು ತನಿಖೆಗಳು ಎದುರಾದಾಗ, ಜೈಲು ಶಿಕ್ಷೆಯಿಂದ ಪಾರಾಗಲು ಅಥವಾ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ನಾಯಕರು ಪಕ್ಷವನ್ನು ತೊರೆದು ಆಡಳಿತ ಪಕ್ಷದೊಂದಿಗೆ ಕೈಜೋಡಿಸುತ್ತಿದ್ದಾರೆ ಅಥವಾ ಹೊಸ ಬಣವನ್ನು ಸೃಷ್ಟಿಸುತ್ತಿದ್ದಾರೆ (ಉದಾ: ಮಹಾರಾಷ್ಟ್ರದ ಬೆಳವಣಿಗೆಗಳು).

ವೈಯಕ್ತಿಕ ಮಹತ್ವಾಕಾಂಕ್ಷೆ

ಪ್ರಾದೇಶಿಕ ಪಕ್ಷಗಳಲ್ಲಿ ದೀರ್ಘಕಾಲ ಕೆಲಸ ಮಾಡಿದ ನಾಯಕರಿಗೆ ಉನ್ನತ ಸ್ಥಾನ ಸಿಗದಿದ್ದಾಗ, ಅವರು ಸ್ವತಂತ್ರ ಅಸ್ತಿತ್ವಕ್ಕಾಗಿ ಪಕ್ಷವನ್ನು ಒಡೆಯುತ್ತಾರೆ. ಜೊತೆಗೆ, ಅಧಿಕಾರ ಕೇಂದ್ರಿತ ರಾಜಕಾರಣದಿಂದಾಗಿ ಸಿದ್ಧಾಂತಗಳು ಮೂಲೆಗುಂಪಾಗುತ್ತಿವೆ.

ರಾಷ್ಟ್ರೀಯ ಪಕ್ಷಗಳ ಪ್ರಾಬಲ್ಯ ಹೆಚ್ಚಳ

ಪ್ರಾದೇಶಿಕ ಪಕ್ಷಗಳು ದುರ್ಬಲಗೊಂಡಷ್ಟೂ ರಾಷ್ಟ್ರೀಯ ಪಕ್ಷಗಳಿಗೆ ನೇರ ಲಾಭವಾಗುತ್ತದೆ. ಇದು ದೇಶವನ್ನು ದ್ವಿಪಕ್ಷೀಯ ಅಥವಾ ಏಕಪಕ್ಷೀಯ ಪ್ರಾಬಲ್ಯದತ್ತ ಕೊಂಡೊಯ್ಯಬಹುದು.

ಮತದಾರರಲ್ಲಿ ಗೊಂದಲ

ತಾವು ಒಂದು ಪಕ್ಷ ಅಥವಾ ಸಿದ್ಧಾಂತಕ್ಕೆ ಮತ ಹಾಕಿದರೆ, ಗೆದ್ದ ನಾಯಕರು ಮತ್ತೊಂದು ಬಣ ಸೇರಿಕೊಳ್ಳುವುದನ್ನು ನೋಡಿ ಮತದಾರರಿಗೆ ಪ್ರಜಾಪ್ರಭುತ್ವ ಮತ್ತು ಚುನಾವಣೆಗಳ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ.

ಪ್ರಾದೇಶಿಕ ಅಸ್ಮಿತೆ ಮತ್ತು ಧ್ವನಿಗೆ ಧಕ್ಕೆ

ಪ್ರಾದೇಶಿಕ ಪಕ್ಷಗಳು ಆಯಾ ರಾಜ್ಯಗಳ ಭಾಷೆ, ನೆಲ, ಜಲ ಮತ್ತು ಸ್ಥಳೀಯ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಬಲವಾಗಿ ಮಂಡಿಸುತ್ತಿದ್ದವು. ಇವುಗಳ ವಿಭಜನೆಯಿಂದಾಗಿ ಕೇಂದ್ರದ ಎದುರು ರಾಜ್ಯಗಳ ಹಕ್ಕುಗಳನ್ನು ಕೇಳುವ ಧ್ವನಿ ದುರ್ಬಲಗೊಳ್ಳುತ್ತದೆ.

ವಿಭಜನೆಗೆ ಪ್ರಮುಖ ಕಾರಣಗಳು

ನಾಯಕತ್ವ ವಿವಾದ
ಹೆಚ್ಚಿನ ಪ್ರಾದೇಶಿಕ ಪಕ್ಷಗಳು ಒಬ್ಬರೇ ಪ್ರಭಾವಿ ನಾಯಕ ಅಥವಾ ಒಂದು ಕುಟುಂಬದ ಸುತ್ತ ಗಿರಕಿ ಹೊಡೆಯುತ್ತಿವೆ. ಉದಾಹರಣೆಗೆ, ಶಿವಸೇನೆಯಲ್ಲಿ ಠಾಕ್ರೆ ಕುಟುಂಬ, ಎನ್​ಸಿಪಿಯಲ್ಲಿ ಪವಾರ್ ಕುಟುಂಬ. ಸಂಸ್ಥಾಪಕ ನಾಯಕರು ದುರ್ಬಲರಾದಾಗ ಅಥವಾ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವಾಗ ಪಕ್ಷದೊಳಗಿನ ಇತರ ಮಹತ್ವಾಕಾಂಕ್ಷಿ ನಾಯಕರ ನಡುವೆ ಅಸಮಾಧಾನ ಸ್ಪೋಟಗೊಂಡು ಪಕ್ಷ ವಿಭಜನೆಯಾಗುತ್ತಿದೆ.

ಮುಂದಿನ ಸರದಿ ಯಾರದು?

ಉತ್ತರ ಪ್ರದೇಶದ ರಾಜಕೀಯ ವಲಯದಲ್ಲೂ ಕೋಲಾಹಲ ಸೃಷ್ಟಿಯಾಗಿದೆ. ‘ಸಮಾಜವಾದಿ ಪಕ್ಷವು (ಎಸ್​ಪಿ) ಶೀಘ್ರದಲ್ಲೇ ಇಬ್ಬಾಗಗೊಳ್ಳಲಿದೆ. ನಾನು ಹೇಳಿರುವುದು ಶೇಕಡ 100ರಷ್ಟು ಸತ್ಯ’ ಎಂದು ಉತ್ತರಪ್ರದೇಶದ ಸಚಿವ ಓಂಪ್ರಕಾಶ್ ರಾಜ್​ಭರ್ ಹೇಳಿದ್ದಾರೆ. ಆದರೆ, ‘ಸಮಾಜವಾದಿ ಪಕ್ಷದಲ್ಲಿ ಯಾವುದೇ ಬಿರುಕುಗಳಿಲ್ಲ. ಇವೆಲ್ಲ ಊಹಾಪೋಹವಷ್ಟೇ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ, ಸಂಸದ ಅಖಿಲೇಶ್ ಯಾದವ್ ಸ್ಪಷ್ಟನೆ ನೀಡಿದ್ದಾರೆ.

ಹೊಸ ಉದಯ

ತಮಿಳುನಾಡಿನಲ್ಲಿ ದಶಕಗಳಿಂದ ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನು ಹಿಂದಿಕ್ಕಿ, ನಟ ಜೋಸೆಫ್ ವಿಜಯ್ ಅವರ ಹೊಸ ಪ್ರಾದೇಶಿಕ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) 2026ರ ಮೇನಲ್ಲಿ ಅಧಿಕಾರ ಹಿಡಿಯುವ ಮೂಲಕ ದಕ್ಷಿಣ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ಪ್ರಮುಖ ಪಕ್ಷಗಳ ಸ್ಥಿತಿಗತಿ

ಶಿವಸೇನೆ: ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳಾಗಿ ಸಂಪೂರ್ಣ ವಿಭಜನೆಯಾಗಿದೆ. ಚುನಾವಣಾ ಆಯೋಗವು ಶಿಂಧೆ ಬಣಕ್ಕೆ ಅಧಿಕೃತ ಚಿಹ್ನೆ ನೀಡಿದೆ. ಪ್ರಸ್ತುತ, ಉದ್ಧವ್ ಬಣದ ಆರು ಸಂಸದರು ಈಗ ಶಿಂಧೆ ಬಣದತ್ತ ವಾಲಿದ್ದಾರೆ. 2022ರ ಜೂನ್​ನಲ್ಲಿ ಏಕನಾಥ್ ಶಿಂಧೆ 39 ಶಾಸಕರ ನೇತೃತ್ವದಲ್ಲಿ ಬಂಡಾಯವೆದ್ದರು. ಪರಿಣಾಮ, ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ ಸರ್ಕಾರ ಪತನಗೊಂಡಿತು. ಮುಂದೆ, ಶಿಂಧೆ ಎನ್​ಡಿಎ ಅನ್ನು ಬೆಂಬಲಿಸಿ, ಮುಖ್ಯಮಂತ್ರಿಯಾದರು. ಈಗ, ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಏಕನಾಥ್ ಪುತ್ರ ಶ್ರೀಕಾಂತ್ ಶಿಂಧೆ ಲೋಕಸಭಾ ಸದಸ್ಯರಾಗಿದ್ದಾರೆ. ಉದ್ಧವ್ ಬಣದ ಶಿವಸೇನೆಯಲ್ಲಿ ಉದ್ಧವ್ ಪುತ್ರ ಆದಿತ್ಯ ಠಾಕ್ರೆಗೆ ಹೆಚ್ಚಿನ ಪ್ರಾಶಸ್ಱ ನೀಡಿರುವುದು ಹಿರಿಯ ನಾಯಕರ, ಸಂಸದರ ಅಸಮಾಧಾನಕ್ಕೆ ಕಾರಣವಾಗಿದೆ. ಜೂನ್ 19ರಂದು ಶಿವಸೇನೆಯ 60ನೇ ವರ್ಷಾಚರಣೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಆದಿತ್ಯರನ್ನು ಉದ್ಧವ್ ಉತ್ತರಾಧಿಕಾರಿಯಾಗಿ ಘೋಷಿಸುವ ಸಾಧ್ಯತೆ ಇದೆ. ಅದಕ್ಕೂ ಮುನ್ನವೇ ಸಂಸದರು ಶಿಂಧೆ ಬಣದತ್ತ ವಾಲಿದ್ದಾರೆ.
ಆಮ್ ಆದ್ಮಿ ಪಾರ್ಟಿ: ಪಂಜಾಬ್​ನಲ್ಲಿ ಅಧಿಕಾರದಲ್ಲಿದ್ದರೂ, ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಣೆಯಾಗುವ ವೇಗ ಕುಂಠಿತಗೊಂಡಿದೆ ಮತ್ತು ನಿರಂತರ ಕಾನೂನು ಹೋರಾಟಗಳಲ್ಲಿ ಮುಳುಗಿದೆ. ಇತ್ತೀಚೆಗಷ್ಟೇ ಯುವ ನಾಯಕ ರಾಘವ್ ಚಡ್ಡಾ ಸೇರಿ ಆಮ್ ಆದ್ಮಿ ಪಕ್ಷದ ಏಳು ರಾಜ್ಯಸಭಾ ಸಂಸದರು, ಬಿಜೆಪಿ ಸೇರಿದ್ದಾರೆ.
ತೃಣಮೂಲ ಕಾಂಗ್ರೆಸ್: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಒಡೆದ ಮನೆಯಾಗಿದೆ. ಕೆಲ ದಿನಗಳ ಹಿಂದಷ್ಟೇ 20 ಸಂಸದರು ಎನ್​ಡಿಎಗೆ ಬೆಂಬಲ ನೀಡಿದ್ದಾರೆ. ಟಿಎಂಸಿಯ ನಾಲ್ವರು ರಾಜ್ಯಸಭಾ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಪಕ್ಷದೊಳಗೆ ಹಿರಿಯ ನಾಯಕರು ಮತ್ತು ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಯುವ ಪಡೆಯ ನಡುವೆ ಆಂತರಿಕ ಶೀತಲ ಸಮರ ನಡೆಯುತ್ತಿದೆ. ಜೊತೆಗೆ ಭ್ರಷ್ಟಾಚಾರದ ಆರೋಪಗಳು ಪಕ್ಷವನ್ನು ಕಾಡುತ್ತಿವೆ.
ಎಐಎಡಿಎಂಕೆ: ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನದ ನಂತರ ಇಪಿಎಸ್ (ಪಳನಿಸ್ವಾಮಿ) ಮತ್ತು ಒಪಿಎಸ್ (ಪನ್ನೀರ್ ಸೆಲ್ವಂ) ಬಣಗಳ ನಡುವಿನ ಕಲಹದಿಂದ ಪಕ್ಷ ತೀವ್ರವಾಗಿ ದುರ್ಬಲಗೊಂಡಿದೆ. ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಅಧಿಕಾರಕ್ಕೆ ಬಂದು, ನಟ ವಿಜಯ್ ಜೋಸೆಫ್ ಮುಖ್ಯಮಂತ್ರಿಯಾದ ಬೆನ್ನಲ್ಲೇ ಎಐಎಡಿಎಂಕೆಯ 20 ಶಾಸಕರು ಟಿವಿಕೆ ಸರ್ಕಾರವನ್ನು ಬೆಂಬಲಿಸಿದ್ದಾರೆ. ಕೆಲವರು ವಿಜಯ್ ಸಂಪುಟವನ್ನೂ ಸೇರಿದ್ದಾರೆ.