ಜಾರ್ಖಂಡ್: ಮೂರು ಪಂದ್ಯಗಳ ಏಕದಿನ ಸರಣಿಯ ಭಾಗವಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ಭಾನುವಾರ (ನ.30) ರಾಂಚಿಯಲ್ಲಿ ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ಶರ್ಮ ಅವರ ಅಬ್ಬರದ ಬ್ಯಾಟಿಂಗ್ 17 ರನ್ಗಳಿಂದ ಗೆಲುವಿಗೆ ಕಾರಣವಾಯಿತು.
ಟೆಸ್ಟ್ ಸರಣಿಯಲ್ಲಿ ಆದ ಕ್ಲೀನ್ ಸ್ವೀಪ್ ಮುಖಭಂಗಕ್ಕೆ ಸೇಡು ತೀರಿಸಿಕೊಳ್ಳಲು ಉತ್ಸಾಹದಲ್ಲಿ ಏಕದಿನ ಅಖಾಡಕ್ಕಿಳಿದ ಭಾರತ ತಂಡಕ್ಕೆ, ವಿರಾಟ್ ಕೊಹ್ಲಿ 135 ರನ್ಗಳ ಭರ್ಜರಿ ಶತಕ ಸಿಡಿಸಿ ತಂಡದ ಗೆಲುವಿನ ಜೊತೆಗೆ ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಿದ್ದಾರೆ. 52ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.
ಸಚಿನ್ ತೆಂಡೂಲ್ಕರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 200 ಪಂದ್ಯಗಳನ್ನಾಡಿದ್ದು, 53.8 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಮತ್ತು 68 ಅರ್ಧಶತಕಗಳು ಸೇರಿವೆ. ಅದೇ ರೀತಿಯಲ್ಲಿ ವಿರಾಟ್ ಇದುವರೆಗೆ 306 ಏಕದಿನ ಪಂದ್ಯಗಳನ್ನಾಡಿದ್ದು, 294 ಇನ್ನಿಂಗ್ಸ್‌ಗಳಲ್ಲಿ 57.7 ಸರಾಸರಿಯಲ್ಲಿ 14,255* ರನ್ ಗಳಿಸಿದ್ದಾರೆ. ಇದರಲ್ಲಿ 52 ಶತಕ ಮತ್ತು 76 ಅರ್ಧಶತಕಗಳು ಸೇರಿವೆ.
ಹೊರಗಿನ ಶಬ್ದ ಯಾವತ್ತೂ ನಾನು ಯಾರು ಎಂಬುದನ್ನು ಬದಲಾಯಿಸಲಾಗಲ್ಲ
ಪಂದ್ಯದ ಬಳಿಕ ಪ್ರಶಸ್ತಿ ಸಮಾರಂಭದಲ್ಲಿ ಹರ್ಷ ಭೋಗ್ಲೆ ಜೊತೆ ಕೊಹ್ಲಿ ಮಾತನಾಡಿದ್ದಾರೆ. ಈ ವೇಳೆ ಹರ್ಷ ಭೋಗ್ಲೆ, ನೀವು ರಾಂಚಿಗೆ ಎರಡು ದಿನ ಮೊದಲೇ ಬಂದು ಬಿದ್ದಿದ್ದೀರಿ. ನಿಮ್ಮ ತಯಾರಿ ಹೇಗಿತ್ತು? ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಕೊಹ್ಲಿ, ನಾನು ಅತಿಯಾದ ತಯಾರಿ ಮಾಡಿಕೊಳ್ಳುವುದರ ದೊಡ್ಡ ಫ್ಯಾನ್ ಅಲ್ಲ. ಇದು ಮಾನಸಿಕ ಆಟ. ನನ್ನ ಸುತ್ತಮುತ್ತ ಏನೇ ಬದಲಾವಣೆಗಳಾದರೂ, ಹೊರಗಿನ ಶಬ್ದ ಯಾವತ್ತೂ ನಾನು ಯಾರು ಎಂಬುದನ್ನು ಬದಲಾಯಿಸಲಾರದು ಎಂದು ಹೇಳಿದ್ದಾರೆ.
ನನ್ನಲ್ಲಿ ಇನ್ನೂ ಹಸಿವು ಇದೆ, ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ. ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳಲು ಬಯಸಿದ್ದೆ, ಹಗಲು ಮತ್ತು ಸಂಜೆ ಕೆಲವು ಸೆಷನ್ ಬ್ಯಾಟಿಂಗ್ ಮಾಡಿದ್ದೆ. ಬಳಿಕ ನನ್ನ ಸಿದ್ದತೆ ಪೂರ್ಣಗೊಂಡಿತು. ಇಂದು ಆ ರೀತಿ ಆಡಲು ನನಗೆ ಸಂತೋಷವಾಯಿತು ಎಂದು ಹೇಳಿದ್ದಾರೆ.
ನನ್ನಲ್ಲಿ ಇನ್ನೂ ಹಸಿವು ಇದೆ, ಹೊರಗಿನ ಶಬ್ದ ಯಾವತ್ತೂ ನಾನು ಯಾರು ಎಂಬುದನ್ನು ಬದಲಾಯಿಸಲಾರದು ಎಂದು ಹೇಳುವ ಮೂಲಕ ಕೊಹ್ಲಿ ನಿವೃತ್ತಿ ಬಗ್ಗೆ ಮಾತನಾಡುವವರಿಗೆ ಖಡಕ್ ಸಂದೇಶವನ್ನು ಕೊಟ್ಟಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).