ಇರುವುದೊಂದೇ ಭೂಮಿ ಮನುಷ್ಯನಿಗಷ್ಟೇ ಅಲ್ಲ! 
ದೇಶ

ಇರುವುದೊಂದೇ ಭೂಮಿ ಮನುಷ್ಯನಿಗಷ್ಟೇ ಅಲ್ಲ!

ರಾಜಶೇಖರ ಜೋಗಿನ್ಮನೆ| 
ಈ ಜಗತ್ತು ಮನುಷ್ಯರೆಂಬ ನಮಗಷ್ಟೇ ಸೇರಿದ್ದಲ್ಲ. ವಾಸ್ತವವಾಗಿ ಇಲ್ಲಿ ನಾವು ಬದುಕಲು ಬೇಕಾದ ಬಹುಪಾಲು ಅಂಶಗಳೇ ಮನುಷ್ಯರಲ್ಲದ ಜೀವಿಗಳ ಕೊಡುಗೆ. ನಾವು ದರ್ಪದಿಂದ ಹೊಸಕಿ ಹಾಕುವ ಕೀಟಗಳಿರಬಹುದು, ಬೇಟೆಯಾಡಿ ತಿನ್ನುವ ಪ್ರಾಣಿ-ಪಕ್ಷಿಗಳಿರಬಹುದು, ನಾಶಮಾಡುವ ಅರಣ್ಯವಿರಬಹುದು... ಇವೆಲ್ಲವೂ ನಮ್ಮ ಜೀವನಕ್ಕೆ ಒಂದಿಲ್ಲೊಂದು ಕಾರಣದಿಂದ ಉಪಕಾರಿಗಳೇ. ಆದರೆ ಅದನ್ನು ಅರ್ಥ ಮಾಡಿಕೊಳ್ಳಲು, ನಾವೇ ಹೆಚ್ಚೆಂಬ ‘ಶ್ರೇಷ್ಠತೆಯ ವ್ಯಸನ’ ನಮ್ಮನ್ನು ಬಿಡುತ್ತಿಲ್ಲ ಅಷ್ಟೇ.
ಈ ಕಟುವಾಸ್ತವವನ್ನು ಅರ್ಥ ಮಾಡಿಕೊಂಡವರಿಗೆ ಜೀವವೈವಿಧ್ಯದ ಕುರಿತಾಗಿ ಕಾಳಜಿಯಿದೆ. ಆದ್ದರಿಂದಲೇ- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮರಳಕುಂಟೆಯಲ್ಲಿ ಅಪರೂಪದ ವೈಟ್ ಸಾಕ್ಸ್ ಟೆರಾಂಟುಲಾ ಜೇಡ ಪತ್ತೆಯಾದರೆ, ಉತ್ತರ ಮತ್ತು ಮಧ್ಯ ಭಾರತದಲ್ಲಿ ಮಾತ್ರ ಕಾಣುವ ಅಪರೂಪದ ಬ್ರೌನ್ ರಾಕ್ ಚಾಟ್ ಪಕ್ಷಿ ಹಂಪಿಯಲ್ಲಿ ಕಾಣಿಸಿಕೊಂಡರೆ, ಇಲ್ಲವೇ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಕಲ್ಲುಬಂಡೆಗಳ ಬೆಟ್ಟದ ಇಳಿಜಾರಿನ ಬಂಡೆಯ ಬುಡದಲ್ಲಿ ಅಪರೂಪದ ನಾಗಾರ್ಜುನ ಸಾಗರ ರೇಸರ್ ಹಾವು ಹರಿದಾಡಿದರೆ- ಅಂಥವರು ಪುಳಕಗೊಳ್ಳುತ್ತಾರೆ. ‘ಪತ್ತೆಯಾಗಿವೆ’ ಎಂದರೆ ಅವು ಇರಲಿಲ್ಲ ಎಂದಲ್ಲ. ನಮ್ಮ ಕಣ್ಣಿಗೆ ಬಿದ್ದಿರಲಿಲ್ಲ ಅಷ್ಟೇ. ಮನುಷ್ಯರ ಹಾಗೆ ಅವೂ ಅದೆಷ್ಟೋ ಕಾಲದಿಂದ ಇವೆ. ವಾಸ್ತವವಾಗಿ ನಾವು ನೀವೆಲ್ಲ ಕಾಣುವ ಥರಾವರಿ ಜೀವ ಸಂಕುಲಗಳು 4 ದಶಲಕ್ಷ ವರ್ಷಗಳ ಜೀವ ವಿಕಾಸದ ಫಲ. ಆದ್ದರಿಂದ ಇವತ್ತಿಗೂ ನಮ್ಮ ಗಮನಕ್ಕೇ ಬಾರದ ಅದೆಷ್ಟೋ ಜೀವಿಗಳು ಈ ಭೂಮಿಯಲ್ಲಿ ವಾಸಿಸುತ್ತಿವೆ. ಮಾತ್ರವಲ್ಲ, ಅವೆಲ್ಲಕ್ಕೂ ಈ ಭೂಮಿಯ ಮೇಲೆ ಅಧಿಕಾರವಿದೆ.

ಜೀವವೈವಿಧ್ಯ ಎಂದರೇನು?

ಸರಳವಾಗಿ ಹೇಳುವುದಾದರೆ, ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅಥವಾ ಇಡೀ ಭೂಮಿಯ ಮೇಲೆ ಇರುವ ಸಸ್ಯಗಳು, ಪ್ರಾಣಿಗಳು, ಸೂಕ್ಷ್ಮಜೀವಿಗಳು ಮತ್ತು ಅವುಗಳ ನಡುವಿನ ಸಂಕೀರ್ಣ ಸಂಬಂಧ. ಬ್ಯಾಕ್ಟೀರಿಯಾದಿಂದ ಬೃಹತ್ ಪ್ರಾಣಿಗಳವರೆಗೆ, ಮೊಳಕೆಯಿಂದ ಗಗನಚುಂಬಿ ಮರದವರೆಗೆ ಅದರ ವಿಸ್ತಾರ. ಭೂಮಿ, ಸಮುದ್ರ ಮತ್ತು ಇತರ ಜಲವಾಸಿ ಪರಿಸರ ವ್ಯವಸ್ಥೆಗಳು ಇದರ ಭಾಗ. ನೈಸರ್ಗಿಕ ಸಮತೋಲನ, ಶುದ್ಧ ನೀರು, ಶುದ್ಧಗಾಳಿ ಮತ್ತು ಆಹಾರ ಭದ್ರತೆಗೆ ಜೀವವೈವಿಧ್ಯ ಬೇಕು. ಮುಖ್ಯವಾಗಿ ಮನುಷ್ಯನ ಬದುಕಿನೊಂದಿಗೆ ನೇರ ಸಂಬಂಧ ಹೊಂದಿರುವ ತಳಿ, ಪ್ರಭೇದ ಮತ್ತು ಪರಿಸರ ವ್ಯವಸ್ಥೆ ಎಂಬ ಮೂರು ಹಂತಗಳಲ್ಲಿ ಜೀವವೈವಿಧ್ಯದ ಪಾತ್ರವಿದೆ.

ತಳಿ ವೈವಿಧ್ಯ

ಒಂದೇ ಪ್ರಭೇದದ ಜೀವಿಗಳ ನಡುವೆ ಇರುವ ವಂಶವಾಹಿ ಅಥವಾ ಡಿಎನ್​ಎ ವ್ಯತ್ಯಾಸಗಳನ್ನು ಇದು ಸೂಚಿಸುತ್ತದೆ. ಉದಾ: ಭತ್ತದಲ್ಲಿ ಸಾವಿರಾರು ತಳಿಗಳಿವೆ, ಮನುಷ್ಯರಲ್ಲಿ ಬಣ್ಣ ಮತ್ತು ರೂಪದಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಒಬ್ಬರಂತೆ ಮತ್ತೊಬ್ಬರಿಲ್ಲ. ಈ ವೈವಿಧ್ಯ ಏಕೆ, ಒಂದೇ ರೀತಿ ಇದ್ದರಾಗದೇ? ಎಂದರೆ ‘ಆಗದು’ ಎಂಬುದೇ ಉತ್ತರ. ಏಕೆಂದರೆ ಒಂದೇ ತೆರನಾದ ಬೆಳೆಗಳ, ತಳಿಗಳ ಬಳಕೆ (ಮೊನೊಕಲ್ಚರ್) ಯುರೋಪಿನ ಮದ್ಯಸಾರ ಉದ್ಯಮ 1800ರಲ್ಲಿ ಕುಸಿದೇ ಹೋಗಲು ಕಾರಣವಾದಂಥ ಹಲವಾರು ಕೃಷಿ ದುರಂತಗಳಿಗೆ ಕಾರಣವಾಗಿದೆ.
1846ರಲ್ಲಿ ಐರಿಷ್ ಪೊಟೆಟೊ ಬ್ಲೈಟ್ ಹೆಸರಿನ ಆಲೂಗಡ್ಡೆ ರೋಗವು ಸುಮಾರು ಒಂದು ದಶಲಕ್ಷ ಜನರ ಸಾವಿಗೆ ಕಾರಣವಾಯಿತು. ಅಷ್ಟೇ ಸಂಖ್ಯೆಯ ಜನರು ವಲಸೆ ಹೋಗಬೇಕಾಯಿತು. ಈ ದುರಂತಕ್ಕೆ ಆಲೂಗಡ್ಡೆಯ ಕೇವಲ ಎರಡೇ ವಿಧದ ಬೆಳೆಗೆ ಆದ್ಯತೆ ನೀಡಿದ್ದು ಮತ್ತು ಇವೆರಡೂ ತಳಿಗಳು ಸುಲಭವಾಗಿ ರೋಗಕ್ಕೆ ತುತ್ತಾಗಬಲ್ಲವಾಗಿದ್ದವು ಎನ್ನುವುದೇ ಕಾರಣ. ಅದೇ ರೀತಿ 120 ವರ್ಷಗಳ ನಂತರ ಅಂದರೆ 1970ರ ಸುಮಾರಿಗೆ ಇಂಡೋನೇಷ್ಯಾದಿಂದ ಭಾರತದವರೆಗಿನ ಭತ್ತದ ಗದ್ದೆಗಳಿಗೆ ರೈಸ್ ಗ್ರಾಸ್ಸಿ ಸ್ಟಂಟ್ ವೈರಸ್ ಸೋಂಕು ತಗುಲಿತ್ತು. ಇದರ ಪ್ರತಿರೋಧ ಶಕ್ತಿಗಾಗಿ 6273 ವಿಧದ ತಳಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಅದರ ಫಲಿತವೆಂದರೆ ನಾಲ್ಕು ವರ್ಷಗಳ ಮುಂಚೆ ಅಂದರೆ 1966ರಲ್ಲಿ ಭಾರತೀಯರು ಕಂಡುಹಿಡಿದ ಒಂದು ಭತ್ತದ ತಳಿ ಆ ಐರಿಷ್ ತಳಿಗೆ ತದ್ವಿರುದ್ಧವಾದ ಪ್ರತಿರೋಧಕ ಶಕ್ತಿ ಹೊಂದಿತ್ತು. 1970ರಲ್ಲಿ ಶ್ರೀಲಂಕಾ, ಬ್ರೆಜಿಲ್ ಮತ್ತು ಮಧ್ಯ ಅಮೆರಿಕದ ಕಾಫಿ ತೋಟಗಳಲ್ಲಿ ಕಾಫಿ ರಸ್ಟ್ ಎಂಬ ರೋಗ ಹರಡಿತು. ಅದರ ಪ್ರತಿರೋಧಕ ಶಕ್ತಿಯುಳ್ಳ ಕಾಫಿ ಬೆಳೆಯನ್ನು ಇಥಿಯೋಪಿಯಾದಲ್ಲಿ ಕಂಡುಹಿಡಿಯಲಾಯಿತು. ತಳಿವೈವಿಧ್ಯದ ಅಗಾಧ ಸಾಧ್ಯತೆಗಳಿವು.

ಪ್ರಭೇದ ವೈವಿಧ್ಯ

ಒಂದು ಪ್ರದೇಶದಲ್ಲಿ ವಾಸಿಸುವ ವಿವಿಧ ರೀತಿಯ ಜೀವಿಗಳ ಸಂ.ಖ್ಯೆ ಮತ್ತು ವೈವಿಧ್ಯವೇ ಪ್ರಭೇದ ವೈವಿಧ್ಯ. ಹುಲಿ, ಜಿಂಕೆ, ವಿವಿಧ ಹಕ್ಕಿಗಳು ಮತ್ತು ಕೀಟಗಳಂಥ ವನ್ಯಜೀವಿಗಳು ಈ ಗುಂಪಿಗೆ ಸೇರುತ್ತವೆ. ಪ್ರಾಣಿಗಳು ಆಹಾರ ಸರಪಳಿಯ ಪ್ರಮುಖ ಕೊಂಡಿ. ಹುಲಿ, ಸಿಂಹದಂತಹ ಪ್ರಾಣಿಗಳು ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡುತ್ತವೆ. ಒಂದು ವೇಳೆ ಈ ಮಾಂಸಾಹಾರಿ ಪ್ರಾಣಿಗಳ ಪ್ರಭೇದ ಕ್ಷೀಣಿಸಿದರೆ, ಸಸ್ಯಾಹಾರಿಗಳ ಸಂಖ್ಯೆ ಹೆಚ್ಚಾಗಿ ಕಾಡುಗಳು ನಾಶವೇ ಆಗಬಹುದು. ಆನೆ, ಮಂಗಗಳಂತಹ ಪ್ರಾಣಿಗಳು, ಹಕ್ಕಿಗಳು ಹಣ್ಣುಗಳನ್ನು ತಿಂದು ದೂರದ ಪ್ರದೇಶಗಳಲ್ಲಿ ಬೀಜಗಳನ್ನು ವಿಸರ್ಜಿಸುತ್ತವೆ. ಇದು ಕಾಡು ಬೆಳೆಯಲು ಮತ್ತು ಹೊಸ ಪ್ರದೇಶಗಳಲ್ಲಿ ಸಸ್ಯ ಪ್ರಭೇದ ಹರಡಲು ಸಹಾಯ ಮಾಡುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದಕ್ಕೆ ಸೂಕ್ತ ಉದಾಹರಣೆ ಕೀಟಗಳು. ಅವು ಗಾತ್ರದಲ್ಲಿ ಚಿಕ್ಕವು. ಆದರೆ ಮಾಡುವ ಕೆಲಸ ದೊಡ್ಡದು. ನಾವು ತಿನ್ನುವ ಶೇಕಡ 70ಕ್ಕೂ ಹೆಚ್ಚು ಬೆಳೆಗಳು ಕೀಟಗಳ ಪರಾಗಸ್ಪರ್ಶದ ಮೇಲೆ ಅವಲಂಬಿತವಾಗಿವೆ ಎನ್ನುವುದೇ ಅವುಗಳ ಕೊಡುಗೆಗೆ ಸಾಕ್ಷಿ. ಇನ್ನು ಇರುವೆ ಮತ್ತು ಗೆದ್ದಲುಗಳು. ಮಣ್ಣನ್ನು ಕೊರೆದು ನೆಲದಲ್ಲಿ ಗಾಳಿಯಾಡುವಂತೆ ಮಾಡುತ್ತವೆ ಮತ್ತು ಸಾವಯವ ವಸ್ತುಗಳನ್ನು ವಿಘಟಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತವೆ.

ಪರಿಸರ ವ್ಯವಸ್ಥೆ

ಭೂಮಿಯ ಮೇಲಿರುವ ವಿಭಿನ್ನ ಪರಿಸರ ತಾಣಗಳನ್ನು ಇದು ಸೂಚಿಸುತ್ತದೆ. ಉದಾಹರಣೆಗೆ, ಮಳೆಕಾಡುಗಳು, ಮರುಭೂಮಿಗಳು, ಹವಳದ ದಿಬ್ಬಗಳು, ನದಿಗಳು ಮತ್ತು ಹುಲ್ಲುಗಾವಲುಗಳು. ಪ್ರತಿಯೊಂದು ಪರಿಸರ ವ್ಯವಸ್ಥೆಯು ತನ್ನದೇ ಆದ ವಿಶಿಷ್ಟ ಜೀವಿ ಸಮೂಹವನ್ನು ಹೊಂದಿರುತ್ತದೆ. ನಾವು ಸೇವಿಸುವ ಆಹಾರ, ಕುಡಿಯುವ ನೀರು ಮತ್ತು ಉಸಿರಾಡುವ ಶುದ್ಧ ಗಾಳಿಗೆ ಈ ಜೀವವೈವಿಧ್ಯವೇ ಮೂಲ. ಹೆಚ್ಚಿನ ಔಷಧಗಳನ್ನು ಸಸ್ಯ ಮತ್ತು ಪ್ರಾಣಿ ಮೂಲಗಳಿಂದಲೇ ತಯಾರಿಸಲಾಗುತ್ತದೆ. ಕಾಡುಗಳು ಮತ್ತು ಸಾಗರಗಳು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ನೆರವಾಗುತ್ತವೆ.

ಮೂರ್ಖ ಯೋಜನೆಯಿಂದ ಅಸಮತೋಲನ!

ಪ್ರಮಾಣದಲ್ಲಿ ಅರಣ್ಯ ಉಳಿದಿಲ್ಲ. ನಾಡಿಗೆ ಮಳೆ ತರುವ, ನದಿಗಳ ಹುಟ್ಟಿಗೆ ಕಾರಣವಾದ ಪಶ್ಚಿಮಘಟ್ಟ ಅಪಾಯದಲ್ಲಿದೆ. ಅಲ್ಲಿ ಗುಡ್ಡ ಕುಸಿತದಂಥ ದುರಂತ ಸಂಭವಿಸುತ್ತಿದ್ದರೂ ಸುರಂಗ ಮಾರ್ಗದಂತಹ ಯೋಜನೆಗಳಿಗೆ ಸರ್ಕಾರ ಮುಂದಾಗುತ್ತದೆ. ಬೇಡ್ತಿ-ವರದಾ, ಅಘನಾಶಿನಿ-ಹೇಮಾವತಿ ಇತ್ಯಾದಿ ನದಿಗಳ ಜೋಡಣೆಯೆಂಬ ಮೂರ್ಖ ಯೋಜನೆಗಳ ಹೆಸರಿನಲ್ಲಿ ಮತ್ತಷ್ಟು ಅರಣ್ಯನಾಶಕ್ಕೆ, ಜೀವವೈವಿಧ್ಯದ ನೆಲೆಯನ್ನೇ ದುರ್ಬಲಗೊಳಿಸುವ ಅವೈಜ್ಞಾನಿಕ ಹೆಜ್ಜೆಯಿಡುತ್ತದೆ. ಖನಿಜ ನಿಕ್ಷೇಪ, ಅಣುಸ್ಥಾವರ ಎಂದೆಲ್ಲ ಹೇಳುತ್ತ ಪಶ್ಚಿಮ ಘಟ್ಟದ ಒಡಲಿಗೇ ಕೈಹಾಕುತ್ತವೆ. ಪರಿಸರ ಸಮತೋಲನ ಕಾಪಾಡಲು ಕ್ರಮಕೈಗೊಳ್ಳಬೇಕಿದ್ದ ಸರ್ಕಾರಗಳೇ ಸ್ವತಃ ಸಮತೋಲನ ಕಳೆದುಕೊಂಡಂತೆ ವರ್ತಿಸುತ್ತಿವೆ.

ಅಪಾಯದ ಸುಳಿಯಲ್ಲಿ

1970ರಿಂದೀಚೆಗೆ ಸಸ್ತನಿಗಳು, ಮೀನುಗಳು, ಪಕ್ಷಿಗಳು, ಸರಿಸೃಪಗಳು ಮತ್ತು ಉಭಯಚರಗಳ ಜಾಗತಿಕ ಸಂಖ್ಯೆಯಲ್ಲಿ ಸರಾಸರಿ ಶೇ. 73 ಇಳಿಕೆಯಾಗಿದೆ - 2024ರ ಲಿವಿಂಗ್ ಪ್ಲಾನೆಟ್ ವರದಿ.
ಪ್ರಸ್ತುತ 10 ಲಕ್ಷ ಪ್ರಾಣಿ ಮತ್ತು ಸಸ್ಯ ಪ್ರಭೇದಗಳು ಅಳಿವಿನ ಅಂಚಿನಲ್ಲಿವೆ. ಇದು ಮಾನವ ಇತಿಹಾಸದಲ್ಲೇ ಅತಿ ಹೆಚ್ಚು - 2019ರ ಜಾಗತಿಕ ಮೌಲ್ಯಮಾಪನ ವರದಿ.
ಆಗ್ನೇಯ ಏಷ್ಯಾದ ಬೃಹತ್ ದ್ವೀಪ ಬೋರ್ನಿಯೋ. ಅದು 1,400ಕ್ಕೂ ಹೆಚ್ಚು ಪ್ರಾಣಿ ಪ್ರಭೇದಗಳು ಮತ್ತು ಕನಿಷ್ಠ 15,000 ಸಸ್ಯ ಪ್ರಭೇದಗಳಿಗೆ ನೆಲೆಯಾಗಿದೆ. ಒರಾಂಗುಟಾನ್‌ಗಳು, ಪಿಗ್ಮಿ ಆನೆಗಳು ಮತ್ತು ವಿಶ್ವದ ಎತ್ತರದ ಉಷ್ಣವಲಯದ ಮರಗಳು ಇಲ್ಲಿವೆ. ಆದರೆ, ಕಳೆದ 40 ವರ್ಷಗಳಲ್ಲಿ ಬೋರ್ನಿಯೋದ ಶೇ. 30ರಷ್ಟು ಕಾಡುಗಳು ನಾಶವಾಗಿವೆ. ಕಳೆದ 20 ವರ್ಷಗಳಲ್ಲಿ ನಾವು ಅರ್ಧದಷ್ಟು ಬೋರ್ನಿಯನ್ ಒರಾಂಗುಟಾನ್‌ಗಳನ್ನು ಕಳೆದುಕೊಂಡಿದ್ದೇವೆ. ಗಣಿಗಾರಿಕೆ, ರಬ್ಬರ್, ಚಿನ್ನ ಮತ್ತು ತಾಳೆ ಎಣ್ಣೆ ತೋಟಗಳಿಗಾಗಿ ಕಾಡುಗಳನ್ನು ನಾಶಪಡಿಸಲಾಗುತ್ತಿದೆ.

ಜೈವಿಕ ಕಾಯ್ದೆ ಬಳಸದ ಅರಣ್ಯ ಇಲಾಖೆ!

ರಾಜ್ಯ ಜೈವಿಕ ವೈವಿಧ್ಯ ಮಂಡಳಿ ಅಸ್ತಿತ್ವದಲ್ಲಿದೆ. ಜೀವ ವೈವಿಧ್ಯದ ಸಂರಕ್ಷಣೆ, ಅದರ ಘಟಕಗಳ ಸುಸ್ಥಿರ ಬಳಕೆ ಮತ್ತು ಸಂಪನ್ಮೂಲಗಳಿಂದ ಬರುವ ಲಾಭದ ನ್ಯಾಯಯುತ ಹಂಚಿಕೆ ಇತ್ಯಾದಿ ಜವಾಬ್ದಾರಿಗಳು ಅದಕ್ಕಿವೆ. ಭಾರತೀಯ ನಾಗರಿಕರು ಅಥವಾ ಭಾರತದಲ್ಲಿ ನೋಂದಾಯಿತವಾದ ಕಂಪನಿಗಳು ವಾಣಿಜ್ಯ ಉದ್ದೇಶಗಳಿಗಾಗಿ ಜೈವಿಕ ಸಂಪನ್ಮೂಲಗಳನ್ನು ಬಳಸಲು ಬಯಸಿದರೆ, ಅವರು ಸಂಬಂಧಪಟ್ಟ ರಾಜ್ಯ ಜೈವಿಕ ವೈವಿಧ್ಯ ಮಂಡಳಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂಬೆಲ್ಲ ಅಂಶಗಳು ಜೀವವೈವಿಧ್ಯ ಕಾಯ್ದೆಯಲ್ಲಿವೆ. ಅಲ್ಲದೆ, ಈ ಕಾಯ್ದೆಯ ಉಲ್ಲಂಘನೆಯಾದರೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ದುರಂತವೆಂದರೆ ಈ ಕಾಯ್ದೆಯನ್ನು ಅರಣ್ಯ ಇಲಾಖೆಯವರು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಕಾಡಿನ ಗಿಡಮೂಲಿಕೆಗಳನ್ನು ಅಕ್ರಮವಾಗಿ ಯಾವುದೋ ಕಂಪನಿಯವರು ಬೃಹತ್ ಪ್ರಮಾಣದಲ್ಲಿ ಕೊಂಡೊಯ್ಯುವುದನ್ನು ನಿಯಂತ್ರಿಸಲು ಈ ಕಾಯ್ದೆ ಅಸ್ತ್ರವಾಗುವುದಿಲ್ಲ. ಏಕೆಂದರೆ ಅರಣ್ಯ ಇಲಾಖೆಯವರಿಗೆ ಈ ಕಾಯ್ದೆಯನ್ನು ಬಳಸಲು ಅದೇನು ಅಡ್ಡಿಯೋ ಗೊತ್ತಿಲ್ಲ ಎನ್ನುತ್ತಾರೆ ಪರಿಸರವಾದಿಗಳು.