ದೀದಿಯ 'ಸಾರಥಿ'ಯಾಗಿದ್ದವನೇ ಈಗ ಬಂಗಾಳದ 'ಅಧಿಪತಿ': ಮಮತಾ ಶಿಷ್ಯನಿಂದ ಕೇಸರಿ ಪಡೆಯ ಮೊದಲ ಸಿಎಂವರೆಗೆ ಸುವೇಂದು ರಾಜಕೀಯ ಪಯಣ!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಕಳೆದ ಹಲವು ದಶಕಗಳಿಂದ ಕಮ್ಯುನಿಸ್ಟ್ ಮತ್ತು ತೃಣಮೂಲ ಕಾಂಗ್ರೆಸ್ ಹಿಡಿತದಲ್ಲಿದ್ದ ಬಂಗಾಳದ ಗದ್ದುಗೆಯನ್ನು ಅಂತಿಮವಾಗಿ ಬಿಜೆಪಿ ವಶಪಡಿಸಿಕೊಂಡಿದೆ. ಈ ಐತಿಹಾಸಿಕ ಬದಲಾವಣೆಯ ಕೇಂದ್ರಬಿಂದುವಾಗಿ ಉದಯಿಸಿರುವ ನಾಯಕನೇ ಸುವೇಂದು ಅಧಿಕಾರಿ(Suvendu Adhikari). ಶುಕ್ರವಾರ ಕೋಲ್ಕತ್ತಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸುವೇಂದು ಹೆಸರನ್ನು ಅಧಿಕೃತವಾಗಿ ಘೋಷಿಸುವ ಮೂಲಕ, ಬಂಗಾಳದ ಮೊದಲ ಬಿಜೆಪಿ ಸಿಎಂ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ದೀದಿ ಕೋಟೆಗೆ ಎರಡು ಬಾರಿ ಕನ್ನ ಹಾಕಿದ 'ನಂದಿಗ್ರಾಮದ ಹುಲಿ'
ಸುವೇಂದು ಅಧಿಕಾರಿ ಅವರ ಈ ಪಯಣ ಸುಲಭದ್ದಾಗಿರಲಿಲ್ಲ. ಮಮತಾ ಬ್ಯಾನರ್ಜಿಯವರ ನೆರಳಿನಲ್ಲೇ ಬೆಳೆದಿದ್ದ ಅವರು, ಕಳೆದ ಐದು ವರ್ಷಗಳಲ್ಲಿ ಮಮತಾಗೆ ಎರಡು ಬಾರಿ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿದ್ದಾರೆ.
2021ರ ನಂದಿಗ್ರಾಮ ಸಮರ: ತಮ್ಮ ತವರು ನೆಲ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸಿ ದೇಶದ ಗಮನ ಸೆಳೆದಿದ್ದರು.
2026ರ ಭವಾನಿಪುರ ವಿಜಯ: ಮಮತಾ ಬ್ಯಾನರ್ಜಿಯವರ ಅಭೇದ್ಯ ಕೋಟೆ ಎಂದೇ ಕರೆಯಲ್ಪಡುವ ಭವಾನಿಪುರದಲ್ಲೇ ದೀದಿಯನ್ನು ಸೋಲಿಸುವ ಮೂಲಕ ಸುವೇಂದು ತಮ್ಮ ಪರಾಕ್ರಮ ಮೆರೆದಿದ್ದಾರೆ.
ಜನನ ಮತ್ತು ಶೈಕ್ಷಣಿಕ ಹಿನ್ನೆಲೆ
1970 ಡಿಸೆಂಬರ್ 15 ರಂದು ಪಶ್ಚಿಮ ಬಂಗಾಳದ ಕರ್ಕುಲಿಯಲ್ಲಿ ಜನಿಸಿದ ಸುವೇಂದು ಅಧಿಕಾರಿ, ರಾಜ್ಯದ ಪ್ರಬಲ 'ಮಹಿಷ್ಯ ಕ್ಷತ್ರಿಯ' ಸಮುದಾಯಕ್ಕೆ ಸೇರಿದವರು.
ಶಾಲಾ ಶಿಕ್ಷಣ: ಪೂರ್ವ ಮೇದಿನಿಪುರದ ಕಂಠಿ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿದರು.
ಪದವಿ: ಕಂಠಿಯ ಪ್ರವತ್ ಕುಮಾರ್ ಕಾಲೇಜಿನಲ್ಲಿ (ವಿದ್ಯಾಸಾಗರ್ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿದೆ) ಬಿ.ಎ. ಪದವಿ ಪಡೆದರು.
ಸ್ನಾತಕೋತ್ತರ ಪದವಿ: ಸುವೇಂದು ಅವರು ಕೋಲ್ಕತ್ತಾದ ಪ್ರತಿಷ್ಠಿತ ರವೀಂದ್ರ ಭಾರತಿ ವಿಶ್ವವಿದ್ಯಾಲಯದಿಂದ 2011ರಲ್ಲಿ ಮಾಸ್ಟರ್ ಆಫ್ ಆರ್ಟ್ಸ್ (M.A.) ಪದವಿ ಪಡೆದಿದ್ದಾರೆ. ವಿಶೇಷವೆಂದರೆ, ಅವರು ಪದವಿ ಪಡೆದ ಈ ವಿಶ್ವವಿದ್ಯಾಲಯವು ಕವಿಗುರು ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಸ್ಥಾಪಿತವಾದದ್ದು.
ಇತರ ಶಿಕ್ಷಣ: ಅವರ ಸಂಸದೀಯ ಪ್ರೊಫೈಲ್ ಪ್ರಕಾರ, ಅವರು ನೇತಾಜಿ ಸುಭಾಷ್ ಮುಕ್ತ ವಿಶ್ವವಿದ್ಯಾಲಯದಲ್ಲೂ ವ್ಯಾಸಂಗ ಮಾಡಿದ್ದಾರೆ.
ರಾಜಕೀಯ ರಕ್ತದಲ್ಲೇ ಬಂದಿದೆ 'ಅಧಿಕಾರ'!
ಸುವೇಂದು ಅಧಿಕಾರಿ ಅವರಿಗೆ ರಾಜಕೀಯ ಹೊಸದೇನಲ್ಲ. ಇಡೀ ಅಧಿಕಾರಿ ಕುಟುಂಬವೇ ಬಂಗಾಳದ ರಾಜಕೀಯದಲ್ಲಿ ದಶಕಗಳಿಂದ ಸಕ್ರಿಯವಾಗಿದೆ.
ತಂದೆ: ಸುವೇಂದು ಅವರ ತಂದೆ ಶಿಶಿರ್ ಅಧಿಕಾರಿ ಅವರು ಪಶ್ಚಿಮ ಬಂಗಾಳ ವಿಧಾನಸಭೆ ಮತ್ತು ಲೋಕಸಭೆಯ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವಿ ನಾಯಕರು.
ಸಹೋದರರು: ಸುವೇಂದು ಅವರ ಇಬ್ಬರು ಸಹೋದರರು ಕೂಡ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಸೌಮೇಂದು ಅಧಿಕಾರಿ ಅವರು ಕಾಂಠಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರೆ, ದಿವ್ಯೇಂದು ಅಧಿಕಾರಿ ಅವರು 2019 ರಲ್ಲಿ ತಮ್ಲುಕ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.
ಬಂಗಾಳದ ಕೇಸರಿ ಕ್ರಾಂತಿಯ ಮಾಸ್ಟರ್‌ಮೈಂಡ್
ಬಿಜೆಪಿಯ ಈ ಭರ್ಜರಿ ಜಯದ ಹಿಂದೆ ಸುವೇಂದು ಅಧಿಕಾರಿ ಅವರ ತಂತ್ರಗಾರಿಕೆ ಅಡಗಿದೆ. ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ, ಭ್ರಷ್ಟಾಚಾರ ಮತ್ತು ನಿರುದ್ಯೋಗದ ವಿರುದ್ಧ ಅವರು ನಡೆಸಿದ ಹೋರಾಟವೇ ಇಂದು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದೆ. 2021ರ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಪ್ರತಿಭಟನೆ ಮತ್ತು ನಬನ್ನಾ ಚಲೋದಂತಹ ಹೋರಾಟಗಳ ಮುಂಚೂಣಿಯಲ್ಲಿದ್ದ ಸುವೇಂದು, ಜನರ ಪಾಲಿನ ನೈಜ ನಾಯಕನಾಗಿ ಮೂಡಿಬಂದಿದ್ದಾರೆ.
ಟಿಎಂಸಿಯ ಬೆಳವಣಿಗೆ ಮತ್ತು ಸುವೇಂದು ಪಾತ್ರ
2007ರಲ್ಲಿ ನಂದಿಗ್ರಾಮದ ಭೂಸ್ವಾಧೀನ ವಿರೋಧಿ ಚಳವಳಿಯ ನೇತೃತ್ವ ವಹಿಸಿದ್ದವರು ಇದೇ ಸುವೇಂದು ಅಧಿಕಾರಿ. ಭೂಮಿ ಉಚ್ಚೇದ ಪ್ರತಿರೋಧ ಸಮಿತಿ ಮೂಲಕ ಅವರು ನಡೆಸಿದ ಹೋರಾಟವೇ ಮಮತಾ ಬ್ಯಾನರ್ಜಿಯನ್ನು ಬಂಗಾಳದ ಸಿಎಂ ಪೀಠದ ಮೇಲೆ ಕೂರಿಸಿತ್ತು.
ಅದಾದ ನಂತರ, ಮಮತಾ ಅವರನ್ನು ಜಂಗಲ್ ಮಹಲ್ ಜಿಲ್ಲೆಗಳ ಉಸ್ತುವಾರಿಯನ್ನಾಗಿ ಮಾಡಿದ್ದರು.
2009ರಲ್ಲಿ ತಮ್ಲುಕ್ ಕ್ಷೇತ್ರದಿಂದ ಸಂಸದರಾಗಿ ಮತ್ತು 2016ರಲ್ಲಿ ನಂದಿಗ್ರಾಮದ ಶಾಸಕರಾಗಿ ಆಯ್ಕೆಯಾಗಿ ಮಮತಾ ಸಂಪುಟದಲ್ಲಿ ಸಾರಿಗೆ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಟ್ವಿಸ್ಟ್ ಕೊಟ್ಟ 'ಅಭಿಷೇಕ್' ಪ್ರವೇಶ: ಟಿಎಂಸಿಗೆ ವಿದಾಯ
ಸುವೇಂದು ಮತ್ತು ಮಮತಾ ನಡುವಿನ ಬಿರುಕಿಗೆ ಮುಖ್ಯ ಕಾರಣ ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ರಾಜಕೀಯ ಪ್ರವೇಶವಾಗಿದೆ. ಪಕ್ಷದ ನಿರ್ಧಾರಗಳಲ್ಲಿ ಅಭಿಷೇಕ್ ಹಸ್ತಕ್ಷೇಪ ಹೆಚ್ಚಾದಾಗ ಮತ್ತು ಸುವೇಂದು ಬೆಂಬಲಿಗರನ್ನು ಮೂಲೆಗುಂಪು ಮಾಡಿದಾಗ, 2020ರ ಡಿಸೆಂಬರ್‌ನಲ್ಲಿ ಸುವೇಂದು ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಅಂದು ಅವರು ಕೈಗೊಂಡ ಆ ಒಂದು ನಿರ್ಧಾರ ಇಂದು ಬಂಗಾಳದ ರಾಜಕೀಯ ದಿಕ್ಕನ್ನೇ ಬದಲಿಸಿದೆ.
ನಾಳೆ ರವೀಂದ್ರ ಜಯಂತಿಯಂದೇ ಪಟ್ಟಾಭಿಷೇಕ
ಸುವೇಂದು ಅಧಿಕಾರಿ ಅವರ ಹೆಸರನ್ನು ದಿಲೀಪ್ ಘೋಷ್ ಪ್ರಸ್ತಾಪಿಸಿದ್ದು, ಎಲ್ಲಾ ಶಾಸಕರು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ಮೇ 9ರಂದು ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರ ಜಯಂತಿಯಂದು ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಗ್ರೌಂಡ್‌ನಲ್ಲಿ ಸುವೇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ,(ಏಜೆನ್ಸೀಸ್).