The most common form of foreign donation 
ದೇಶ

ವಿದೇಶಿ ದೇಣಿಗೆಯ ವಿರಾಟ ರೂಪ

ಸ್ವಯಂಸೇವಾ ಸಂಸ್ಥೆಗಳು (ಎನ್​ಜಿಒ) ವಿದೇಶಿ ದೇಣಿಗೆ ಪಡೆಯುವ ಮತ್ತು ಬಳಸುವ "ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ' ನಿಯಮಗಳನ್ನು ಕೇಂದ್ರ ಗೃಹ ಸಚಿವಾಲಯ ತಿದ್ದುಪಡಿ ಮಾಡಿದ್ದು, ನಿಯಮ ಉಲ್ಲಂಘನೆಯ ದಂಡವನ್ನು ಪರಿಷ್ಕರಿಸಿದೆ. ಹೊಸ ನಿಯಮಗಳ ಪ್ರಕಾರ, ಆಡಳಿತಾತ್ಮಕ ವೆಚ್ಚಗಳ ಮಿತಿ ಉಲ್ಲಂಘನೆಗೆ 1 ಲಕ್ಷ ರೂ. ಅಥವಾ ಶೇಕಡ 5ರಷ್ಟು ದಂಡ ವಿಧಿಸಲಾಗುತ್ತದೆ. ಊಹಾತ್ಮಕ ಅಥವಾ ಷೇರು ಮಾರುಕಟ್ಟೆ ಚಟುವಟಿಕೆಗಳಿಗೆ ದೇಣಿಗೆ ಬಳಸಿದರೆ ಶೇಕಡ 30ರಷ್ಟು ದಂಡ ಹಾಗೂ ಅದರಿಂದ ಗಳಿಸಿದ ಲಾಭವನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಧಾರ್ಮಿಕ ಶಿಕ್ಷಣ ಮತ್ತು ಸ್ಥಳೀಯ ನಂಬಿಕೆಗಳ ಸಂರಕ್ಷಣೆಯ ಹೆಸರಿನಲ್ಲಿ ಮತಾಂತರ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಎನ್​ಜಿಒಗಳು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ವಿವರ ಹಾಗೂ ನಿಖರ ಕಾರ್ಯಕ್ಷೇತ್ರವನ್ನು ಘೋಷಿಸಬೇಕು. ಲೈಸೆನ್ಸ್​ ನವೀಕರಣಕ್ಕಾಗಿ, ಕಳೆದ ಎರಡು ವರ್ಷಗಳಲ್ಲಿ ಕನಿಷ್ಠ 10 ಲಕ್ಷ ರೂ. ವಿದೇಶಿ ಹಣವನ್ನು ನಿಗದಿತ ಉದ್ದೇಶಕ್ಕೆ ಬಳಸಿರಬೇಕು ಎಂದು ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಕೇಂದ್ರ ಸರ್ಕಾರ ಈ ನಿಯಮಗಳನ್ನು ಬಿಗಿ ಮಾಡಿದ್ದೇಕೆ? ಇದರ ಹಿಂದಿನ उद्देश्यವೇನು? ಯಾವೆಲ್ಲ ಉದ್ದೇಶಗಳಿಗೆ ವಿದೇಶಿ ಹಣ ಬಳಕೆ ಆಗುತ್ತಿದೆ? ಈ ಕುರಿತ ವಿವರ ಇಲ್ಲಿದೆ.
ವಿದೇಶಿ ದೇಣಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಕ್ರಮವು ದೇಶದ ಸುರಕ್ಷತೆ ಮತ್ತು ಆರ್ಥಿಕ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಇದು ಕಾನೂನುಬಾಹಿರ ಚಟುವಟಿಕೆಗಳಿಗೆ ವಿದೇಶಿ ಹಣ ಬಳಕೆಯಾಗುವುದನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ಪಾರದರ್ಶಕ ವ್ಯವಸ್ಥೆಯನ್ನು ರೂಪಿಸುತ್ತದೆ. ಹೊಸ ತಿದ್ದುಪಡಿಯ ಪ್ರಕಾರ, ಎನ್​ಜಿಒಗಳು ತಾವು ಕಾರ್ಯನಿರ್ವಹಿಸುವ ನಿಗದಿತ ಚಟುವಟಿಕೆಗಳು ಮತ್ತು ಭೌಗೋಳಿಕ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರಬೇಕು ಹಾಗೂ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳು ಸೇರಿದಂತೆ ಇತರ ಪ್ರಕಟಣೆಗಳ ವಿವರಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕಿದೆ. ಆಯಾ ವರ್ಷದಲ್ಲಿ ಪುಸ್ತಕಗಳು, ನಿಯತಕಾಲಿಕೆಗಳು ಅಥವಾ ಪತ್ರಿಕಾ ಲೇಖನಗಳನ್ನು ಪ್ರಕಟಿಸಿದ್ದಲ್ಲಿ ಅದರ ವಿವರವನ್ನೂ ನೀಡಬೇಕು. ಭಾರತೀಯ ಮೂಲದವರಲ್ಲದ ವಿದೇಶಿ ಪ್ರಜೆಗಳನ್ನು ಮುಖ್ಯ ಪದಾಧಿಕಾರಿಗಳನ್ನಾಗಿ ಹೊಂದಿರುವ ಸಂಸ್ಥೆಗಳನ್ನು ವಿಶೇಷ ಅನುಮತಿಯಿಲ್ಲದೆ ನೋಂದಣಿಗೆ ಅರ್ಹವೆಂದು ಪರಿಗಣಿಸಲಾಗುವುದಿಲ್ಲ. ದೇಣಿಗೆ ಸ್ವೀಕಾರ ಪ್ರಕ್ರಿಯೆಯಲ್ಲಿ ಏಕರೂಪತೆಯನ್ನು ತರಲು ಮತ್ತು ನಕಲಿ ನಿಯಮಾವಳಿಗಳನ್ನು ತಡೆಗಟ್ಟಲು ಈ ತಿದ್ದುಪಡಿಗಳನ್ನು ತರಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಭಾರತದ ಆಂತರಿಕ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಯಾವುದೇ ವಿದೇಶಿ ಶಕ್ತಿಗಳು ಇಲ್ಲಿನ ಎನ್​ಜಿಒಗಳ ಮೂಲಕ ಹಣಕಾಸಿನ ಪ್ರಭಾವ ಬೀರಬಾರದು ಎಂಬುದೇ ಈ ಕಠಿಣ ಕ್ರಮಗಳ ಹಿಂದಿರುವ ಮುಖ್ಯ ಆಶಯವಾಗಿದೆ.

ನಿಯಮಗಳನ್ನು ಬಿಗಿ ಮಾಡಿದ್ದೇಕೆ?

ವಿದೇಶಿ ದೇಣಿಗೆಯ ದುರುಪಯೋಗವನ್ನು ತಡೆಗಟ್ಟುವುದು ಮತ್ತು ದೇಶದ ಭದ್ರತೆಯನ್ನು ಕಾಪಾಡುವುದು ಈ ತಿದ್ದುಪಡಿಗಳ ಮುಖ್ಯ ಉದ್ದೇಶವಾಗಿದೆ. ಪ್ರಮುಖ ಕಾರಣಗಳು ಹೀಗಿವೆ.
ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆ: ಕೆಲವು ಸ್ವಯಂಸೇವಾ ಸಂಸ್ಥೆಗಳು ವಿದೇಶಿ ಹಣವನ್ನು ಬಳಸಿಕೊಂಡು ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ, ಅಭಿವೃದ್ಧಿ ಯೋಜನೆಗಳಿಗೆ, ಉದಾಹರಣೆಗೆ, ಗಣಿಗಾರಿಕೆ, ಅಣೆಕಟ್ಟು, ವಿದ್ಯುತ್​ ಯೋಜನೆಗಳಿಗೆ ಪ್ರೇರೇಪಿತ ಪ್ರತಿಭಟನೆಗಳನ್ನು ಆಯೋಜಿಸುವ ಮೂಲಕ ದೇಶದ ಆರ್ಥಿಕತೆಗೆ ಅಡ್ಡಿಪಡಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಅಕ್ರಮ ಮತಾಂತರ ತಡೆಗಟ್ಟುವುದು: ಧಾರ್ಮಿಕ ಶಿಕ್ಷಣ ಮತ್ತು ಸ್ಥಳೀಯ ನಂಬಿಕೆಗಳ ಸಂರಕ್ಷಣೆಯ ಹೆಸರಿನಲ್ಲಿ ಬಡ ಮತ್ತು ಹಿಂದುಳಿದ ವರ್ಗಗಳ ಜನರನ್ನು ವ್ಯವಸ್ಥಿತವಾಗಿ ಮತಾಂತರ ಮಾಡಲು ವಿದೇಶಿ ಹಣ ಬಳಕೆಯಾಗುತ್ತಿರುವುದನ್ನು ತಡೆಯುವುದು.
ಪಾರದರ್ಶಕತೆ: ವಿದೇಶಿ ದೇಣಿಗೆಯನ್ನು ಸ್ವಂತ ಲಾಭಕ್ಕೆ, ಷೇರು ಮಾರುಕಟ್ಟೆಯಂತಹ ಊಹಾತ್ಮಕ ಚಟುವಟಿಕೆಗಳಿಗೆ ಅಥವಾ ಐಷಾರಾಮಿ ಆಡಳಿತಾತ್ಮಕ ವೆಚ್ಚಗಳಿಗೆ ಬಳಸುವುದನ್ನು ತಡೆದು, ಅದನ್ನು ನಿಜವಾದ ಸಾಮಾಜಿಕ ಸಬಲೀಕರಣಕ್ಕೆ ಮಾತ್ರ ಬಳಸುವಂತೆ ಮಾಡುವುದು.
ಡಿಜಿಟಲ್​ ಕಣ್ಗಾವಲು: ಎನ್​ಜಿಒಗಳು ಸಾಮಾಜಿಕ ಮಾಧ್ಯಮಗಳ ಮೂಲಕ ದೇಶವಿರೋಧಿ ಅಥವಾ ಸಮಾಜದಲ್ಲಿ ದ್ವೇಷ ಬಿತ್ತುವ ಪ್ರಚಾರ ಮಾಡದಂತೆ ತಡೆಯಲು ಸಾಮಾಜಿಕ ಮಾಧ್ಯಮ ಖಾತೆಗಳ ವಿವರಗಳನ್ನು ಕಡ್ಡಾಯಗೊಳಿಸಲಾಗಿದೆ.
ದೃಢೀಕೃತ ಬ್ಯಾಂಕ್​ ಖಾತೆ: ಎಲ್ಲ ವಿದೇಶಿ ದೇಣಿಗೆಗಳು ಕಡ್ಡಾಯವಾಗಿ ನವದೆಹಲಿಯಲ್ಲಿರುವ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಮುಖ್ಯ ಶಾಖೆಯ ಖಾತೆಗೆ ಬರಬೇಕು. ಇಲಾಖೆಯಿಂದ ಹಣದ ಮೂಲ ಮತ್ತು ಹರಿವನ್ನು ಪತ್ತೆ ಹಚ್ಚುವುದು ಸರ್ಕಾರಕ್ಕೆ ಸುಲಭವಾಗುತ್ತದೆ.

ನಕಲಿ ಎನ್​ಜಿಒಗಳ ವಿರುದ್ಧ ಪ್ರಹಾರ

ಹೊಸ ನಿಯಮಗಳು ಭಾರತದ ಸಾಮಾಜಿಕ ಮತ್ತು ಆರ್ಥಿಕ ವಲಯದ ಮೇಲೆ ಮಹತ್ವದ ಪರಿಣಾಮಗಳನ್ನು ಬೀರುತ್ತವೆ.
ಉತ್ತರದಾಯಿತ್ವ ಮತ್ತು ಪಾರದರ್ಶಕತೆ: ಲೈಸೆನ್ಸ್​ ನವೀಕರಣಕ್ಕಾಗಿ ಕಳೆದ ಎರಡು ವರ್ಷಗಳಲ್ಲಿ ಕನಿಷ್ಠ 10 ಲಕ್ಷ ರೂ. ವಿದೇಶಿ ಹಣವನ್ನು ಕಡ್ಡಾಯವಾಗಿ ನಿಗದಿತ ಉದ್ದೇಶಕ್ಕೆ ಬಳಸಿರಬೇಕು ಎಂಬ ನಿಯಮದಿಂದಾಗಿ, ಕೇವಲ ಕಾಗದದ ಮೇಲಿರುವ "ನಕಲಿ' ಅಥವಾ "ನಿಷ್ಕ್ರಿಯ' ಎನ್​ಜಿಒಗಳು ರದ್ದಾಗುತ್ತವೆ.
ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ: ಮತಾಂತರ ಚಟುವಟಿಕೆಗಳಿಗೆ ಕಡಿವಾಣ ಬೀಳುವುದರಿಂದ ಸಾಮಾಜಿಕ ಸಾಮರಸ್ಯ ಕಾಪಾಡಬಹುದು. ದೇಶದ ಆರ್ಥಿಕ ಪ್ರಗತಿಗೆ ಅಡ್ಡಿಪಡಿಸುವ ವಿದೇಶಿ ಪ್ರೇರಿತ ಆಂದೋಲನಗಳಿಗೆ ಧನಸಹಾಯ ನಿಲ್ಲುತ್ತದೆ.
ದಂಡದ ಭಯ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಶೇ.30ರಷ್ಟು ದಂಡ ಮತ್ತು ಲಾಭ ಮುಟ್ಟುಗೋಲು ಹಾಕಿಕೊಳ್ಳುವ ನಿಯಮವಿರುವುದರಿಂದ, ಹಣ ದುರುಪಯೋಗ ಪಡಿಸಿಕೊಳ್ಳಲು ಸಂಸ್ಥೆಗಳು ಹೆದರುತ್ತವೆ.

ವಿದೇಶಿ ದೇಣಿಗೆ ದುರುಪಯೋಗದ ಪ್ರಮುಖ ಪ್ರಕರಣಗಳು

ರಾಜೀವ್​ ಗಾಂಧಿ ಫೌಂಡೇಶನ್​ ಮತ್ತು ರಾಜೀವ್​ ಗಾಂಧಿ ಚಾರಿಟಬಲ್​ ಟ್ರಸ್ಟ್​: ಚೀನಾದಿಂದ ಬಂದ ಹಣವನ್ನು ನಿಯಮಬಾಹಿರವಾಗಿ ಬಳಸಲಾಗಿದೆ ಮತ್ತು ಆದಾಯ ತೆರಿಗೆ ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಇವುಗಳ ಮೇಲಿತ್ತು.
ಆಮ್ನೆಸ್ಟಿ ಇಂಟರ್ನ್ಯಾಷನಲ್​ ಇಂಡಿಯಾ: ಮಾನವ ಹಕ್ಕುಗಳ ಹೆಸರಿನಲ್ಲಿ ವಿದೇಶದಿಂದ ಬಂದ ಕೋಟ್ಯಂತರ ರೂಪಾಯಿ ಹಣವನ್ನು ನೇರ ವಿದೇಶಿ ಹೂಡಿಕೆ (ಎಫ್​ಡಿಐ) ರೂಪದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿ, ಎಫ್​ಸಿಆರ್​ಎ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಎದುರಿಸಿತು. ಬಳಿಕ, ಆಮ್ನೆಸ್ಟಿ ಇಂಟರ್ನ್ಯಾಷನಲ್​ ಸಂಸ್ಥೆಯ ಬ್ಯಾಂಕ್​ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು ಮತ್ತು ಭಾರತದಲ್ಲಿ ಅದರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.
ಆಕ್ಸ್​ಫ್ಯಾಮ್​ ಇಂಡಿಯಾ: ವಿದೇಶಿಂದ ಬಂದ ಹಣವನ್ನು ತನ್ನ ಮೂಲ ಉದ್ದೇಶಗಳಿಗೆ ಬಳಸದೆ ಇತರ ಸಂಸ್ಥೆಗಳಿಗೆ ವರ್ಗಾಯಿಸಿದ್ದು ಮತ್ತು ಭಾರತದ ಆರ್ಥಿಕ ನೀತಿಗಳ ವಿರುದ್ಧ ಲಾಬಿ ಮಾಡಲು ಬಳಸಿತ್ತು.

ದುರ್ಬಳಕೆಗೆ ಕಡಿವಾಣ ಹಾಕಿದ ಕೇಂದ್ರ ಸರ್ಕಾರ

ವಿದೇಶಿ ದೇಣಿಗೆಯ ಹರಿವು

ಗೃಹ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ನೋಂದಾಯಿತವಾಗಿರುವ ಸಾವಿರಾರು ಎಫ್​ಸಿಆರ್​ಎ ಎನ್​ಜಿಒಗಳಿಗೆ ವಾರ್ಷಿಕವಾಗಿ ಸರಾಸರಿ ₹15,000 ಕೋಟಿಯಿಂದ ₹22,000 ಕೋಟಿಗೂ ಅಧಿಕ ವಿದೇಶಿ ಹಣ ಹರಿದು ಬರುತ್ತದೆ. ಈ ಹಣದ ಬಹುಪಾಲು ಭಾಗವು ಶಿಕ್ಷಣ, ಆರೋಗ್ಯ ಸೇವೆ, ಗ್ರಾಮೀಣಾಭಿವೃದ್ಧಿ, ಧಾರ್ಮಿಕ ಸಂಸ್ಥೆಗಳು (ಮಿಷನರಿಗಳು ಮತ್ತು ಇತರ ಸಾಂಸ್ಕೃತಿಕ ಸಂಸ್ಥೆಗಳು), ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಎನ್​ಜಿಒಗಳಿಗೆ ಬರುತ್ತದೆ. ಅಮೆರಿಕ, ಬ್ರಿಟನ್​, ಜರ್ಮನಿ, ಕೆನಡಾ ಮತ್ತು ಕೆಲವು ಗಲ್ಫ್​ ದೇಶಗಳಿಂದ ಭಾರತದ ಸಂಸ್ಥೆಗಳಿಗೆ ಅತಿ ಹೆಚ್ಚು ದೇಣಿಗೆ ಹರಿದು ಬರುತ್ತದೆ.

ಲೈಸೆನ್ಸ್​ ರದ್ದು

ಗೃಹ ಸಚಿವಾಲಯವು ನಿಯಮ ಉಲ್ಲಂಘಿಸಿದ 20,000ಕ್ಕೂ ಹೆಚ್ಚು ಎನ್​ಜಿಒಗಳ ಎಫ್​ಸಿಆರ್​ಎ ನೋಂದಣಿಯನ್ನು ರದ್ದುಗೊಳಿಸಿದೆ ಅಥವಾ ನವೀಕರಿಸಲು ನಿರಾಕರಿಸಿದೆ. ಉದಾಹರಣೆಗೆ, ರಾಜೀವ್​ ಗಾಂಧಿ ಫೌಂಡೇಶನ್​, ಆಕ್ಸ್​ಫ್ಯಾಮ್​ ಮತ್ತು ಸಿಪಿಆರ್​ ಸಂಸ್ಥೆಗಳ ಲೈಸೆನ್ಸ್​ಗಳನ್ನು ರದ್ದು ಮಾಡಲಾಗಿದೆ.

ಯಾರಿಗೆಲ್ಲ ಅನುಮತಿ..?

ವಿದೇಶಿ ಹಣವನ್ನು ಪಡೆಯಲು ಇಚ್ಛಿಸುವ ಎನ್​ಜಿಒಗಳು ಈ ಕೆಳಗಿನ 5 ಪ್ರಮುಖ ವಿಭಾಗಗಳ ಅಡಿಯಲ್ಲಿ ನೋಂದಾಯಿಸಿಕೊಳ್ಳುವುದು ಅಗತ್ಯ. ಪ್ರತಿ ವಿಭಾಗಕ್ಕೂ ಪ್ರತ್ಯೇಕ ಚಟುವಟಿಕೆಗಳ ಪಟ್ಟಿಯನ್ನು ಇದೇ ಮೊದಲ ಬಾರಿಗೆ ಸ್ಪಷ್ಟವಾಗಿ ನೀಡಲಾಗಿದೆ.
ಶೈಕ್ಷಣಿಕ: ಶಾಲೆಗಳು, ಕಾಲೇಜುಗಳು, ಗ್ರಂಥಾಲಯಗಳು, ವಿದ್ಯಾರ್ಥಿವೇತನಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸಾಂವಿಧಾನಿಕ ಹಕ್ಕುಗಳ ಜಾಗೃತಿ ಕಾರ್ಯಕ್ರಮಗಳು.
ಆರ್ಥಿಕ: ಜೀವನೋಪಾಯ ಸೃಷ್ಟಿ, ಕೌಶಲಾಭಿವೃದ್ಧಿ, ಕೃಷಿ ವಲಯ, ಉದ್ಯಮಶೀಲತೆ ಮತ್ತು ಡಿಜಿಟಲ್​ ಒಳಗೊಳ್ಳುವಿಕೆ.
ಧಾರ್ಮಿಕ: ಪ್ರಾರ್ಥನಾ ಮಂದಿರಗಳು, ಧಾರ್ಮಿಕ ಶಿಕ್ಷಣ, ತೀರ್ಥಯಾತ್ರಾ ಸೇವೆಗಳು, ಧ್ಯಾನ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಸಂಪ್ರದಾಯಗಳ ಸಂರಕ್ಷಣೆ.
ಸಾಮಾಜಿಕ: ಸಾರ್ವಜನಿಕ ಆರೋಗ್ಯ, ಪುನರ್ವಸತಿ, ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಹಾಗೂ ವಿಪತ್ತು ಪರಿಹಾರ ಕಾರ್ಯಗಳು.
ಸಾಂಸ್ಕೃತಿಕ: ಭಾರತೀಯ ಕಲೆ ಮತ್ತು ಭಾಷೆಗಳ ಸಂರಕ್ಷಣೆ, ವಸ್ತುಸಂಗ್ರಹಾಲಯಗಳು, ಆರ್ಕೈವ್ಸ್​, ಸಾಂಸ್ಕೃತಿಕ ಹಬ್ಬಗಳು ಹಾಗೂ ಪರಂಪರೆ ಸಂರಕ್ಷಣೆ.

ಮತಾಂತರ ಘಟನೆಗಳು

ದೇಶದ ಹಲವು ಭಾಗಗಳಲ್ಲಿ ಇವಾಂಜೆಲಿಕಲ್​ ಫೆಲೋಶಿಪ್​ ಆಫ್​ ಇಂಡಿಯಾ, ಚರ್ಚ್​ ಆಫ್​ ನಾರ್ತ್​ ಇಂಡಿಯಾದ ಕೆಲವು ಸಂಸ್ಥೆಗಳು ವಿದೇಶಿ ಹಣವನ್ನು ಬಡತನ ನಿರ್ಮೂಲನೆ ಅಥವಾ ಶಿಕ್ಷಣದ ಹೆಸರಿನಲ್ಲಿ ತಂದು, ಅದನ್ನು ಕಾಗದದ ನಿಯಮಬಾಹಿರ ಧಾರ್ಮಿಕ ಮತಾಂತರ ಚಟುವಟಿಕೆಗಳಿಗೆ ಬಳಸಿದವು.