ಮೋದಿ ತಮಿಳುನಾಡಿಗೆ ಬಂದಷ್ಟೂ ಎನ್‌ಡಿಎಗೆ ಅಪಾಯ! ಸ್ಟಾಲಿನ್ ಬಿಚ್ಚಿಟ್ಟ ಆ ಒಂದು ಸೋಲಿನ ರಹಸ್ಯ ಏನು..?
ಚನ್ನೈ: ಚುನಾವಣೆ ಬಂದಾಗ ಮಾತ್ರ ತಮಿಳುನಾಡು ನೆನಪಾಗುವ ಪ್ರಧಾನಿ ಮೋದಿಯವರ ಭೇಟಿಯಿಂದ ಎನ್‌ಡಿಎ ಮೈತ್ರಿಕೂಟದ ಸೋಲಿನ ಅಂತರ ಹೆಚ್ಚಾಗಲಿದೆಯೇ ಹೊರತು ಗೆಲುವಲ್ಲ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್(MK Stalin) ಗುಡುಗಿದ್ದಾರೆ.
ಈ ಬಗ್ಗೆ ಕನ್ಯಾಕುಮಾರಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸ್ಟಾಲಿನ್, ಕೇಂದ್ರ ಸರ್ಕಾರದ ತಾರತಮ್ಯ ಧೋರಣೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಚುನಾವಣಾ ಪ್ರವಾಸಕ್ಕೆ ಸ್ಟಾಲಿನ್ ವ್ಯಂಗ್ಯ
ಪ್ರಧಾನಿ ಮೋದಿಯವರ ಪದೇಪದೆ ತಮಿಳುನಾಡು ಭೇಟಿಯನ್ನು ಟೀಕಿಸಿದ ಸ್ಟಾಲಿನ್, ಮೋದಿ ಎಷ್ಟು ಬಾರಿ ರಾಜ್ಯಕ್ಕೆ ಬರುತ್ತಾರೋ, ಅಷ್ಟು ಬಾರಿ ತಮಿಳುನಾಡಿನ ಜನತೆಗೆ ಅವರು ನೀಡಿದ ದ್ರೋಹ ನೆನಪಾಗುತ್ತದೆ. ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಿ ಗುಜರಾತ್ ಮೆಟ್ರೋ ಯೋಜನೆಗಳಿಗೆ ಹಣ ನೀಡುವ ಕೇಂದ್ರಕ್ಕೆ ತಮಿಳುನಾಡಿನ ಮೇಲೆ ಪ್ರೀತಿಯಿಲ್ಲ, ಕೇವಲ ಮತಗಳ ಮೇಲೆ ಕಣ್ಣಿದೆ ಎಂದು ಕಿಡಿಕಾರಿದ್ದಾರೆ.
ದ್ರಾವಿಡ ಮಾದರಿ ವರ್ಸಸ್ ಬಿಜೆಪಿ ಮಾದರಿ
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಮತ್ತು ಅಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
ಮಣಿಪುರ ಮತ್ತು ಅಸ್ಸಾಂ: ಮಣಿಪುರ ಇನ್ನೂ ಉರಿಯುತ್ತಿದೆ, ಅಸ್ಸಾಂ ಸಿಎಂ ಮುಸ್ಲಿಮರ ವಿರುದ್ಧ ದ್ವೇಷ ಹರಡುತ್ತಿದ್ದಾರೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಆಹಾರದ ಹಕ್ಕು: ನಾವು ಏನು ತಿನ್ನಬೇಕು ಎಂಬುದನ್ನು ನಿರ್ಧರಿಸಲು ಅವರು ಯಾರು? ಶಾಲೆಗಳ ಬಳಿ ಮಾಂಸದ ಅಂಗಡಿಗಳನ್ನು ತೆಗೆಯುವ ನಿರ್ಧಾರಗಳು ಜನರ ಹಕ್ಕಿನ ಮೇಲಿನ ದಾಳಿ ಎಂದು ಸ್ಟಾಲಿನ್ ಗುಡುಗಿದ್ದಾರೆ.
ದಿಲ್ಲಿ ವರ್ಸಸ್ ತಮಿಳುನಾಡು ಸಂಘರ್ಷ
ತಮಿಳುನಾಡು ದಿಲ್ಲಿಯಿಂದ ಆಳಲ್ಪಡಬಾರದು, ಅದು ಚೆನ್ನೈ ಆಳಲ್ಪಡಬೇಕು. ಈ ಚುನಾವಣೆ ತಮಿಳುನಾಡು ಮತ್ತು ಎನ್‌ಡಿಎ ನಡುವಿನ ನೇರ ಯುದ್ಧವಾಗಿದೆ ಎಂದು ತಮಿಳು ಸಿಎಂ ತಿಳಿಸಿದ್ದಾರೆ.
ತಮ್ಮ ರಾಜಕೀಯ ಅನುಭವದ ಬಗ್ಗೆ
ನಾನು 14ನೇ ವಯಸ್ಸಿನಿಂದ ರಾಜಕೀಯದಲ್ಲಿದ್ದೇನೆ. 50 ವರ್ಷಗಳ ಸುದೀರ್ಘ ಸಾರ್ವಜನಿಕ ಜೀವನ ನನಗಿದೆ. ತಮಿಳುನಾಡಿನಲ್ಲಿ ನನ್ನಂತಹ ಅನುಭವ ಇರುವ ನಾಯಕ ಬೇರೆ ಯಾರೂ ಇಲ್ಲ. ಹಾಗಾಗಿಯೇ ಜನರಿಗೆ ಏನು ಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತು ಎಂದು ಸ್ಟಾಲಿನ್ ಹೇಳಿದ್ದಾರೆ.
2026ರ ಚುನಾವಣಾ ಕಣ
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಈ ವರ್ಷ ಚುನಾವಣೆ ನಡೆಯಲಿದ್ದು, ಇದು ರಾಜ್ಯದ ಅಸ್ಮಿತೆಯ ಹೋರಾಟ ಎಂದು ಸ್ಟಾಲಿನ್ ಕರೆ ನೀಡಿದ್ದಾರೆ. 2021ರಲ್ಲಿ 133 ಸ್ಥಾನಗಳನ್ನು ಗೆದ್ದು ಬೀಗಿದ್ದ ಡಿಎಂಕೆ, ಈ ಬಾರಿಯೂ ಎನ್‌ಡಿಎ ವಿರುದ್ಧ ಬೃಹತ್ ಜಯ ದಾಖಲಿಸುವ ವಿಶ್ವಾಸ ವ್ಯಕ್ತಪಡಿಸಿದೆ. ತಮಿಳುನಾಡು ಸೈಂಟ್ ಜಾರ್ಜ್ ಕೋಟೆಯಿಂದ ಆಳಲ್ಪಡಬೇಕೇ ಹೊರತು ದೆಹಲಿಯಿಂದಲ್ಲ ಎಂದು ಹೇಳುವ ಮೂಲಕ ಪ್ರಾದೇಶಿಕ ಅಸ್ಮಿತೆಯ ಕಿಚ್ಚು ಹಚ್ಚಿದ್ದಾರೆ,(ಏಜೆನ್ಸೀಸ್).