ರಾಹುಲ್ ಗಾಂಧಿ ಮತ್ತು ರವಿಶಂಕರ್ ಪ್ರಸಾದ್
ನವದೆಹಲಿ: ಜುಲೈ 20ರಂದು ಆರಂಭವಾದ ಮಳೆಗಾಲದ ಸಂಸತ್ ಅಧಿವೇಶನ ಗುರುವಾರ(ಆ. 13) ಮುಕ್ತಾಯವಾಗಿದ್ದು, ಒಬ್ಬ ನಾಯಕನ ಅಹಂಕಾರ, ಅಶಿಸ್ತು ಹಾಗೂ ದುರಹಂಕಾರಕ್ಕೆ ಸಂಸತ್ ಅಧಿವೇಶನ ಬಲಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ(BJP) ಆಕ್ರೋಶ ವ್ಯಕ್ತಪಡಿಸಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಮತ್ತು ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಆರೋಪಗಳ ಬಗ್ಗೆ ಪ್ರಧಾನಿ, ಗೃಹಸಚಿವರು ಉತ್ತರ ನೀಡಬೇಕೆಂದು ಒತ್ತಾಯಿಸಿ ಅಧಿವೇಶನದುದ್ದಕ್ಕೂ ವಿಪಕ್ಷಗಳು ನಡೆಸಿದ ನಿರಂತರ ಗದ್ದಲದಿಂದ ಯಾವುದೇ ಚರ್ಚೆ ನಡೆಯದೇ ಈ ಬಾರಿಯ ಅಧಿವೇಶನ ವ್ಯರ್ಥವಾಗಿದೆ.
ಅಧಿವೇಶನ ಮುಕ್ತಾಯದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಮತ್ತು ಸಂಸದ ರವಿಶಂಕರ್ ಪ್ರಸಾದ್, ಸರ್ಕಾರ ಚರ್ಚೆಗೆ ಸಿದ್ಧವಿದ್ದರೂ ವಿರೋಧ ಪಕ್ಷಗಳು ಸಂಸತ್ತಿನ ಕಲಾಪ ನಡೆಯಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು. ಮತ್ತು ರಾಹುಲ್ ಗಾಂಧಿಯವರನ್ನು ಜವಾಬ್ದಾರಿ ಇಲ್ಲದ ಮತ್ತು ಅಪ್ರಬುದ್ಧ ಹಾಗೂ ಅವರಲ್ಲಿ ರಾಜಕೀಯದ ಔಚಿತ್ಯದ ಕೊರತೆಯಿದೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಜವಾಬ್ದಾರಿಯಿಲ್ಲದವರು ಎಂಬುದನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ. ದೇಶದ ರಾಜಕಾರಣದಲ್ಲಿ ನಾಯಕರಾಗಿ ರಾಹುಲ್ ಗಾಂಧಿ ಇನ್ನೂ ಪ್ರಬುದ್ಧತೆ ಪಡೆದಿಲ್ಲ. ಅವರು ಬೇಜವಾಬ್ದಾರಿಯುತವಾಗಿ ವರ್ತಿಸುತ್ತಾರೆ. ಅಲ್ಲದೆ, ಅವರಲ್ಲಿ ಅತಿಯಾದ ಅಹಂಕಾರ ಮತ್ತು ತಾವು ವಿಶೇಷ ಹಕ್ಕುಳ್ಳವರು ಎಂಬ ಭಾವನೆ ಇದೆ ಎಂದು ಕಿಡಿಕಾರಿದರು.
ಸಂಸತ್ತಿನ ಮುಂಗಾರು ಅಧಿವೇಶನವು ಒಬ್ಬ ನಾಯಕನ ಅಹಂಕಾರ, ಶಿಸ್ತಿನ ಕೊರತೆ ಮತ್ತು ಉದ್ಧಟತನಕ್ಕೆ ಬಲಿಯಾಗಿದೆ. ಅಧಿವೇಶನದ ಅವಧಿಯಲ್ಲಿ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷದವರು ತಮ್ಮ ನಿಲುವುಗಳನ್ನು ಪದೇ-ಪದೇ ಬದಲಾಯಿಸುತ್ತಲೇ ಇದ್ದರು. ಮೊದಲು ನೀಟ್ ಕುರಿತು ಚರ್ಚೆಗೆ ಆಗ್ರಹಿಸಿದರು. ಬಳಿಕ ಪ್ರಧಾನ ಮಂತ್ರಿಯ ನಿವಾಸದ ಹೊರಗೆ ಪ್ರತಿಭಟನೆ ನಡೆಸಿ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿದರು. ಮತ್ತು ತರುವಾಯ ಮೋದಿಯವರು ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು ಎಂದು ತಿಳಿಸಿದರು.
ದೆಹಲಿಯಲ್ಲಿ ನಡೆದಿದೆ ಎನ್ನಲಾದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಲಾಠಿ ಚಾರ್ಜ್ ಕುರಿತು ಚರ್ಚಿಸಲು ಗೃಹಸಚಿವರು ಮುಂದಾಗಿದ್ದರು, ಆದರೆ ವಿಪಕ್ಷಗಳು ಚರ್ಚೆಗೆ ಅವಕಾಶ ನೀಡಲಿಲ್ಲ. ನಿನ್ನೆ ಗೃಹ ಸಚಿವರೇ ಮಾಧ್ಯಮಗಳ ಮುಂದೆ ಬಂದು, ನಾನು 24 ಗಂಟೆಗಳ ಕಾಲ ಪೂರ್ಣ ಚರ್ಚೆಯನ್ನು ಆಲಿಸಲು ಮತ್ತು ಈ ಎಲ್ಲಾ ವಿಷಯಗಳಿಗೆ ಉತ್ತರಿಸಲು ಸಿದ್ಧನಿದ್ದೇನೆ. ನಾನು ಪ್ರತಿಯೊಂದು ಅಂಶಕ್ಕೂ ಉತ್ತರಿಸುತ್ತೇನೆ ಎಂದು ಹೇಳಿದ್ದನ್ನು ನೀವು ನೋಡಿದ್ದೀರಿ. ಆದರೂ ವಿಪಕ್ಷಗಳು ಚರ್ಚೆಗೆ ಸಿದ್ದರಿರಲಿಲ್ಲ ಎಂದರು (ಏಜೆನ್ಸೀಸ್).