The mantra of thrift 
ದೇಶ

ಮಿತವ್ಯಯದ ಮಂತ್ರ

ಮಧ್ಯಪ್ರಾಚ್ಯ ಸಂಘರ್ಷದ ಉದ್ವಿಗ್ನತೆ ಇನ್ನೂ ತಗ್ಗಿಲ್ಲ. ಪರಿಣಾಮ, ಕಚ್ಚಾ ತೈಲದ ಪೂರೈಕೆ ಜಾಲ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಇದರಿಂದ ಡಾಲರ್ ವಹಿವಾಟು ಹೆಚ್ಚಿದ್ದು, ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠಕ್ಕೆ ಕುಸಿದಿದೆ (1 ಡಾಲರ್​ಗೆ 95ರ ಆಸುಪಾಸು). ಭಾರತ ತನ್ನ ವಿದೇಶಿ ವಿನಿಮಯ ಉಳಿಸಲು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೆಲೆಯೇರಿಕೆಯ ಗ್ರಾಫ್ ಊಹೆಗೂ ಮೀರಿ ಬೆಳೆದು, ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿಯೇ, ಪ್ರಧಾನಿ ನರೇಂದ್ರ ಮೋದಿಯವರೇ ಮಿತವ್ಯಯ ಮತ್ತು ಸರಳ ಜೀವನದ ಮಂತ್ರವನ್ನು ಪಠಿಸಿದ್ದಾರೆ ಮತ್ತು ತಮ್ಮ ಭದ್ರತೆಗಿದ್ದ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸುವ ಮೂಲಕ, ಕ್ರಮಕ್ಕೆ ಚಾಲನೆಯನ್ನೂ ನೀಡಿದ್ದಾರೆ. ಇದೇ ದಾರಿಯನ್ನು ಹಲವು ಸಚಿವರು ತುಳಿದಿದ್ದಾರೆ. ದೇಶ ಸಂಕಷ್ಟದಲ್ಲಿದ್ದಾಗಲೆಲ್ಲ ಜನರು ಸ್ಪಂದಿಸಿದ್ದಾರೆ. ಈಗ ಅಂಥದ್ದೇ ಸಂದರ್ಭವನ್ನು ಒಗ್ಗಟ್ಟಿನಿಂದ ಎದುರಿಸಲು ದೇಶ ಸನ್ನದ್ಧವಾಗಬೇಕಿದೆ.
ವಿದೇಶಿ ವಿನಿಮಯ ಮೀಸಲು ದೇಶದ ಆರ್ಥಿಕ ಭದ್ರತೆಯ ಬೆನ್ನೆಲುಬು. ವಿದೇಶಿ ವಿನಿಮಯದ ಉಳಿತಾಯವೆಂದರೆ ವಿದೇಶಗಳಿಗೆ ಹರಿದು ಹೋಗುವ ಹಣವನ್ನು ತಡೆಗಟ್ಟುವುದು ಮತ್ತು ಭಾರತದ ಆರ್ಥಿಕತೆಗೆ ಬಲ ನೀಡುವುದು ಎಂದರ್ಥ. ಪ್ರಧಾನಿ ನರೇಂದ್ರ ಮೋದಿ ಮಿತವ್ಯಯಕ್ಕೆ ಕರೆ ನೀಡಿದ್ದು, ಇದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ವಿದೇಶಗಳಿಂದ ಆಮದು ಮಾಡಿಕೊಂಡ ಐಷಾರಾಮಿ ವಸ್ತುಗಳ ಬದಲಿಗೆ ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಬಳಸುವುದು ಆದ್ಯತೆಯಾಗಬೇಕು. ಇದರಿಂದ ಹಣ ದೇಶದ ಒಳಗೇ ಉಳಿಯುತ್ತದೆ.
ಭಾರತವು ತನ್ನ ಪೆಟ್ರೋಲಿಯಂ ಅಗತ್ಯದ ಬಹುಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಸಾರ್ವಜನಿಕ ಸಾರಿಗೆಯ ಬಳಕೆ, ಸೈಕ್ಲಿಂಗ್ ಅಥವಾ ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡುವ ಮೂಲಕ ತೈಲ ಆಮದಿನ ಮೇಲಿನ ಹೊರೆಯನ್ನು ತಗ್ಗಿಸಬಹುದು. ಹಾಗೆಯೇ, ಭಾರತ ಚಿನ್ನ ಆಮದು ಮಾಡಿಕೊಳ್ಳಲು ವರ್ಷಕ್ಕೆ 6 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಸದ್ಯದ ಮಟ್ಟಿಗೆ ಭೌತಿಕ ಚಿನ್ನದ ಖರೀದಿ ಮುಂದೂಡಿದರೆ, ಆಮದಿನ ವೆಚ್ಚವನ್ನು ಸ್ವಲ್ಪಮಟ್ಟಿಗಾದರೂ ನಿಯಂತ್ರಿಸಬಹುದು.
ಕೋವಿಡ್ ಸಂದರ್ಭದಲ್ಲಿ ಸೃಷ್ಟಿಯಾದ ಭೀಕರ ಆರ್ಥಿಕ ಸಂಕಷ್ಟವನ್ನು ಕೂಡ ಭಾರತ ಯಶಸ್ವಿಯಾಗಿ ಎದುರಿಸಿದೆ. ಆದ್ದರಿಂದ, ದೇಶದ ಆರ್ಥಿಕ ಶಕ್ತಿಯನ್ನು ವೃದ್ಧಿಸಲು ಸಾಮೂಹಿಕ ಪ್ರಯತ್ನ ಅತಿ ಮುಖ್ಯ. ವಿದೇಶ ಪ್ರವಾಸಗಳ ಬದಲಿಗೆ ಭಾರತದೊಳಗಿನ ಪ್ರವಾಸಿತಾಣಗಳಿಗೆ ಭೇಟಿ ನೀಡುವ ಮೂಲಕ ವಿದೇಶಿ ಕರೆನ್ಸಿ ಹೊರಹೋಗುವುದನ್ನು ತಪ್ಪಿಸಬಹುದು ಮತ್ತು ಸ್ಥಳೀಯ ಉದ್ಯೋಗವಕಾಶ ಹೆಚ್ಚಿಸಬಹುದು. ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಬೆಂಬಲ ನೀಡುವುದರಿಂದ ದೇಶದಿಂದ ರಫ್ತು ಮಾಡುವ ಶಕ್ತಿಯನ್ನು ವೃದ್ಧಿಸಬಹುದು. ಆಹಾರ, ನೀರು ಮತ್ತು ವಿದ್ಯುತ್ ಇವುಗಳ ಉಳಿತಾಯವೂ ಪರೋಕ್ಷವಾಗಿ ದೇಶದ ಆರ್ಥಿಕತೆಗೆ ಬಲ ನೀಡುತ್ತದೆ. ಯಾಕೆಂದರೆ ಇವುಗಳ ಉತ್ಪಾದನೆ ಅಥವಾ ವಿತರಣೆಯಲ್ಲಿ ಸರ್ಕಾರವು ದೊಡ್ಡ ಮೊತ್ತವನ್ನು ವ್ಯಯಿಸುತ್ತದೆ. ನಾವು ಬಳಸುವ ಪ್ರತಿಯೊಂದು ಲೀಟರ್ ಪೆಟ್ರೋಲ್ ಅಥವಾ ಪ್ರತಿಯೊಂದು ವಿದೇಶಿ ವಸ್ತುವು ದೇಶದ ವಿದೇಶಿ ವಿನಿಮಯದ ಮೇಲೆ ಪ್ರಭಾವ ಬೀರುತ್ತದೆ. ‘ವೋಕಲ್ ಫಾರ್ ಲೋಕಲ್’ ಎನ್ನುವುದು ಕೇವಲ ಘೊಷಣೆಯಾಗದೆ ನಮ್ಮ ಜೀವನಶೈಲಿಯಾಗಲಿ. ಜನಸಾಮಾನ್ಯರು ಸಂಕಲ್ಪ ಮಾಡಿದರೆ, ಯಾವುದೇ ಆರ್ಥಿಕ ಸಂಕಷ್ಟವನ್ನಾದರೂ ದೇಶವು ಯಶಸ್ವಿಯಾಗಿ ದಾಟಬಲ್ಲದು. ಜನಪ್ರತಿನಿಧಿಗಳು ಕೂಡ ಈ ನಿಟ್ಟಿನಲ್ಲಿ ಮಾದರಿಯಾಗಲಿ.