ಬಿಆರ್ಎಸ್ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಕೆಟಿಆರ್
ಹೈದರಾಬಾದ್ : ತಂದೆಯ ಹೆಸರಿನಿಂದ ರಾಜಕೀಯ ಮಾಡುತ್ತಾನೆ ಎಂಬ ಸಿಎಂ ರೇವಂತ್ ರೆಡ್ಡಿ ಹೇಳಿಕೆಗೆ ಕೌಂಟರ್ ನೀಡಿರುವ ಬಿಆರ್ಎಸ್ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಕೆಟಿಆರ್(KTR), ತೆಲಂಗಾಣ ತಂದ ಗಂಡಸು ನಮ್ಮ ತಂದೆ, ಬರಾಬರಿ ನಮ್ಮಪ್ಪನ ಹೆಸರನ್ನು ಹೇಳುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೈದರಾಬಾದ್ನ ಬಿಆರ್ಎಸ್ ಕಚೇರಿ ತೆಲಂಗಾಣ ಭವನದಲ್ಲಿ ಮಾತನಾಡಿರುವ ಅವರು, ತೆಲಂಗಾಣ ತಂದ ನಮ್ಮ ನಾಯಕನ ಬಗ್ಗೆ ಇಷ್ಟಬಂದಂತೆ ಬಯ್ಯುತ್ತಿದ್ದರೆ ನೋಡಿಕೊಂಡು ಸುಮ್ಮನಿರಬೇಕಾ?, ಸಿಎಂ ರೇವಂತ್ ರೆಡ್ಡಿಯ ಭಾಷೆ ನೋಡಿದ್ರೆ ಚಪ್ಪಲಿಯಲ್ಲಿ ಹೊಡೆಯಬೇಕು ಅನ್ನಿಸುತ್ತೆ, ಆದರೆ ಆತ ಕುಳಿತ ಸಿಎಂ ಪದವಿಗೆ ಗೌರವ ಕೊಡುತ್ತಿದ್ದೇವೆ. ಮಾಜಿ ಸಿಎಂ ಕೆಸಿಆರ್ ಅವರ ಒಂದೇ ಪತ್ರಿಕಾಗೋಷ್ಠಿಗೆ ಸಿಎಂ ರೇವಂತ್ ವಿಪರೀತ ಬೆವರು ಸುರಿಸುತ್ತಿದ್ದಾರೆ. ಒಂದು ವೇಳೆ ಕೆಸಿಆರ್ ವಿಧಾನಸಭೆಗೆ ಬಂದರೆ ಸಿಎಂ ಹೃದಯಾಘಾತಕ್ಕೊಳಗಾಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸಿಎಂ ಎನುಮುಲಾ ರೇವಂತ್ ರೆಡ್ಡಿ ಅಲ್ಲ, ತಪ್ಪಿಸಿಕೊಳ್ಳುವ ರೇವಂತ್ ರೆಡ್ಡಿ. ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿಯವರಿಂದ ಹೆಣ್ಣುಮಕ್ಕಳ ಮದುವೆಗೆ 1 ಲಕ್ಷ ರೂ. ಮತ್ತು ಒಂದು ತೊಲ ಚಿನ್ನ ನೀಡುವ ಕಲ್ಯಾಣ ಲಕ್ಷ್ಮಿ ಯೋಜನೆ ಘೋಷಿಸಿದ್ದರು. ಪ್ರಿಯಾಂಕಾ ಗಾಂಧಿಯವರಿಂದ ಮಹಿಳೆಯರಿಗೆ 2,500 ರೂ. ನೀಡುವುದಾಗಿ ಹೇಳಿದ್ದರು. ಆದರೆ ಅದ್ಯಾವುದನ್ನೂ ಈಡೇರಿಸಿಲ್ಲ, ಕೇಳಿದ್ರೆ ರೇವಂತ್ ರೆಡ್ಡಿಗೆ ಎಲ್ಲಿಲ್ಲದ ಕೋಪ ಬರುತ್ತೆ, ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಗುಂಟೂರಿನಲ್ಲಿ ಓದಿದರೆ ನಿಮಗ್ಯಾಕೆ ತೊಂದರೆ? ನಾನು ಹಿಂದಿ, ಉರ್ದು ಮತ್ತು ಇಂಗ್ಲಿಷ್ ಕಲಿತಿದ್ದೇನೆ. ನೀವು ಕೂಡ ಕಲಿಯಿರಿ. ನಾನು ಗುಂಟೂರಿನಲ್ಲಿ ಇಂಟರ್ಮೀಡಿಯೇಟ್ ಓದಿ, ಹೈದರಾಬಾದ್, ಪುಣೆ ಹಾಗೂ ಅಮೆರಿಕಾದಲ್ಲಿ ಓದಿದ್ದೇನೆ. ನಿಮ್ಮ ಅಳಿಯ ಆಂಧ್ರದವನಲ್ಲವೇ? ಇನ್ನು ನೀವು ಚಿಟ್ಟಿನಾಯುಡು ಅಲ್ಲ.. ಭೀಮವರಂ ಬುಲ್ಲೋಡು ಎಂದಿದ್ದಾರೆ (ಏಜೆನ್ಸೀಸ್).