ರೋಗಿಗಳಿಗೆ ದೈಹಿಕ ಚಿಕಿತ್ಸೆಯಷ್ಟೇ ಅಲ್ಲದೆ, ಅವರ ಮಾನಸಿಕ ನೆಮ್ಮದಿ ಮತ್ತು ಭಾವನಾತ್ಮಕ ಚೇತರಿಕೆಗಾಗಿ ಸಿನಿಮಾಗಳನ್ನು ಬಳಸುವ ‘ಮೆಡಿಸಿನಿಮಾ’ ಒಂದು ವಿಶಿಷ್ಟ ಮತ್ತು ಮಾನವೀಯ ಪರಿಕಲ್ಪನೆಯಾಗಿದೆ. ಬ್ರಿಟನ್ನಲ್ಲಿ ಆರಂಭವಾದ ಈ ಟ್ರೆಂಡ್, ಪ್ರಸಕ್ತ ಜಾಗತಿಕವಾಗಿ ವೈದ್ಯಕೀಯ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಮೆಡಿಸಿನಿಮಾ ಎನ್ನುವುದು ಆಸ್ಪತ್ರೆಗಳ ಒಳಗೇ ಅತ್ಯಾಧುನಿಕ ತಂತ್ರಜ್ಞಾನದ, ಉಚಿತ ಚಿತ್ರಮಂದಿರಗಳನ್ನು ನಿರ್ವಿುಸುವ ಒಂದು ವ್ಯವಸ್ಥೆ. ಇದು ಸಾಮಾನ್ಯ ಥಿಯೇಟರ್ಗಳಿಗಿಂತ ಭಿನ್ನವಾಗಿರುತ್ತದೆ. ಇಲ್ಲಿಗೆ ಗಾಲಿಕುರ್ಚಿಗಳು, ಸ್ಟ್ರೆಚರ್ಗಳು ಮತ್ತು ಐವಿ ಡ್ರಿಪ್ಸ್ ಧರಿಸಿದ ರೋಗಿಗಳು ಸಹ ಸುಲಭವಾಗಿ ಬಂದು ಸಿನಿಮಾ ನೋಡುವಂತೆ ವಿಶೇಷ ವಿನ್ಯಾಸ ಮಾಡಲಾಗಿರುತ್ತದೆ. ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಮೆಡಿಸಿನಿಮಾ ರೋಗಿಗಳಲ್ಲಿ ಅದ್ಭುತ ಬದಲಾವಣೆಗಳನ್ನು ತಂದಿದ್ದು, ಈ ಕುರಿತಾದ ವಿವರ ಇಲ್ಲಿದೆ.
ಸಾಮಾನ್ಯವಾಗಿ ವೈದ್ಯಕೀಯ ಯಂತ್ರಗಳ ಬೀಪ್ ಸೌಂಡ್, ವೆಂಟಿಲೇಟರ್ಗಳ ಸದ್ದು, ಔಷಧಗಳ ವಾಸನೆ ಮತ್ತು ಆತಂಕದ ವಾತಾವರಣ ತುಂಬಿರುವ ಆಸ್ಪತ್ರೆಯ ಒಂದು ಮೂಲೆ ಮಾತ್ರ ಈಗ ಮಕ್ಕಳ ಮತ್ತು ವೃದ್ಧರ ನಗು ಹಾಗೂ ಚಪ್ಪಾಳೆಯ ಸದ್ದಿನಿಂದ ಮೊಳಗುತ್ತಿದೆ. ಬಣ್ಣಬಣ್ಣದ, 40 ಸೀಟುಗಳ ಸಾಮರ್ಥ್ಯ ಹೊಂದಿರುವ ಈ ಆಧುನಿಕ ಸಿನಿಮಾ ಹಾಲ್ ‘ಮೆಡಿಸಿನಿಮಾ’, ವಿಶೇಷವಾಗಿ ರೋಗಿಗಳಿಗಾಗಿಯೇ ನಿರ್ವಿುಸಲಾಗಿದೆ. ಇಲ್ಲಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳು ಮತ್ತು ಹಿರಿಯರು ಕೆಲವು ಕ್ಷಣಗಳ ಕಾಲ ತಮ್ಮ ನೋವು, ಒತ್ತಡ ಹಾಗೂ ಆಸ್ಪತ್ರೆಯ ನೀರಸ ವಾತಾವರಣವನ್ನು ಮರೆತು ಸಿನಿಮಾದ ಮಾಂತ್ರಿಕ ಜಗತ್ತಿನಲ್ಲಿ ಮುಳುಗಿಹೋಗುತ್ತಾರೆ. ಹೌದು, ಇದು ಲಂಡನ್ನ ಚೆಲ್ಸಿಯಾ ಮತ್ತು ವೆಸ್ಟ್ಮಿನಿಸ್ಟರ್ ಆಸ್ಪತ್ರೆಯ ಚಿತ್ರಣ.
ಔಷಧಗಳು ದೇಹವನ್ನು ಗುಣಪಡಿಸಿದರೆ, ಸಿನಿಮಾಗಳು ಮನಸ್ಸನ್ನು ಗುಣಪಡಿಸುತ್ತವೆ ಎಂಬ ತತ್ವದಡಿ ಮೆಡಿಸಿನಿಮಾ ಕೆಲಸ ಮಾಡುತ್ತಿದೆ. ಇದು ವೈದ್ಯಕೀಯ ಜಗತ್ತಿನಲ್ಲಿ ಕೇವಲ ರೋಗಕ್ಕಷ್ಟೇ ಅಲ್ಲದೆ, ರೋಗಿಯ ಮನಸ್ಸಿಗೂ ಚಿಕಿತ್ಸೆ ನೀಡುವ ಅತ್ಯುತ್ತಮ ಹೆಜ್ಜೆಯಾಗಿದೆ. ಈ ಪರಿಕಲ್ಪನೆಯನ್ನು ಕ್ರಿಸ್ಟೀನ್ ಕರ್ರನ್ ಎಂಬುವವರು 1999ರಲ್ಲಿ ಬ್ರಿಟನ್ನಲ್ಲಿ ‘Mಛಿಛಜಿಇಜ್ಞಿಛಿಞಚ’ ಎಂಬ ನೋಂದಾಯಿತ ಚಾರಿಟಿ ಸಂಸ್ಥೆ ಮೂಲಕ ಅಧಿಕೃತವಾಗಿ ಆರಂಭಿಸಿದರು. ಲಂಡನ್ನ ಪ್ರಸಿದ್ಧ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ಮೊದಲ ಮೆಡಿಸಿನಿಮಾ ಥಿಯೇಟರ್ ಸ್ಥಾಪಿಸಲಾಯಿತು. ಬ್ರಿಟನ್ನ ಯಶಸ್ಸಿನ ನಂತರ, ಈ ಟ್ರೆಂಡ್ ಜಗತ್ತಿನಾದ್ಯಂತ ವಿಸ್ತರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕ, ಯುರೋಪ್ ಹಾಗೂ ಏಷ್ಯಾದ ಕೆಲವು ಪ್ರಮುಖ ಕಾರ್ಪೆರೇಟ್ ಮತ್ತು ಸರ್ಕಾರಿ ಆಸ್ಪತ್ರೆಗಳು ತಮ್ಮ ರೋಗಿಗಳ ಮಾನಸಿಕ ಆರೋಗ್ಯ ಸುಧಾರಣೆಗಾಗಿ ಇಂತಹ ಮಿನಿ ಥಿಯೇಟರ್ಗಳನ್ನು ಅಥವಾ ‘ಮೂವಿ ಥೆರಪಿ’ ರೂಮ್ಳನ್ನು ಕಲ್ಪಿಸುತ್ತಿವೆ. ಸಿನಿಮಾಗಳಷ್ಟೇ ಅಲ್ಲದೆ, ವಿಡಿಯೋ ಗೇಮಿಂಗ್ ಮತ್ತು ವರ್ಚುವಲ್ ರಿಯಾಲಿಟಿ ತಂತ್ರಜ್ಞಾನವನ್ನು ಕೂಡ ಇದರ ಭಾಗವಾಗಿ ಬಳಸಲಾಗುತ್ತಿದೆ.
ಸದ್ಯ ಬ್ರಿಟನ್ನ ಆಸ್ಪತ್ರೆಗಳಲ್ಲಿ ಇಂತಹ ಒಂಬತ್ತು ಥಿಯೇಟರ್ಗಳು ಕಾರ್ಯನಿರ್ವಹಿಸುತ್ತಿವೆ. ಯೂನಿವರ್ಸಿಟಿ ಕಾಲೇಜ್ ಲಂಡನ್ನ ಪೊ›ಫೆಸರ್ ಡೇಸಿ ಫ್ಯಾನ್ಕೋರ್ಟ್ ಹೇಳುವಂತೆ, ಇಂದಿನ ದಿನಗಳಲ್ಲಿ ಜಗತ್ತಿನಾದ್ಯಂತ ವೈದ್ಯರು ಮತ್ತು ವಿಜ್ಞಾನಿಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಸುಧಾರಿಸಲು ಜನರಿಗೆ ಆರ್ಟ್ ಗ್ಯಾಲರಿ, ಥಿಯೇಟರ್ ಮತ್ತು ಕಾನ್ಸರ್ಟ್ ಹಾಲ್ಗಳಿಗೆ ಹೋಗಲು ಸಲಹೆ ನೀಡುತ್ತಿದ್ದಾರೆ. ಇಂತಹ ಸಮಯದಲ್ಲಿ ‘ಮೆಡಿಸಿನಿಮಾ’ದಂತಹ ಸಂಸ್ಥೆಗಳು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ರೋಗಿಗಳೂ ಈ ‘ಸಾಂಸ್ಕೃತಿಕ ಚಿಕಿತ್ಸೆ’ಯಿಂದ (ಕಲ್ಚರಲ್ ಹೀಲಿಂಗ್) ವಂಚಿತರಾಗದಂತೆ ನೋಡಿಕೊಳ್ಳುತ್ತಿವೆ. ಇಂತಹ ಅನುಭವಗಳು ರೋಗಿಗಳ ಮಾನಸಿಕ ಸ್ಥಿತಿಯನ್ನು ಸುಧಾರಿಸುವುದಲ್ಲದೆ, ಅವರ ಆರೋಗ್ಯದ ಚೇತರಿಕೆಯನ್ನು ವೇಗಗೊಳಿಸುತ್ತವೆ. ಆಸ್ಪತ್ರೆಯ ವಾತಾವರಣದಿಂದ ಉಂಟಾಗುವ ಒತ್ತಡ ಮತ್ತು ಒಂಟಿತನವನ್ನು ಇದು ಸಾಕಷ್ಟು ಮಟ್ಟಿಗೆ ದೂರ ಮಾಡುತ್ತದೆ.
ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದಂಪತಿಯನ್ನು ಸೋಂಕಿನ ಭೀತಿಯಿಂದಾಗಿ ವೆಸ್ಟ್ ಮಿನ್ಸ್ಟರ್ ಆಸ್ಪತ್ರೆಯ ಬೇರೆ ಬೇರೆ ವಾರ್ಡ್ಗಳಲ್ಲಿ ಇರಿಸಲಾಗಿತ್ತು. ಅವರು ಒಬ್ಬರನ್ನೊಬ್ಬರು ಭೇಟಿಯಾಗಲು ಸಹ ಸಾಧ್ಯವಿರಲಿಲ್ಲ. ಅವರಿಗಾಗಿ ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿ, ಥಿಯೇಟರ್ನಲ್ಲಿ ಇಬ್ಬರ ಹಾಸಿಗೆಗಳನ್ನು ಅಕ್ಕಪಕ್ಕದಲ್ಲೇ ಜೋಡಿಸಲಾಯಿತು. ಅಲ್ಲಿ ಅವರು ಒಟ್ಟಿಗೆ ಸಿನಿಮಾ ವೀಕ್ಷಿಸಿದರು, ಆ ಕ್ಷಣ ಅವರ ಜೀವನದ ಅವಿಸ್ಮರಣೀಯ ದಿನವಾಗಿ ಉಳಿಯಿತು. ಹಾಗೆಯೇ, ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ‘ಬೋಹೀಮಿಯನ್ ರಾಪೋ›ಡಿ’ ಸಿನಿಮಾ ನೋಡುವ ಇಚ್ಛೆ ವ್ಯಕ್ತಪಡಿಸಿದ್ದರು. ವಿತರಕರು ತಕ್ಷಣವೇ ಸಿನಿಮಾದ ಪ್ರತಿಯನ್ನು ಕಳುಹಿಸಿಕೊಟ್ಟರು. ಆ ಮಹಿಳೆ ತನ್ನ ಕುಟುಂಬದೊಂದಿಗೆ ಸಿನಿಮಾ ವೀಕ್ಷಿಸುತ್ತ, ‘ವಿ ಆರ್ ದಿ ಚಾಂಪಿಯನ್ಸ್’ ಹಾಡನ್ನು ಹಾಡಿದರು, ಸಂತೋಷದ ಕ್ಷಣಗಳನ್ನು ಅನುಭವಿಸಿದರು. ಅದಾದ ಕೆಲವು ದಿನಗಳ ನಂತರ ಅವರು ನಿಧನರಾದರು
ಕಲೆ, ಸಂಗೀತ ಮತ್ತು ಚಲನಚಿತ್ರಗಳ ಮೂಲಕ ರೋಗಿಗಳನ್ನು ಗುಣಪಡಿಸುವ ಆರ್ಟ್ ಆಂಡ್ ಮ್ಯೂಸಿಕ್ ಥೆರಪಿ ಅಥವಾ ಕಲ್ಚರಲ್ ಹೀಲಿಂಗ್ ಭಾರತೀಯ ವೈದ್ಯಕೀಯ ರಂಗದಲ್ಲಿ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರಿನ ನಿಮ್ಹಾನ್ಸ್, ಮುಂಬೈಯ ಟಾಟಾ ಮೆಮೋರಿಯಲ್ ಆಸ್ಪತ್ರೆ ಮತ್ತು ಕೆಲವು ಅಪೋಲೋ ಹಾಗೂ ಫೋರ್ಟಿಸ್ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ಪೀಡಿತ ಮಕ್ಕಳಿಗೆ ಮತ್ತು ಮಾನಸಿಕ ಆರೋಗ್ಯದ ಅಗತ್ಯವಿರುವ ರೋಗಿಗಳಿಗೆ ಚಲನಚಿತ್ರ ಪ್ರದರ್ಶನ, ಕಾರ್ಟೂನ್ ಹಾಗೂ ಲೈವ್ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗಂಭೀರ ಕಾಯಿಲೆಯಿಂದ ದಾಖಲಾದ ರೋಗಿಗಳ ಬೆಡ್ಗಳ ಪಕ್ಕದಲ್ಲೇ ವೈಯಕ್ತಿಕ ಸ್ಕ್ರೀನ್ಗಳು ಅಥವಾ ಒಟಿಟಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಆಸ್ಪತ್ರೆಯ ನೀರಸ ವಾತಾವರಣದಿಂದ ಅವರನ್ನು ದೂರ ಇಡಲಾಗುತ್ತಿದೆ. ಭಾರತದಲ್ಲಿ ಬ್ರಿಟನ್ ಮಾದರಿಯ ಮೆಡಿಸಿನಿಮಾ ಥಿಯೇಟರ್ಗಳು ಇನ್ನೂ ಪ್ರಾಥಮಿಕ ಹಂತದಲ್ಲಿದ್ದರೂ, ಮುಂಬರುವ ದಿನಗಳಲ್ಲಿ ರೋಗಿಗಳ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಇವುಗಳ ಅವಶ್ಯಕತೆ ಮತ್ತು ಜನಪ್ರಿಯತೆ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ.
ವೈದ್ಯಕೀಯ ಉಸ್ತುವಾರಿ: ವ್ಹೀಲ್ಚೇರ್ ಮತ್ತು ಆಸ್ಪತ್ರೆಯ ಬೆಡ್ಗಳು ಸುಲಭವಾಗಿ ಚಲಿಸುವಂತಹ ವಿಶಾಲವಾದ ಹಾಲ್ಗಳನ್ನು ಸಿದ್ಧಪಡಿಸಲಾಗುತ್ತದೆ. ಸಿನಿಮಾ ಪ್ರದರ್ಶನದ ಸಮಯದಲ್ಲಿ ರೋಗಿಗಳಿಗೆ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳಲು ನರ್ಸ್ಗಳು, ವೈದ್ಯರು ಮತ್ತು ಸ್ವಯಂಸೇವಕರು ಥಿಯೇಟರ್ ಒಳಗೇ ಹಾಜರಿರುತ್ತಾರೆ.
ಉಚಿತ ಪ್ರದರ್ಶನ: ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ಈ ಸಿನಿಮಾಗಳು ಸಂಪೂರ್ಣ ಉಚಿತವಾಗಿರುತ್ತದೆ. ಪ್ರಸ್ತುತ ಚಿತ್ರಮಂದಿರಗಳಲ್ಲಿ ಓಡುತ್ತಿರುವ ಹೊಸ ಸಿನಿಮಾಗಳನ್ನೇ ಇಲ್ಲಿ ಪ್ರದರ್ಶಿಸಲಾಗುತ್ತದೆ.
ವಿಷಯದ ಆಯ್ಕೆ: ರೋಗಿಗಳಲ್ಲಿ ಸಕಾರಾತ್ಮಕತೆ ಮತ್ತು ನಗು ಮೂಡಿಸುವಂತಹ ಹಾಸ್ಯ, ಸ್ಪೂರ್ತಿದಾಯಕ ಅಥವಾ ಅವರ ನೆಚ್ಚಿನ ಹಳೆಯ ಸಿನಿಮಾಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಅತಿಯಾದ ಹಿಂಸೆ ಅಥವಾ ನಕಾರಾತ್ಮಕ ಭಾವನೆ ಮೂಡಿಸುವ ಚಿತ್ರಗಳನ್ನು ಪ್ರದರ್ಶಿಸುವುದಿಲ್ಲ.
ವೇಗದ ಚೇತರಿಕೆ: ನೆಚ್ಚಿನ ಸಿನಿಮಾ ಅಥವಾ ಸಂಗೀತದಲ್ಲಿ ಮನಸ್ಸು ತೊಡಗಿಸಿಕೊಂಡಾಗ ಮಿದುಳಿನಲ್ಲಿ ಎಂಡಾರ್ಫಿನ್ ಮತ್ತು ಡೋಪಮೈನ್ನಂತಹ ಹ್ಯಾಪಿ ಹಾರ್ವೇನ್ಗಳು ಬಿಡುಗಡೆಯಾಗುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ರೋಗಿ ಬೇಗ ಗುಣಮುಖನಾಗಲು ಸಹಾಯ ಮಾಡುತ್ತದೆ.
ನೋವಿನ ಉಪಶಮನ: ಸಿನಿಮಾದಲ್ಲಿ ಮಗ್ನರಾಗುವುದರಿಂದ ರೋಗಿಗಳು ತಮ್ಮ ದೈಹಿಕ ನೋವು ಮತ್ತು ಆಸ್ಪತ್ರೆಯ ವಾತಾವರಣವನ್ನು ತಾತ್ಕಾಲಿಕವಾಗಿ ಮರೆಯುತ್ತಾರೆ. ಕೀಮೋಥೆರಪಿಯಂತಹ ತೀವ್ರ ನೋವಿನ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಗಮನವನ್ನು ಬೇರೆಡೆ ಸೆಳೆಯಲು ಇದು ಅತ್ಯುತ್ತಮ ಮಾರ್ಗ. ಇದು ನೋವಿನ ತೀವ್ರತೆಯ ಅರಿವನ್ನು ಕಡಿಮೆ ಮಾಡುತ್ತದೆ.
ಮಾನಸಿಕ ಒತ್ತಡದಿಂದ ಮುಕ್ತಿ: ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ತುರ್ತು ಚಿಕಿತ್ಸಾ ಘಟಕ (ಐಸಿಯು)ದಲ್ಲಿದ್ದ ರೋಗಿಗಳಲ್ಲಿ ಕಂಡುಬರುವ ಖಿನ್ನತೆ, ಆತಂಕ ಮತ್ತು ಒಂಟಿತನವನ್ನು ಇದು ದೂರ ಮಾಡುತ್ತದೆ.
ಸಾಮಾಜಿಕ ಸಂಪರ್ಕ: ಆಸ್ಪತ್ರೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರುವ ರೋಗಿಗಳಿಗೆ, ಇತರರೊಂದಿಗೆ ಕುಳಿತು ಸಿನಿಮಾ ನೋಡುವುದು ಒಂದು ಸಹಜ ಜೀವನದ ಅನುಭವವನ್ನು ನೀಡುತ್ತದೆ. ಆಸ್ಪತ್ರೆಯ ಬಿಳಿ ಕೋಟುಗಳು, ಇಂಜೆಕ್ಷನ್ ಮತ್ತು ವೈದ್ಯಕೀಯ ಯಂತ್ರಗಳ ಮಧ್ಯೆಯೂ ತಾವೊಬ್ಬ ಸಾಮಾನ್ಯ ಮನುಷ್ಯ ಎಂಬ ಭಾವನೆ ಮತ್ತು ಬದುಕುವ ಭರವಸೆ ರೋಗಿಗಳಲ್ಲಿ ಮೂಡುತ್ತದೆ.
ಬ್ರಿಟಿಷ್ ಚಲನಚಿತ್ರ ಉದ್ಯಮವು ಈ ಮಾನವೀಯ ಕಾರ್ಯವನ್ನು ಎಷ್ಟು ಗೌರವಿಸುತ್ತದೆ ಎಂದರೆ, ಇತ್ತೀಚೆಗಷ್ಟೇ ಮೆಡಿಸಿನಿಮಾ ಸಂಸ್ಥೆಗೆ ಪ್ರತಿಷ್ಠಿತ ‘ಬಾಫ್ಟಾ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪ್ರಮುಖ ಚಲನಚಿತ್ರ ನಿರ್ಮಾಣ ಸಂಸ್ಥೆಗಳು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮುನ್ನವೇ ಅವುಗಳ ಪ್ರಿವ್ಯೂ ಪ್ರತಿಗಳನ್ನು ಈ ಸಂಸ್ಥೆಗೆ ಉಚಿತವಾಗಿ ನೀಡುತ್ತವೆ.